ಸೂರ್ಯ ಕೀರ್ತಿ
೧. ಒಂದು ಚಿಟ್ಟೆ
ಸಂಜೆಯ ಗಾಳಿಗೆ ಒಂದು ಚಿಟ್ಟೆ ಹಾರುತಿತ್ತು
ಮಳೆ ಬರುವ ಹಾಗೆ ಇತ್ತು!
ಆ ಕಡೆ ಸೈನ್ಯ ಈ ಕಡೆ ಸೈನ್ಯಕ್ಕೆ ನಾನು ಬಲಿಷ್ಟನೆಂದು
ಕೈ ಕಾಲುಗಳ ಬೀಸಿ ನೆಲಕ್ಕೆ ಗುದ್ದಿಯುತ್ತಲೇ ಇದ್ದರು!
ಅವರ ಮುಖ ಇವರಿಗೆ ಅಭೇದ್ಯ
ಸಿಟ್ಟು ಗರ್ವ ಎಲ್ಲವೂ ಒಂದಡೆ ಸಿಕ್ಕಿಕೊಂಡಿತ್ತು!
ಆ ಕಡೆಯಿಂದ ಬೀಸುವ ಗಾಳಿ ಈ ಕಡೆಗೆ
ಯಾವ ತೊಡಕುಗಳಿಲ್ಲದೆ ಬೀಸುತ್ತಲೇ ಇತ್ತು
ಆದರೂ;
ಸೈನಿಕರು ಯಾರನ್ನು ಬಿಡುವುದಿಲ್ಲ, ಯಾರನ್ನು!
ಎನ್ನುತ್ತಲೇ ಇದ್ದರು.

ಮೋಡಗಳು ಸಾಗುತ್ತಲೇ ಇವೆ
ಈ ಗಡಿಯಿಂದ ಆ ಗಡಿಗೆ ಏನೇನೋ ಸಂದೇಶಗಳ
ತಲುಪಿಸುತ್ತಲೇ ಇವೆ!
ಸುರಿದ ಮಳೆ ನೀರು ಈ ಕಡೆಯ ಮುಳ್ಳುತಂತಿಯ ದಾಟಿ ಮಣ್ಣಿನೊಂದಿಗೆ ಆ ಕಡೆ ಈ ಕಡೆ
ವಿನಿಮಯವಾಗುತ್ತಲೇ ಇತ್ತು!
ಆದರೂ;
ಅಲ್ಲಿನ ಸೈನಿಕರು ಯಾರಾದರೂ ಬಂದರೆ ಕೊಂದೆಬಿಡುವೆ ಎನ್ನುತ್ತಲೇ ಇದ್ದರು!
ಈ ಕಡೆಯಿಂದ ಕೃಷ್ಣನ ಪಾರಿಜಾತದ ಹೂ
ಗಾಳಿಗೆ ಉದುರಿ ಆಕಾಶವೆಲ್ಲ ಪರಿಮಳಭರಿತವಾಗಿದೆ;
ಆ ಕಡೆ ಅಲ್ಲಾಹುವಿನ ಮಲ್ಲಿಗೆಯ ಸೆಂಟು
ಮೂಗಿನಿಂದ ಮೂಗಿಗೆ ವಿನಿಮಯವಾಗುತ್ತಲೇ ಇತ್ತು,
ಆದರೂ ಅಲ್ಲಿನ ಸೈನಿಕರು;
ಗಾಳಿಯೂ ಕೂಡ ದಾಟಲು ಬಿಡವುದಿಲ್ಲ; ಎನ್ನುತ್ತಿದ್ದರು!
ಗೊದ್ದ, ಕೆಂಪಿರುವೆ, ಅಳಿಲು, ಕಾಗೆ ಕೋಗಿಲೆ ಗಿಣಿಗಳು
ಹಾರಾಡುತ್ತಲೆ ಇವೆ
ಅವುಗಳಿಗೆ ಯಾವ ಗಡಿಯೂ ಕಾಣುತ್ತಲೇ ಇಲ್ಲ
ಆದರೂ ಅಲ್ಲಿನ ಸೈನಿಕರು
ಕೊಂದೆ ಬಿಡುವೆನು ಎಂದರು!

ರಾತ್ರಿಯ ನಕ್ಷತ್ರಗಳೆಲ್ಲ ಗಡಿದಾಟಿ, ಬೇಲಿಯ ಕಿತ್ತು
ಮಿನುಗುತ್ತಲೇ ಇವೆ,
ಆ ಕಡೆ ಈ ಕಡೆ ಯಾವ ಕಡೆ ನೋಡಿದರೂ
ಕೂಡ ನಕ್ಷತ್ರಗಳು ಮತ್ತು ಚಂದ್ರನ ಬೆಳಕೆ;
ಆದರೂ
ಅಲ್ಲಿನ ಸೈನಿಕರು ಕತ್ತಿ, ಚಾಕು, ಬಂದೂಕುಗಳ ಹಿಡಿದು ನಿಂತಿದ್ದಾರೆ!
ಸೂರ್ಯ ಹುಟ್ಟಿ ಮುಳುಗುತ್ತಲೇ ಇದ್ದ
ಆದರೆ
ಅಲ್ಲಿನ ರಾಜಪ್ರಭುತ್ವದ ಕಗ್ಗೊಲೆ ಹುಟ್ಟಿದ್ದು
ಮುಳುಗಲೇ ಇಲ್ಲ!
೨. ಇದ್ದನೊಬ್ಬ ಬುದ್ಧ!
ಇವನ ಕಣ್ಣುಗಳಲ್ಲಿ ಪಕ್ಷಿಗಳು ಹಾರಾಡುತಿದ್ದವು;
ಬೀರಿದ ತುಟಿಗಳಲ್ಲಿ ಆಕಾಶದ ನೀಲಿ ನೀರು ಸುರಿಯುತಿತ್ತು,ಅದೆಷ್ಟೋ ಮುತ್ತುಗದ ಹೂಗಳು
ಎದೆಯಲ್ಲಿ ಜೋತು ಬಿದ್ದಿದ್ದವು!
ಹಾದಿ ಬೀದಿಯಲ್ಲಿ ಧ್ಯಾನ ಧ್ಯಾನವೆಂದುಕೊಂಡೆ
ತಿರುಗುತಿದ್ದ ಫಕೀರನೊಬ್ಬ
ಈಗ ಕಣ್ಣು ಮುಚ್ಚಿದ್ದಾನೆ!
ಶಯನಗೃಹದಲ್ಲಿ ಊದುಬತ್ತಿಯ ಹಚ್ಚಿ
ಭಿಕ್ಕುಗಳೆಲ್ಲ ಅಳುತಿದ್ದಾರೆ ‘ಲೋಕದ ಘಮಲು ಬಿಟ್ಟು ಹೋಯಿತೆಂದು’,
ಆಸೆಯೇ ದುಃಖಕ್ಕೆ ಮೂಲವೆಂದವನಿಗೆ
ಚಿನ್ನದ ವಿಗ್ರಹವ ಮಾಡಿಸಿ ದೇವಾಲಯದಲ್ಲಿಟ್ಟಿದ್ದಾರೆ;
ಪದ್ಮದಳವನ್ನು ಹಿಡಿದ ಸನ್ಯಾಸಿಗೆ
ಕಂಚಿನ ಪ್ರತಿಮೆ ಪ್ರತಿಷ್ಠಾನವಾಗಿದೆ!

ಕಲ್ಲಿನಲ್ಲಿ ಅರಳಿದ ತಾವರೆಯ ಮೊಗ್ಗಂತೆ
ಅರಳುವ ಅವನ ಮೊಗಕ್ಕೆ ಒಂದಿಷ್ಟು ಕರಿಮಸಿ ಹಚ್ಚಿಬಿಟ್ಟಿದ್ದಾರೆ;
ನಿಲ್ಲಿಸಿ,ಕುಳ್ಳಿಸಿ,ಏರಿಸಿ,ಬಾರಿಸಿ ಎಳೆದಾಡಿ
ಆ ಗುಡ್ಡದಿಂದ ಈ ಗುಡ್ಡಕ್ಕೆ
ಆ ದೂರದ ಕಣಿವೆಯಿಂದ
ಇಲ್ಲೆಲ್ಲೋ ಶಿಖರಕ್ಕೆ ಉಳಿ ಬಿದ್ದ ಕಲ್ಲುಗಳ ನಿಲ್ಲಿಸಿಬಿಡುತಿದ್ದಾರೆ!
ಇದ್ದನೊಬ್ಬ ಬುದ್ಧ
ಎನ್ನುವ ‘ಹುಂ-ಕಾರಕ್ಕೆ ‘ ತಂದು
ಒಳಗೆ ಒಳಗೆ ದೇವಾಲಯದ ಗರ್ಭಗುಡಿಯಲ್ಲಿ
ಹಾಸಿಗೆಯ ಹಾಕಿ ಮಲಗಿಸಿಬಿಟ್ಟಿದ್ದಾರೆ;
ಅವನೆಂದೂ ಎಚ್ಚರವಾಗದಂತೆ!
೩. ಸಾಗರಕ್ಕೆ ನಾನು ಹೋಗಲಾರೆ!
ಅಲ್ಲಿ ಇವೆಯಂತೆ ಕಾಣದ ಕಾಣಲಾಗದ
ಗೋಚರ ಅಗೋಚರವಾದ
ಪ್ರಾಣಿ ಪಕ್ಷಿಗಳಂತೆ!
ಅಲ್ಲಿಗೆ ನಾನು ಹೋಗಲಾರೆ
ನೋಡಲಾರೆ ಯಾರೂ ಇಲ್ಲದ
ಪ್ರೀತಿಯೆ ಮಾಡದೆ ದ್ವೇಷದ ಗೂಡಿಗೆ
ಆ ಸಾಗರಕ್ಕೆ ನಾನು ಹೋಗಲಾರೆ!
ಅಲ್ಲಿ ಯಾರೂ ಮನುಷ್ಯರಲ್ಲವಂತೆ;
ಕಣ್ಣು, ಮೂಗು, ನಾಲಿಗೆಯೆ ಇಲ್ಲವಂತೆ
ಸಿಕ್ಕವರ ಸಾಯಿಸಿ, ನೋಯಿಸಿ ಸಮಾಧಿಯ
ಕಟ್ಟುತ್ತಾರಂತೆ!
ಹೋಗಲಾರೆ ನಾನು ಅಂತ ಆ ಸಾಗರಕ್ಕೆ
ಹೋಗಲಾರೆ.

ತುಳಸಿಗಿಡಗಳ ನೆಟ್ಟು ಸಮಾಧಿಯ
ಮುಂದೆ ಅಳುತ್ತಾರಂತೆ, ನಗುತ್ತಾರಂತೆ
ಕೊರಳಿನ ನರಗಳ ಬಡಿದು ಹಾಡಿ ಕುಣಿದು
ಸಾಗರದ ಉಪ್ಪು ನೀರನೆಲ್ಲ ಕುಡಿದು
ಉಗಿಯುತ್ತಾರಂತೆ!
ಇನ್ನು ಹೋಗಲಾರೆ ನಾನು ಆ ಸಾಗರಕ್ಕೆ!
೪. ‘ಗಾಂಧೀಯ ಕನ್ನಡಕ’
ಈಗೀಗ ಗಾಂಧೀಯ ಕನ್ನಡಕವನ್ನು
ಎಲ್ಲರೂ ಹಾಕಿಕೊಂಡಿದ್ದಾರೆ;
ಬ್ಯಾನರ್,ಪೋಸ್ಟರ್, ಟಿವಿ ರೇಡಿಯೋ
ಎಲ್ಲೆಲ್ಲಿಯೂ ಗಾಂಧೀಯ ಕನ್ನಡಕವೇ!
ಜಯಂತಿಯ ದಿನವಂತೂ ತಾವೇ
ಧರಿಸಿಕೊಂಡು ಗಾಂಧೀ ಕೋಲು,
ಗಾಂಧೀ ಟೊಪ್ಪಿ , ಗಾಂಧೀ ಚರಕ
ಎಂದೆಲ್ಲ ಹಾಕಿಕೊಂಡು ಓಡಾಡುವವರೆ ಹೆಚ್ಚು!
ಪಾಚಿಕಟ್ಟಿದ ಕಣ್ಣುಗಳಲ್ಲಿ ಗಾಂಧೀಯ
ಕನ್ನಡಕವು ಕೂಡ ಬಣ್ಣ ಬಣ್ಣ!
ಕೊಳೆಯ ಮನಸ್ಸಿನ ಮೃಗಗಳೆಲ್ಲ
ಗಾಂಧೀಯ ಟೊಪ್ಪಿಯನೇರಿಸಿಕೊಂಡು;
ಇದು ಚರಕ, ಅದು ಚಪ್ಪಲಿ ಇತ್ಯಾದಿ ಇತ್ಯಾದಿ
ಗೋಡೆಗೆ ಮೊಳೆಯೊಡೆದ ಪೋಟೋ
ನೇತು ಹಾಕಿ!
ಇಲ್ಲೆಲ್ಲೋ ಹೋಗುತಿದ್ದಾರೆ!

ಕಾಮಲೆ ಕಣ್ಣುಗಳಲ್ಲಿ ಗಾಂಧೀಯ ಕನ್ನಡಕವೂ
ಸುಳ್ಳು-ಸುಳ್ಳು!
ಗಾಂಧೀಯಿದ್ದನೆಂಬುದು ಕೂಡ ಸುಳ್ಳು
ಎಂಬೆಲ್ಲ ಡಂಗುರ ಹಾಕಿಸುವ ಮತ್ತೊಬ್ಬ ರಾಜ!
ಇನ್ನೊಬ್ಬ ರಾಜ ರಸ್ತೆಯ ಬದಿಗಳಲ್ಲಿ
ಮಾರುಕಟ್ಟೆಗಳಲ್ಲಿ ಗಾಂಧೀ ಚಿತ್ರವನ್ನಿಟ್ಟು
ಬೆಂಕಿ ಹಚ್ಚಿಸುವ ತರಾತುರಿ!
ನಿತ್ಯಪುಷ್ಪದ ಗಾಂಧೀ ಕಣ್ಣುಗಳಿಗೆ
ಸ್ವಚ್ಛ ಸ್ವಚ್ಛವೆಂದು ಅಸ್ವಚ್ಛತೆಯ ಕಾಣಿಸುವ
ಹುನ್ನಾರ!
ಗಾಂಧೀ ಅಲ್ಲೆಲೋ ಕನ್ನಡಕವ ಯಾರಿಗೋ
ಕೊಟ್ಟು ನೋಡುತಿದ್ದಾನೆ
ಕಾಣುವ ಕಣ್ಣುಗಳ!
೫. ‘ರಾಮಕ್ಕ ಮತ್ತು ಸಾಪ್ಟ್ ವೇರ್ ಗಂಡ’
ಮೊನ್ನೆ ಮೆಟ್ರೋದಲ್ಲಿ ಹಠಾತ್ತನೆ
ನಮ್ಮೂರಿನ ರಾಮಕ್ಕ ಸಿಕ್ಕಳು;
ಏನೋ ಗಡಿಬಿಡಿಯಲ್ಲಿ ಮೆಟ್ರೋ ರೈಲು ಹತ್ತಿ
ಎಲ್ಲೂ ಸೀಟಿಲ್ಲದ್ದನ್ನು ಕಂಡು ನಿಟ್ಟುಸಿರು ಬಿಟ್ಟು
ಅಡ್ಡಕಂಬಿಯ ಹಿಡಿದು ನಿಂತಳು.
ದೂರದಲ್ಲಿಯೇ ನೋಡಿದ ನಾನು
ಯಾವುದೋ ಪರಿಚಯದ ಮುಖವಂತೆ
ಕಾಣಿತಿದ್ದೆಯಲ್ಲ, ಎಂದೆಲ್ಲ ಇಣುಕಿದೆ!
ಗೋಚರ ಅಗೋಚರದ ನಡುವೆ ಅಷ್ಟು
ಸುಲಭವಾಗಿ ಗುರುತು ಹಚ್ಚುವುದು ಕಷ್ಟವಾಯಿತು!
ಅವಳ ಕೈಯಲ್ಲಿನ ತಾವರೆ ಹೂವಿನ ಹಚ್ಚೆ
ನೋಡಿದೆ! ಏಯ್ ಅವಳೆ ಎಂದು ದೂರದಲ್ಲಿಯೇ
‘ರಾಮಿ, ರಾಮಕ್ಕ’ ಎಂದು ಮುನ್ನುಗ್ಗತೊಡಗಿದೆ!

ಜನರ ತಿಕ್ಕಾಟದ ನಡುವೆ ಕೇಳಿಸಿತೋ ಏನೋ
ಮುಂದಿನ ನಿಲ್ದಾಣದಲ್ಲಿ ಇಳಿಯಲು ತಯಾರಾದಳು,
ಮತ್ತೆ ‘ರಾಮಿ’ ಎನ್ನುತಲೇ ನಾಲಿಗೆಯ ಅರ್ಧ ಕಚ್ಚಿಕೊಂಡೆ! ನೋಡಲಿಲ್ಲ ಅವಳು.
ಮೆಟ್ರೋ ಇಳಿದವಳು ದಢಬಢನೆ ಹೊರಟೆಬಿಟ್ಟಳು
ಕೈಯಲ್ಲಿ ಫೋನ್ ಹಿಡಿದುಕೊಂಡು ಏನೇನೋ
ಕೈ ಸನ್ನೆ ಬಾಯಸನ್ನೆಗಳ ಮಾಡಿಕೊಂಡು ನಿಂತಳು.
ಇದೆ ಸ್ಟಾಪ್ ನಲ್ಲಿ ಇಳಿದವನು ಅವಳ ಹಿಂಬಾಲಕನಂತೆ ಬಂದಿದ್ದು ತಿಳಿಯಿತೋ ಏನು?
ಮುಖವ ಮುಚ್ಚಿಕೊಂಡು ಕ್ಯಾಬ್ಗಾಗಿ
ಕಾಯುತ್ತ ನಿಂತಳು!
ಒಂದು ಕ್ಷಣ ಅವಳ ನೋಡಿದವನು ಮೂರ್ಛೆ
ಹೋದವನಂತೆ ಅವಳ ಬಾಲ್ಯವ ನೆನಪಿಸಿಕೊಂಡೆ;
ಜೋಡುಜಡೆಗಳ ಕಟ್ಟಿಕೊಂಡು
ಲಂಗ ಧಾವಣಿಯನುಟ್ಟು
ಮುಖದ ತುಂಬಾ ಕುಂಕುಮ ಅರಿಸಣವ
ಬಳಿದುಕೊಂಡು, ಒಂದಿಷ್ಟು ಪೌಂಡರ್ ಅದ್ಯಾವುದೋ ಸ್ನೋ ಹಾಕಿಕೊಂಡು ಬರುತಿದ್ದವಳು ಇವಳಯೇ ಅನಿಸಿತು!.
‘ಅಲೇ! ನಮ್ಮ ರಾಮಕ್ಕ ಅಲ್ವಾ ನೀವು’ ಅಂದೆ.
ನೋಡಿದವಳು ನೋಡದಯೆ ಮತ್ಯಾವುದೋ
ಯೋಚನೆಯಲ್ಲಿ ನಿಂತಳು.
ಇನ್ನು ಕ್ಯಾಬ್ ಬರುವುದು ತಡವಾಗುವುದೆಂದು
ತಿಳಿದು, ಹಾಳಾದ ಆಟೋಗಳು ಕೂಡಾ
ಸಿಗಲಿಲ್ಲವೆಂದುಕೊಂಡೋ ಏನೋ ವಲ್ಲದ ಮಾತಿನಿಂದ.
‘ಅರೆ! ನೀವು ‘ಎಂದಳಷ್ಟೆ.
ಮತ್ತೆ ಸಿಗುವೆನೆಂದು ಹೊರಟು ನಿಂತಳು,
‘ಅಲಾ ರಾಮಕ್ಕ ಸುಮಾರು ವರ್ಷಗಳೆ
ಕಳೆದಿವೆ, ನಾವೆಲ್ಲ ಒಂದೆ ಕ್ಲಾಸ್ ನಲ್ಲಿ
ಎಷ್ಟೆಲ್ಲಾ ಹರಟೆ, ವ್ಯಂಗ್ಯ ಹಾಸ್ಯ
ಗುದ್ದಾಟ, ಜಗಳವೆಲ್ಲ ಆಡಿದೆವಲ್ಲ!
ಶಿಂಷಾನದಿಯಲ್ಲಿ ಬಿದ್ದು ನೀರು ಕುಡಿದವನಿಗೆ
ಈಜಾಡಿಸಿ ಬದುಕಿಸಿದ್ದು ಮರೆತು ಹೋದ್ಯಾ?
ತೊರೆಯಲ್ಲಿ ಅಜ್ಜಿಯ ಹರಿದ ಸೀರೆಯ ಕಟ್ಟಿ
ಮೀನುಗಳ ಹಿಡಿದು ಬೇಯಿಸಿ ತಿಂದಿದ್ದು
ಗಮನವಿಲ್ಲವೇ?
ಮೋಟಣ್ಣನ ಬಾಳೆತೋಟದಲ್ಲಿ ಸೀಬೆಕಾಯಿಗಳ
ಕದ್ದು ಇಬ್ಬರೂ ಊರ ಮುಂದೆ ನಿಂತಿದ್ದು
ಇನ್ನೂ ನೆನಪು ಬರಲಿಲ್ಲವೇ ಎಂದೆ?
ಸಪ್ಪಗಾದಳು, ಮುಖವ ಮುಚ್ಚಿಕೊಂಡಳು.
ಏನೇನೋ ಓದಿದಿಯಂತೆ ?
ಗಂಡನಿಗೆ ತಿಂಗಳಾದರೆ ಲಕ್ಷಾಂತರ ಸಂಬಳವಂತೆ!
‘ರಾಣಿ ಕಣೆ, ನೀನು ರಾಣಿ’ ಎಂದೆ.

ನನ್ನ ರಬ್ಬರ್, ಪೆನ್ಸಿಲ್, ಬಣ್ಣಬಣ್ಣದ ಪೇನ್ಗಳ
ಕದ್ದು ಮನೆಗೆ ಒಯ್ದೆಯಲ್ಲ ಅವೆಲ್ಲ ಇನ್ನು ಇವೆಯೇನೆ?
ಎಂದೆಲ್ಲ ಮಾತನಾಡಿದರೂ ಅವಳು ಒಂದು ತುಟಿಕ್ ಪುಟಿಕ್ ಅನ್ನಲಿಲ್ಲ.
ಮುಖದ ತುಂಬಾ ಬೇಸರವೇ ತುಂಬಿಕೊಂಡಿತ್ತು!
ಕೈ ತುಂಬಾ ಬರೆಗಳು, ನಿದ್ದೆಯಿಲ್ಲದ ಕಣ್ಣುಗಳು.
ಏನಾಯಿತೆ ಎಂದೆ.
ಅವನು ಸರಿಯಿಲ್ಲ ಅಂದಳು.
ಡೈವರ್ಸ್ ಅಂತೈನೆ ಎಂದೆ
‘ಹು’ ಎಂದು ತನ್ನ ಕೈಗಳ ಮುಂದೆ ತಂದಳು
ಅಲ್ಲಲ್ಲಿ ಸಿಗರೇಟಿನಿಂದ ಸುಟ್ಟ ಚರ್ಮದ ಕಲೆಗಳು
ಕೊರಳಲ್ಲಿ ನರಭಕ್ಷನಂತೆ ಕಚ್ಚಿದ ಹಲ್ಲಿನ
ನಂಜುಗಳು.
‘ಅವನೊಬ್ಬ ಗಂಡನೇನೋ ಷಂಡ’ ಎಂದಳು.
ನಾನು ಒಂದು ಕ್ಷಣ ಚಕಿತನಾದೆ!
ಹೂವಿನಂತೆ ಮುದುಡಿಕೊಂಡಳು
ಇನ್ನು ಏನೇನೋ ಹೇಳಬೇಕೆಂದು ಹೊರಟವಳಿಗೆ
ಕ್ಯಾಬ್ ಬಂದು ಮುಂದೆ ನಿಂತಿತು.
ಮತ್ತೆ ಸಿಗುವೆನೆಂದಳು ಹೋಗಲಾರದ
ನಡೆಯಲಾರದ ಬದುಕಿನಿಂದ!
೬. ರೂಮಿ ನಿನ್ನಂತೆ ಕುಡಿಯುವುದನ್ನು ಕಲಿಸು!
ಓ! ರೂಮಿ ನಿನ್ನಂತೆ
ನಿನ್ನಂತೆ ಕುಡಿಯುವುದನ್ನು ಕಲಿಸು!
ಈ ಪ್ರಪಂಚವೇ ದುಃಖಮಯ
ಅದೇಗೆ ನೀನು ಪ್ರೀತಿಸುವುದನ್ನು ಕಲಿತೆ?
ಈ ಬದುಕೆ ಒಂದಲ್ಲ ಒಂದು ರೀತಿಯ
ಅತೃಪ್ತಿ, ಅದೇಗೆ ತೃಪ್ತನಾಗಿ ಬದುಕನ್ನೆ ಕುಡಿದೆ?

ಬಾನು, ನೆಲ ಕಲ್ಲು ಮರದ ಬುಡ್ಡೆಗಳೆಲ್ಲವನ್ನು
ಅದೇಗೆ ಪ್ರೀತಿಸತೊಡಗಿದೆ?
ಸುಡುವ ಜ್ವಾಲ ಚೆಂಡುಗಳ ಹಿಡಿದು
ಅದೇಗೆ ಪ್ರೀತಿಯ ಸಮುದ್ರವ ಉಣ್ಣಿಸಿದೆ?
ಕಾಣದ ಹೆಗ್ಗಾಡಿನ ಕತ್ತಲಲ್ಲಿ ಪ್ರೀತಿಯೆಂಬ
ಬೀಜರಸವ ಅದೇಗೆ ಬಿತ್ತಿದೆ?
ಕ್ರೂರ, ನಿಷ್ಟುರವಾದಿಗಳಿಗೆ ಶಾಂತಿರಸವ
ಅದೇಗೆ ಕುಡಿಸಿದೆ ?
ರೂಮಿ!
ನಿನ್ನಂತೆ ನನಗೂ ಪ್ರೀತಿರಸವ ಕುಡಿಯುವುದನ್ನು






These are lovely poems. I liked the first one especially … it has got such movement …
Congrats!