ಮಣ್ಣ ಗೋಡೆ, ಹೊನ್ನ ಕಳಸ
– ಶ್ರೀನಿವಾಸ ಎಂ
1.
ನಿನ್ನ ಮರೆಯ ಬಯಸುತ್ತೇನೆ!
ಸಾವಿನ ಎದುರು ನಿಂತ ಕ್ಷಣ,
ನಿನ್ನ ನೆನಪು ನನ್ನೊಂದಿಗೆ
ಬೂದಿಯಾಗದಿರಲೆಂಬ ಹಟ!
2
ಮನೆಯ ಗಡಿಯಾರದಲ್ಲಿ ಮುಳ್ಳುಗಳಿಲ್ಲ!
ಸಮಯವ ಕೈಯಲ್ಲಿ ಹಿಡಿದಿಡುವ ಕಸರತ್ತು
ನಾಳೆಗಳಿಲ್ಲದ ಜಗದ ಸುಖದ ಕನಸು
ಸೂರ್ಯ ಮುಳುಗಿದಾಗಲೆಲ್ಲ ಬೆಚ್ಚಿ ಬೀಳುತ್ತೇನೆ
3
ನಿನ್ನ ಜತೆ ನಡೆದ ದಾರಿಯ
ತುಂಬೆಲ್ಲಾ ನೆನಪುಗಳ ಮೈಲುಗಲ್ಲುಗಳು!
ರಸ್ತೆ ಕೊನೆಯಲ್ಲಿ ನಿಂತು ಲೆಕ್ಕ ಹಾಕುವ ತವಕ
ಬದುಕಿನ ಸಂಭ್ರಮಕ್ಕೊಂದು ನಿತ್ಯ ಸಾಕ್ಷ್ಯ
4
ಸಂಜೆಯಾದರೆ ಏನೋ ಕಳವಳ
ಮತ್ತದೇ ದಿನ, ವಾರಗಳ ಲೆಕ್ಕಚಾರ
ಕೊನೆಯಿಲ್ಲದ ದಾರಿ ಸಿಗಬಹುದೇನೋ ಅನ್ನುವ ಭ್ರಮೆ
ಎಚ್ಚರವಾದಾಗಲೆಲ್ಲಾ ಸೂರ್ಯನ ನಗುವಿನ ಸ್ವಾಗತ





touchy….