ಸ್ಕರ್ಟ್ ಹಾಕಿ ಯುದ್ದದಲ್ಲಿ…

“ಅಯ್ಯೋ ಎದ್ದೇಳಿ, ಮಲಗೋದೆ  ಆಯ್ತು, ಕೊಟ್ಟ ತಿಂಡಿಗಾದ್ರೂ  ಮರ್ಯಾದೆ ಬೇಡ್ವಾ” ಎಂದು ಬ್ರೇಕಿನಲ್ಲಿ ಹುಡುಗಿ ಈ ಹುಡುಗರನ್ನ ಎಬ್ಬಿಸುತ್ತಿದ್ದಳು.

“ಅವರು ಇವರಿಗೆ ಹೊಡೆದರು, ಇವರು ಅವರಿಗೆ ಹೊಡೆದರು, ಫಸ್ಟ್ ಆಫ್ ಆಲ್, ಜಗತ್ತನ್ನ  ನಾವು ಯಾಕೆ ಗೆಲ್ಲಬೇಕು, ನಮ್ಮ ಪಾಡಿಗೆ ನಾವಿರಬೇಕು, ನಮ್ಮ ಜನರನ್ನ ಸರಿಯಾಗಿ ನೋಡಿಕೊಳ್ಳಬೇಕು, ಯೂರೋಪಿನ ಇಡೀ ಚರಿತ್ರೆ ರಕ್ತಸಿಕ್ತವಾಗಿದೆ. ಸುಮ್ಮನೆ ಒಬ್ಬರೊನ್ನಬ್ಬರು ಹೊಡೆಯೋದು, ದಾಳಿ ಮಾಡೋದು, ಏನು ಪಡೆದುಕೊಂಡರು, ಕರ್ಮ ಇವರ ಸ್ವಾರ್ಥಕ್ಕೆ ಏಷಿಯಾ ಮತ್ತು ಆಫ್ರಿಕನ್ನರನ್ನ ಬಲಿ ಬೇರೆ ತೆಗೆದುಕೊಂಡರು” ಎಂದು ಬೇಕಂತಲೇ ಇಂಗ್ಲಿಷಿನಲ್ಲಿ ಬೈಯ್ಯುತ್ತಾ ಹೋದ ಕುಶಾಗ್ರ.

ಅವನ ಸಿಗರೇಟಿನ ಹೊಗೆಯ ರಿಂಗು ಬಂದಾಗಲ್ಲೆಲ್ಲ ಒಂದು ಪಂಚ್ ಲೈನ್ ಬರುತ್ತಿತ್ತು.

ಭಾರತದ ಹುಡುಗ ಹುಡುಗಿಯರು ಸೇರಿದಾಗ ಹೀಗೆ ಪರದೇಶದವರನ್ನ ಬೈಯ್ಯಬೇಕಾದರೆ ಆದಷ್ಟು ಹಿಂದಿ/ಕನ್ನಡ/ತೆಲುಗು ಭಾಷೆಯಲ್ಲೇ ಮಾತಾಡುತ್ತಿದ್ದರು. ಇಂಗ್ಲಿಷಿನಲ್ಲಿ ಬೈದುಕೊಂಡರೆ ಅವರಿಗೂ ಕೇಳಲಿ ಎಂದೇ ಇರುತ್ತಿತ್ತು.

ಆದರೆ ತೀರಾ ಅವರ ಚರಿತ್ರೆಯನ್ನ ಹೀಯಾಳಿಸುವ ಕೆಲಸವನ್ನೂ ಇಂಗ್ಲೀಷಿನಲ್ಲಿ  ಮಾಡಿದರೆ ಬಂದು ಯಾರಾದರೂ ಪಕ್ಕಾ ಹೊಡೆಯುತ್ತಾರೆ ಎಂಬ ಅರಿವು ಇದ್ದರೂ ಅವತ್ತು ರೊಚ್ಚಿಗೆದ್ದಿದ್ದರು ಹುಡುಗರು.

“ಈ ಬ್ರಿಟಿಷರು  ಬಂಗಾಳದಲ್ಲಿ ದೊಡ್ಡ ಕ್ಷಾಮವನ್ನ ಬೇಕಂತಲೇ ಸೃಷ್ಠಿ ಮಾಡಿದ್ದರು, ನಮ್ಮ ಬಂಗಾಳದ ಜನ ಸಾಯಲಿ ಅಂತ, ನಮ್ಮ ಬಂಗಾಳದಲ್ಲೇ ಜಾಸ್ತಿ ಸ್ವಾತಂತ್ರ್ಯ ಸೇನಾನಿಗಳಿದ್ದದ್ದು, ಇವರ ಹಾಳು ಯುದ್ಧಕ್ಕೆ ನಮ್ಮಲ್ಲಿರುವ ದವಸ ಧಾನ್ಯವನ್ನೆಲ್ಲಾ ಅಲ್ಲಿಗೆ ಸಾಗಿಸಿಕೊಂಡು ನಮ್ಮಲ್ಲಿ ಹಸಿವಿನಿಂದ ಜನ ಸಾಯಲಿ ಎಂದು ಬಿಟ್ಟರು, ಲಕ್ಷಾಂತರ ಜನ ಇಲ್ಲಿ ಸತ್ತಿದ್ದಾರೆ ಹಸಿವಿನಿಂದ, ಇವೆಲ್ಲವನ್ನ ಯಾವ ಪ್ರೋಗ್ರಾಮ್ ಮಾಡಿ ತೋರಿಸಿ ವಸೂಲಿ ಮಾಡ್ತಾರಂತೆ, ಅಥವಾ ಹೋಗಲಿ ಅದರ ಬಗ್ಗೆ ಮಾತಾಡುತ್ತಾರಾ, ಮಾತಾಡಲ್ಲ, ಬರಿ ನಾವು ಅದು ಮಾಡಿದ್ವಿ, ಇಲ್ಲಿ ಯುದ್ಧ ಗೆದ್ವಿ, ಇವರು ನಮ್ಮ ಹೀರೊ, ಅಸಲಿಗೆ ನಮ್ಮ ಭಾರತ ಇವರ ನಾನ್ಸೆನ್ಸ್ ಯುದ್ಧವನ್ನ ಫಂಡ್ ಮಾಡಿದ್ದು…” ಎಂದು ಉದ್ದಕ್ಕೆ ಬೈಯ್ಯುತ್ತಲೇ ಇದ್ದ ಮನಸ್ವಿ.

“ಈ ಹುಡುಗರ ಬದಲು ಎಲೆನಾ ಜೊತೆ ಓಡಾಡಿದ್ದರೆ ಇಷ್ಟೆಲ್ಲಾ ರಗಳೆ ಇರುತ್ತಿರಲ್ಲಿಲ್ಲ” ಎಂದು ಹುಡುಗಿ ಅಂದುಕೊಂಡು “ಆಯ್ತು ಬಿಡ್ರೋ ಬೇರೆ ಎಲ್ಲಾದ್ರೂ ಹೋಗೋಣ” ಎಂದು ಹೊರಡಿಸಿಕೊಂಡು ಮೆಟ್ರೋ ಸ್ಟೇಷನ್ನಿಗೆ ಬಂದಳು. ಎಲ್ಲಿ ಹೋಗೋದು ಎಂದು ಒಂದು ೨೫ ನಿಮಿಷ ದೊಡ್ಡ ಧ್ವನಿಯಲ್ಲಿ ಚರ್ಚೆ ಮಾಡುತ್ತಿದ್ದರು. ಇದನ್ನ ಕಂಡ ಬಾರ್ಸಾದ ಮೆಟ್ರೋ ಪೊಲೀಸ್, “ಇದ್ಯಾವುದೋ ಬೇರೆ ದೇಶದವರು ಹೀಗೆ ದೊಡ್ಡ ಧ್ವನಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ ಮುಂದೆ ಗಲಾಟೆ ಮಾಡುತ್ತಾರೆ, ಒಬ್ಬಳೇ ಹುಡುಗಿ ಬೇರೆ ಇದ್ದಾಳೆ ಹೀಗೆ ಇನ್ನೇನೋ ಮಾಡಿ ಮೆಟ್ರೋ ಟ್ರಾಕಿನ ಮೇಲೆ ಹಾರಿ ಅನಾಹುತ ಮಾಡಿಕೊಂಡು ಬಿಡುತ್ತಾರೆ ” ಎಂದು ಪೊಲೀಸ್  ಓಡಿ ಬಂದು ವಿಚಾರಣೆ ಮಾಡಲು ಹೊರಟರು.

“ಪಾಸ್ಪೋರ್ಟ್ ಯಾಕೆ ರೆಸಿಡೆನ್ಸಿ ಪರ್ಮಿಟ್ ನೋಡ್ಕೊಳಿ” ಎಂದು ಐದು ಜನರು ಕಾರ್ಡ್ ತೆಗೆದಾಗ, ಪೋಲಿಸಿಗೆ ಪರಮಾಶ್ಚರ್ಯ, “ಇಷ್ಟೊಂದು ಇಂಡಿಯನ್ಸ್ ಯಾಕೆ ಇಲ್ಲಿ ಬಂದು ನೆಲಸುತ್ತಿದ್ದಾರೆ, ಯಾಕೆ ನಿಮ್ಮ ದೇಶ ಸರಿಗಿಲ್ವಾ?” ಎಂದು ಕೆಣಕಿದಾಗ, “ನಿಮ್ಮ ದೇಶ ಉದ್ಧಾರ ಮಾಡಲು ಬಂದಿದ್ದೇವೆ ಬಿಡಿ” ಎಂದು ಹೇಳಿ ಮುಂದೆ ಬಂದ ಟ್ರೈನ್ನನ್ನ ಹತ್ತಿ ಹೊರಟರು.

“ಎಲ್ಲಿ ಹೋಗೋದು ಮಾರಾಯ ಈಗ” ಎಂದು ಹುಡುಗಿ ಕೇಳಿದಾಗ, “ಟ್ರೈನ್ ಸ್ಟೇಷನ್ನಿಗೆ, ಆಮೇಲೆ ಮಾಂಸೆರಾಟಿಗೆ” ಎಂದು ಹೇಳಿದ ವಿಭೋರ್. “ಒಂದು ಘಂಟೆ ಆಗುತ್ತದೆ ಹೋಗೋಕೆ, ಅಲ್ಲೇನಿದೆ ಒಂದು ಕೋಟೆ ತಾನೇ, ಸುಮ್ಮನೆ ಕೋಸ್ಟಾ  ಬ್ರಾವಾಗಾದ್ರೂ ಹೋಗಬೋದಿತ್ತಪ್ಪ” ಎಂದು ಸಿಡ್ ಗೊಣಗಿ ಮ್ಯಾಪ್ ಹಾಕಿಕೊಂಡು ನೋಡುತ್ತಿದ್ದ.

“ಹಿಂಗೆ ಏನೂ ತಯಾರಿ ಇಲ್ಲದೆ ಹೊರಡೋದು ನಿನ್ನ ಅವಗುಣಗಳಲ್ಲಿ ಒಂದು ಎಂದು ನಿನ್ನ ಗರ್ಲ್ ಫ್ರೆಂಡ್ ಹೇಳುತ್ತಿದ್ದಳು, ನೋಡು ನಾನು ಸ್ಕರ್ಟ್ ಹಾಕಿಕೊಂಡು ಬಂದಿದ್ದೇನೆ ಆ ಗಾಳಿಯಲ್ಲಿ ಬೆಟ್ಟ ಹತ್ತೋದಾದರೂ ಹೇಗೆ” ಎಂದು ಹುಡುಗಿ ಮನಸ್ವಿಗೆ ಹೇಳುತ್ತಿದ್ದಾಗ, “ಸ್ಕರ್ಟ್ ಹಾಕಿಕೊಂಡು ಯುದ್ಧದಲ್ಲೆಲ್ಲಾ ಹೋರಾಡಿದ್ದಾರೆ ಬೆಟ್ಟ ಹತ್ತಕ್ಕೆ ಆಗಲ್ವಾ” ಎಂದು ನಕ್ಕು ಅಲ್ಲಿ ಯಾವ ಯಾವ ಜಾಗಗಳನ್ನ ನೋಡಬೇಕು ಎಂದು ಪಟ್ಟಿ ಮಾಡತೊಡಗಿದರು.

“ಮಾನ್ಸೇರಾಟ್ ಬಾರ್ಸಾ ಜನರಿಗೆ ಒಂದು ಪುಣ್ಯ ಕ್ಷೇತ್ರ. ರೋಮನ್ನರು ವೀನಸ್ ದೇವತೆಯ ದೇವಾಲಯವನ್ನ ಇಲ್ಲಿ ಬಿಫೋರ್ ಕ್ರೈಸ್ಟ್ ಸಮಯದಲ್ಲೇ ಕಟ್ಟಿದ್ದರು, ಆಮೇಲೆ ಇಲ್ಲಿ ಬ್ಲಾಕ್ ಮಡೋನ್ನಾ ಮಾಡುವ ಪವಾಡಗಳು ಎಲ್ಲಾ ಸೇರಿ ಒಂದು ದೊಡ್ಡ ಪುಣ್ಯ ಕ್ಷೇತ್ರವಾಗಿದೆ. ಇಲ್ಲಿಗೆ ಬಂದವರಿಗೆ ಸ್ವರ್ಗ ಖಚಿತ” ಎಂದು ಸಿಡ್ ದೊಡ್ಡ ಧ್ವನಿಯಲ್ಲಿ ಓದುತ್ತಾ ಹೋದ.

“ಎಲ್ಲೋ ಒಂದು ಒಟ್ಟ್ನಲ್ಲಿ ಸ್ವರ್ಗ ತಾನೇ ಸಿಗೋದು ಹೋಗಿ ಬರೋಣ ಬಿಡ್ರೋ” ಎಂದು ಎಲ್ಲರು ಅಂದುಕೊಂಡು ಇದ್ದರೆ  ಹುಡುಗಿಗೆ ಟ್ರೈನಿನಲ್ಲಿ ಯಾರೋ ಸೀಟು ಕೊಟ್ಟಿದ್ದರ ಪರಿಣಾಮ ಅವಳು ನಿದ್ದೆಗೆ ಜಾರಿದ್ದಳು. ಜಗತ್ತಿನಲ್ಲಿ ಎಂತಹ ಅದ್ಭುತ ನಡೆದರೂ ಮೂವಿಂಗ್ ಬಸ್, ಟ್ರೈನ್, ಏರೋಪ್ಲೇನಿನಲ್ಲಿ ನಿದ್ದೆ ಮಾಡುವ ಹುಡುಗಿಗೆ ಈ ಪುಣ್ಯ ಕ್ಷೇತ್ರಕ್ಕೆ ಹೋಗುವ ಹಾದಿಯಲ್ಲೂ ನಿದ್ದೆಯೇ ಸಂಗಾತಿಯಾಯಿತು.

ಒಮ್ಮೆ ಯುರೋಪಿನಿಂದ ಬೆಂಗಳೂರಿಗೆ ಬರುವ ವಿಮಾನದಲ್ಲಿ ರಾತ್ರಿ ಪೈಲೆಟ್ “ಅಲ್ಲಿ ನೋಡಿ ಕಾಶ್ಮೀರದ ಬೆಟ್ಟ, ಅಂತೆಲ್ಲಾ ಹೇಳುತ್ತಿದ್ದರೆ ಪಕ್ಕದ ಹುಡುಗ ಎಬ್ಬಿಸಿದಾಗಲೇ ಎದ್ದಿದ್ದು ಅಲ್ಲಿಯವರೆಗೆ ಅವಳಿಗೆ ನಿದ್ದೆ ಚೆನ್ನಾಗಿಯೇ ಬಂದಿತ್ತು.

ಕೊಲಂಬಸ್, ಲೂಯಿ ೧೪, ಫೆಲಿಪೆ, ಕಾರ್ಲೋಸ್ ಹೀಗೆ ದೊಡ್ಡ ದೊಡ್ಡ ಮನುಷ್ಯರು ಇಲ್ಲಿ ಬಂದು ತಮ್ಮ ಹರಕೆಗಳನ್ನ ಕಟ್ಟಿ ಹೋಗಿದ್ದರು ಎಂಬುದನ್ನು ಟ್ರೈನಿನಲ್ಲಿದ್ದ ಎಲ್ಲರು ಹೇಳುತ್ತಿದ್ದರು. ವಾರಣಾಸಿಗೆ ಹೋಗೋವಾಗ ಜನಕ್ಕೆ ಅದೆಷ್ಟು ಉಮೇದು ಬಂದು ತಾವು ಯಾವುದೋ ದೇಜಾವೋಗೆ ಒಳಪಟ್ಟು ಆಡುವ ರೀತಿಯಲ್ಲೇ ಇಲ್ಲೂ ಆಡುತ್ತಿದ್ದರು. ಇನ್ನು ಏನೇನೋ ಚರ್ಚೆ ಮಾಡುತ್ತಿದ್ದಾಗ  “ಇಲ್ಲಿಗೆ ಹಿಮ್ಲರ್ ಸಹ ಬಂದಿದ್ದ” ಎಂದು ಒಬ್ಬರು ಅಂಕಲ್ ಹೇಳಿದರು. ಹುಡುಗಿಗೆ ಎದೆ ಧಸಕ್ಕೆಂದಿತು.

ಹಿಮ್ಲರ್ ಹಿಟ್ಲರಿಗಿಂತ ಕ್ರೂರಿಯಾದ ಮನುಷ್ಯ ಎಂದು ಚರಿತ್ರೆಯ ಎಷ್ಟೋ ಪುಟಗಳು ಹೇಳಿವೆ. ಈತ ಯಹೂದಿಗಳ ನಿರ್ನಾಮ ಮಾಡುವ ಅದೆಷ್ಟೋ ಕ್ಯಾಮ್ಪುಗಳನ್ನ ಹುಟ್ಟು ಹಾಕಿದವನು. ಇಂತಹ ಕೆಟ್ಟ ಆಲೋಚನೆಗಳನ್ನ ಇವನು ಯಾವ ಗಿಲ್ಟ್ ಇಲ್ಲದೆ ಕಾರ್ಯರೂಪಕ್ಕೆ ತರುತ್ತಿದ್ದ ಅನ್ನೋದು ಇವನ ದೊಡ್ಡ ಹೆಗ್ಗಳಿಕೆಯಾಗಿತ್ತು.

“ಹಿಮ್ಲರ್ ಇಲ್ಲಿಗ್ಯಾಕೆ ಬಂದಿದ್ದ?” ಎಂದು ಹುಡುಗಿ ಕೇಳಿದಾಗ, ಅಂಕಲ್ ಮಾತ್ರ “ಅವನ ಅಮರತ್ವ ಮತ್ತು ನಾಜ್ಹಿಗಳ ಗೆಲುವಿಗಾಗಿ” ಎಂದು ಕೂಲಾಗಿ ಅಂದರು. “ಅಮರತ್ವ? ಮಾಡಬಾರದ ಪಾಪವನ್ನೆಲ್ಲಾ ಮಾಡಿ ಏನ್ ಅಮರತ್ವ” ಎಂದು ಗೊಣಗಲು ಸಿಡ್ ಶುರು ಮಾಡಿದಾಗ, “ರಾಕ್ಷಸನಿಗೂ ಅಮರತ್ವದ ಆಸೆ ಇರತ್ತೆ ಮಗು” ಎಂದು ಸಮಾಧಾನವಾಗಿ ಹೇಳಿದರು.

ಹಿಮ್ಲರ್ ಇಲ್ಲಿನ ಹೋಲಿ ಗ್ರೇಲ್ ಹುಡುಕಿಕೊಂಡು ಬಂದಿದ್ದ. ಕ್ರಿಸ್ತನ ಲಾಸ್ಟ್ ಸಪ್ಪರಿನಲ್ಲಿ ಹಿಡಿದ ಒಂದು ಬಟ್ಟಲಿಗೆ ಪವಾಡಗಳನ್ನ ಮಾಡುವ ಶಕ್ತಿಯಿತ್ತಂತೆ, ಅದು ಯಾರಿಗೆ ಸಿಕ್ಕಿದರೂ ಅವರು ಅಮರರಾಗುತ್ತಾರೆ ಎಂಬ ನಂಬಿಕೆ ಹಲವರಲ್ಲಿ ಇದೆ. ೧೩ನೇ ಶತಮಾನದಲ್ಲಿ ಜರ್ಮನಿಯ ವಿಲಿಯಮ್ ಬಾನ್ ಹಂಬಾಲ್ಡ್ತ್ಎಂಬ ದಾರ್ಶನಿಕ ಈ ಬೆಟ್ಟದ ಮೇಲೆ ಇದು ಸಿಗುತ್ತದೆ ಎಂದು ಎಲ್ಲರಲ್ಲಿ ಹೇಳಿಕೊಂಡು ಬಂದಿದ್ದನಂತೆ.

ಇದು ಅವನ ಊಹೆಯಾಗಿ, ಕಡೆಗೆ ಅದು ದೊಡ್ಡ ಪುರಾಣವಾಗಿ, ಇತಿಹಾಸವಾಗಿ ಎಲ್ಲರ ಬಾಯಲ್ಲೂ ಹರಿದಾಡುತ್ತಾ ಇತ್ತಂತೆ. ಇದನ್ನೇ ನಂಬಿ ಹಿಮ್ಲರ್ ಇಲ್ಲಿಗೆ ಬಂದಿದ್ದ. ಸ್ಪೇನಿನ ಸರ್ವಾಧಿಕಾರಿ ಫ್ರ್ಯಾಂಕೋ ನ ಸ್ನೇಹಿತನಾಗಿ ಇಲ್ಲಿ ಇಳಿದು, ಇಡೀ ಸ್ಪೇನಿನ ತುಂಬಾ ಸ್ವಸ್ತಿಕ್ ಹಾಕಿಕೊಂಡು ಇವನ್ನನ್ನ ಸ್ವಾಗತ ಮಾಡಿದ್ದು ಲೂಯಿಸ್ ಕಂಪಾನಿಸ್ ನ ಓಡಿಸುವುದಕ್ಕೆ ಎಂದೆಲ್ಲಾ ನಾವು ಅಂದುಕೊಂಡರೂ ಇವನು ಬಂದಿದ್ದು ತನ್ನ ಅಮರತ್ವಕ್ಕೆ ಮತ್ತು ತಾನು ಬಹಳ ಪ್ಯೂರ್ ರೇಸಾಗಿ ತೋರಿಸಿಕೊಳ್ಳುವುದಕ್ಕೆ ಎಂದು ಹೇಳಿದಾಗ ೫ ಜನ ಭಾರತೀಯರು ದಂಗುಬಡಿದು ನಿಂತರು.

ಜಗತನ್ನ ತನ್ನ ಗನ್ನು, ಟ್ಯಾಂಕರ್ ನಿಂದ ಕಂಟ್ರೋಲ್ ಮಾಡಬಹುದು ಎಂದು ನಂಬಿದ್ದ ಜರ್ಮನ್ನರಿಗೆ ಈ ಹುಚ್ಚು ಬೇರೆ ಇತ್ತಾ ಎಂದು ಅಂದುಕೊಂಡು, “ನೀವ್ಯಾಕ್ ಇಲ್ಲಿ ಬಂದಿದ್ದೀರಿ” ಎಂದು ಹುಡುಗಿ ಕೇಳಿದಾಗ, “ನಮ್ಮ ಜನರನ್ನ ಆತ ಗ್ಯಾಸ್ ಛೇಂಬರಿಗೆ  ಹಾಕಿ ಕೊಂದ, ಇಲ್ಲಿಂದ ಹೊರಟ ನಂತರ ಹಿಮ್ಲರ್, ಹೋಲಿ ಗ್ರೇಲ್ ಸಿಗದೆ ಹುಚ್ಚು ಹಿಡಿದವನಾಗಿ ಸಾಲು ಸಾಲು ಕೊಲೆ ಮಾಡಿದ, ಅವನಿಗೆ ಅಮರತ್ವ ಇದರಲ್ಲಿ ಸಿಕ್ಕಿರಬಹುದು…” ಎಂದು ಕ್ಯಾಪ್ ತೆಗೆದರು.

“ನಮ್ಮವರನ್ನು ನಿರ್ನಾಮ ಮಾಡಿದ ಜಾಗಗಳನ್ನ ತೋರಿಸುವ ಟೂರಿಸ್ಟ್ ಪ್ಯಾಕೇಜ್ ಇದು, ಇಲ್ಲಿಂದ ನಾವು ಪೋಲ್ಯಾಂಡ್ ಗೆ ಹೋಗುತ್ತೇವೆ. ಅಲ್ಲೇ ತಾನೇ ನಮ್ಮ ಅಂತ್ಯವಾಗಿದ್ದು” ಎಂದು ನಿಟ್ಟುಸಿರು ಬಿಟ್ಟು ಕೂತರು ಅಂಕಲ್. “ಅದೋ ಅಲ್ಲಿ ನೋಡಿ ದೊಡ್ಡ ಕೋಟೆ, ಇದೆ ಪ್ರಮುಖ ಆಕರ್ಷಣೆ, ಇಲ್ಲಿ ಹೋಲಿ ಗ್ರೇಲ್ ಇರಬಹುದು” ಎಂದರು ಟ್ರೇನ್ ಡ್ರೈವರ್. ಐದು ಜನಕ್ಕೂ ವಾಪಸ್ಸು ಬಾರ್ಸಾಗೆ ಹೋಗಬೇಕೆನಿಸಿತು.

August 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: