ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಗುರ ಈಗ ಬಲು ಹಗುರ

ಭಾರ – ಹಗುರ

ಸರೋಜಿನಿ ಪಡಸಲಗಿ

ಸುಳಿಗಾಳಿಯಲೆಯ ಬೆನ್ನೇರಿ ತೇಲಿ
ಬಂತೊಂದು ಸಣ್ಣ ಉಲಿವು ಭಾರ ಭಾರ
ಆ ಗಾಳಿಯಲೆಯಲಿ  ಸಣ್ಣಗೆ ಒಂದು
ಮಾರ್ದನಿಯ ಪಿಸು ನುಡಿ ಹಗುರ ಹಗುರ
ಭಾರ ಹಗುರಗಳ ಕಣ್ಣು ಮುಚ್ಚಾಲೆಯಾಟ
ಮನತುಂಬ ಮುಸಿ ಮುಸಿ ನಗುವಿನಾಟ

ಮೆಲ್ಲಗ್ಹಾಸುತಿಹ ತಿಮಿರ ಮೆತ್ತೆಯಲಿ
ತಿಂಗಳನ ಹಾಲಹೊಳೆಯ ದಡದಲಿ
ಚುಕ್ಕಿಗಳ ಮಿಣುಕುವ ಚೆಂಬೆಳಕಿನಲಿ
ಕೈಚಾಚಿ ಎದೆಯಗಲಿಸಿ ಸುತ್ತ ಸುತ್ತಿ
ಗಾಢ ಮೌನದ ದಟ್ಟ ನೆರಳು ಕಂಗೆಡಿಸಿ
ಉಲಿವೊಂದು ಹೊಮ್ಮಿತು ಭಾರ ಭಾರ

ಮೂಡಣದ ಬಾಗಿಲ ಹೊಂಬಣ್ಣದೆರಚಾಟ
ಹೊನ್ನ ಕಲಶದ ಮುತ್ತಿನ ಹನಿಗಳ ತುಳುಕಾಟ
ನವ ಮೊಗ್ಗೊಂದು ನವಿರಾಗಿ ಮಿಂದೆದ್ದು
ಹೊಸ ಲಾಸ್ಯದಲಿ ತೊನೆದು ಜಿಗಿದೆದ್ದು
ಮುಸುಕಿದ ಮಂಜು ಪರದೆ ಹಾಸಿ ಹೊದ್ದು
ಮೊಗ ಮುದುಡಿ ಉಲಿವೊಂದು ಹೊಮ್ಮಿತು ಭಾರ ಭಾರ

ಹೊತ್ತು ಹರಿದು ನೆತ್ತಿ ಏರಿ ಸಾಗಿ ಮಾಗಿ
ಪಡುವಣದಂಚಿನ ದೂರ ತೀರದತ್ತ ಬಾಗಿ
ಹಿಂದೆ  ಬಿಟ್ಟು ಬಂದ ದಾರಿಯುದ್ದಗಲಕ್ಕೂ
ಬೆಳಕು ಕತ್ತಲೊಡನೆ ಬಿಸಿಲು ನೆರಳಿನಾಟ
ಒಂದು ಚಣ ಮುಚ್ಚಿ ತೆರೆದ ಕಣ್ಣಗಲಿಸಿ
ದಿಗಂತದತ್ತ ನೋಡಿ ಉಲಿವೊಂದು ಹೊಮ್ಮಿತು ಭಾರ ಭಾರ

ಗೂಡು ಸೇರಿ ಪುಟ್ಟ ಹಕ್ಕಿ ಕತ್ತು ಕೊಂಕಿಸಿ
ಮೆಲ್ಲನುಸಿರಿತು  ಇರುಳ ಗರ್ಭ ತುಂಬಿದೆ
ಹೊಸ ಬೆಳಕ ಹುಟ್ಟು ಕನಸುಗಳ ಮಾರಾಟ
ಅಲ್ಲಿ ಇಲ್ಲಿ ಎಲ್ಲ ಮಂದಗಾಳಿಯ ಹರಿದಾಟ
ಆ  ಅಲೆಯಲಿ ಚುಕ್ಕಿಚಂದ್ರರ ಕುಲುಕಾಟದಲಿ
ಮೆಲು ಮಾರ್ದನಿಯುಲಿವು ಹಗುರ ಈಗ ಬಲು ಹಗುರ

‍ಲೇಖಕರು avadhi

12 March, 2020

2 Comments

  1. T S SHRAVANA KUMARI

    ಚೆನ್ನಾಗಿದೆ

  2. Sarojini Padasalgi

    ಧನ್ಯವಾದಗಳು ಮೇಡಂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading