ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಮಿತಾ ಬರೆದ 'ಹತ್ತು ಹನಿ ಬಿಂದುಗಳು’

 

-ಸ್ಮಿತಾ ಅಮೃತರಾಜ್

ಹುಚ್ಚುಗಟ್ಟಿ ಸುರಿಯುವ
ಮುಗಿಲು.
ನಿರ್ಲಿಪ್ತವಾಗಿ ತೋಯಿಸಿಕೊಳ್ಳುತ್ತಿದೆ
ನೆಲ.
ಕಾರಣವೇ ಇಲ್ಲದೆ ಬೀಸಿ ಹೋಗಿದೆ
ಹೆಸರಿಲ್ಲದ ಒಲವು.
** ** **
ನಾನು ಕದಲುವುದೇ ಇಲ್ಲ
ಅಂದುಕೊಂಡದ್ದು ಎಷ್ಟು ಬೇಗ
ಸುಳ್ಳಾಯಿತು ನೋಡು
ಹನಿ ಪ್ರೀತಿಯೊಡನೆ ನೀ ಧುಮ್ಮಿಕ್ಕಿ
ಸೆಳೆದದ್ದು ಹೌದೆಂದು ಈಗ
ಖಾತ್ರಿಯಾಯಿತು ಬಿಡು.
** ** **
ಬರಡು ಬರಿದು ನೆಲದ ಎದೆಯೊಳಗೆ
ನೂರು ಭಾವ ಹಾದು ಹೋದ ಕ್ಷಣ
ಪುಟಿದೆದ್ದ ಹಸಿ ಹಸಿ ಮಾರ್ಧವತೆಗೆ
ಮುಗಿಲೊಳಗೀಗ ಅವ್ಯಕ್ತ ತಲ್ಲಣ.
** ** **

ಮುಗಿಲು ಗೋಗೆರೆದದ್ದು
ನೆಲ ನೆನೆದು ಬಿಕ್ಕಳಿಸಿದ್ದು
ಎಲ್ಲವೂ ಕನಸಿನಂತೆ ಮರೆವಿಗೆ
ಸಂದಿರುವಾಗ
ಬಯಲು ಮತ್ತೂ ಮತ್ತೂ ನಗುತ್ತಲೇ
ಸಾಕ್ಷಿ ಹೇಳುತ್ತಿದೆ ಈ ಹೊತ್ತು.
** ** **
ಮುಗಿಲ ಭಾವಗಳೆಲ್ಲಾ ಹಾಡಾಗಿ
ಉಲಿಯುವಾಗ
ಸುಮ್ಮಗೆ ಕೇಳಿಸಿಕೊಳ್ಳುತ್ತಾ ತೋಯುತ್ತಿದ್ದ
ನೆಲ ಈಗ ಹೆಜ್ಜೆಗೂಡಿಸುತ್ತಿದೆ.
**** **

ಬಿಂದು ಬಿಂದು ಹನಿ ಬಿಂದು
ಒಂದೊಂದೇ ನೆಲಕ್ಕಪ್ಪುವ ಈ ಕ್ಷಣ
ಕಾಯಿಸುವುದು ತರವಲ್ಲ.
ಒಪ್ಪಿಕೋ ನೆಲವೇ.. ಶರಣಾಗಿಬಿಡು.
ಹನಿ ಪ್ರೀತಿಯ ಹಿರಿದು ಒಲವಿನ ಮುಂದೆ
ಉಳಿದೆಲ್ಲವೂ ಗೌಣ.
** ** **
ನಾನು ಹನಿಯಾಗುತ್ತಿದ್ದರೆ…
ಸಲೀಸಾಗಿ ನಿನ್ನ ಕಣ್ಣೊಳಗೆ ಇಳಿದು
ನೇರ ಎದೆಯಾಳವ ತಲುಪಬಹುದಿತ್ತು ಅಂತ
ಅವಲತ್ತು ಕೊಳ್ಳುವ ಅತೃಪ್ತ ಮನಸ್ಸುಗಳ ರೋಧನ
ಮಳೆಗೆ ಕೇಳಿಸುವುದಿಲ್ಲ.
** ** **
ಮುಗಿಲು ಬೋರ್ಗರೆದು
ನಿನ್ನ ಪಾದದಡಿಯಲ್ಲಿ ಮಂಡಿಯೂರುವ
ಈ ಗಳಿಗೆ
ನಿನ್ನೆ-ನಾಳೆಗಳ ಬದಿಗಿರಿಸಿಬಿಡು
ಬಾಚಿ ಬಾಚಿ ಮೊಗೆದುಕೋ ಹನಿಪ್ರೀತಿಯಾ..
ಮತ್ತೆ ಬೇಕೆನ್ನಿಸಿದರೂ ನಿಲುಕಲಾರದು
ನಿನ್ನ ಬಳಿಗೆ.
** ** **
ಮರಳು ಮುಗಿಲಿಗೆ
ಮರಳಾದರೂ ಬರಡಾಗಲಿಲ್ಲ
ನೆಲ.
ತೊಟ್ಟಿಕ್ಕುತ್ತಾ ಒಸರುವ ಹನಿಗೆ
ಆಳಕ್ಕಿಳಿದ ಬೇರು
ಹಸಿರು ಕಾವ್ಯ ಫಲ.
** ** **
ವಾಚಾಳಿ ಮುಗಿಲು
ಮೂಕಿ ನೆಲ.
ಬಂಧ ಬೆಸೆದುಕೊಳ್ಳಲು
ಯಾವ ಕಾರಣವೂ ಬೇಕಿಲ್ಲ
ನಿಜ.
 

‍ಲೇಖಕರು G

6 June, 2015

7 Comments

  1. Rj

    ವಾಚಾಳಿ ಮುಗಿಲು
    ಮೂಕಿ ನೆಲ.
    ಬಂಧ ಬೆಸೆದುಕೊಳ್ಳಲು
    ಯಾವ ಕಾರಣವೂ ಬೇಕಿಲ್ಲ
    ನಿಜ.
    *
    ಎಲ್ಲವೂ ಚೆನ್ನಾಗಿವೆ. ಅದರಲ್ಲೂ ಕೊನೆಯ ಹನಿ ತನ್ನ ಗುಣವಿಶೇಷದಿಂದ ಗಮನ ಸೆಳೆಯಿತು. ‘ವಾಚಾಳಿ’ಗೆ ಲಿಂಗಭೇದವಿಲ್ಲ. ಆದರೆ ‘ಮೂಕಿ’ ಸ್ತ್ರೀಲಿಂಗದ ಹಂಗು ಇದೆ. ಆ ಕಾರಣಕ್ಕಾದರೂ ವಾಚಾಳಿ ಎಂಬುದು ಇಲ್ಲಿ ಗಂಡೇ ಆದೀತು. ಇದೆಲ್ಲ ಕಲ್ಪನೆ ಓದುಗರ ಸಮಾಧಾನಕ್ಕೆ. ಬಂಧ ಅನ್ನುವದು ಬಂದ ಮೇಲೆ ಲಿಂಗದ ಹಂಗೂ ಬೇಡವೆನಿಸಬಹುದು.
    ಕಲ್ಪನೆ ಚೆಂದವಿದೆ. ಅಭಿನಂದನೆಗಳು.
    -Rj

  2. noorullathyamagondlu

    ಚೆಂದದ ಹನಿಗಳು.

  3. bidaloti Ranganath

    ಹನಿ ಗವನಗಳು ರೂಪಗಳಿಂದ ಕೂಡಿ,ನೆಂದು ನೆಲ ತೊಪ್ಪೆಯಾಗಿದೆ

  4. pavithra

    Sundara tampaneya hanigalu…

  5. ಆರತಿ ಘಟಿಕಾರ್

    ಕಾಡುವ , ಬೆರಗು ಮೂಡಿಸುವ ಹನಿಗಳು ಚೆನ್ನಗಿವೆ .
    ನಾನು ಹನಿಯಾಗುತ್ತಿದ್ದರೆ…
    ಸಲೀಸಾಗಿ ನಿನ್ನ ಕಣ್ಣೊಳಗೆ ಇಳಿದು
    ನೇರ ಎದೆಯಾಳವ ತಲುಪಬಹುದಿತ್ತು ಅಂತ
    ಅವಲತ್ತು ಕೊಳ್ಳುವ ಅತೃಪ್ತ ಮನಸ್ಸುಗಳ ರೋಧನ
    ಮಳೆಗೆ ಕೇಳಿಸುವುದಿಲ್ಲ.
    ** ** ** ಮನ ಮುಟ್ಟಿತು .

  6. mmshaik

    kavite tumbaane chennaagide smita..

  7. guru

    Super

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading