ನಾನು ಲಕ್ಷ್ಮಿ ಮುದ್ರಣಾಲವನ್ನು ಸೇರಿದ ಪ್ರಾರಂಭದ ದಿನಗಳಲ್ಲಿ ಪ್ಲೇಟ್ ಮೇಕಿಂಗ್ ವಿಭಾಗದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದೆ.
ಪ್ಲೇಟ್ ಮೇಕಿಂಗ್ ವಿಭಾಗವು ಲಕ್ಷ್ಮಿ ಪ್ರೆಸ್‌ನ ಆಡಳಿತ ಕಛೇರಿಗೆ ಹೊಂದಿಕೊಂಡೇ ಇತ್ತು. ಕೆಲವು ಬಾರಿ ಪ್ಲೇಟ್ ಮೇಕಿಂಗ್ ಕೆಲಸದ ಜೊತೆ ಕಛೇರಿಗೆ ಯಾರೇ ಗ್ರಾಹಕರು ಬಂದರೂ ಕಾಫಿ, ಟೀ, ತಿಂಡಿ, ಊಟ ತಂದು ಸರಬರಾಜು ಮಾಡುತ್ತಿದ್ದೆವು. ಹೀಗೇ ಒಂದು ದಿನ “ಕಚೇರಿಗೆ ನಾಲ್ಕೈದು ಮಂದಿ ದೊಡ್ಡವರು ಬಂದಿದ್ದಾರೆ, ಬೇಗ ಹೋಗಿ ಬಿಸಿಬಿಸಿ ಕಾಫಿ ತಂದುಕೊಡು” ಎಂದು ಆಗ ವ್ಯವಸ್ಥಾಪಕರಾಗಿದ್ದ ಟಿ.ಎಲ್. ವೆಂಕಟೇಶ್ ನನಗೆ ಆದೇಶಿಸಿದರು.
ಅದರಂತೆ ಕಾಫಿಯನ್ನು ತಂದುಕೊಡಲು ಮುಂದಾದಾಗ ಕಪ್ ಕೈಜಾರಿ ಟೇಬಲ್ ಮೇಲೆ ಬಿದ್ದು ಕಾಫಿಯ ಕೆಲವು ಹನಿಗಳು ಬಂದವರ ಬಟ್ಟೆ ಮೇಲೆ ಸಿಡಿದುಬಿಟ್ಟಿತು. ತಕ್ಷಣ “ಏ.ಏ.. ತಮ್ಮ ಯಾಕೋ? ನಿಧಾನ ಕಣೋ, ಜ್ಞಾನ ಎಲ್ಲಿದೆಯೋ ತಮ್ಮ ನಿಂದು, ನೋಡು ನಾನು ಇಲ್ಲಿಂದ ವಿಧಾನಸೌಧಕ್ಕೆ ಹೋಗಬೇಕು, ಈಗ ಹೆಂಗೆ ಹೋಗಲಿ?” ಎಂದು ಆ ಹಿರಿಯರು ಸಿಟ್ಟಾಗಿಬಿಟ್ಟರು.
ತಕ್ಷಣ ನಮ್ಮ ಯಜಮಾನರಾದ ಅಶೋಕ್ ಕುಮಾರ್ ಅವರ ಕೋಪವೂ ತಾರಕಕ್ಕೇರಿ ಬಿಟ್ಟಿತ್ತು. ನಾನು ಹೆದರಿ ಕೈಗಳನ್ನು ನಡುಗಿಸಿಕೊಂಡು, ಬೆವರುತ್ತಾ ಹೊರಬಂದ ಕೂಡಲೇ ಗಾಯತ್ರಿ ಮೇಡಮ್, “ಅಯ್ಯೋ ಕಿಟ್ಟಿ ಎಂತಹ ಕೆಲಸ ಮಾಡಿಬಿಟ್ಟೆ, ಅವರು ಯಾರು ಗೊತ್ತಾ, ಹಂಪಿ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಖ್ಯಾತ ಸಾಹಿತಿ ಡಾ. ಎಂ.ಎಂ. ಕಲಬುರ್ಗಿಯವರು” ಎಂದರು (ನನಗೆ ಸಾಹಿತ್ಯಲೋಕದ ಗಂಧವೂ ತಿಳಿಯದ ದಿನಗಳು ಅವು).
ಜೊತೆಯಲ್ಲಿ ಆಗ ರಿಜಿಸ್ಟ್ರಾರ್ ಆಗಿದ್ದ ಪ್ರೊ. ಮಲ್ಲೇಪುರಂ ಮತ್ತು ವಿ.ಸಿ. ಅವರ ಆಪ್ತ ಸಹಾಯಕರಾಗಿದ್ದ ಕೆ.ಎಲ್. ರಾಜಶೇಖರ ಕೂಡ ಇದ್ದರು. ತಕ್ಷಣ ರಾಜಶೇಖರ ಕಾರ್‌ನಲ್ಲಿ ಇದ್ದ ಬ್ಯಾಗ್‌ನಿಂದ ಸರ್ ಅವರದೇ ಒಂದು ಶರ್ಟ್ ತಂದುಕೊಟ್ಟರು. ಅಲ್ಲೇ ಕೋಣೆಯಲ್ಲಿ ಬಟ್ಟೆ ಬದಲಾಯಿಸಿಕೊಂಡು ಸಭೆಗೆ ಹೋದರು. ಅವರು ಹೋದಮೇಲೆ ಯಜಮಾನರ ಕೈಯಲ್ಲಿ ಮತ್ತೆ ಚೆನ್ನಾಗಿ ಮಂಗಳಾರತಿ ಮಾಡಿಸ್ಕೋಬೇಕಾಯಿತು.
ಬೆಂಗಳೂರಿಗೆ ಬಂದ ಹೊಸತರಲ್ಲಿ ಮುದ್ರಣಾಲಯದಲ್ಲಿ ಈ ರೀತಿ ಪ್ರತಿದಿನವೂ ಒಂದಲ್ಲ ಒಂದು ಅನೇಕ ಅವಾಂತರ, ಯಡವಟ್ಟುಗಳನ್ನು ಮಾಡಿ ಯಜಮಾನರ ಬಳಿ ಬೈಸಿಕೊಳ್ಳುವುದು ನನಗೆ ಸರ್ವೇಸಾಮಾನ್ಯವಾಗಿ ಬಿಟ್ಟಿತ್ತು.
ಕಲಬುರ್ಗಿಯವರು ಯಾವ ಬಿಂಕ ಬೆಡಗಿಲ್ಲದೆ ಸರಳವಾಗಿ ಎಲ್ಲರ ಜೊತೆ ಪ್ರೀತಿ ಪ್ರೇಮದಿಂದ ಕೆಲಸ ಮಾಡುತ್ತಾ, ಮಾಡಿಸುತ್ತಿದ್ದರು. ಕೆಲಸದಲ್ಲಿ ಯಾವುದೇ ಬಗೆಯ ರಾಜಿಗೆ ಅವಕಾಶವೇ ಕೊಡುತ್ತಿರಲಿಲ್ಲ. ಯಡವಟ್ಟುಗಳೇನಾದರು ಮಾಡಿದರೆ ಉತ್ತರ ಕರ್ನಾಟಕ ಗ್ರಾಮೀಣ ಸೊಗಡಿನಲ್ಲಿ ಕಟುವಾಗಿ ಬೈದುಬಿಡುತ್ತಿದ್ದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಅವಧಿಯಲ್ಲಿ ಪ್ರಸಾರಾಂಗದಿಂದ ಅನೇಕ ಮೌಲಿಕ ಗ್ರಂಥಗಳನ್ನು ಹೊರತಂದರು. ಅದರಲ್ಲಿ ಬಹಳಷ್ಟು ನಾವೇ ಮುದ್ರಿಸಿದ್ದೆವು. ಹೀಗೆ ಅವರು ವಹಿಸಿದ ಹಲವು ಕೆಲಸಗಳನ್ನು ಮಾಡುತ್ತಾ ಅವರ ಪ್ರೀತಿಗೆ ನಾನು ಪಾತ್ರನಾದೆ.
ನಮ್ಮ ಸ್ವ್ಯಾನ್ ಮುದ್ರಣಾಲಯಕ್ಕೆ ಬೆನ್ನೆಲುಬಾಗಿ ನಿಂತ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರ ಶೂನ್ಯ ಪೀಠಾರೋಹಣದ ಬೆಳ್ಳಿಹಬ್ಬದ ಸಂಭಾವನಾ ಗ್ರಂಥದ ಪ್ರಧಾನ ಸಂಪಾದಕರಾಗಿ ಡಾ. ಎಂ.ಎಂ. ಕಲಬುರ್ಗಿ ಇದ್ದರು. ಪೂಜ್ಯರಿಗೆ ‘ಶರಣಶ್ರೀ’ ಸಂಭಾವನ ಗ್ರಂಥ ಅರ್ಪಿಸುವುದು ನಮ್ಮ ಮುಖ್ಯ ಭಾಗವಾಗಿತ್ತು. ಷಟ್‌ಸ್ಥಲ, ಅಷ್ಟಾವರಣ ಇತ್ಯಾದಿ ಸಾಂಪ್ರದಾಯಿಕ ವಿಷಯಗಳಿಗೆ ಬದಲು, ಅಸಾಂಪ್ರದಾಯಿಕ ವಿಷಯಗಳನ್ನೊಳಗೊಂಡ ಅಭಿನಂದನ ಗ್ರಂಥ ಆಗಬೇಕೆಂಬುದು ಕಲಬುರ್ಗಿಯವರ ಆಶಯ.
ಆದುದರಿಂದ ಗ್ರಂಥದಲ್ಲಿ –
1. ವಿದೇಶೀಯರು ಕಂಡ ಲಿಂಗಾಯತ ಸಮಾಜ
2. ಕರ್ನಾಟಕದ ಹೊರಗೆ ಹರಡಿರುವ ಲಿಂಗಾಯತ ಸಮಾಜ
3. ಶ್ರೀ ಮುರುಘಾ ಪರಂಪರೆಯ ಇತಿಹಾಸ
4. ಪೂಜ್ಯ ಶ್ರೀ ಮುರುಘಾ ಶರಣರ ಸಾಧನೆ
ಎಂಬ ನಾಲ್ಕು ಅಧ್ಯಾಯಗಳನ್ನು ಮಾಡಿಕೊಂಡು ಅತ್ಯಂತ ಅಲ್ಪಾವಧಿಯಲ್ಲಿ ಅನೇಕ ಲೇಖನಗಳನ್ನು ಸಂಗ್ರಹಿಸಿ, ಅವುಗಳಲ್ಲಿ ವಿದೇಶಿ ವಿದ್ವಾಂಸರ ಹಳೆಯ ಇಂಗ್ಲಿಷ್ ಲೇಖನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿದರು.
ಈ ಕೃತಿ ಕೇವಲ ಒಂದು ಸಂಭಾವನಾ ಗ್ರಂಥವಲ್ಲ, ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ಚಾರಿತ್ರಿಕ ದಾಖಲೆಗಳ ಒಂದು ಬೃಹತ್ ಕೋಶವಾಗಬೇಕು, ಆದ್ದರಿಂದ, ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದೆ ಚೆನ್ನಾಗಿ ಮುದ್ರಣವಾಗಬೇಕು ಎಂದು ಕಲಬುರ್ಗಿಯವರು ಪದೇಪದೇ ಹೇಳುತ್ತಲೇ ಇದ್ದರು.
ಈ ಸಮಯದಲ್ಲಿ ಅವರೊಂದಿಗೆ ಗ್ರಂಥದ ರೂಪುರೇಷೆಗಳ ಬಗ್ಗೆ ಮಾತುಕತೆಗಾಗಿ ನಮ್ಮ ಸ್ವ್ಯಾನ್ ಪ್ರಿಂಟರ್ಸ್‌ನಲ್ಲೇ ಅನೇಕ ಬಾರಿ ಸಭೆ ಸೇರಿ, ಚರ್ಚಿಸುವ ಅವಕಾಶ ಒದಗಿಬಂದಿತು. ಅವರು ಕೆಲಸದ
ವಿಷಯದಲ್ಲಿ ಬಹಳ ಶಿಸ್ತು ಮತ್ತು ಖಡಕ್ಕಾಗಿ ಇರುತ್ತಿದ್ದರು.
ಒಂದು ದಿನ ಅವರು ಬೆಂಗಳೂರಿಗೆ ಬಂದಾಗ ‘ಶರಣಶ್ರೀ’ ಗ್ರಂಥದ ಒಂದು ಲೇಖನದಲ್ಲಿ ಬಹಳ ತಿದ್ದುಪಡಿ ಇತ್ತು, ಅದನ್ನು ಕೊಟ್ಟು ಬೇಗ ಕರೆಕ್ಷನ್ ಮಾಡಿಸಿ ಇನ್ನೊಂದು ಪ್ರೂಫ್ ತಂದುಬಿಡು, ಸಂಜೆ 8ಕ್ಕೆ ನನಗೆ ಟ್ರೈನ್ ಇದೆ, ಹೋಗುವ ಮುನ್ನ, ಅದನ್ನು ಮತ್ತೊಮ್ಮೆ ಅಂತಿಮ ಮಾಡಿಕೊಟ್ಟು ಹೋಗಿಬಿಡುತ್ತೇನೆ ಎಂದರು.
ನಾನು ಕಚೇರಿಗೆ ಬಂದು ಕಂಪ್ಯೂಟರ್‌ನಲ್ಲಿ ಅವಸರವಸರವಾಗಿ ತಿದ್ದುಪಡಿ ಮಾಡಿಸಿಕೊಂಡು, ಅಂತಿಮ ಕರಡನ್ನು ತೆಗೆದುಕೊಂಡು ಕೆ.ಎಲ್. ರಾಜಶೇಖರ್ ಜೊತೆ ಗಾಂಧಿನಗರದ ಕಾನಿಷ್ಕ ಹೋಟೆಲ್‌ಗೆ ಹೋಗಿ, ಕರಡನ್ನು ಕಲ್ಬುರ್ಗಿ ಅವರ ಕೈಗೆ ಕೊಟ್ಟೆ. ಅವರು ಒಂದೆರಡು ಸಾಲುಗಳನ್ನು ನೋಡುತ್ತಲೇ- “ಏ… ತಮ್ಮ ಕೃಷ್ಣಮೂರ್ತಿ, ಲೇಖನದಲ್ಲಿ ನಾನು ಹಾಕಿದ್ದ ಕರೆಕ್ಷನ್ ತಿದ್ದುಪಡಿಯಾಗಿಲ್ಲ. ಏನಿದು? ಸರಿಯಾಗಿ ಒಮ್ಮೆ ನೀವು ಚೆಕ್ ಮಾಡಿ ತರುವುದಲ್ಲವೇ….?! ನಾನು ಇನ್ನೊಮ್ಮೆ ನೋಡಿದೆ ಪರವಾಗಿಲ್ಲ, ಹಾಗೇ ಅಂತಿಮವಾಗಿ ಮುದ್ರಣವಾಗಿಬಿಟ್ಟಿದ್ದರೆ ಏನ್ ಕಥೆ? ಇಂಥ ವಿಷಯದಲ್ಲಿ ಸ್ವಲ್ಪ ಜವಾಬ್ದಾರಿಯುತವಾಗಿ ಇರಬೇಕು ನೀನು” ಎಂದು ಅವರ ಕೆಂಗಣ್ಣಿಗೆ ಗುರಿಯಾದೆ.
ತಕ್ಷಣ ಅಲ್ಲೇ ಇದ್ದ ರಾಜಶೇಖರ್ “ಸರ್ ಕಂಪ್ಯೂಟರ್‌ನಲ್ಲಿ ಏನೋ ಎಡವಟ್ಟಾಗಿದೆ, ಬೇರೆ ಪ್ರೂಫ್ ತಕ್ಷಣ ತರಿಸುತ್ತೇವೆ” ಎಂದು ಸಮಾಧಾನಪಡಿಸಿ, ತಿದ್ದುಪಡಿಯಾದ ಲೇಖನವನ್ನು ಅವರು ಹೊರಟಿದ್ದ ಟ್ರೈನ್ ಬಳಿ ಹೋಗಿ ಕೊಟ್ಟು ಬಂದಿದ್ದೆವು. ಶರಣಶ್ರೀ ಗ್ರಂಥದ ಮುದ್ರಣದ ಬಗ್ಗೆ ಅಪಾರವಾದ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದರು.
ಆದರೆ ಆ ಗ್ರಂಥ ಅದ್ಭುತವಾಗಿ ಮುದ್ರಣವಾಗಿ ಹೊರಬರುವ ವೇಳೆಗೆ ಅದನ್ನು ನೋಡಲು ಅವರೇ ಇರಲಿಲ್ಲ…..!
ಶರಣಶ್ರೀ ಅವರ ಜೀವಮಾನದ ಕೊನೆಯ ಸಂಪಾದನಾ ಕೃತಿ
ಒಂದೂ ತಪ್ಪಿಲ್ಲದಂತೆ ಪುಸ್ತಕ ಮುದ್ರಣವಾಗಬೇಕು ಎಂಬ ಕಾಳಜಿ, ಲಿಂಗಾಯತ ಧಮದ ಇತಿಹಾಸದ ಪ್ರತಿ ಅಂಶವೂ ಬಿಟ್ಟುಹೋಗಬಾರದೆಂಬ ತುಡಿತ, ತಮ್ಮ ಸಂಪಾದನೆಯಲ್ಲಿ ಬರುವ ಪ್ರತಿ ಪುಸ್ತಕವೂ ವಿಭಿನ್ನವಾಗಿರಬೇಕೆಂಬ, ವಿಷಯಗಳ ಪುನರಾವತನೆಯಾಗಬಾರದೆಂಬ ಎಚ್ಚರಿಕೆ, ಕೆಲಸವನ್ನು ಬೇಗ ಬೇಗ ಮುಗಿಸಬೇಕೆಂಬ ಧಾವಂತ, ಅಚ್ಚುಕಟ್ಟುತನ, ಸಮಯಪ್ರಜ್ಞೆಗಳು ಅವರ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು. ಅವುಗಳನ್ನು ಚೆನ್ನಾಗಿ ಹಿಡಿದಿಟ್ಟಿದ್ದೀರಿ.
ಕಲ್ಬುರ್ಗಿಯವರ ವ್ಯಕ್ತಿತ್ವ ಪರಿಚಯ ಚೆನ್ನಾಗಿ ಮೂಡಿಬಂದಿದೆ.
ನಿಮ್ಮ ಮನದಾಳದ ಮುಕ್ತವಾದ ಮಾತು. ಹಮ್ಮು ಬಿಮ್ಮು ಇಲ್ಲದೆ ಎಲ್ಲ ಹೇಳಿರುವ ನಿಮ್ಮ ಮಾತು ಹಾಗೆ ಕಲ್ಬುರ್ಗಿ ಸರ್ ಅವರ ವ್ಯಕ್ತಿತ್ವ ಎಲ್ಲ ಸೂಪರ್. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಿರೀಕ್ಷೆಯಿದೆ. ಅಭಿನಂದನೆಗಳು