ಕಿವಿಮಾತು
-ಶರತ್ ಪಿ ಕೆ
ಕಿವಿಮಾತೆಂದರೇ..
ಕಿವಿಯ ಹತ್ತಿರ ಬಂದು ಪಿಸುಗುಡುವ ಮಾತುಗಳಲ್ಲ.
ಹಾಗೆ ಆಡಿದ ಮಾತುಗಳೆಲ್ಲಾ
ಕಿವಿಮಾತುಗಳೇ ಆಗಬೇಕಿಲ್ಲ.
ಕಿವಿಯಲ್ಲಿ ಬಿದ್ದ ಎಲ್ಲಾ ಮಾತುಗಳು,
ಜನ್ಮೋದ್ಧಾರಕವಲ್ಲ.
ಕಿವಿಮಾತಿನ ಪೋಷಾಕಿನಲ್ಲಿ ಬಂದು
ಜನ್ಮವನ್ನು ಜಾಲಾಡಿದ ಅದೆಷ್ಟೋ
ಉದಾಹರಣೆಗಳಿವೆ.
ಇಲ್ಲಿ, ಕಿವಿ ಚುಚ್ಚುವುದಕ್ಕೂ
ಚುಚ್ಚಿಸಿಕೊಳ್ಳುವುದಕ್ಕು ವ್ಯತ್ಯಾಸವಿದೆ.
ಕಿವಿಮಾತುಗಳು ಕಿವಿಮಾತುಗಳೇ ಆಗಬೇಕಾದರೇ…
ಆ
ಕಿವಿಮಾತುಗಳು ಸವೆಸಿ ಬಂದ
ದಾರಿಗಳನ್ನೊಮ್ಮೆ ನೋಡಬೇಕು.
ಕಿವಿಯಲ್ಲಿ ಬೀಳುವ ಕಿವಿಮಾತುಗಳು
ಕಿವಿಯಿಂದ ಕೆಳಗಿಳಿದು
ಹೃದಯಲ್ಲಿ ಮೆತ್ತಗಾಗುವುದೋ…
ಕಿವಿಯಿಂದ ಮೇಲೇರಿ
ತಲೆಯ ಬೆಲೆ ತೆತ್ತಬೇಕಾಗುವುದೋ
ಆ ಕಿವಿಗಳ ಮೇಲೆ ನಿಂತಿದೆ.
ಕಿವಿಗಳಲ್ಲಿ ಬಗೆ ಬಗೆಯ
ಕಿವಿಗಳಿವೆ.
ಕದ್ದು ಕೇಳುವ ಕಳ್ಳಗಿವಿಗಳು,
ಕೇಳಿಯೂ ಕೇಳದಂತೆ
ನಟಿಸುವ ವಟ್ಟಗಿವಿಗಳು,
ಕೇಳಿಸಿಕೊಳ್ಳಲು ಸಿದ್ಧವಿಲ್ಲ
ಹಠಮಾರಿ ಕಿವಿಗಳು,
ನೇರ ಹೃದಯಕ್ಕೆ ಸಂಪರ್ಕವಿರುವ
ಸದಾ ಕಿವಿಗಳು… ಹೀಗೆ
ಎಚ್ಚರ…
ಹೇಳದಿದ್ದನ್ನೂ ಕದ್ದು ಕೇಳಲು,
ಇಲ್ಲಿ,
ಗೋಡೆಗಳಿಗೂ ಕಿವಿಗಳಿವೆ.
ಹೇಳಿದ್ದನೆಲ್ಲವನ್ನೂ ಕಾತರಿಸುತ ಕೇಳಲು
ಹಿತ್ತಾಳೆ ಕಿವಿಗಳೂ ಇವೆ.
ರಾಮನನ್ನು ಕಾಡಿಗಟ್ಟಿದ
ಆ ಹಿತ್ತಾಳೆ ಕಿವಿಗೂ,
ಶ್ರವಣ ಕುಮಾರನ ಎದೆ ಸೀಳಿದ
ದಶರಥನ ಶಬ್ಧವೇದಿ ಕಿವಿಗೂ ಸಂಬಂಧವಿದೆ.
ಯಾರೆಷ್ಟೇ ಹೇಳಿದರೂ ಕೇಳದ
ಸುಯೋಧನನ ಕಿವಿಗೂ,
ಮಿತ್ರನಿಗೆ ಕಿವಿಮಾತು ಹೇಳದ
ಕರ್ಣನ ಸ್ವರ್ಣ ಕಿವಿ ಕುಯ್ದದ್ದಕ್ಕೂ ಸಂಬಂಧವಿದೆ.
ಮಂಥರೆಯ ಮೆಲುನುಡಿಗೂ
ಶಕುನಿಯ ಗೆಲುನುಡಿಗೂ
ತಂತ್ರ ಕುತಂತದ್ರ
ಕಿವಿಮಾತೆಂಬ ಹೊದಿಕೆಯಿದೆ.
ಕಿವಿಮಾತೆಂದರೇ ಅವು ಬರೀ
ಕಿವಿಮಾತುಗಳಲ್ಲ,
ಅವು ದಾರಿ ಕಣ್ಣುಗಳು.
ಕಿವಿಗಳೆಂದರೇ
ಬರಿ ಕಿವಿಗಳಲ್ಲ
ಅವು.. ಜೋಡಿ ಹೃದಯಗಳು.






0 Comments