ಡಾ. ಎಂ ಎಂ ಕಲಬುರ್ಗಿ ಒಂದು ನೆನಪು….

ಈಶ್ವರ ಹತ್ತಿ, ಕೊಪ್ಪಳ

——————————-

ಎಂಟು ವರ್ಷಗಳ ಹಿಂದಿನ ಮಾತು. ಇದ್ದಕ್ಕಿದ್ದ ಹಾಗೆ ಯಾಕೋ ಆ ಘಟನೆ ನೆನಪಾಗಿ ಕಣ್ಣು ಹನಿಗೂಡಿದವು.

ಮನಸ್ಸಿನಲ್ಲಿ ದಿನವಿಡೀ ಸೂತಕ ಭಾವ, ಯಾವುದರಲ್ಲಿಯೂ ಮನಸ್ಸಿಲ್ಲದ ಜಡತ್ವ.

ಆ ದಿವಸ ೩೦.೮. ೨೦೧೫ ಬೆಳಗಿನ ಕೆಲಸಕ್ಕಾಗಿ ಬೆಂಗಳೂರಿಗೆ ಹೋದವನು ಮಗಳ ಮನೆಯಲ್ಲಿ ಉಳಿದುಕೊಂಡಿದ್ದೆ. ಬೆಳಗಿನ ಚಹ ಕೈಗಿತ್ತು ಮಗಳು ಅಡುಗೆ ಮನೆ ಕೆಲಸದಲ್ಲಿ ತೊಡಗಿದ್ದಳು. ನನ್ನ ನಾಲ್ಕು ವರ್ಷದ ಮೊಮ್ಮಗ ಅಲ್ಲೇ ಆಡುತ್ತಿದ್ದ.

ಮೊಬೈಲ್ ರಿಂಗಣಿಸಿತು.

ಅವನೇ ಓಡಿ ಹೋಗಿ ಅದನ್ನು ನನ್ನ ಕೈಯಲ್ಲಿ ಇಟ್ಟ. ಕೊಪ್ಪಳದ ನನ್ನ ಗುರುಗಳಾದ ಎಚ್ ಎಸ್ ಪಾಟೀಲರು ಎಲ್ಲಿದ್ದೀಯಾ..? ಆತಂಕದ ಧ್ವನಿ

ಸರ್ ಬೆಂಗಳೂರಿನಲ್ಲಿ.

ವಿಷಯ ತಿಳಿತಾ..? ಉತ್ತರಿಸುವುದಕ್ಕೂ ಅವಕಾಶವಿಲ್ಲ ಕಲಬುರ್ಗಿ ಕೊಲೆ; ದೊಡ್ಡ ಅನಾಹುತ!

ಅಕ್ಷರಶಃ ಶಾಕ್ ಹೊಡೆದ ಅನುಭವ. ಕೆಲ ನಿಮಿಷಗಳು ಕಣ್ಮುಚ್ಚಿ ಕುಳಿತೆ. ಲೋಟದಲ್ಲಿ ಇನ್ನೂ ಚಹ ಇತ್ತು ಎದ್ದು ಹೋಗಿ ಬಚ್ಚಲಿಗೆ ಚೆಲ್ಲಿದೆ. ಅವಸರದಲ್ಲಿ ಟಿ ವಿ ಆನ್ ಮಾಡಿದೆ. ಮಹಾದುರಂತವೊಂದು ಸಂಭವಿಸಿ ಹೋಗಿತ್ತು.ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು ವಿದ್ಯಾನಗರಿ ಧಾರವಾಡದಲ್ಲಿ ಅದು ಸಹ ರಕ್ತ ಚಿಮ್ಮಿತ್ತು. ಕ್ರೌರ್ಯ ತನ್ನ ಕ್ರೂರ ಬಾಹುಗಳನ್ನು ಚಾಚಿ ಅಕ್ಷರ ಲೋಕದ ಮಾಂತ್ರಿಕನೊಬ್ಬನನ್ನು ಇನ್ನಿಲ್ಲವಾಗಿಸಿತ್ತು.

ಕಲಬುರ್ಗಿ ಅವರು ಯಾರೂ ಊಹಿಸದ ರೀತಿಯಲ್ಲಿ ಆ ದಿವಸ ಮಣ್ಣನ್ನು ಅಪ್ಪಿದರು. ಪ್ರಜ್ಞಾವಂತರು, ಚಿಂತಕರು, ವಿಚಾರವಾದಿಗಳು, ಹೋರಾಟಗಾರರು ಹೀಗೆ ಇಡೀ ಕರುನಾಡೇ ದಿಗ್ಮೂಢರಾಗಿದ್ದ ಘಳಿಗೆ ಅದು.

ಎಲ್ಲರ ಮನಸ್ಸಿನಲ್ಲೂ ಹೆಪ್ಪುಗಟ್ಟಿದ ಮೌನ. ದ್ವೇಷದ ಹೊಗೆ ಯಾರ ಮುಖವೂ ಯಾರಿಗೂ ಕಾಣದ ಹಾಗೆ ಆವರಿಸಿತ್ತು. ಕಂಡ ಮುಖಗಳಿಗೆ ಅನುಮಾನದ ನೋಟ ದಟ್ಟೈಸಿತ್ತು. ಎಲ್ಲವನ್ನೂ ಎಲ್ಲರನ್ನೂ ಸಂಶಯದಿಂದ ನೋಡುವ ಬಿಕ್ಕಟ್ಟು ಸೃಷ್ಟಿಯಾಗಿತ್ತು.

ಯಾರನ್ನೇ ಕೇಳಿದರೂ ಎಲ್ಲರ ಬಾಯಲ್ಲೂ ಒಂದೇ ಪ್ರಶ್ನೆ. ಈ ಸಾವು ಹೇಗೆ ಸಂಭವಿಸಿತು? ಕಲಬುರ್ಗಿಯವರು ಮಾಡಿದ ಯಾವ ತಪ್ಪಿಗಾಗಿ ಈ ಶಿಕ್ಷೆ ?

ಕಲಬುರ್ಗಿಯವರ ಹತ್ಯೆಯಾದಾಗ ಅವರಿಗಾಗ ೭೬ ಇಲ್ಲವೇ ೭೭ ವರ್ಷಗಳು. ಅವರು ಹುಟ್ಟೂರು ಗುಬ್ಬೇವಾಡ. ಅದೊಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಪುಟ್ಟ ಗ್ರಾಮ. ತಾಯಿ ಗುರಮ್ಮ ತಂದೆ ಮಡಿವಾಳಪ್ಪ.

ಕಲಬುರ್ಗಿ ಅವರು ಬಾಲ್ಯದಿಂದಲೂ ಓದಿನ ಹಸಿವು ಉಳ್ಳವರಾಗಿದ್ದರು. ಅಧ್ಯಯನವೇ ಅವರ ನಾಡಿ ಮಿಡಿತವಾಗಿತ್ತು. ಉಸಿರಿರುವತನಕ ಅದನ್ನಲ್ಲದೇ ಅವರು ಬೇರೆ ಇನ್ನೇನನ್ನೂ ಮಾಡಿದವರಲ್ಲ. ಅಪಾರ ತಪಸ್ಸಿನ ಜ್ಞಾನದ ಬೆಳಕು ಅವರ ಒಳವು ಹೊರಗುಗಳನ್ನು ಛಾಪಿಸಿತ್ತು. ಅಂತರಂಗದೊಳಗಿನ ಬೆಳಕು ಅವರನ್ನು ಎಂದೂ ಸುಮ್ಮನೆ ಕೂಡಲು ಬಿಡುತ್ತಿರಲಿಲ್ಲ. ಏನಾದರೊಂದು ಒಂದರ ನಂತರ ಇನ್ನೊಂದು ಹೀಗೆ ಅವರ ಕಾರ್ಯಯೋಜನೆಯ ಹರವು ಬಹು ದೊಡ್ಡದಾಗಿತ್ತು. ಪರೀಕ್ಷಿಸದೆ, ಪ್ರಶ್ನಿಸದೇ ಅವರು ಏನನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ. ತಮಗೆ ಖಾತ್ರಿಯಾಗದ ಹೊರತು ತಮ್ಮನ್ನು ತಾವು ನಂಬದಂಥ ಪರಿಸ್ಥಿತಿಯನ್ನು ಅವರು ರೂಢಿಸಿಕೊಂಡಿದ್ದರು.ಅಭ್ಯಾಸ ಬಲದಿಂದಾಗಿ ಈ ಗುಣ ಅವರಲ್ಲಿ ಮತ್ತಷ್ಟು ಇನ್ನಷ್ಟು ಗಟ್ಟಿಗೊಂಡಿತ್ತು. ಚಿಕಿತ್ಸಕ ಬುದ್ಧಿ ಉಳ್ಳವರಾಗಿದ್ದರಿಂದ ಸಹಜವಾಗಿಯೇ ಅವರ ಚಿತ್ತ ಸಂಶೋಧನೆಯತ್ತ ವಾಲಿತ್ತು. ಸಂಶೋಧನೆ ಎಂದರೆ ಅದು ಅವರ ಪಾಲಿಗೆ ಸತ್ಯದ ಹುಡುಕಾಟ ಆಗಿರುತ್ತಿತ್ತು. ಹೀಗಾಗಿ ಕಲಬುರ್ಗಿ ಅವರು ಕನ್ನಡ ಸಾರಸ್ವತ ಲೋಕದಲ್ಲಿ ಸಂಶೋಧಕರೆಂದೇ ಸ್ಥಾಪಿತಗೊಂಡರು.

೧೯೬೨ ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಆರಂಭ.೬೪ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರು.೯೮ ರಿಂದ ೨೦೧೧ ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದರು.

ಕಲಬುರ್ಗಿ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅಧ್ಯಯನ ,ಅಧ್ಯಾಪನದಲ್ಲಿ ಬದುಕು ಸವಿಸಿದ್ದರು.ಸಂಶೋಧನೆಯ ಅವರಿಗೆ ಅತ್ಯಂತ ಆಪ್ತ ಹಾಗೂ ಪ್ರಧಾನ ಆಸಕ್ತಿಯ ಕ್ಷೇತ್ರವಾಗಿತ್ತು .ಸಂಶೋಧನೆ ಎಂದರೇನೇ ಅದೊಂದು ದುರ್ಗಮ ಮಾರ್ಗ.ಅಂತ ದಟ್ಟಣೆಯಲ್ಲಿ ಸತ್ಯಶೋಧನೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದೇ ಅವರಿಗೆ ತೃಪ್ತಿ ಯಾಗುತ್ತಿತ್ತು. ಶಾಸನಗಳ ಅಧ್ಯಯನಗಳ ಅಧ್ಯಯನ, ಹಸ್ತಪ್ರತಿಶಾಸ್ತ್ರದ ಅನಾವರಣ,ಸಾಹಿತ್ಯ ,ಸಂಸ್ಕೃತಿ ,ಜನಪದ ಇತಿಹಾಸಗಳ ತಲಸ್ಪರ್ಶಿ ಅಧ್ಯಯನ ಹಾಗೂ ಸಾವಿರಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದೇ ಅವರ ಬದುಕಿನ ಗುರಿಯಾಗಿತ್ತು.

ಚಂಪಾ, ಚಂದ್ರಶೇಖರ್ ಕಂಬಾರ್, ಎಂ ಎಂ ಕಲ್ಬುರ್ಗಿ ,ಗಿರಡ್ಡಿ ಗೋವಿಂದರಾಜ್, ಸಿದ್ದಲಿಂಗ ಪಟ್ಟಣಶೆಟ್ಟಿ ಹೀಗೆ ಇವರೆಲ್ಲರೂ ಒಂದೆರಡು ವರ್ಷಗಳು ಹೆಚ್ಚು ಕಡಿಮೆ ಓರಿಗೆ ಗೆಳೆಯರೇ ಆಗಿದ್ದವರು.ಉತ್ತರ ಕರ್ನಾಟಕಕ್ಕೆ ವಿದ್ವತ್ತು ಮಾನ್ಯತೆಯನ್ನು ತಂದುಕೊಟ್ಟ ಈ ಎಲ್ಲ ದೈತ್ಯ ಪ್ರತಿಭೆಗಳು ಧಾರವಾಡ ಮಣ್ಣಿನ ಶ್ರೇಷ್ಠತೆಯಲ್ಲಿ ಅರಳಿದ ಘಮಲಗಳು.

ಕಲಬುರ್ಗಿ ಅವರಿಗೆ ಮಾರ್ಗ..? ದೊಂದಿಗೆ ಅವಿನಾಭಾವ ಸಂಬಂಧವಿತ್ತು.”ಕವಿರಾಜ ಮಾರ್ಗ “ಪರಿಸರದ ಕನ್ನಡ ಕುರಿತು ಅವರು ತಮ್ಮ ಮಹಾಪ್ರಬಂಧವನ್ನು ಸಲ್ಲಿಸಿದ್ದರು.ಕವಿರಾಜ ಮಾರ್ಗ ಪರಿಸರದ ಕನ್ನಡ ಸಾಹಿತ್ಯ ಆರು ಸಂಪುಟಗಳಲ್ಲಿ ಪ್ರಕಟವಾದ ಸಂಶೋಧನಾ ಕೃತಿಗಳು ಅತ್ಯಂತ ಮೌಲಿಕವಾದವುಗಳು. ಯೋಗಾ ಯೋಗ ಎನ್ನುವಂತೆ ಅವರಿಗೆ ಅರುವತ್ತು ವರ್ಷಗಳು ತುಂಬಿದಾಗ ಅಪಾರ ವಿದ್ಯಾರ್ಥಿ ಬಳಗ ಹಾಗೂ ವಿದ್ವಾಂಸರೆಲ್ಲ ಸೇರಿ ಅವರಿಗೆ ಅರ್ಪಿಸುವ ಅಭಿನಂದನಾ ಗ್ರಂಥ “ಕಲಬುರ್ಗಿ ೬೦” ಮಹಾಮಾರ್ಗ ಎಂಬುದಾಗಿದೆ

ತಮ್ಮ ಜೀವಿತಾವಧಿಯಲ್ಲಿ ಕಲಬುರ್ಗಿ ಅವರು ಮಾಡಿದ ಸಾಹಿತ್ಯ ಕೃಷಿ ಹಾಗೂ ಸಂಶೋಧನೆಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿರುವುದು ಅಷ್ಟೇ ಅಲ್ಲ; ನಮ್ಮ ನಾಡಿನ ಸಂಸ್ಕೃತಿಯನ್ನು ಅರಿಯಲು ಸಹಕಾರಿ ಆದದ್ದು ಅವರೊಬ್ಬ ನಾಡು ಕಂಡ ಅತ್ಯಂತ ಶ್ರೇಷ್ಠ ಸಂಶೋಧಕರಾಗಿದ್ದರು. ಕರ್ನಾಟಕ ಸರ್ಕಾರವು ಪ್ರಕಟಿಸಿದ ಹದಿನೈದು ವಚನ ಸಾಹಿತ್ಯ ಸಂಪುಟಗಳ ಪ್ರಧಾನ ಸಂಪಾದಕರಾಗಿ ಮಾರ್ಗದರ್ಶನ ನೀಡಿದ್ದು ಸಂಶೋಧಕ ತಂಡಗಳನ್ನೇ ಕಟ್ಟಿಕೊಂಡು ಈ ಮಹತ್ಕಾರ್ಯವನ್ನು ಪೂರೈಸಿದರೆಂತಲೇ ವಚನ ಸಾಹಿತ್ಯದ ಕಟ್ಟುಗಳು ನಾಡಿನುದ್ದಕ್ಕೂ ಕನ್ನಡಿಗರ ಮನೆ ಮನೆಗಳಲ್ಲಿ ಲಭ್ಯವಾಗಿವೆ.ಬಿ ವಿ ಮಲ್ಲಾಪುರ, ಎಸ್ ವಿದ್ಯಾಶಂಕರ್, ವೀರಣ್ಣ ರಾಜೂರು, ಬಿ ಆರ್ ಹಿರೇಮಠ್, ಎಸ್ ಶಿವಣ್ಣ ಮುಂತಾದ ವಿದ್ವಾಂಸರು ಈ ಕಾರ್ಯದಲ್ಲಿ ಕಲಬುರ್ಗಿ ಅವರಿಗೆ ಹೆಗಲು ಕೊಟ್ಟು ಪರಿಶ್ರಮ ಪಟ್ಟಿರುವುದನ್ನು ನಾವೆಂದಿಗೂ ಮರೆಯುವಂತಿಲ್ಲ.ಡಾ ಎಂ ಚಿದಾನಂದಮೂರ್ತಿ ಡಾ ಸಿ ಪಿ ಕೃಷ್ಣಕುಮಾರ್ ಅವರ ಮಾರ್ಗದರ್ಶನವೂ ಇಲ್ಲದಿರಲಿಲ್ಲ.

ಕಲಬುರ್ಗಿ ಅವರನ್ನು ಸರಿಯಾಗಿ ಗ್ರಹಿಸಿ ಹೇಳುವುದಾದರೆ, ಅವರ ದಣಿವರಿಯದ ಜೀವ ಅದು. ತಾವು ಮಾಡುತ್ತಿದ್ದ ಕಾರ್ಯದಲ್ಲಿ ತೃಪ್ತಿ ಇತ್ತಾದರೂ ಯಾವತ್ತೂ ಸಂತೃಪ್ತಿಗಾಗಿ ವಿಶ್ರಾಂತಿಗೆ ಮೈಚೆಲ್ಲಿ ದವರಲ್ಲ. ಕನ್ನಡ ಸಾಹಿತ್ಯ ಚರಿತ್ರೆ,ಸಂಸ್ಕೃತಿ ,ಜನಪರ ಬದುಕನ್ನು ಶಾಸ್ತ್ರೀಯವಾಗಿ ಪರಾಮರ್ಶಿಸಿ ಸಂಶೋಧನೆಯ ನೆಲೆಯಲ್ಲಿ ಕಟ್ಟಿ ಕೊಡುವುದರಲ್ಲಿಯೇ ಸದಾ ತೊಡಗಿಸಿಕೊಂಡವರು. ಈ ಕೈಂಕರ್ಯವನ್ನು ಲಿಂಗಪೂಜೆಯಂತೆ ಅತ್ಯಂತ ಶ್ರದ್ಧಾ ಭಕ್ತಿ, ನಿಷ್ಠೆ ನಿಷ್ಕಾಮದಿಂದ ಪೂರೈಸುತ್ತ ಬಂದವರು.

ಸುಮಾರು ನಲವತ್ತೊಂದು ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿ ಕೊಟ್ಟಿರುವುದು ಬಹುದೊಡ್ಡ ಕೊಡುಗೆ. ನೂರಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ನಾಲ್ಕನೂರಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ವಿದ್ವಾಂಸರ ಗಮನ ಸೆಳೆದಿವೆ .ಇಷ್ಟೇ ಮಾತ್ರ ಸಾಲದೆಂಬಂತೆ ಕಲಬುರ್ಗಿಯವರು ಕೇವಲ ಸಂಶೋಧಕರು ಮಾತ್ರವಾಗಿ ಉಳಿಯದೆ ಅವರೊಬ್ಬ ಸೃಜನಶೀಲ ಲೇಖಕರೂ ಆಗಿದ್ದರು. ” ನೀರು ನೀರಡಿಸಿತು “ಎಂಬುದು ಖರೇ ಖರೇ, ಸಂಗ್ಯಾಬಾಳ್ಯಾ ಕ್ರಮವಾಗಿ ಅವರ ನಾಟಕ ಹಾಗೂ ಸಣ್ಣಾಟ.

ಇತ್ತೀಚೆಗೆ ೨೦೧೬ ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಚನ ಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟಣೆಯ ಯೋಜನೆಯಡಿಯಲ್ಲಿ ಬಸವಯುಗದ ವಚನ ಮಹಾಸಂಪುಟ ೧ ಹಾಗೂ ಬಸವೋತ್ತರ ಯುಗದ ವಚನ ಸಂಪುಟ ೨ ಎಂಬೆರಡನ್ನು ಬೃಹತ್ ಸಂಪುಟಗಳನ್ನು ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬಂಜಗೆರೆ ಜಯಪ್ರಕಾಶ್ ಅವರ ಅವಧಿಯಲ್ಲಿ ಪ್ರಕಟವಾಗಿರುವುದು ಸ್ತುತ್ಯರ್ಯ.ಇವುಗಳ ಬೈಬಲ್ ಮಾದರಿ ಮುದ್ರಣಗಳಲ್ಲಿ ಪ್ರಕಟಗೊಂಡಿರುವುದು ವಿಶೇಷ. ಇವುಗಳನ್ನು ಹೊರತರುವಲ್ಲಿ ಪ್ರಧಾನ ಸಂಪಾದಕರಾಗಿ ಡಾ ಎಂ ಎಂ ಕಲಬುರ್ಗಿ ಅವರ ಶ್ರಮ ಅಪಾರವಾದದ್ದು. ಸಮಗ್ರ ಕೀರ್ತನ ಸಂಪುಟಗಳು ಕೂಡ ಬಂದಿದ್ದು ಕಲಬುರ್ಗಿಯವರು ಸಂಪಾದಕ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿರುವುದು ಅವರ ಹೆಗ್ಗಳಿಕೆ.

ಕಲಬುರ್ಗಿ ಅವರ ಜ್ಞಾನದ ಹರವು ಬಹುಮುಖಿಯಾದದ್ದು. ಆ ಕಾರಣಕ್ಕಾಗಿ ನಾಡಿನ ವೀರಶೈವ ಮಠಗಳೊಂದಿಗೆ ನಿಕಟ ಸಂಪರ್ಕ ಹಾಗೂ ಬಾಂಧವ್ಯ ಇರಿಸಿ ಕೊಂಡಿದ್ದರು. ಅಲ್ಲಿ ತಮ್ಮ ಕಲ್ಪನೆಗಳ ಸಾಕಾರಕ್ಕಾಗಿ ಯೋಜನೆಗಳನ್ನು ರೂಪಿಸಿ ಸಾಹಿತ್ಯ ಕೃತಿಗಳ ಪ್ರಕಟಣೆಗೆ ಪ್ರೇರಕ ಶಕ್ತಿಯಾಗಿದ್ದರು.

ಗದುಗಿನ ಈ ಹಿಂದಿನ ತೋಂಟದ ಸಿದ್ಧಲಿಂಗ ಶ್ರೀಗಳವರು ತಮ್ಮ ವಿದ್ಯಾರ್ಥಿ ದಿಸೆಯಲ್ಲಿ ಕಲಬುರ್ಗಿ ಅವರ ಶಿಷ್ಯರಾಗಿದ್ದವರೇ.ಅವರು ಕೂಡ ಸಿಂದಗಿ ಮೂಲದವರೇ ಆಗಿದ್ದರು. ಹೀಗಾಗಿ ಕಲಬುರ್ಗಿಯವರಿಗೆ ತೋಂಟದಾರ್ಯ ರೊಂದಿಗೆ ಕರುಳಿನ ಸಂಬಂಧ ಬೆಸೆದುಕೊಂಡಿತ್ತು.ಮೈಸೂರಿನ ಸುತ್ತೂರು ಮಠ ,ಬೆಳಗಾವಿಯ ನಾಗನೂರು ಶ್ರೀಗಳ ಮಠ, ಶಿವಮೊಗ್ಗೆಯ ಆನಂದಪುರ ಮಠಗಳ ಪೂಜ್ಯರೊಂದಿಗೆ ಒಡನಾಟ ಇರಿಸಿಕೊಂಡಿದ್ದರು.ವೀರಶೈವ ಧರ್ಮ ವಿಶೇಷವಾಗಿ ವಚನ ಸಾಹಿತ್ಯದ ಅಧ್ಯಯನ ಹಾಗೂ ಪ್ರಕಟಣೆಗಾಗಿ ಮುತುವರ್ಜಿ ವಹಿಸುತ್ತಿದ್ದರು.

ಕಲಬುರ್ಗಿ ಅವರ ನಾಲ್ಕು ದಶಕಗಳ ಪ್ರಾಧ್ಯಾಪಕ ವೃತ್ತಿಯಲ್ಲಿ ನಾಡಿನ ಉದ್ದಗಲಕ್ಕೂ ಅಪಾರ ಶಿಷ್ಯ ಬಳಗವನ್ನು ಹೊಂದಿದ್ದರು.ಅವರ ಗರಡಿಯಲ್ಲಿ ತಯಾರಾದ ಸಂಶೋಧಕರು ,ಸಾಹಿತಿಗಳು, ಹೋರಾಟಗಾರರು, ಚಿಂತಕರು ಮುಂತಾದ ಅನೇಕರು ಹೆಸರು ಮಾಡಿದ್ದಾರೆ.ಮಲ್ಲಿಕಾ ಘಂಟಿ, ಬಸವರಾಜ ಸಬರದ ಹನುಮಾಕ್ಷಿ ಗೋಗಿ, ಅಲ್ಲಮಪ್ರಭು ಬೆಟ್ಟದೂರು, ದೇವೇಂದ್ರಪ್ಪ ಜಾಜಿ, ಶರಣಬಸಪ್ಪ ಕೋಲ್ಕಾರ, ಈರಪ್ಪ ಕಂಬಳಿ ಹೀಗೆ ಕೆಲ ಹೆಸರುಗಳು ಮಾತ್ರ ನನ್ನ ನೆನಪಿನಲ್ಲಿವೆ. ಅವರು ಒಟ್ಟು ಶಿಷ್ಯ ಬಳಗವನ್ನು ಇಲ್ಲಿ ದಾಖಲಿಸುವುದು ಅಸಾಧ್ಯ.

ಪ್ರಶಸ್ತಿಗಳಿಂದ ದೊಡ್ಡವರಾಗುವವರು ಬೇರೆ. ಇನ್ನು ಕೆಲವರಿಂದಾಗಿ ಪ್ರಶಸ್ತಿಗಳಿಗೆ ಮಾನ್ಯತೆ ಸಿಗುತ್ತದೆ. ಡಾ ಕಲಬುರ್ಗಿ ಅವರು ಎರಡನೇ ವರ್ಗಕ್ಕೆ ಸೇರಿದವರು. ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ, ನೃಪತುಂಗ ,ಚಿದಾನಂದ ಪ್ರಶಸ್ತಿ ಹೀಗೆ ಅವರ ನುಡಿ ಸೇವೆಗಾಗಿ ಸಂದ ಪ್ರಶಸ್ತಿಗಳು ಹತ್ತು ಹಲವಾರು.ಕಲಬುರ್ಗಿ ಅವರಲ್ಲಿ ಯಾವ ಪ್ರಶಸ್ತಿ ಬಿರುದಾವಳಿಗಳು ಗತ್ತು ಗೈರತ್ತುಗಳಿರಲಿಲ್ಲ. ಅತ್ಯಂತ ಸರಳವಾಗಿ ಸಾಮಾನ್ಯರೊಂದಿಗೆ ಬೆರೆಯುವ ವಿದ್ವಾಂಸರಾಗಿದ್ದರು.ಅವರೊಬ್ಬ ಕನ್ನಡದ ಕಟ್ಟಾಳುಗಳಾಗಿ ತಮ್ಮ ಕೊನೆಯವರೆಗೂ ಉಸಿರಾಡಿದ ಅಪರೂಪದ ವ್ಯಕ್ತಿಗಳಾಗಿದ್ದರು.

ನಮ್ಮದು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ನಾವು ಗಣತಂತ್ರ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ.ಭಾರತ ಒಂದು ಜಾತ್ಯಾತೀತ ರಾಷ್ಟ್ರ. ಇದು ಬಹುಸಂಸ್ಕೃತಿಯ ಸಮಾಜ, ವೈವಿಧ್ಯತೆಯೇ ಅದರ ಅಸ್ಮಿತೆ ಕೂಡ.ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಸಂವಿಧಾನದತ್ತವಾದ ಅಧಿಕಾರ.ದೇಶದ ಎಲ್ಲ ವ್ಯಕ್ತಿಗಳಿಗೂ ಮಾತನಾಡುವ ತಮ್ಮ ವಿಚಾರಗಳನ್ನು ವ್ಯಕ್ತಗೊಳಿಸುವ ಸ್ವಾತಂತ್ರ್ಯವಿದೆ. ಒಬ್ಬರ ಅಭಿಪ್ರಾಯವನ್ನು ಖಂಡಿಸಿ ತತ್ವ, ಸಿದ್ಧಾಂತಗಳ ಆಧಾರದ ಮೇಲೆ ಇನ್ನೊಬ್ಬರನ್ನು ನಾವು ಒಪ್ಪದೇ ಇರುವುದಕ್ಕೂ ಯಾವುದೇ ಅಭ್ಯಂತರವಿಲ್ಲ.

ಒಂದು ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕಾದರೆ ಅದರ ವೈಚಾರಿಕ ಪ್ರಜ್ಞೆ ಸದಾ ಜಾಗೃತವಾಗಿರಬೇಕು.ಅಭಿಪ್ರಾಯ ಭೇದಗಳನ್ನು ಅರಗಿಸಿಕೊಳ್ಳುವ ಆರೋಗ್ಯಕರ ವಾತಾವರಣ ಇರಬೇಕು.ಪ್ರಗತಿಪರ ಚಿಂತಕರ ಧ್ವನಿಯನ್ನು ಕುಗ್ಗಿಸುವ ಕುಬ್ಜ ಮನಸ್ಸಿನವರಿಂದ ನಾವು ಯಾವ ಪ್ರಗತಿಯನ್ನು ನಿರೀಕ್ಷಿಸಲಾಗದು.ಸಾಮಾಜಿಕ ಮೌಢ್ಯ

ಗಳನ್ನು ಪ್ರಶ್ನಿಸುವ ಮೂಲಕ ಸಮಾಜದಲ್ಲಿ ನಡೆಯುವ ಅನಾಚಾರಗಳನ್ನು ತಡೆಯಬೇಕಿದೆ. ಜಾತಿ-ಭೇದ ವರ್ಗ-ಭೇದ ಲಿಂಗತಾರತಮ್ಯ, ಅಸಮಾನತೆ,ಅಸಹಿಷ್ಣುತೆಗಳ ಜಾಗದಲ್ಲಿ ಸಹೋದರತೆ ,ಶಾಂತಿ ,ನೆಮ್ಮದಿ ಜಾಗೃತಗೊಳ್ಳಬೇಕು.

ಕಲಬುರ್ಗಿ ಅವರಂತಹ ವೈಚಾರಿಕ ಶಕ್ತಿಯನ್ನು ತೋಳ್ಬಲದಿಂದ ಯಾವತ್ತೂ ನಾಶ ಮಾಡಲಾಗದು. ನಮ್ಮ ಧರ್ಮ, ಆಚರಣೆ, ನಂಬಿಕೆಗಳು ಅದೇನಿದ್ದರೂ ನಮ್ಮ ಅಂತರಂಗ ಶುದ್ಧಿಗೆ ಸಾಧನಗಳಾಗಬೇಕೇ ಹೊರತು ಸಾಮಾಜಿಕ ವಿಪ್ಲವ,ಅಶಾಂತಿ, ಹಿಂಸೆಗಳಿಗೆ ಇಂಬು ಕೊಡಬಾರದು.

ಕಲಬುರ್ಗಿ ಅವರ ಸಾವಿನ ಎಂಟು ವರ್ಷಗಳ ನಂತರವೂ ಅವರ ನೆನಪು ನನ್ನಂತಹ ಅಸಂಖ್ಯಾತರಿಗೆ ಕಾಡದೇ ಇರದು.ಅವರಿಲ್ಲದೆ ಶೂನ್ಯ ಕರ್ನಾಟಕ ಸಾಂಸ್ಕೃತಿಕ ವಲಯದಲ್ಲಿ ಇಂದಿಗೂ ಆವರಿಸಿದೆ.ಭೌತಿಕ ಶರೀರವನ್ನು ನಾಶ ಮಾಡಬಹುದೇ ಹೊರತು ಸದಾಕಾಲ ಉದ್ದೀಪನಗೊಳಿಸುವ ವಿಚಾರಗಳನ್ನು ಪ್ರಪಂಚದ ಯಾವ ಶಕ್ತಿಯೂ ಕೊಲ್ಲಲಾರವು.

ಕನ್ನಡ ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಡಾ ಎಂ ಎಂ ಕಲಬುರ್ಗಿ ಅವರು ಯಾವತ್ತೂ ಅಜರಾಮರ. ಜನಮಾನಸದಿಂದ ಅವರ ನೆನಪು ಎಂದೂ ಮಾಸದು.

ಜಡತ್ವಕ್ಕಲ್ಲದೇ ಚೈತನ್ಯಕ್ಕೆ ಸಾವು ಉಂಟೆ..?

ಇಂದು ಅವರ ಪುಣ್ಯ ಸ್ಮರಣೆ. ಮಹಾನ್ ಸಂಶೋಧಕನ ಸವಿನೆನಪಿಗಾಗಿ ಈ ನುಡಿ ನಮನ.

‍ಲೇಖಕರು avadhi

August 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: