ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೌಮ್ಯ ದಯಾನಂದ ಕವಿತೆ – ಬಂದೂಕು – ಗುಲಾಬಿ…

ಸೌಮ್ಯ ದಯಾನಂದ

ಬೆಟ್ಟಕ್ಕೆ ಭಯವಾದರೆ
ಬೆಟ್ಟವೆಂಬ ಕಾರಣಕ್ಕೆ
ಸುಮ್ಮನಿರಬೇಕೇ?!

ಕಡಲು ಬಾಯಾರಿದರೆ
ಕಡಲೆಂಬ ಕಾರಣಕ್ಕೆ
ದಾಹವ ಸಹಿಸಬೇಕೇ?!

ರವಿ ನೆರಳ ಬಯಸಿದರೆ
ರವಿಯೆಂಬ ಕಾರಣಕ್ಕೆ
ಬೇಯುತ್ತಿರಬೇಕೇ?!

ಚಂದಿರನೆಂಬ ಕಾರಣಕ್ಕೆ
ಇಂದುವದನೆಯ
ಬಯಸುವುದು ತಪ್ಪೇ?!

ಮುಗಿಲು ತಾನೆಂದು
ಭುವಿಯ ಸ್ನೇಹವ
ಬಯಸಬಾರದೇನು?!

ನಕ್ಷತ್ರ ತಾ ತನ್ನ
ಮನೆಯ ದೀಪ
ಹೊತ್ತಿಸಲಾರಳೇ?!

ಕೋಲ್ಮಿಂಚಿನ
ದಾರಿಗೆ
ಬೀದಿದೀಪವಿಲ್ಲವೇಕೆ?!

ಗಾಳಿಯಾಗಿಯೂ ತಾ
ಪ್ರಾಣಾಯಾಮ
ಮಾಡಿದರೆ ತಪ್ಪೇನು?!

ಅಗ್ನಿಯಾಗಿದ್ದಕ್ಕೆ
ತಂಗಾಳಿಯ ಕನಸನ್ನೂ
ಕಾಣಬಾರದೇ?!

ರಾಜ ತಾನೆಂದು
ಗೋಲಿ-ಲಗೋರಿಯ
ಕನಸಿಗೆ ಗೋರಿಕಟ್ಟಬೇಕೆ?!

ನವಿಲಾದದ್ದಕ್ಕಾದರೂ
ವಾದ್ಯ ನುಡಿಸುವ ಸಂಗಡಿಗರು
ನನಗಿರಬೇಡವೇ?!

ಗಿಳಿಯಾದರೇನಂತೆ
ಮೂಗಿಗೊಂದು ಮೂಗುತಿ
ಹಾಕಬಾರದೇ?!

ಸ್ತ್ರೀ ಎನ್ನುವರೆಂದು
ದಾಸಿ ಮಂತ್ರಿ ಮಾತೆ
ಲಕ್ಷ್ಮಿ ರಂಭಾ ಧರಿತ್ರಿಯಾಗಿ
ಉಳಿದುಬಿಡಲೇ?!

ಯುದ್ಧ ತಾನಾದರೇನು
ಧ್ಯಾನಕ್ಕೆ
ಕೂರಬಾರದೇ?!

ಕೊಲ್ಲುವ ಬಂದೂಕಾದರೇನು
ಗುಲಾಬಿಯನ್ನು ಪ್ರೀತಿಸುವುದು
ಅಪರಾಧವೇ?!

‍ಲೇಖಕರು Admin

25 March, 2022

1 Comment

  1. T S SHRAVANA KUMARI

    ತುಂಬಾ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading