ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಕ್ಕಿ ಜೊತೆಗೆ ಪುಟ್ಟಿ ಹಾಡು

ಕಿರಣ್ ಭಟ್

ಪುಟ್ಟಿ ಮನೆಯ ಜಗುಲಿ ಮೇಲೆ
ಕಪಾಟಿನ ಗೂಡಿನೊಳಗೆ
ಹಸಿರು ಬಣ್ಣದ ಪುಟ್ಟ ಹಕ್ಕಿ
ರೆಕ್ಕೆ ಪದರು ಪದರು

ದೂರ ದೂರ ದೇಶದಿಂದ
ಏಳೇಳು ಸಾಗರ ದಾಟಿ
‘ಅಮೇಜಾನ್’ ನಿಂದ ಬಂತು
ನೋಡಿ ಹಕ್ಕಿ ಪವರು

ಒಂದು ಸ್ವಿಚ್ಚು ಒತ್ತು ಸಾಕು
ಹಾಡು, ಹಾಡು ಬರೇಹಾಡು
ಮೂರೂ ಹೊತ್ತೂ ಪುಟ್ಟಿಗೀಗ
ಹಕ್ಕಿ ಮೇಲೇ ನದರು

ಹಕ್ಕೀದಾದ್ರೂ ಎಂಥ ಖದರು
ಓಡಾಡೋಕೆ ಪುಟ್ಟನ ಕಾರು
ಮರ್ಸಡೀಸ್, ಬೆಂಝ್
ಹೊಸ ಅಂಬಾಸೆಡರು

ಹಕ್ಕಿಯೂಟದಾಟದಲ್ಲಿ
ಕಾಳಿನ ಹುಡುಕಾಟದಲ್ಲಿ
ಅಮ್ಮನಡುಗೆ ಮನೆಯ ತುಂಬ
ಪುಟ್ಟಿಯದೇ ದರಬಾರು

ಒಂದು ಸಂಜೆ ಆಟದಲ್ಲಿ
ಹಕ್ಕಿ ಗಂಟಲು ಬಿದ್ದು ಹೋಗಿ
ಹಾಡೂ ಇಲ್ಲ ಏನೂ ಇಲ್ಲ
ಬರೇ ಗೊಸರು ಗೊಸರು

ಹಕ್ಕಿ ಹಾಡ ಹಾಡುತಿಲ್ಲ
ಪುಟ್ಟಿ ಅಳುವ ನಿಲ್ಲಿಸಿಲ್ಲ
ರಾತ್ರಿ ಕನಸಿನಲ್ಲೂ ಪುಟ್ಟಿ
ಅಳುತ ಅಳುತ ಸುರುಸುರು

ಬೆಳಗು ಜಾವ ಹಿತ್ತಲಿಂದ
ಕೇಳುತಿದೆ ಹಕ್ಕಿ ಹಾಡು
ಛಕ್ಕನೆದ್ದು ಓಡ್ತಾಳೆ ಪುಟ್ಟಿ
ಹಕ್ಕಿಯ ಹುಡುಕಾಟ ಶುರು

ಪುಟ್ಟಿ ಮನೆಯ ಹಿತ್ತಲಲ್ಲಿ
ಮರದ ಸಣ್ಣ ಪೊಟರೆಯಲ್ಲಿ
ಕಾಣುತಿವೆ ಜೋಡಿ ಹಕ್ಕಿ
ಗೂಡು ಕಟ್ಟೋಕೆ ತಯಾರ್

ಗೂಡಾಯ್ತು ಮೊಟ್ಟೆಯಾಯ್ತು
ಬಂತು ಪುಟ್ಟ ಹಕ್ಕಿ ಮರಿ
ದಿನವಿಡೀ ಪೊಟರೆಯಿಂದ
ಕೇಳ್ತಿದೆ ಸಂಗೀತ ಕಛೇರಿ

ಸುತ್ತ ಕಾಳು ಬೀರಿ ಪುಟ್ಟಿ
ದೂರ ನಿಂತು ಕಾಯುತಾಳೆ
ಈಗ ದಿನಾ ಹಿತ್ತಲಲ್ಲಿ
ಹಕ್ಕಿ ಜೊತೆಗೆ ಪುಟ್ಟಿ ಹಾಡು

‍ಲೇಖಕರು Avadhi

12 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading