ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೆರಗ ನೆರಳಲ್ಲಿ ಬಚ್ಚಿಟ್ಟುಕೊಳ್ಳಬೇಕೊಮ್ಮೆ..

 ನಾಗರಾಜ್ ಹರಪನಹಳ್ಳಿ

ಅದು ಮುಗಿಯದ ಬಯಕೆ
ಶತಮಾನದ ಕನಸು
ಸೆರಗಿನ  ಕರುಣೆಯಲಿ ಮಿಂದು ತಾಯ್ತನವ ಮುಟ್ಟಿಬರಬೇಕೊಮ್ಮೆ

ನಮ್ಮನ್ನು ನಮ್ಮೊಳಗೆ ಬಚ್ಚಿಟ್ಟುಕೊಳ್ಳುವುದೆಂದರೇನು ?
ಎರಡು ಆತ್ಮಗಳ ಮಿಲನ ಅಂದರೇನು ??

ಬಗೆಹರಿಯದ ಪ್ರಶ್ನೆಗಳಿಗೆ
ಉತ್ತರ ಹುಡುಕಹೊರಡುವುದೆಂದರೇನು ?
ಸಿದ್ಧಾರ್ಥ ಮೋಕ್ಷವ ಹುಡುಕ ಹೊರಟಂತೆಯೇ ?
ಗರ್ಭದಲ್ಲಿ ಕೋಶ ಬೆಳೆದಂತೆ
ತನ್ನದೇ ಜೀವಕೋಶದ ಆಶ್ರಯದಿ
ರಕ್ತಮಾಂಸವ, ಪ್ರೀತಿಯ ತಾಯ್ತನವನುಂಡು ಬೆಳೆದಂತೆಯೇ ??

ಸೆರಗ ನೆರಳಲ್ಲಿ ಪ್ರೀತಿ ಪಲ್ಲವಿಯ ಹಾಡಬೇಕೊಮ್ಮೆ
ನಶ್ವರತೆಗೂ ಮುನ್ನ ಬದುಕ
ಮೋಹಿಸಬೇಕೊಮ್ಮೆ

ಬೆಳಕ ಕಿರಣ ಬೆಳಕ ಹೊದ್ದು ನಡೆದಂತೆ
ನೆರಳ ಚಲನೆ ನೆರಳನುಂಡು
ಹೂ ಪರಿಮಳವ ಸ್ಪರ್ಶಿಸಿ ಬಂದಂತೆ
ಪ್ರೀತಿ ಪ್ರೀತಿಯನೊಮ್ಮೆ ಮುಟ್ಟಿ
ಅಲುಗಾಡಿಸಿ ಅಪ್ಪಿದಂತೆ

ಸೆರಗ ನೆರಳಲ್ಲೊಮ್ಮೆ ಅಡಗಿ
ಕಣ್ಣಾಮುಚ್ಚಾಲೆ ಆಡಬೇಕೊಮ್ಮೆ
ನೆಲದೊಳಗಣ ನದಿ ನೆಲವ ತಬ್ಬಿ
ಹರಿದಂತೆ
ಮೋಡದೊಳಗಣ ಮಳೆ ಹನಿಯಾಗಿ
ನೆಲವ ತಬ್ಬಿದಂತೆ

ಆಕಾಶದ ಸೆರಗಲೊಮ್ಮೆ ಬಯಲು ಬಯಲಾಗಿ ಬಯಲನೊಮ್ಮೆ
ತಬ್ಬಿ ಬರಬೇಕು

‍ಲೇಖಕರು Avadhi GK

1 March, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading