ಸೌಮ್ಯ ದಯಾನಂದ
ಹಳಿಯು ಒಂದೇ
ಕಂಬಿ ಎರಡು
ನಾನು ಮತ್ತು ನೀನು;
ಗಮ್ಯವೊಂದೇ
ಬದುಕು ಎರಡು
ನಂದು ಒಂದು ನಿಂದು!
ನೀನು ನನ್ನ
ನೋಡಬಹುದು
ನಾನು ಕೂಡಾ ನಿನ್ನ;
ಕಯ್ಯಿ
ಒರೆಸಲಾರದೆಂದೂ
ನಿನ್ನ ಕೆನ್ನೆ ನೀರಾ!
ಬಾಗಿದಲ್ಲಿ
ಬಾಗಿ ಬಳುಕಿ
ನೇರದಲ್ಲಿ ನೇರ;
ಕೈಯ ಹಿಡಿದು
ಸಾಗಬಹುದು
ಈ ಬಾಳ ಪೂರಾ!
ಜನರಕಥೆಗೆ
ನಾವು ಸಾಕ್ಷಿ
ನಮಗೆ ಇಲ್ಲ ಅಗ್ನಿಸಾಕ್ಷಿ;
ಸಾಗಬೇಕು
ಹೊತ್ತು ಅವರ
ನೆನಪ ರಾಶಿ ರಾಶಿ!

ನಾನಿಲ್ಲದೆ
ನೀನಿಲ್ಲ
ನೀನಿಲ್ಲದೆ ನಾನೂ;
ಇಂಚು
ಸನಿಹಬಂದರೂನು
ಯಾರೋ ನೀನು ನಾನು!
ಜೀವಗಳಿಗುಳಿವಿಲ್ಲ
ಸೇರಿದರೆ
ನಾವು;
ಆಸೆದೊರೆದು
ಬಾಳಿದರೆ
ಬೊಗಸೆ ತುಂಬಾ ಮಾವು!
ಇದ್ದರೂನೂ
ಪಕ್ಕದಲ್ಲೇ
ಎಂದಿಗೂ ಮಾತಿಲ್ಲ;
ಮುನಿದು
ದೂರ ಹೋಗಿ
ಬಿಟ್ಟು ಎಂದಿಗೂ ನಿಂತಿಲ್ಲ!
ಶೂನ್ಯದೆಡೆಯ
ದಾರಿಗುಂಟು
ಮೌನದ ಸಂಗಾತ;
ಪಯಣಕೆಂದೂ
ಕೊನೆಯೆ ಇಲ್ಲ
ಸೇರದೇ ದಿಗಂತ!
ಕಣ್ಣ ಕಣ್ಣ
ಮಥಿಸಿ ಹೆತ್ತ
ಸಾವಿರ ಕನಸುಂಟು;
ಮೈಗೆ ಮೈಯ
ತಾಕಿದಂದೇ
ಎತ್ತಬೇಕು ಗಂಟು!
ದೈವ ಎಳೆದ
ಸರಳ ರೇಖೆ
ನಾನು ಮತ್ತು ನೀನು;
ಕೂಡಿದಂತೆ
ಕಂಡುಬರುವ
ಭೂಮಿ ಮತ್ತು ಬಾನು!






0 Comments