ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಗಲು ಹೆಗಲು ಬದಲಿಸುವ ಹೊತ್ತು..

ಚನ್ನಬಸವ ಆಸ್ಪರಿ

ರಾತ್ರಿಯಾಗುತ್ತಿದ್ದಂತೆಯೇ
ನಾನು
ಎಲೆಯುದುರಿಸಿ
ಬಾನ ಓಲೈಕೆಗಾಗಿ
ಕೈ ಚಾಚಿ ನಿಂತ
ಬೋಳು ಮರ…
ಬೆಟ್ಟ ಗುಡ್ಡಗಳ ನಡುವೆ
ಮಿಸುಕಾಡದೆ
ಮೈಚೆಲ್ಲಿ ನಿಂತ
ಒರಟು ಶಿಲೆ…
ಅಸ್ಥಿಪಂಜರದಂತೆ
ಜೋತು ಬಿದ್ದ
ಯಾರೋ ತಿಂದು ಬಿಸುಟ
ಕಬ್ಬಿನ ಜಲ್ಲೆ…

ಯಾರಿದ್ದಾರೆ
ಈ ಅನಾಥ ರಾತ್ರಿಯಲಿ
ಮಂಪರು ಸೋಕದ ಎವೆಗಳಿಗೆ
ಜೊತೆಯಾಗಲು ?
ಕಾಲನ ಪರಿವೆಯಿಲ್ಲದೆ
ಟಿಕ್ ಗುಡುವ ಗೋಡೆ ಗಡಿಯಾರ
ದೂರದಲ್ಲೆಲ್ಲೋ ಚಳಿಗೆ ತತ್ತರಿಸಿದ
ನಾಯಿ ನರಿಗಳ ಗೋಳಾಟ
ನೆಲೆಯಿಲ್ಲದೆ ಅಳುವ ಬೆಕ್ಕಿನ
ಕೆಟ್ಟ ರಾಗಗಳ ಹೊರತು ?

ಹಗಲು ಹೆಗಲು ಬದಲಿಸುವ  ಈ ಹೊತ್ತು
ನರ ನರಗಳನು ಹುರಿದು ಮುಕ್ಕುತ್ತಿವೆ-
ಈ ಖಾಲಿ ಖುರ್ಚಿಯಲಿ
ದಿನವಿಡೀ ದಾಖಲಾದ
ನೊರೆಗಟ್ಟಿದ ಕಾಫಿಯ ಘಮ
ಗರಿ ಗರಿ ದಿನಪತ್ರಿಕೆಯ ಮಸಿ ವಾಸನೆ
ಚೆಲ್ಲು ಚೆಲ್ಲು ಹುಡಗಿಯ ಕುಡಿನಗು
ಎದ್ದು ಹೋದವಳ ಎದೆಯ ಕಿಣಿ ಕಿಣಿ
ತೆರೆ ತೆರೆಯಾಗಿ ಹರಡಿದ ವಿಷಾದ
ಆತಂಕ ಜಿನುಗಿಸಿದ ಕಣ್ಣಾಲಿ

ಕರುಳು ಹಿಚುಕುತ್ತಿದೆ
ಹಗಲ ಹೆಗಲೇರಿ ಕುಣಿವ ಈ ಇರುಳು
ಮತ್ತೆ ತಿವಿತಿವಿದು ಕಂಗೆಡಿಸುತ್ತಿವೆ-
ಜೋಡಿ ಹಕ್ಕಿ ಉಲಿದ ಯುಗಳ ಗೀತೆ
ಗೋಧೂಳಿ ಹೊತ್ತು ತಂದ ಪಿಸುಮಾತು
ಕೇಶರಾಶಿಯ ನಡುವಿಂದ ತೇಲಿಬಂದ ಹೂ ಪಕಳೆ

ಕಿರ್ ಗುಡುವ ಕ್ರಿಮಿ ನಿಶಾಚರಿಗಳ
ಮುಲಾಜಿಲ್ಲದ ಮೊರೆತದಲ್ಲಿ
ಕೀವು ತುಂಬುತ್ತಿವೆ
ಹಳೆಯ ಗಾಯಗಳು
ಉಲ್ಬಣಿಸುತ್ತಿದೆ
ಎದೆಯೊಡೆದ ಹಗಲ ಬೇನೆ
ಸಾಯುತ್ತಿದ್ದೇನೆ
ಇಂ…ಚಿಂ…ಚಾ…ಗಿ
ಇದಕ್ಕೇ ಇರಬೇಕು
ಹಗಲು ತಬ್ಬಲಿಯಾಗುವ ಮಧು ಶಾಲೆಗಳು
ಇರುಳ ಮುಸುಕಿನಲಿ ಗಿಜಿಗುಡುವುದು

ಈಗೀಗ
ಲೋಕ ವಿಕಾರಗಳನು ಮೌನವಾಗಿ ಪೊರೆವ
ರಾತ್ರಿಯ ತಣ್ಣನೆಯ ಮಡಿಲಿಗಿಂತ
ಎಲ್ಲದರ ಬಗ್ಗೆ ಗುಲ್ಲೆಬ್ಬಿಸುವ
ಹಗಲಿನ ಬೆಚ್ಚನೆಯ ಒಡಲೇ
ಹಿತವೆನಿಸುತಿದೆ.

‍ಲೇಖಕರು avadhi

3 July, 2019

1 Comment

  1. T S SHRAVANA KUMARI

    ಒಳ್ಳೆಯ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading