ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೆಕ್ಸ್ ದಂಧೆ ನಡೆಸಲು ಆಗೋಲ್ಲ, ಬೇರೆ ಉದ್ಯೋಗವಿಲ್ಲ..

ಅರ್ಥಮಾಡಿಕೊಳ್ಳಲು ಬಾಕಿಯಿದೆ ಇನ್ನೆಷ್ಟೋ ಮುಖಗಳು

ನೋಡಿದ್ದೇ ಸತ್ಯವಲ್ಲ ಪರದೆಯ ಹಿಂದಿದೆ ನೋವ ಕಥೆಗಳು

ಮುಂಜಾನೆಯೆದ್ದು ಟೀ ಸವಿಯುತ್ತಿದ್ದಂತೆ ವೀಣಾ ಮನೆಗೆ ಆ ಇಬ್ಬರು ಮಂಗಳಮುಖಿಯರು ಬಂದರು. ಹಳೆಯ ಮಂಚದಲ್ಲಿ ಕೂತರು. ನಾನು ಕುರ್ಚಿಯಿಂದ ಎದ್ದು ಅವರ ಬಳಿ ಹೋಗಿ ಕೂತೆ.

ಇನ್ನು ಅವರ ಕಣ್ಣಲ್ಲಿ ನಿದ್ದೆಯ ಮಂಪರು ಎದ್ದು ಕಾಣುತ್ತಿತ್ತು. ಹಾಗೆಯ ಟೀ ಹೀರುತ್ತಾ ಮಾತಿಗೆಳೆದು ಅವರ ಹಿನ್ನಲೆಯನ್ನು ಕೇಳಿದೆ. ದೂರದಿಂದ ಅವರ ಕುರಿತು ನಾನೆ ಕಲ್ಪಿಸಿಕೊಂಡಿದ್ದ ಹಲವು ಕಲ್ಪನೆಗಳು ನಿಧಾನವಾಗಿ ದೂರವಾದಂತೆ ಅನಿಸಿತು. ನಿಜ ಯಾರ ಬಗ್ಗೆಯೂ ಹತ್ತಿರದಿಂದ ಅವರನ್ನು ಅರಿಯದೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಖಂಡಿತ ಸಾಧ್ಯವಾಗದ ಮಾತು.

Jyothi column low resನಮ್ಮನ್ನು ನಾವೇ ಅರ್ಥಮಾಡಿಕೊಳ್ಳಲಾರದ ನಾವು ಇನ್ನೊಬ್ಬರನ್ನು ಅರ್ಥಮಾಡಿಕೊಂಡೇವಾದ್ರೂ ಹೇಗೆ ಅಲ್ವಾ? ಮೆಟಾಮಾರ್ಫಸಿಸ್ ನಲ್ಲಿ KAFKA ಬರೆವ ಸಾಲುಗಳು ಇಲ್ಲಿ ಹೆಚ್ಚು ಪ್ರಸ್ತುತ ಅನ್ನಿಸುತ್ತೆ. ನಮ್ಮೊಳಗೆ ಏನಾಗುತ್ತದೆ ಎಂಬುದು ಅರ್ಥವಾಗದ ಸ್ಥಿತಿಯದು. ಆ ಮನಸ್ಥಿತಿಯನ್ನು ವಿವರಿಸೋದು ಅಸಾಧ್ಯ. ಅಂತ ಪರಿಸ್ಥಿತಿಯಲ್ಲಿ ಬೇರೆಯವರಿಗೆ ಈ ಕುರಿತಂತೆ ವಿವರಿಸೋದಾದ್ರು ಹೇಗೆ?

ಆ ಮಂಗಳಮುಖಿ ತನ್ನೊಳಗಿನ ತುಡಿತವನ್ನು ವಿವರಿಸುತ್ತಿದ್ದರೆ, ಅರ್ಥವಾಗದ ಮನಸ್ಥಿತಿಯ ಬಗ್ಗೆ ಯೋಚಿಸುತ್ತಿದ್ದೆ. ಯಾಕೆ ಹೆಣ್ಣಿನ ಭಾವನೆ ನನ್ನನ್ನು ಕಾಡಿತು ಎಂಬುದರ ಅರಿವು ನನಗೆ ಗೊತ್ತಿಲ್ಲ. ಹೀಗೆ ಕೇಳದೆ ಊರು ಬಿಟ್ಟು ಓಡಿ ಬಂದೆ, ಇಲ್ಲಿ ಬಂದು ನಮ್ಮ ಸಮುದಾಯದವರನ್ನು ಸೇರಿದೆ. ಈಗ ಹೀಗೆ ಜೀವನ ಸಾಗುತ್ತಿದೆ. ಎಂತೆಂತಾ ಗಿರಾಕಿಗಳನ್ನು ನೋಡಬೇಕು. ನೋವ ಮರೆಯಲು ಕುಡಿಯಬೇಕು…

ಅವರು ತಮ್ಮ ದಿನಚರಿ ಹೇಗಿರುತ್ತದೆ ಅನ್ನೋದನ್ನು ಹೇಳುತ್ತಲೇ ಇದ್ರು. ನಾನು ಕೇಳುತ್ತಲೇ ಹೋದೆ. ಅರ್ಥ ಮಾಡಿಕೊಂಡಷ್ಟು ಅರ್ಥಮಾಡಿಕೊಳ್ಳಲಾರದ ಜೀವನದ ಮುಖವನ್ನು ಅರ್ಥೈಯಿಸುವ ಪ್ರಯತ್ನವನ್ನು ಮಾಡುತ್ತಿದ್ದೆ ಅಷ್ಟೇ…

ಮನೆಯ ನೆನಪು ತಾಯಿಯ ನೆನಪು ತೀವ್ರವಾಗಿ ಕಾಡುತ್ತದೆಂದು ಮಂಗಳಮುಖಿಯೊಬ್ಬರು ಮೌನಕ್ಕೆ ಮೊರೆ ಹೋದ್ರು. ಅವರ ಕಣ್ಣುಗಳಿಂದ ಕಂಬನಿ ಜಿನುಗತೊಡಗಿತು. ತಕ್ಷಣಕ್ಕೆ ಏನು ಮಾಡಬೇಕೆಂಬುದು ತೋರದೆ ಹಾಗೆ ಸುಮ್ಮನಿದ್ದೆ. ಮತ್ತೆ  ಕೈಹಿಡಿದು ಸಂತೈಸುವ ಪ್ರಯತ್ನ ಮಾಡಿದೆ. ಜೀವ ಯಾವುದಾದರೇನು? ನೋವು ನಲಿವಿನ ಅಭಿವ್ಯಕ್ತಿಗೆ ಗಂಡು ಹೆಣ್ಣು ಎಂಬ ಭೇದವಿರದು. ಹೆಪ್ಪುಗಟ್ಟಿದ ನೋವನ್ನು ಹಂಚಿಕೊಂಡ ಮೇಲೆ ಮನಸ್ಸು ಹಗುರಾದ ಭಾವ ಆವರಿಸುವುದು ಸಹಜ. ಮತ್ತು ಇದನ್ನು ಒಂದಲ್ಲಾ ಒಂದು ಬಾರಿ ಪ್ರತಿಯೊಬ್ಬರು ಅನುಭವಿಸಿರುತ್ತಾರೆ ಕೂಡ.

ನಿಜ ಅಳುವೆಂಬುದು ಸಹಜ, ಆದರೆ ಇತ್ತೀಚಿನ ದಿನಗಳಲ್ಲಿ ಅತ್ತರೆ ಅದ್ಯಾಕೋ ಅದು ನಮ್ಮ ದೌರ್ಬಲ್ಯ ಎಂಬಂತೆ ಪರಿಗಣಿಸಲಾಗುತ್ತದೆ. ಆದ್ರೆ ಅಳುವೆಂಬುದು ನನ್ನ ಅನುಭವದ ಪ್ರಕಾರ ಸಹಜವಾದ ಅಭಿವ್ಯಕ್ತಿ. ಮನಸ್ಸಲ್ಲಿ ಹುದುಗಿದ್ದ ನೋವು ಒಮ್ಮೆ ಹೀಗೆ ಅಳುವಾಗಿ ಪರಿವರ್ತನೆಯಾಗಿ ಕಂಬನಿ ಮೂಲಕ ಹರಿದು ಹೋಗುತ್ತದೆ ಅನ್ನೋದು ನನ್ನ ಅನಿಸಿಕೆ. ಹಾಗಾಗಿ ಅತ್ತ ಮೇಲೆ ನಿರಾಳವಾದ ಭಾವವೊಂದು ಆವರಿಸುತ್ತದೆ.

ಇಲ್ಲಿ ಆ ಮಂಗಳಮುಖಿಯರು ಅಷ್ಟೇ ಹೆತ್ತವರ ನೆನೆದು ಮತ್ತು ರಾಜಧಾನಿ ಬೆಂಗಳೂರು ಪರಿಚಯಿಸಿದ ಹೊಸ ಜಗತ್ತಿನ ಮುಖದೆದುರು ನೋವಿನ ಪರದೆ ಜಾರಿಸಿ ಅತ್ತರು. ಆ ಮೇಲೆ ಮತ್ತೆ ಇನ್ನೇನನ್ನೋ ಹೇಳೋ ಪ್ರಯತ್ನ ಮಾಡುತ್ತಿದ್ದರು. ನಾನು ಅವರ ಮಾತನ್ನೇ ಆಲಿಸುತ್ತಿದ್ದೆ. ಪ್ರತಿ ಮಾತಲ್ಲಿ ಅರ್ಥ ಮಾಡಿಕೊಳ್ಳಲು ಬಹಳಷ್ಟಿತ್ತು. ಅರ್ಥ ಮಾಡಿಕೊಂಡಷ್ಟು ಅರ್ಥವಾಗದ ನಿಗೂಢ ಬದುಕು ಮತ್ತು ವಾಸ್ತವ ಜಗತ್ತಿನ ಸತ್ಯಗಳ ಗೋಚರ ಎಲ್ಲವನ್ನು ಒಂದಿಷ್ಟು ಅರ್ಥಮಾಡಿಕೊಳ್ಳೋ ಪ್ರಯತ್ನವಷ್ಟೇ ಮಾಡುತ್ತಿದ್ದೆ.

ನಿದ್ದೆಯಿಲ್ಲದ ರಾತ್ರಿಗಳು, ನೋವು ಮರೆಯಲು ಗುಳಿಗೆಗಳು, ಮದ್ಯಪಾನ ಅನಿವಾರ್ಯವಾಗಿತ್ತು. ಅದಿಲ್ಲದಿದ್ದರೆ ನಿದ್ದೆಗೆ ಜಾರುವುದೇ ಅಸಾಧ್ಯವಾಗಿತ್ತು. ಮಂಗಳ ಮುಖಿಯರ ಮಾತುಗಳು ಕಿವಿಗೆ ಅಪ್ಪಳಿಸುತ್ತಲೇ ಇತ್ತು.

ಅಲ್ಲಿಂದ ಮತ್ತೆ  ಮಲ್ಲೇಶ್ವರಂನತ್ತ ನಮ್ಮ ತಂಡ ಹೆಜ್ಜೆ ಹಾಕಿತು. ಅಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಗುಂಪೊಂದು ಖುಷಿಯಿಂದ ಕುಣಿಯುತ್ತಿತ್ತು, ಖುಷಿಯಿಂದ ಹಾಡಿಗೆ ಹೆಜ್ಜೆ ಹಾಕುತ್ತಿದ್ದ ಆ ಗುಂಪನ್ನು ನೋಡುತ್ತಾ ನಿಂತೆವು. ಹಾಗೆ ಸ್ವಲ್ಪ ಹೊತ್ತು ಹಾಗೆ ಮಾತೇ ಇರಲಿಲ್ಲ. ಮೌನವನ್ನು ಹೊದ್ದು ಮಾತಿಗಾಗಿ ನಾನಲ್ಲಿ ಪರದಾಡುತ್ತಿದ್ದೆ.

ಆ ನಂತರ ಒಬ್ಬೊಬ್ಬರನ್ನೇ ಮಾತಿಗೆಳೆದೆ. ಅವರು ಆಡಿದ ಮಾತುಗಳು ಯಾಕೋ ತುಂಬಾನೆ ಮನಸ್ಸನ್ನು ಹಿಂಸಿಸಿತು. ಲೈಂಗಿಕ ವೃತ್ತಿಯನ್ನು ಮಾಮೂಲಿಯಾಗಿ ಅವಲಂಬಿಸಿರುವ ಇವರ ಬಳಿ ಬರುವ ಗಿರಾಕಿಗಳು ನೀಡುವ ಹಿಂಸೆಯ ಬಗ್ಗೆ ಕೇಳಿ ಹೀಗೂ ಇರಲು ಸಾಧ್ಯವಾ ಅಂತ ಮನಸ್ಸು ಕೇಳಿತು. ಕುಡಿದು ಬರೋ ಗಿರಾಕಿಗಳು ಕೆಲವೊಮ್ಮೆ ಪಿನ್ ನಿಂದ ಚುಚ್ಚುತ್ತಾರೆ ತುಂಬಾನೆ ಹಿಂಸೆ ಕೊಡ್ತಾರೆ.

ಇನ್ನು ಕೆಲವು ಬಾರಿ ಎದೆಗೆ ಚೂರಿಯಿಂದಲು, ಪಿನ್ ನಿಂದಲು ಚುಚ್ಚಿದ ಪರಿಣಾಮ ಕೆಲವರು ಸಾವನ್ನಪ್ಪಿದ ಘಟನೆಯು ಇದೆ ಎಂದು ಹೇಳುವಾಗ ಇವರ ಜೀವನದ ಕರಾಳ ಅಧ್ಯಾಯದ ಬಗ್ಗೆ ಕರುಳು ಚುರ್ ಎಂದಿತು.

ಮನುಷ್ಯನಾಗಿ ಇನ್ನೊಂದು ಜೀವದ ಬಗ್ಗೆ ತೋರುವ ಮೃಗೀಯ ವರ್ತನೆ ಮನಸ್ಸನ್ನು ತುಂಬಾನೆ ಹಿಂಸಿಸಿತು. ಅಲ್ಲಿಂದ ಮತ್ತೆ ‘ಯಾನ’ ಎಂಬ ಮಂಗಳಮುಖಿಯ ಮನೆಯತ್ತ ಹೆಜ್ಜೆ ಹಾಕಿದ್ವಿ, ಯಾವ ಮಾಡೆಲ್ ಗು ಕಮ್ಮಿಯಿಲ್ಲವೆಂಬಂತಿದ್ದ ಯಾನಾಳ ಮನೆಯಲ್ಲಿ ಅವರ ಹೆತ್ತವರು ಇದ್ರು. ಆದ್ರೆ ಅವರು ಯಾರು ಕ್ಯಾಮರಾದೆದುರಾಗಲಿ ನಮ್ಮ ಜೊತೆಯಾಗಲಿ ಮಾತನಾಡಲು ಇಷ್ಟಪಡಲಿಲ್ಲ. ತನ್ನ ಫೋಟೋಗಳನ್ನು ತೋರಿಸಿದ ಯಾನಾ ರಾಜ್ ನಿಂದ ಯಾನಾಳಾಗಿ ಬದಲಾದ ಕಥೆಯನ್ನು ವಿವರಿಸುತ್ತಿದ್ರು. ಅಷ್ಟು ಹೊತ್ತಿಗೆ ಯಾನಾಳ ಬಾಯ್ ಫ್ರೆಂಡ್ ಕಾಲ್ ಬಂದಿತ್ತು. ನೀನು ಮಾಡುವ ಸೆಕ್ಸ್ ದಂಧೆಯ ಬಗ್ಗೆ ಹೇಳಬೇಡ ಎಂದು ಆತ ಸಲಹೆ ನೀಡಿದ್ದ. ಹಾಗಾಗಿ ಅದನ್ನೆಲ್ಲಾ ಹೇಳಬೇಡಿ ಎಂದು ಯಾನಾ ನಮ್ಮಲ್ಲಿ ವಿನಂತಿ ಮಾಡಿದ್ರು. ಆಯಿತು ಓಕೆ ಅಂದೆ.

ಈ ಕಾರ್ಯಕ್ರಮ ಆದ ಆರು ತಿಂಗಳ ನಂತ್ರ ನನಗೆ ಯಾನಾ ಕಾಲ್ ಮಾಡಿದ್ರು. ನಂಗೆ ನನ್ನ ಗಂಡ ಮೋಸ ಮಾಡಿದ್ದಾನೆ ಇನ್ನೊಂದು ಮದುವೆಯಾಗಿದ್ದಾನೆ ಅಂದ್ರು. ಸುಸೈಡ್ ಮಾಡಕೋಬೇಕನ್ನಿಸುತ್ತಿದೆ ಎಂದು ಬಿಕ್ಕಿಬಿಕ್ಕಿ ಅಳುತ್ತಲೇ ಹೇಳುತ್ತಿದ್ರು. ನಾನು ಆವೇಶದಿಂದ ಏನು ಮಾಡಿಕೊಳ್ಳಬೇಡಿ ಅಂದೆ. ಮತ್ತೀಗ ಆಕೆ ಓಕೆ ಎಂಬ ಮಾಹಿತಿ ಸಿಕ್ಕಿದೆ. ಹಾಗಾಗಿ ಓಕೆ.

Third Genderಮತ್ತೆ ಹಳೆಯ ಕಥೆಗೆ ಮರಳ್ತೀನಿ. ಹೀಗೆ ಯಾನಾ ಮನೆಯಲ್ಲಿ ಆಕೆಯ ಕಥೆ, ಪ್ರೇಮಕಥೆ ಎಲ್ಲದರ ಬಗ್ಗೆಯು ಮಾತಾಡಿದ ಬಳಿಕ ಅಲ್ಲಿಂದ ನಿರ್ಗಮಿಸಿದೆವು.

ಮಂಗಳಮುಖಿಯರು ವಯಸ್ಸಾದ ಮೇಲೆ ಏನು ಮಾಡ್ತಾರೆ ಅನ್ನೋ ಕುತೂಹಲವಿತ್ತು. ಯಾಕಂದ್ರೆ ಬಹುತೇಕ ಮಂದಿ ಸೆಕ್ಸ್ ದಂಧೆಯನ್ನೇ ನಂಬಿ ಜೀವನವನ್ನು ಸಾಗಿಸೋರು. ಹಾಗಾದ್ರೆ ಇಳಿವಯಸ್ಸಿನಲ್ಲಿ ಅವರ ಜೀವನ ಹೇಗಿರಬಹುದೆಂದು ತಿಳಿಯಲು ಮಾಗಡಿ ರಸ್ತೆಯ ಕಾಲೋನಿಯತ್ತ ನಮ್ಮ ತಂಡ ಹೆಜ್ಜೆ ಹಾಕಿತ್ತು.

ಅಲ್ಲಿ ಕಂಡ ದೃಶ್ಯಗಳು ‘ಮಂಡಿ’ ಸಿನಿಮಾದ ಫ್ರೇಮ್ ಗಳನ್ನು ನೆನಪಿಸುವಂತಿತ್ತು. ಒಬ್ಬ ರಭಸವಾಗಿ ಮನೆಯೊಳಗೆ ಹೋದ. ಇನ್ನು ಕೆಲವರು ಗಿರಾಕಿಗಳನ್ನು ಆಕರ್ಷಿಸಲು ನಿಂತಿದ್ರು.

ಅಷ್ಟರಲ್ಲಿ ಧಡೂತಿ ಮಂಗಳಮುಖಿಯರೊಬ್ಬರು ಹೊರಗಡೆ ಬಂದ್ರು. ಅವರು ಬಾಲಮ್ಮ, ನಾನೇನು ಮಾತಾಡೋಲ್ಲ, ನಮ್ಮ ಸಮಸ್ಯೆಗೆ ಪರಿಹಾರವಿಲ್ಲ. ಉದ್ಯೋಗ ಕೊಡಿ ಅಂದ್ರು ನೀವೇನು ಕೊಡೋಲ್ಲ, ಈ ವೃತ್ತಿ ಬಿಟ್ಟು ಬೇರೆ ವೃತ್ತಿ ಮಾಡ್ತೀವಿ ಅಂದ್ರು ನೀವು ಒಪ್ಪಲ್ಲ ಅಂತ ಹೇಳುತ್ತಲೇ ಸಾಗಿದ್ರು. ನಾನು ಕೇಳುತ್ತಿದ್ದೆ ಅಷ್ಟೇ…

ವಯಸ್ಸಾದ್ರೆ ನಮ್ಮದು ನಾಯಿಪಾಡು. ಸೆಕ್ಸ್ ದಂಧೆ ನಡೆಸಲು ಆಗೋಲ್ಲ. ಬೇರೆ ಉದ್ಯೋಗವಿಲ್ಲ, ಬೀದಿಯಲ್ಲೇ ಸಾಯ್ತಾರೆ ಎಲ್ರು ಎಂದು  ಬಾಲಮ್ಮ ಮಾತು ಮುಂದುವರಿಸಿದ್ರು.

ಮಾತು ಮುಗಿಸಿದ ನಂತರ ಸ್ವಲ್ಪ ಮಟ್ಟಿಗೆ ಅವರನ್ನು ಅರ್ಥಮಾಡಿಕೊಂಡ ನಮ್ಮ ತಂಡ ಅಲ್ಲಿಂದ ನಿರ್ಗಮಿಸಿತು. ಈಗ ಅವರನ್ನು ಕಂಡಾಗ ನಗು ಬರುವುದಿಲ್ಲ. ಆ ಮಂಗಳಮುಖಿಯ ಕಣ್ಣೀರು, ನನ್ನ ಕೈಹಿಡಿದು ಅತ್ತ ಮುಖ ಮತ್ತೆ ಮತ್ತೆ ಕಾಡುತ್ತದೆ. ಅರ್ಥ ಮಾಡಿಕೊಳ್ಳಬೇಕಾದ ವಿಷಯಗಳೆಷ್ಟಿವೆಯಲ್ಲಾ ಎಂಬ ಪ್ರಶ್ನೆಯನ್ನು ನನಗೆ ನಾನೇ ಮತ್ತೆ ಮತ್ತೆ ಹಾಕಿಕೊಳ್ಳುತ್ತೇನೆ. ಮನುಷ್ಯತ್ವದ ಸಂದೇಶದ  ಅನಿವಾರ್ಯತೆ ಇಂದು ಎಷ್ಟಿದೆಯಲ್ವಾ?

ಬರುವ ವಾರ ಮತ್ತಷ್ಟು ನೆನಪಿನೊಂದಿಗೆ ಬರ್ತೀನಿ

‍ಲೇಖಕರು admin

1 August, 2016

4 Comments

  1. Beeru Devaramani

    ಅದ್ಭುತ ಬರಹ ಮೇಡಂ. ಸಮಾಜ ಇನ್ನು ಬದಲಾಗುತ್ತಿಲ್ಲ. ಇನ್ನು ಇಂತಹ ಹಲವಾರು ಘೋರ ಸಮಸ್ಯೆಗಳಿಂದ ನಮ್ಮ ಸಮಾಜ ಬಳಲಿ ಬೆಂಡಾಗಿದೆ. ಇಂತಹ ಅಮಾನವೀಯ, ಕ್ರೂರ ಅಸಹ್ಯಕರ ವರ್ತನೆ ಯಾವಾಗ ಕೊನೆಯಾಗುವುದೋ ತಿಳಿಯದು.. ಮಂಗಳಮುಖಿಯರ ಸಮಸ್ಯೆಗಳು ಬದಲಾಗಿ ಅವರು ಎಲ್ಲರಂತೆ ಯಾರ ಹಂಗಿಲ್ಲದೆ, ಯಾರ ತೊಂದರೆಯಿಲ್ಲದೆ, ಯಾರ ದೌರ್ಜನ್ಯ ವಿಲ್ಲದೆ, ಈ ಸಮಾಜದಲ್ಲಿ ಬದುಕನ್ನು ಕಂಡುಕೊಳ್ಳಲಿ. ಅವರಿಗೆ ಸರ್ಕಾರದ ಎಲ್ಲ ನೆರವು ಸಿಗಲಿ.. ಸಮಾಜದ ಚಿಂತನೆ, ಆಲೋಚನೆ, ನೋಡುವ ರೀತಿ ಪೂರ್ತಿ ಬದಲಾಗಲಿ.

  2. John suntikoppa

    You are really great madam ,,.

  3. shama nandibetta

    Jyothi,

    “ಅರ್ಥ ಮಾಡಿಕೊಳ್ಳಬೇಕಾದ ವಿಷಯಗಳೆಷ್ಟಿವೆಯಲ್ಲಾ ಎಂಬ ಪ್ರಶ್ನೆಯನ್ನು ನನಗೆ ನಾನೇ ಮತ್ತೆ ಮತ್ತೆ ಹಾಕಿಕೊಳ್ಳುತ್ತೇನೆ. ಮನುಷ್ಯತ್ವದ ಸಂದೇಶದ ಅನಿವಾರ್ಯತೆ ಇಂದು ಎಷ್ಟಿದೆಯಲ್ವಾ?”

    Beautiful. Very true

  4. Gayatri Badiger, Dharwad

    Godemele deepa ittante baduku.. hummmm… sorry

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading