ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೌಜನ್ಯ ನಾಯಕ ಹೊಸ ಕವಿತೆ- ಕನಸೊಳಗಿನ ಅದೇ ನೀನು…

ಸೌಜನ್ಯ ನಾಯಕ

ಇಂದಿಗೂ ಬದುಕು
ಅಂದಿನಂತೆಯೆ ಇದೆ
ನನ್ನವನಾಗಿ ನೀನೊಬ್ಬ ನನ್ನ
ಜೊತೆಗಿಲ್ಲವೆಂಬುದ ಬಿಟ್ಟು

ಅಂದೆಲ್ಲ ನಮ್ಮ ಕನಸುಗಳು
ಅದೆಷ್ಟು ಹೋಲುತಿದ್ದವು
ಆದರೆ ಕ್ರಮೇಣವಾಗಿ
ಯಾರ ಕನಸು ಯಾರದೆಂದು
ತಿಳಿಯದಷ್ಟು ಅದೇಕೇ ಬೇರೆಯಾದವೋ?

ಅವೆಲ್ಲ ಇಂದಿಗೂ ಮನಸ
ಕುಟುಕುವ ಪ್ರಶ್ನೆಗಳೆ
ಆದರೆ ಉತ್ತರ ದೊರಕದೆ
ಮನಸಲ್ಲಿಯೆ ತಟಸ್ಥವಾಗಿವೆಯಷ್ಟೇ
ಅದು ಕೂಡ ಥೇಟ್ ನಿನ್ನಂತೆಯೆ

ಆದರೂ ಪ್ರಶ್ನೆಗಳನೆಲ್ಲ ಮರೆತು
ಆಗಾಗ ಒಯ್ಯುತ್ತಿರುತ್ತೇನೆ
ನಿನ್ನ ನೆನಪಿನಲ್ಲಿಯೇ
ಮರಗಟ್ಟಿದ ಈ ದೇಹವ
ನೀ ಮರೆತು ಹೋದ
ಅದೇ ಹಳೆಯ ಜಾಗಗಳಿಗೆ

ಮಗದೊಮ್ಮೆ ದನಿಯಾಗುತ್ತೇನೆ
ಮಾತನಾಡುವುದನೆ ಮರೆತ
ಈ ಕಂಠದೊಂದಿಗೆ
ಜೊತೆಗೂಡಿ ಗುನುಗಿದ ಕೆಲ
ನೆಚ್ಚಿನ ಕವಿತೆಗಳಿಗೆ

ನಿನ್ನ ಮಾತುಗಳ ಕೇಳದೆ
ಬೇಸರಿಸುವ ಕಿವಿಗಳು
ಕೆಲವೊಮ್ಮೆ ಕೇಳಿ ಸುಖಿಸುತ್ತವೆ
ಅದಾರೋ ಉಸುರುವ
ನಿನ್ನಯ ಹೆಸರಿಗೆ

ಎಲ್ಲದಕ್ಕೂ ಪರ್ಯಾಯವಾಗಿ
ಏನನ್ನಾದರೂ ಹುಡುಕುವ ನನಗೆ
ಮನಸಿನಲ್ಲಿ ಅಚ್ಚೊತ್ತಿದ
ನಿನ್ನ ಚಿತ್ರದ ಬದಲಿಯಾಗಿ
ಬೇರಾವ ಚಿತ್ರವು ಸಿಗುತಿಲ್ಲ ನೋಡು

ಇಷ್ಟೊಂದು ಹಚ್ಚಿಕೊಂಡ ಮನಸಿನ
ಜೊತೆಯಾಗಿ ಹಣೆದ ಕನಸುಗಳು
ಅಷ್ಟು ಬೇಗನೆ ಕನಸಾಗಿಯೇ
ಉಳಿದು ಹೋದದಾದರೂ ಯಾಕೆ?
ಮತ್ತದೆ ಮನಸ ಕುಟುಕುವ
ಉತ್ತರವಿಲ್ಲದ ಪ್ರಶ್ನೆ…

ಬಾಲ್ಯದಿಂದಲೂ ಜೊತೆಯಾಗಿ
ಬೆಳೆದ ಗೆಳೆತನದ ಸಲುಗೆಯಲಿ
ನಿನ್ನೆಡೆಗೆ ಹೆಚ್ಚು ಪ್ರೀತಿಯನ್ನೇ
ಬೆಳೆಸಿಕೊಂಡ ನನ್ನ ಭಾವನೆಗಳನು
ಕನಸಿಗಷ್ಟೇ ಸೀಮಿತವಾಗಿಸಿ
ನೀ ಹೊರಟು ಹೋದದ್ದಾದರೂ
ಎಷ್ಟು ಸರಿ ಹೇಳು???

ನೀನೇನೋ ಹೊರಟು ಹೋದೆ
ನಿನ್ನದೆ ಬೇರೊಂದು ಕನಸನ್ನ ಹೆಣೆದು
ನನಸಾಗಿಸುವ ಛಲದಲ್ಲಿ
ಆದರೆ ಮೊಳೆಕೆಯೊಡೆದೊಂದು
ಪ್ರೀತಿಯ ಹೇಳಲಾಗದೆ
ಇಂದಿಗೂ ಕೊರಗಿ ಬದುಕುತಿರುವೆ ನಾ
ಅದೇ ಕಳೆದು ಹೋದ
ನಮ್ಮದೆ ಆದ ಕನಸುಗಳಲಿ

ಎಲ್ಲವೂ ಇಂದಿಗೂ
ಅಂದಿನಂತೆಯೆ ಇದೆ
ಆದರೆ ಜೊತೆಗಿಲ್ಲದದು
ನಿನ್ನೊಡಗಿನ ಕನಸು
ಕನಸೊಳಗಿನ ಅದೇ ನೀನು…

‍ಲೇಖಕರು Admin

30 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading