ಸೋಲು ಗೆಲುವಿನ ಆಟ
ಶ್ರೀದೇವಿ ಕೆರೆಮನೆ
ನಾನು ಸೋಲಬೇಕಿಲ್ಲ
ನನಗೆ ಗೆಲ್ಲುವುದೂ ಬೇಕಾಗಿಲ್ಲ
ಈ ಜಗತ್ತೇ ನನ್ನದಾಗಿರುವಾಗ
ಸೊಲು ಗೆಲವುಗಳ ಹಂಗಿಲ್ಲ
ನನ್ನದಲ್ಲದ ಪ್ರಪಂಚದಲ್ಲಿ
ಸೋಲಿನ ಭಯವಿರುತ್ತದೆ
ಗೆಲುವಿನ ಹಪಾಹಪಿಯಿರುತ್ತದೆ
ಗೆಲುವಿಗಾಗಿ ಎದುರು ಬಂದವರನ್ನು
ನಾಶ ಮಾಡಲೇ ಬೇಕಾದ ಅನಿವಾರ್ಯತೆಯಿರುತ್ತದೆ
ಸೋತ ನೋವನ್ನು ಮರೆಯಲು
ಇನ್ನೊಬ್ಬರ ಬಾಳನ್ನು ಚಿಂದಿ ಉಡಾಯಿಸಬೇಕಾಗುತ್ತದೆ
ಅವರ ಗೆಲುವಿನ ನಗೆಯನ್ನು
ಕಿತ್ತು ಕೊಂಡು ನಮ್ಮ ಮುಖಕ್ಕೆ
ಬಲವಂತವಾಗಿಯಾದರೂ ಅಂಟಿಸಿಕೊಳ್ಳಬೇಕಾಗುತ್ತದೆ
ಸೋತು ಶರಣಾದವರ ಕಣ್ಣೀರನ್ನು
ನಮ್ಮ ವಿಜಯೋತ್ಸಾಹದ ಮದ್ಯಕ್ಕೆ
ಅಮಲಿನ ಬೆರಕೆಯಾಗಿಸಬೇಕಾಗುತ್ತದೆ
ಸೋಲು ಗೆಲುವಿನ ಹಾವು-ಏಣಿ ಆಟದಲ್ಲಿ
ಮೇಲೇರಿದಂತೆ ಕೆಳಗಿಳಿಯಲೂ ಕಲಿಯಬೇಕಾಗುತ್ತದೆ
ಕೆಳಗಿಳಿದರೂ ಏನೂ ಆಗದಂತೆ
ಮುಖವಾಡ ಧರಿಸಿ ನಗಬೇಕಾಗುತ್ತದೆ
ಆದರೆ ಎಲ್ಲವೂ ನಾನೇ ಆಗಿರುವಾಗ
ನಾನು ಗೆಲ್ಲ ಬಯಸುವುದಿಲ್ಲ
ಸೋಲು ನನ್ನದಾಗಿರುವುದಿಲ್ಲ





ಚೆನ್ನಾಗಿದೆ ಮೇಡಂ.