ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಟೇಟಸ್ ಪುರಾಣ

ರಾಘವೇಂದ್ರ ರಾವ್ .ಕೆ

ಇತ್ತೀಚಿನ ದಿನಗಳಲ್ಲಿ ನಾವೆಲ್ಲರು ಈ  ಸ್ಟೇಟಸ್ ಮೆಸೇಜನ್ನು ವಾಟ್ಸ್ ಆಪ್ ಮತ್ತು ಫೇಸ್ ಬುಕ್ ಇತ್ಯಾದಿಗಳಲ್ಲಿ ಹಾಕಿ ತೇಲಿಬಿಡುವುದು ತೀರಾ ಸಾಮಾನ್ಯವಾಗಿದೆ. ತಮಗನ್ನಿಸಿದ್ದನ್ನೊ, ತಾವು ಮೆಚ್ಚಿದ ಚಿತ್ರಪಟಗಳನ್ನೊ, ತಾವು ಸೆರೆಹಿಡಿದ ಪಟಗಳನ್ನೊ, ಇಲ್ಲ ಸಂದೇಶ ಸಾರುವ ಸಾಲುಗಳನ್ನೊ, ಕವಿತೆಯನ್ನೊ ಹಾಕಿ ತಮ್ಮ ಕಾಂಟ್ಯಾಕ್ಟ್ ಲಿಸ್ಟ್ ನವರಿಗೆ ತೇಲಿಬಿಡುವುದು. ನೋಡಿದವರು ಅವುಗಳನ್ನು ಮೆಚ್ಚಿಯೋ ಇಲ್ಲವೇ ಟೀಕೆಗೊಳಪಡಿಸಿಯೋ ಸಂಭಾಷಣೆ ಅಥವಾ ಚರ್ಚೆಗಳು ಶುರು ಇಡುತ್ತವೆ. ದೇಶ ರಾಜಕಾರಣದಿಂದಿಡಿದು ಅಡುಗೆ ಮನೆಯ ತಿಂಡಿ ತೀರ್ಥದವರೆವಿಗೂ, ಕೆಲಸ ಕಾರ್ಯದಿಂದ ಪ್ರೇಮಾಲಾಪದವರೆವಿಗೂ ಹರಟೆ, ತಮಾಷೆ ಹೀಗೆ ಎಲ್ಲವೂ ಮೇಳೈಸಿದ ವಿಷಯ ಪರಿಧಿ ಈ ಸ್ಟೇಟಸ್ ಮೆಸೇಜ್ ಗಳದ್ದು. ಇದೊಂದು ಹೊಸದಾದ ಮಾಧ್ಯಮ ನಮ್ಮ ವಿಚಾರಗಳನ್ನೊ, ಭಾವನೆಗಳನ್ನೊ ಸಹೃದಯ ಮಿತ್ರರಿಗೆ ತಲುಪಿಸಲು. ಒಮ್ಮೊಮ್ಮೆ ಪ್ರತಿಸ್ಪಂದನದಂತೆ ಮೂಡುವ ಮಾತು/ಸಂಭಾಷಣೆಗಳು ನಗೆಗಡಲಿನಲ್ಲಿ ತೇಲಿಸುವಂತಿರುತ್ತವೆ. ವಾಸ್ತವಕ್ಕೆ ದೂರವಾದ ಸುಂದರವಾದ ಕಲ್ಪನಾಲೋಕ ಕಂಡು ಸಂತಸವನ್ನೂ ತರುತ್ತವೆ. ಒಂದು ಸ್ಟೇಟಸ್ ಮೆಸೇಜ್ ಮತ್ತು ಅದರ ಸುತ್ತ ನಡೆದ ವಿಷಯ, ಚರ್ಚೆಗಳು ಈ ಬರಹದಲ್ಲಿ.

ಅದೊಂದು ರಾತ್ರಿ ಕೆಲಸದಿಂದ ತಡವಾಗಿ ಬಂದು ಮನೆ ತಲುಪಿದಾಗ ವಿದ್ಯುತ್ ಇರಲಿಲ್ಲ. ಇನ್ನೂ ಊಟ ಕೂಡ ಆಗಿರಲಿಲ್ಲ. ಸರಿ ಇನ್ನೇನು ಮಾಡೋದು ಅಂತ ಹೊರಗೆ ಹೋಗಿ ಬರೋಣವೆಂದು ಹೊರಟು, ಬಿಸಿ ಬಿಸಿಯಾದ ಚಹಾ ಮಾತ್ರ ಕುಡಿದು ಬಂದದ್ದು. ಬರುವಷ್ಟರಲ್ಲಿ ವಿದ್ಯುತ್ ಬಂದಿತ್ತು. ಹೀಗೆ ಒಂದಿಷ್ಟು ಸಮಯ ಪೇಪರಿನ ಸುದ್ದಿಗಳತ್ತ ಕಣ್ಣಾಡಿಸಿ, ಯಾವುದೋ ಪುಸ್ತಕ ಹಿಡಿದು, ಹಾಡುಗಳನ್ನು ಕೇಳುತ್ತಾ ಕುಳಿತಿದ್ದೆ. ನಿದ್ರೆ ಯಾಕೋ ಬರುವಂತೆ ಇರಲಿಲ್ಲ. ಊಟ ಮಾಡದಿದ್ದುದರಿಂದಲೋ ಇಲ್ಲಾ ಚಹಾ ಕುಡಿದಿದ್ದರಿಂದಲೋ ತಿಳಿಯದು. ರಾತ್ರಿ ಸುಮಾರು ಎರಡು ಗಂಟೆ ಆಗಿ ಹೋಯ್ತು. ತಲೆಯಲ್ಲಿ ಏನೋ ನೆನಪಾಗಿ ಈ ಒಂದು ಸಾಲು ಬಂತು. ಅದನ್ನ ಟೈಪ್ ಮಾಡಿ ಸ್ಟೇಟಸ್ ಮೆಸೇಜ್ ಆಗಿ ವಾಟ್ಸ್ ಆಪ್ ನಲ್ಲಿ ಹರಿಬಿಟ್ಟೆ. ಆ ಸಂದೇಶ ಈ ರೀತಿಯಾಗಿತ್ತು.

“ರಾತ್ರಿ ಕಳೆಯಿತು,
ಮಾತು ಉಳಿಯಿತು …”

ಅಂದು ತಡರಾತ್ರಿ ನನ್ನ ಸ್ನೇಹಿರರೊಬ್ಬರು ಯಾವುದೋ ದೂರದೂರಿನ 8 ದಿನಗಳ ಚಾರಣಕ್ಕೆಂದು ಹೊರಡುವುದಲ್ಲಿದ್ದರು. ಅವರು ವಿಮಾನ ನಿಲ್ದಾಣ ತಲುಪಿದ್ದರು. ನನ್ನ ಈ ಸ್ಟೇಟಸ್ ಮೆಸೇಜನ್ನು ನೋಡಿ, ಅವರು ಒಂದು ಸಂದೇಶವನ್ನು ಕಳಿಸಿದ್ದರು. ವಿಮಾನ ಬರುವುದಕ್ಕೆ ಇನೂ ಸಮಯವಿದೆ. ಉಳಿದ ಮಾತನ್ನು ಮುಂದುವರೆಸಬಹುದು ಎಂದು ನಗುಮುಖವಿರುವ ಎರಡು ಇಮೋಜಿಯನ್ನು ಹಾಕಿ ಪ್ರತಿಕ್ರಿಯಿಸಿದರು. (ಆದರೆ ಅಂದು ಆ ಸಮಯಕ್ಕೆ ಅವರೊಟ್ಟಿಗೆ ಮಾತು ಇನ್ನು ಆರಂಭವಾಗುವುದರಲ್ಲಿತ್ತು. ಆದರೆ ಅದಾಗಲೇ ಅವರು ಮಾತನ್ನು ಮುಂದುವರೆಸೋಣ ಎಂದು ಬರೆದಿದ್ದರು). ‘ನಿಮ್ಮ ಪ್ರಯಾಣ ಮತ್ತು ಚಾರಣ ಸುಖಕರವಾಗಿರಲಿ’ ಎಂದು ಸಂಜೆ ಅವರನ್ನು ಕಂಡು ಮಾತನಾಡಿಸಿಕೊಂಡು ಬಂದಿದ್ದೆ.

ಮರುದಿನ ಆಫೀಸ್ ನಲ್ಲಿ ಸಂಜೆಯ ವೇಳೆಗೆ ನಮ್ಮ ಸಹೋದ್ಯೋಗಿಗಳ ಗುಂಪು ಚಹಾ ವಿರಾಮಕ್ಕೆಂದು ಸೇರಿದ್ದಾಗ, ಒಬ್ಬರು ಸ್ನೇಹಿತರು ನನ್ನ ಕುರಿತು, ‘ಇವರ ಸ್ಟೇಟಸ್ ಮೆಸೇಜ್ ನೋಡೀದ್ರಾ?’ ಎಂದು ಮತ್ತೊಬ್ಬ ಗೆಳೆಯರಿಗೆ ನುಡಿದು, ಮತ್ತೆ ನನ್ನತ್ತ ತಿರುಗಿ ‘ಯಾವತ್ತು ಮದುವೆಯ ಊಟ?’ ಎಂದು ಪ್ರಶ್ನಿಸಿದರು. ಆಗ ಸ್ಟೇಟಸ್ ನ ಸಾಲುಗಳನ್ನು ಆಗತಾನೆ ಓದಿದ ನನ್ನ ಅತ್ಯಾಪ್ತ ಗೆಳೆಯರೊಬ್ಬರು, ‘ಏನೀದು ತುಂಬಾ ಫೀಲ್ ಮಾಡಿ ಬರೆದಿದ್ದೀಯಾ’  ಎಂದು ನುಡಿದರು. ಮತ್ತು ನಾ ಬರೆದ ಸಾಲುಗಳಿಗೆ ಒಂದು ಸಾಲನ್ನು ಸೇರಿಸಿ, ಕುಳಿತಿದ್ದ ಇತರರನ್ನು ನಗೆಗಡಲಲ್ಲಿ ತೇಲಿಸಿದರು.

ರಾತ್ರಿ ಕಳೆಯಿತು,
ಮಾತು ಉಳಿಯಿತು
ನಿಮ್ಮ ಬಗ್ಗೆ ನಮಗೆ ತಿಳಿಯಿತು …

ನನ್ನ ಸ್ನೇಹಿತರು ಏನನ್ನು ತಿಳಿದುಕೊಂಡ್ರೊ, ಅವರು ಏನು ತಿಳಿದ್ಕೊಂಡ್ರು ಅಂತ ನಾ ತಿಳಿದುಕೊಂಡೆನು ಅದೆಲ್ಲವೂ ಗೌಣ, ಲೆಕ್ಕಕ್ಕಿಲ್ಲದ್ದು. ಮುಖ್ಯವಾದುದು ಈ ಅಕ್ಕರೆಯ ಅಕ್ಷರದ ಚಮತ್ಕಾರ, ಅದರ ಆಸ್ವಾದನ, ಅವು ನೀಡುವ ಆನಂದ ಭಾವಗಳು.

ಮತ್ತೊಬ್ಬ ನನ್ನ ಆಪ್ತಗೆಳೆಯರೊಬ್ಬರು, ಸಂಜೆಯ ಹೊತ್ತಿಗೆ ಈ ಸಾಲುಗಳಿಗೆ ಪ್ರತಿಕ್ರಿಯಿಸಿ ಹಿಂದಿ ಭಾಷೆಯ ಒಂದು ಸಾಲನ್ನು ಕಳುಹಿಸಿದ್ದರು. ಅದು ಹೀಗಿತ್ತು.
‘ರಾತ್ ಗಯೀ ತೋ ಬಾತ್ ಗಯೀ’  – ರಾತ್ರಿ ಕೆಳೆಯಿತೆಂದರೆ ಮಾತು ಕಳೆಯಿತು ಎಂಬುದು ಪ್ರಚಲಿತದ ಮಾತು. ಯಾವ ಅರ್ಥದಲ್ಲಿ ಈ ಸಾಲುಗಳನ್ನು ಬರೆದಿದ್ದೀರಿ ನೀವು? ಎಂದು ಕೇಳಿದರು. ನಾನಂದು ಮುದ್ದಣ್ಣ-ಮನೋರಮೆಯರ ಬಗೆಗಿನ ಬರಹವೂಂದನ್ನು ಓದುತ್ತಾ ಇದ್ದೆ. ಮುದ್ದಣ್ಣ-ಮನೋರಮೆಯರು ರಾತ್ರಿಯಿಡೀ ಮಾತನಾಡುತ್ತಾ ಕಾಲಕಳೆಯುವರು. ಇದರಿಂದಾಗಿ ಮೂಡಿದ್ದು ಆ ಸಾಲುಗಳು. ಅವರುಗಳು ಮಾತನಾಡುತ್ತಾ, ಮಾತನಾಡುತ್ತಾ, ರಾತ್ರಿಯೇ ಕೆಳೆದು ಹೋಗುತ್ತದೆ. ಆದರೆ ಆಡಬೇಕಾದ ಮಾತು ಇನ್ನೂ ಉಳಿದಿರುತ್ತದೆ ಈ ಸಾಲುಗಳು ಅಂತ ತಿಳಿಸಿದೆ. ಅದಕ್ಕೆ ನನ್ನ ಗೆಳೆಯ ‘ಓಹ್ ಅದು ಹಾಗೆ’ ಎಂದು ನಗುವಿನ ಇಮೋಜಿ ಕಳುಹಿಸಿದರು.

ಒಂದೆರೆಡು ದಿನಗಳಲ್ಲಿ ಮತ್ತೆ ಒಂದಿಷ್ಟು ಸಾಲುಗಳು ಮೂಡಿಬಂದವು. ಅವು ಹೀಗಿವೆ.

ನಿನ್ನ ನೆನಪುಗಳಲಿ
ಮಲಗಲೆತ್ನಿಸಿದರೆ,
ನಿನ್ನ ರೂಪವದು
ನೂಕಿತಾಚೆಗೆ ನಿದಿರೆಯ

ನಿನ್ನ ಸವಿನುಡಿಗಳ
ನೆನೆಯುತಿರೆ ಮುಗಿವ
ಮಾತೆಲ್ಲಿಹದು, ಸದಾ
ಆಲಿಸುತಿಹುದೆನ್ನ ಹೃದಯ…

ಇದನ್ನೂ ಸ್ಟೇಟಸ್ ಮೆಸೇಜ್ ಆಗಿ ಹಾಕಿದ್ದೆ. ಮತ್ತೆ ಅದರ ಸುತ್ತ ಚರ್ಚೆ, ಕುಹಕ, ಕೆಣಕು, ಕೌತುಹಲ, ಒಂದಿಷ್ಟು ನಗು. ಕಲ್ಪನೆಯ ಲೋಕದಲ್ಲಿ ವಿಹರಿಸ ಬಂದ ಖುಷಿ. ಹೀಗೆ ಸ್ಟೇಟಸ್ ಮೆಸೇಜ್ ಗಳು ಕೂಡ ಚರ್ಚೆಗೂ , ಸಂಭಾಷಣೆಗಳಿಗೂ ಕಾರಣವಾಗಿ ನಗೆಬುಗ್ಗೆಯನ್ನು ತರಿಸುತ್ತಿರುತ್ತವೆ.

‍ಲೇಖಕರು avadhi

3 January, 2020

2 Comments

  1. T S SHRAVANA KUMARI

    ಚೆನ್ನಾಗಿದೆ, ಖುಷಿಯಾಯಿತು.

  2. Dakshayani nagaraj

    ಚೆನ್ನಾಗಿದೆ ,,,,ರಾತ್ರಿ ಕಳೆಯಿತು ಮಾತು ಮುಗಿಯಿತು,,,,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading