ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೈಕಲ್..ಸೈಕಲ್..ಸೈಕಲ್..

ಗೊರೂರ್ ಶಿವೇಶ್


‘ಜೀರ್ಜಂಬೆ’ ಶಾಲಾ ಬಾಲಕಿಯೊಬ್ಬಳ ಜೀವನದಲ್ಲಿ ಸೈಕಲ್‍ನ ಪ್ರವೇಶದಿಂದಾಗಿ ಉಂಟಾಗುವ ಬದಲಾವಣೆಗಳನ್ನು ಹೇಳುವ ಚಿತ್ರ. ಹೆಣ್ಣು ಮಕ್ಕಳನ್ನು ಶಾಲೆಯೆಡೆಗೆ ಆಕರ್ಷಿಸಲು ಸರ್ಕಾರ ಕೈಗೊಂಡ ಅನೇಕ ಯೋಜನೆಗಳಲ್ಲಿ ಸೈಕಲ್ ಯೋಜನೆಯೂ ಒಂದು. ಸರ್ಕಾರಿ ಶಾಲೆಗೆ ಹಳ್ಳಿಯಿಂದ ಹೋಗುವ ಇಬ್ಬರು ಸ್ನೇಹಿತೆಯರು, ಊರಿನಿಂದ ನಡೆದೇ ಶಾಲೆಗೆ ಹೋಗುವಾಗ ಉಂಟಾಗುವ ಕಷ್ಟಗಳನ್ನು ಹೇಳುವ ಚಿತ್ರ  ಮುಂದೆ ಸರ್ಕಾರದ ಯೋಜನೆಯಡಿಯಲ್ಲಿ ಕೇವಲ ಎಂಟನೆಯ ತರಗತಿ ಮಕ್ಕಳಿಗೆ ಮಾತ್ರ ಸೈಕಲ್ಲನ್ನು ನೀಡಿ, ಒಂಬತ್ತನೆಯ ತರಗತಿಗೆ ನೀಡದಿದ್ದಾಗ ಇಬ್ಬರು ಸ್ನೇಹಿತೆಯರಲ್ಲಿ ಉಂಟಾಗುವ ವಿರಸ, ದ್ವೇಷ, ಅಸೂಯೆಯನ್ನು ಹೇಳುತ್ತಾ ಆ ದ್ವೇಷ ಇಬ್ಬರಿಗೆ ಸೀಮಿತವಾಗದೆ ತರಗತಿಯ ಮಕ್ಕಳಿಗೆ ಹರಡುವುದು ಒಂದು ಭಾಗವಾದರೆ, ಸೈಕಲ್ ಕಲಿಯುವಾಗಿನ ಸಂಕಷ್ಟಗಳನ್ನು ಅದರ ಜೊತೆಗೆ ಸೈಕಲ್ ಸವಾರಿ ಎಂದರೆ ಸೈಕಲ್‍ನ್ನು ಪಳಗಿಸುತ್ತಾ ಅದು ಸ್ನೇಹಿತನ ಬಣ್ಣ ಪಡೆಯುತ್ತಾ ಹೋಗುವುದು ಮತ್ತೊಂದು ಭಾಗ.

ಸೈಕಲ್ ನೀಡಿದ ಆತ ವಿಶ್ವಾಸದಿಂದಾಗಿ ಆಕೆ ಗೆಳತಿಯನ್ನು ಬಾಲ್ಯ ವಿವಾಹದ ಸಂಕಷ್ಟದಿಂದ ದೂರ ಮಾಡುವುದರ ಜೊತೆಗೆ ತನಗೆ ಒದಗುವ ಅದೇ ಕಷ್ಟವನ್ನು ಸೈಕಲನ್ನು ಬಳಸಿ ಗೆಲ್ಲುವುದು ಚಿತ್ರದ ಕಥೆಯಾಗಿದೆ. ಚಿತ್ರಕ್ಕೆ 2016 ರ ರಾಜ್ಯ ಪ್ರಶಸ್ತಿಯೂ ದೊರಕಿದೆ.

Everybody loves a good drought ಪಿ.ಸಾಯಿನಾಥ ಬರೆದ ವಿಶಿಷ್ಟ ಕೃತಿ. ಬರ ಅಂದ್ರೆ ಎಲ್ಲರಿಗೂ ಇಷ್ಟ ಎಂಬ ಶೀರ್ಷಿಕೆಯಲ್ಲಿ ಜಿ.ಎಸ್. ಮೋಹನ್ ಕನ್ನಡಕ್ಕೆ ತಂದಿದ್ದಾರೆ. ಅದರಲ್ಲಿ‘Where there is a wheel’ಎಂಬ ಲೇಖನದಲ್ಲಿ ತಮಿಳ್ನಾಡಿನ ಹಿಂದುಳಿದ ಜಿಲ್ಲೆ ಪುದುಕೋಟೆಯಲ್ಲಿ 1991ರಲ್ಲಿ ಸಾಕ್ಷರತಾ ಆಂದೋಲನದ ಆರಂಭದ ಅವಧಿಯಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಶೀಲಾರಾಣಿ ಚುಂಕನ್‍ರವರ ಚಿಂತನೆಯಿಂದಾಗಿ ನವಸಾಕ್ಷರತೆಯ ಜೊತೆಗೆ ಸೈಕಲ್ ಕಲಿಕೆಯನ್ನು ಜೋಡಿಸಿ ಆ ಜಿಲ್ಲೆಯ ಲಕ್ಷಾಂತರ ಸ್ತ್ರೀಯರು ಸೈಕಲ್ ಕಲಿಯುವುದರ ಜೊತೆಗೆ ಸಾಕ್ಷರತೆಯನ್ನು ಹೊಂದಿದ ಬಗ್ಗೆ ಮನೋಜ್ಞವಾಗಿ ವಿವರಿಸಿದ್ದಾರೆ. ಹೆಣ್ಣ ಮಕ್ಕಳಲ್ಲಿ ಸ್ವತಂತ್ರ, ಮುಕ್ತತೆ, ಆತ್ಮಸ್ಥೆರ್ಯ ಉಂಟಾದ ಬಗ್ಗೆ ಇಡೀ ಲೇಖನದಲ್ಲಿ ವಿವರಿಸುತ್ತಾ ಸಾಗಿದೆ. ಇಡೀ ದೇಶಕ್ಕೆ ಪುದುಕೋಟೆ ಮಾದರಿಯಾದ ಬಗ್ಗೆ ವಿವರಿಸಿದ್ದಾರೆ.

1890 ರ ಆಜು-ಬಾಜಿನ ಸಂದರ್ಭದ ಮಲೆನಾಡಿನ ಬದುಕನ್ನು ಸುಂದರವಾಗಿ ಚಿತ್ರಿಸುವ ಮಲೆಗಳಲ್ಲಿ ಮದುಮಗಳು ಮಹಾ ಕಾದಂಬರಿಯಲ್ಲಿ ಬಿಸೋಕಲ್ಲಿನ ಸವಾರಿ ಪ್ರಸಂಗ ಸೈಕಲ್ ಬಂದ ಆರಂಭಕ್ಕೆ ಸೈಕಲ್ ಕಲಿಯುವುದನ್ನು ನೋಡಲು ಬೆಳಿಗ್ಗೆಯೆ ಹಳ್ಳಿಯ ಜನರು ಹುಲಿಕಲ್ ಬೆಟ್ಟದ ಬಳಿ ಸೇರುವುದನ್ನು ಕುವೆಂಪು ರಸಪ್ರಸಂಗದಂತೆ ವರ್ಣಿಸಿದ್ದಾರೆ.

ನನ್ನ ಬಾಲ್ಯ ಕಾಲದಲ್ಲಿ ಸೈಕಲನ್ನು ಕೊಳ್ಳುವಷ್ಟು ಸ್ಥಿತಿವಂತರಲ್ಲದ ನಾವು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಬಾಡಿಗೆ ಸೈಕಲ್‍ನ್ನು ಪಡೆದು ಕಲಿಯಲು ಯತ್ನಿಸುತ್ತಿದ್ದದ್ದು, ಒಳಪೆಟ್ಲು ಮೂಲಕ ಒಂದು ಕೈಯಲ್ಲಿ ಬಾರನ್ನು ಮತ್ತೊಂದು ಕೈಯಲ್ಲಿ ಸೀಟನ್ನು ಹಿಡಿದು ಕಲಿಯಲು ಯತ್ನಿಸಿ, ಬಿದ್ದು, ಎದ್ದು ಸೈಕಲ್ ಕಲಿತಿದ್ದು ನನೆಪಾಗುತ್ತದೆ. ಅಂಥ ಕಾಲಕ್ಕೆ ಮದುವೆಯಲ್ಲಿ ವರದಕ್ಷಿಣೆಯಾಗಿ ‘ರ್ಯಾಲಿ ಸೈಕಲ್’ ಮತ್ತು ಪಿಲಿಪ್ಸ್ ರೇಡಿಯೋವನ್ನು ವರದಕ್ಷಿಣೆಯಾಗಿ ನೀಡುವುದು, ಪಡೆಯುವುದು ಪ್ರತಿಷ್ಠೆಯಾಗಿತ್ತು. ಸೈಕಲ್ ತುಳಿಯುತ್ತಾ ಬೀದಿಗೆ ಕೇಳುವಂತೆ ರೇಡಿಯೊ ಅಧಿಕ ವಾಲ್ಯೂಂ ನೀಡಿ ಸಾಗುತ್ತಿದ್ದದ್ದು ಮಾಮೂಲಿನ ದೃಶ್ಯವಾಗಿತ್ತು.

ಆದರೂ ಬಸ್ ಸಂಚಾರದಲ್ಲಿ ನಲ್ಲಿ ನನ್ನ ಪಿಯೂಸಿ ಪದವಿ ಮುಗಿದಿದ್ದುದರಿಂದ ಸೈಕಲ್ ಹೊಡಯುವ ಪ್ರಮೇಯ ಬರಲಿಲ್ಲ. ಬಿ.ಎಡ್‍ಗೆ ಸೀಟ್ ಸಿಕ್ಕು ಸೇರಿದ ನಂತರ ನನ್ನ ದೊಡ್ಡಪ್ಪನವರು ಹಾಸನದ ಬಾಡಿಗೆ ಮನೆಯಲ್ಲಿದ್ದು ಸೈಕಲ್‍ನ್ನು ಬಳಸಲು ಅನುಮತಿ ನೀಡಿದ್ದರು. ಸೈಕಲ್ ಕಲಿಕೆಯಲ್ಲಿ ಐ ಬೋರ್ಡ್ ಆಗಿದ್ದ ನಾನು ಆಗ ಅಷ್ಟೇನೂ ಜನ ಸಂದಣಿಯಲ್ಲಿಲ್ಲದ ಊರಿನಿಂದ ಹೊರಗೆ ಗೌರಿ ಕೊಪ್ಪಲಿನ ದಿಬ್ಬದಲ್ಲಿದ್ದ ಹಾಸನಾಂಬ ಬಿಎಡ್ ಕಾಲೇಜಿಗೆ ಹೋಗುತ್ತಿದ್ದೆನು. ಇನ್ನೂ ಆರಂಭದಲ್ಲಿಯೆ ಬೇಡ ಬೇಡವೆಂದರೂ ಕೇಳದೆ ಹಿಂದಿನ ಸೀಟಿನಲ್ಲಿ ನನ್ನ ಸ್ನೇಹಿತ ನಟಶೇಖರ ಕುಳಿತು ಅಲ್ಲಿಂದ ಸೈಕಲ್ಲಿನಲ್ಲಿ ತೂರಾಡುತ್ತಾ ಮಣ್ಣಿನ ದಾರಿಯಲ್ಲಿ ಸಾಗಿ ಒಬ್ಬೊಬ್ಬರು ಒಂದು ದಿಕ್ಕಿಗೆ ಬಿದ್ದದ್ದು ನೆನ್ನೆ ಮೊನ್ನೆ ನಡೆದಂತೆ ನೆನಪಾಗುತ್ತದೆ.

ಅದೇ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ವಿ. ನರಹರಿಯವರನ್ನು ಸೈಕಲ್ ಇಲ್ಲದೆ ನೆನೆಯಲು ಸಾದ್ಯವಾಗುವುದಿಲ್ಲ.

ವಿಶ್ವಸಂಸ್ಥೆ ಕಳೆದ ವರ್ಷ ಜೂನ್ 3 ರಂದು ವರ್ಲ್ಡ್  ಬೈಸಿಕಲ್ ಡೇ ಆಚರಿಸಲು ನಿರ್ಧರಿಸಿದ ನಂತರ ಬೈಸಿಕಲ್ ಪ್ರಾಮುಖ್ಯತೆಯನ್ನು ಎಲ್ಲಡೆಯೂ ಹರಡಲು ಪ್ರಯತ್ನ ನಡೆದಿದೆ. ಆದರೆ ಅದಕ್ಕೆ ಮೊದಲೆ ಮೈಸೂರು ನಗರದಲ್ಲಿ ಟ್ರಿಣ್ ಟ್ರಿಣ್ ಯೋಜನೆಯ ಮೂಲಕ ಮೈಸೂರಿನ ಯಾವುದೇ ಭಾಗದಿಂದ ಮತೊಂದು ಭಾಗಕ್ಕೆ ಸಂಚರಿಸಲು ಅನುಕೂಲವಾಗುವಂತೆ ಸೈಕಲನ್ನು ನಿಗಧಿತ ಜಾಗದಲ್ಲಿ ತೆಗೆದುಕೊಂಡು ಮತ್ತೊಂದು ಜಾಗದಲ್ಲಿ ನಿಲ್ಲಿಸಿ ಹೋಗುವ ಯೋಜನೆಯನ್ನು ಜಾರಿಗೆ ತಂದಿದೆ. ಹಂಪೆಗೆ ಹೋದರೆ ಅಲ್ಲಿ ವಿದೇಶಿ ಪ್ರವಾಸಿಗರು ಸೈಕಲ್‍ನ ಮೇಲೆ ಒಂದು ತಾಣದಿಂದ ಮತ್ತೊಂದು ತಾಣಕ್ಕೆ ಸಂಚರಿಸುವುದನ್ನು ಕಾಣಬಹುದು. ಡೆನ್ಮಾಕ್ ಹಾಗೂ ನೆದರ್‍ಲ್ಯಾಂಡ್‍ನಲ್ಲಿ ಸೈಕಲ್ ಪ್ರಯಾಣವನ್ನು ಪ್ರೋತ್ಸಾಹಿಸುತ್ತಿರುವ ಎರಡು ಪ್ರಮುಖ ರಾಷ್ಟ್ರಗಳು. ಡೆನ್ಮಾರ್ಕ್‍ನಲ್ಲಿ ಶೇ. 50 ರಂದು ಮಂದಿ ಶಾಲೆ ಮತ್ತು ಕೆಲಸದ ತಾಣಕ್ಕೆ ಹೋಗಲು ಸೈಕಲನ್ನು ಬಳಸಿದರೆ ನೆದರ್ ಲ್ಯಾಂಡ್ ನ ರಾಜಧಾನಿ ಆಂಸ್ಟರ್ಡ್ ಹ್ಯಾಮ್‍ನಲ್ಲಿ ವಿವಿಧ ಉದ್ದೇಶಗಳಿಗಾಗಿ ಪ್ರತಿದಿನ ಶೇ.63 ರಷ್ಟು ಮಂದಿ ಪ್ರತಿದಿನ ಸೈಕಲನ್ನು ಓಡಿಸುತ್ತಿದ್ದಾರೆ. ಭಾರತದ ಜಾಗೃತ ನಗರಿ ಬೆಂಗಳೂರಿನಲ್ಲೂ ಪ್ರತ್ಯೇಕವಾಗಿ ಸೈಕಲ್‍ಲ್ಲೇನ್ ಮಾಡಲು ಯೋಜಿಸಲಾಗುತ್ತಿದೆ.

ವಾಕಿಂಗ್ ಹಾಗೂ ಇತರೆ ವ್ಯಾಯಾಮಗಳಿಗಿಂತ ಸೈಕ್ಲಿಂಗ್ ಅತ್ಯುತ್ತಮ ದೈಹಿಕ ಹಾಗೂ ಮಾನಸಿಕ ವ್ಯಾಯಾಮ ನೀಡುವ ಸಾಧನವಾಗಿದೆ. ಟೂರ್ ದ ಫ್ರಾನ್ಸ್ ವಿಶ್ವದ ಪ್ರಮುಖ ಸೈಕಲ್ ಸ್ಪರ್ಧೆ. ಜಗತ್ತಿನ ಶ್ರೇಷ್ಠ ಸೈಕಲಿಗರು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಪ್ರತಿದಿನ ಇಂತಿಷ್ಟು ಕಿ.ಮೀ.ಗಳೆಂದು ನಿಶ್ಚಿತ ಮಾರ್ಗದಲ್ಲಿ ಚಲಿಸುವ ಈ ಪ್ರತಿವರ್ಷ ಜೂನ್, ಜುಲೈ ತಿಂಗಳಲ್ಲಿ ನಡೆಯುತ್ತದೆ. ನೂರಾರು ಸ್ಪರ್ಧಿಗಳು ಭಾಗವಹಿಸುವ ಈ ಕೂಟದಲ್ಲಿ ಮುಂದೆ ಸ್ಪರ್ಧಿಗಳು ಸಂಚರಿಸಿದಂತೆ ಹಿಂದೆ ಡ್ರೋನ್ ಕ್ಯಾಮರಾಗಳ ಜೊತೆಗೆ ಇತರೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಫ್ರಾನ್ಸನ ಮತ್ತು ಅದರ ಅಕ್ಕಪಕ್ಕದ ರಾಷ್ಟ್ರಗಳ ಪ್ರಮುಖ ನಗರಗಳು, ಗುಡ್ಡ ಹಳ್ಳಿಗಾಡುಗಳನ್ನು ವೀಕ್ಷಕರಿಗೆ ತೋರುತ್ತಾ ಸಾಗುವ ಈ ಯಾನ ಅದ್ಭುತ ಅನುಭವವನ್ನು ನೀಡುವಂಥದ್ದು.

ಮಾಧ್ಯಮಿಕ ಶಾಲಾ ಹಂತದಲ್ಲಿ ಸೈಕಲ್ ಕಲಿತು, ಹೈಸ್ಕೂಲಿನವರಿಗೆ ಸೈಕಲ್ ಸಂಚಾರದಲ್ಲಿ ಮುದ ಕಾಣುವ ಯುವಜನಾಂಗ ಕಾಲೇಜಿಗೆ ಬಂದೊಡನೆ ಸೈಕಲನ್ನು ಪಕ್ಕಕ್ಕೆ ಸರಿಸಿ ಸ್ಕೂಟರ್ ಏರುತ್ತಾರೆ. ಕಾಲೇಜಿನ ರೋಚಕ ಜೀವನದ ಜೊತೆಗೆ ಸೋಮಾರಿತನವೂ ಇದರಿಂದ ಆರಂಭವಾಗುತ್ತದೆ. ಸುಮ್ಮನೆ ಕುತೂಹಲಕ್ಕಾಗಿ ಮೊನ್ನೆ ನನ್ನ ವಿದ್ಯಾರ್ಥಿನಿಯರಿಗೆ ಒಂದು ಶುಕ್ರವಾರ ಸೈಕಲ್‍ನಲ್ಲಿ ಬನ್ನಿ ಎಂಬ ಆಹ್ವಾನಕ್ಕೆ ಬಹುತೇಕರದ್ದು ನಿರುತ್ಸಾಹಕರ ಪ್ರತಿಕ್ರಿಯೆ. ಕಾರಣ ಅವರಲ್ಲಿ ಅನೇಕರು ತಮಗೆ ಸಿಕ್ಕಿದ್ದ ಸೈಕಲನ್ನು ಮಾರಿಕೊಂಡಿದ್ದರೆ, ಕೆಲವರು ತಮ್ಮ ದೂರದ ಊರಿನಿಂದ ಬರಲಾಗದ ನೆಪಹೇಳಿ ತಪ್ಪಿಸಿಕೊಂಡರು. ಸ್ಥಳೀಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ಸೈಕಲ್‍ನಲ್ಲಿ ಬರುವ ಅಭ್ಯಾಸ ರೂಢಿಸಿಕೊಂಡಿದ್ದರು. ಶಿಸ್ತಿಗೆ ಹೆಸರಾದ ಅವರ ವರ್ತನೆಯಿಂದ ಬೇಸೆತ್ತಿದ್ದ ಕೆಲವು ಕಿಡಿಗೇಡಿ ಶಿಷ್ಯಂದಿರುವ ಸೈಕಲನ್ನು ಕಾಲೇಜಿನ ಆವರಣದಲ್ಲಿರುವ ಮರಕ್ಕೆ ನೇತುಹಾಕಿದ್ದು ಕೆಲವು ವರ್ಷಗಳ ಹಿಂದೆ ಗೆಳೆಯರ ಬಳಗದಲ್ಲಿ ಹರಿದಾಡಿತ್ತು.

ಸೈಕಲ್ ಬಳಸಿ ನೂರಾರು ಚಿತ್ರಗಳು ಬಿಂಬಿಸಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಆಜು-ಬಾಜಿನಲ್ಲಿ ಚಿತ್ರಿತವಾದ ಇಟಾಲಿಯನ್ ಚಿತ್ರ ಬೈಸಿಕಲ್ ಥೀವ್ಸ್. ಆ ಕಾಲಕ್ಕೆ ಶ್ರೇಷ್ಠ ಚಿತ್ರವೆಂದು ಪರಿಗಣಿತವಾಗಿದ್ದಲ್ಲದೆ ಇವತ್ತಿಗೂ ಜಗತ್ತಿನ ಅತಿ ಶ್ರೇಷ್ಠ ಹತ್ತು ಚಿತ್ರಗಳಲ್ಲೊಂದಾಗಿದೆ. ಎರಡನೆ ಮಹಾಯುದ್ಧದ ನಂತರ ರೋಮ್ ನಗರದಲ್ಲಿ ಪೋಸ್ಟರ್ ಹಚ್ಚುವ ಕೆಲಸಕ್ಕಾಗಿ ಹೆಂಡತಿಗೆ ಬಂದ ಉಡುಗೊರೆಗಳನ್ನು ಅಡವಿಟ್ಟು ಪಡೆದ ಬೈಸಿಕಲ್ ಕೆಲಸದ ಆರಂಭದ ದಿನವೇ ಕಳುವಾಗಿ ಅದನ್ನು ಪಡೆಯಲು ಪಡುವ ಸಾಹಸವೇ ಚಿತ್ರದ ಕಥಾಹಂದರ. ಚಿತ್ರ ನೋಡುತ್ತಿರುವಾಗ ಸೈಕಲ್ ನಿಲ್ಲಿಸಿ, ಸೈಡ್‍ಲಾಕ್ ಹಾಕಿ ಜನ ಬರುತ್ತಿದದ್ದು ಈಗಲೂ ಟೂರಿಂಗ್ ಥಿಯೇಟರ್ ಹೊರಗೆ ಸೈಕಲ್ ಸ್ಟಾಂಡ್ ಎಂದು ಬರೆದ ಬೋರ್ಡ್‍ಗಳನ್ನು ಕಾಣಬಹುದು. ಈಗ ಅದು ಸ್ಕೂಟರ್ ನಿಲ್ಲಿಸುವ ತಾಣವಾಗಿದೆ.

ಹೂವು ಹೊರಳುವವು ಸೂರ್ಯನ ಕಡೆಗೆ ನಮ್ಮ ಪಯಣ ಬರಿ ಚಂದ್ರನವರೆಗೆ ಇದು ಚನ್ನವೀರಕಣವಿಯವರ ಪದ್ಯದ ಸಾಲುಗಳು. ಸೈಕಲ್ ಮೇಲೆ ಕುಳಿತು ಹಾಡುತ್ತಾ ಸಾಗುವ ಈ ಹಾಡಿನ ದೃಷ್ಯಿಕೆಯನ್ನು ಟಿವಿಯಲ್ಲಿ ಗಮನಿಸಿರಬಹುದು.

ಶುಭಮಂಗಳ ಸಿನಿಮಾದಲ್ಲಿ ಆರತಿ, ವಸಂತಗೀತದಲ್ಲಿ ರಾಜ್‍ಕುಮಾರ್ ಮತ್ತು ಗಾಯತ್ರಿ, ಮಸಣದಹೂವಿನಲ್ಲಿ ಅಂಬರೀಷ್ ಕುರಿತಾಗಿ ಹಾಡಿದ ಓ ಗುಣವಂತ ನೆನಪಿಗೆ ಬರುವ ಸೈಕಲ್ ಮೇಲೆ ಚಿತ್ರಿತವಾದ ಕೆಲವು ಹಾಡುಗಳು. ಹತ್ತುವ ಕಷ್ಟದ ನಡುವೆ ಕಾಣಸಿಗುವ ಪ್ರಕೃತಿ ಸುಂದರ ದೃಶ್ಯಗಳು ಮೈಮರೆಸುವ ಬಗೆ ಜೀವನದ ಕಡುಕಷ್ಟಗಳ ನಡುವೆ ಸುಳಿಗಾಳಿಯಂತೆ ಬೀಸಿಹೋಗುವ ಸುಖದ ಗಳಿಗೆಗಳನ್ನು ನೆನಪಿಸುತ್ತದೆ. ಹೀಗೆ ಸೈಕಲ್ ಕುರಿತಾಗಿ ಸೈಕಲನ್ನು ರೂಪಕವಾಗಿ ಬಳಸಿದ ನೂರಾರು ಚಿತ್ರಗಳು ವಿಶ್ವಾದ್ಯಾಂತ ಬಿಡುಗಡೆಯಾಗಿವೆ. ನೆನಪುಗಳ ಆಗರವಾಗಿದ್ದ ಊರನ್ನು ಬಿಟ್ಟುಹೋದವ ಆಗಾಗ್ಗೆ ನೆನವಂತೆ. ಮುಂದೆ ಎಷ್ಟೋ ವಾಹನಗಳ ಚಾಲನೆಯನ್ನು ಕಲಿತರೂ ಎಲ್ಲಾ ವಾಹನಗಳ ತಾಯಿಯಾದ ಈ ಸೈಕಲನ್ನು ಕಲಿತ ನೆನಪು ಸ್ಥಿರಸ್ಥಾಯಿ.

‍ಲೇಖಕರು Avadhi

17 February, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading