
-ಸೂರಿ
ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 7
ಮಂಗಳವಾರ ಅಶೋಕಾ ಟಾಕೀಸಿನ ಕಡೆಯಿಂದ ಮಂಡೀಪೇಟೆ ರಸ್ತೆಯನ್ನು ಹೊಕ್ಕು, ಒಂದೆರಡು ಫರ್ಲಾಂಗು ನಡೆದು ಬಲಕ್ಕಿರುವ ನಲವತ್ತು ಅಡಿ ರಸ್ತೆಯಲ್ಲಿ, ಎಡಕ್ಕಿರುವ ಕೋದಂಡರಾಮ ದೇವಸ್ಧಾನವನ್ನು ದಾಟಿ, ಚಾಮರಾಜ ಸರ್ಕಲ್ಗೂ ಒಂದು ನೂರು ಹೆಜ್ಜೆ ಮೊದಲು ಎಡಕ್ಕೆ ನೋಡಿದಲ್ಲಿ ‘ಟಿಪ್ಟಾಪ್ ಟೈಲರ್ಸ್. ಪ್ರೊ: ತುಕ್ಕೋಜಿ‘ ಎನ್ನುವ ಬೋರ್ಡು ಕಣ್ಣಿಗೆ ಬೀಳುತ್ತದೆ.
ಎರಡು ಅಂಗಡಿಗಳ ನಡುವಿನ ಒಂದು ಸಣ್ಣ ಸಂದಿಯ ತಲೆಭಾಗದಲ್ಲಿ ತೋರಣದಂತೆ ಈ ಬೋರ್ಡಿದೆ. ಇಕ್ಕೆಲಗಳಲ್ಲೂ ಕವಿದು ನಿಂತಿರುವ ಕಟ್ಟಡಗಳ ನಡುವೆ ಮೈ ಚೆಲ್ಲಿ ಬಿದ್ದಿರುವ ಈ ಸಂದಿಯನ್ನು ಹೊಕ್ಕಲ್ಲಿ ಥಣ್ಣಗಿನ ಬೇರೊಂದು ಲೋಕವನ್ನೇ ಹೊಕ್ಕಂತೆ ಅನುಭವವಾಗುತ್ತದೆ. ಈ ಸಂದಿಯಲ್ಲಿ ಸುಮಾರು ಹತ್ತು ಹದಿನೈದು ಅಡಿ ಹೆಜ್ಜೆ ಹಾಕಿದಲ್ಲಿ, ಕತ್ತಲ ಕೂಪಕ್ಕೆ ಮುನ್ನುಡಿಯಂತಿರುವ ಅರೆಮುರಿದ ಒಂದು ಬಾಗಿಲು.
ಬಾಗಿಲನ್ನು ಹೊಕ್ಕಂತೇ ಮೆಟ್ಟಿಲುಗಳ ಸಾಲು. ಮೊದಲ ಎರಡು ಮೆಟ್ಟಿಲುಗಳು ಮಾತ್ರ ಮಂಕಾದ ಬೆಳಕಿನಲ್ಲಿವೆ. ಒಂದರ ಮೇಲೊಂದು ಮುಗಿ ಬೀಳಲು ಹಾತೊರೆಯುತ್ತಿರುವಂತಿರುವ ನಂತರದ ಹದಿಮೂರು ಮೆಟ್ಟಿಲುಗಳು ಸದಾ ಕಾಲ ಮುಸುಕಿದೀ ಮಬ್ಬಿನಲಿ ಹತ್ತುವವರಿಗೆ ತೊಡರುಗಾಲನ್ನಿಕ್ಕುತ್ತಾ ಬಿದ್ದಿವೆ. ಪಕ್ಕದ ಗೋಡೆಯನ್ನು ಕೈಯ್ಯಲ್ಲಿ ಸವರುತ್ತಾ, ಕೈ-ಕಾಲು-ಸೊಂಟ ಇತ್ಯಾದಿಗಳ ಆಸೆಯನ್ನು ಸದ್ಯಕ್ಕೆ ಕೈಬಿಟ್ಟು, ಆ ಇಕ್ಕಟ್ಟಾದ ಮೆಟ್ಟಿಲುಗಳನ್ನು ಏರಿ, ಕೊನೆಯ ಮೆಟ್ಟಿಲನ್ನು ಮುಟ್ಟಿದ ಕೂಡಲೇ ಬಲಕ್ಕೆ ತಿರುಗಿದಲ್ಲಿ ಒಂದು ಪುಟ್ಟ ಬಾಗಿಲು.
ವ್ಯವಹಾರದ ಸಮಯದಲ್ಲಿ ಸದಾ ಆಕಳಿಸುತ್ತಲೇ ಇರುವ ಆ ಬಾಗಿಲನ್ನು ಹೊಕ್ಕಲ್ಲಿ ಮತ್ತೊಂದು ಹೊಸ ಲೋಕವನ್ನು ಹೊಕ್ಕಂತೆ.
ಹಳೇಬೀಡು ಸುಂದರರಾಯರು ಪ್ರಸ್ತುತ ತಮ್ಮ ಪಾಲಿನ ವೈಕುಂಠದ ಬಾಗಿಲೊಳಗೆ ತಲೆಯಿಕ್ಕುತ್ತಿದ್ದಂತೇ ಹೊಸ ಬಟ್ಟೆ, ಬಟ್ಟೆಗೆ ಹಾಕಿದ ಗಂಜಿಯ ವಾಸನೆ ಮೂಗು ತುಂಬಿತು. ಗಳಿಗೆ ಬಿಟ್ಟು, ಗಳಿಗೆ ಓಡುವ ಹೊಲಿಗೆ ಯಂತ್ರದ ಸದ್ದಿನಿಂದ ಕಿವಿ ಕೆಪ್ಪಾಯಿತು.
ಒಳಗೆ ಇಡೀ ದೇಹವನ್ನು ಉಬ್ಬೆಗೆ ಹಾಕುವಂತಿದ್ದ ಸೆಖೆಯಿದ್ದರೂ, ಸದ್ಯದ ಮನಸ್ಥಿತಿಯಲ್ಲಿ ಹಳೇಬೀಡು ಸುಂದರರಾಯರಿಗೆ ಅದ್ಯಾವುದರ ಪರಿವೆಯೂ ಇರಲಿಲ್ಲ. ಪ್ರವೇಶಕ್ಕೊಂದು ಮುಹೂರ್ತವನ್ನು ಕಾಯುತ್ತಾ ಕೈಲೊಂದು ಚೀಲ ಹಿಡಿದು ಬಾಗಿಲಂಚಿನಲ್ಲೇ ನಿಂತಿದ್ದರು. ನಿಂತಲ್ಲೇ ಕೋಣೆಯಲ್ಲಿನ ಸಕಲ ಸಚರಾಚರ ವಸ್ತುಗಳನ್ನು ಅಳತೆ ಮಾಡಿದರು. ಗೋಡೆಯಿಂದ ಗೋಡೆಗೆ ಕಟ್ಟಿರುವ ಒಂದು ಹಗ್ಗದ ಮೇಲೆ ನೇತಾಡುತ್ತಿರುವ ಒಂದು ರಾಶಿ ತಯಾರಾದ ಬಟ್ಟೆಗಳು.
ಈ ಕಡೆ ಒಂದು ಗಾಜಿನ ಕಪಾಟಿನಲ್ಲಿ ಸಾಲಾಗಿ ಜೋಡಿಸಿದ ಒಂದಿಷ್ಟು ಹ್ಯಾಂಗರುಗಳಿಗೆ ನೇತುಬಿದ್ದ ಒಂದಿಷ್ಟು ಅಂಗಿಗಳು, ಅಳ್ಳಕವಾದ ಮೊಲೆಯುಬ್ಬಿಸಿ ನಿಂತ ಒಂದಿಷ್ಟು ಕುಪ್ಪಸಗಳು, ಒಂದೈದಾರು ಪ್ಯಾಂಟುಗಳು. ಆಕಡೆಯ ಗೋಡೆಯ ಕಿಟಿಕಿಯ ಒಂದು ಪಕ್ಕ ನಿಂತ ಒಂದು ದೊಡ್ಡ ಮರದ ಮೇಜಿನ ಮೇಲೆ ಅರೆ ಕತ್ತರಿಸಿದ ಬಟ್ಟೆಗಳ ರಾಶಿ. ಕಿಟಿಕಿಯ ಇನ್ನೊಂದು ಪಕ್ಕ ಹೊಲಿಗೆ ಯಂತ್ರದಲ್ಲಿ ತಲೆಯನ್ನು ಕೀಲಿಸಿ ಕುಳಿತಿದ್ದ ತುಕ್ಕೋಜಿ. ಹಳೇಬೀಡು ಸುಂದರರಾಯರು ಕೂಡಲೇ ಒಳಗೆ ಕಾಲಿಡಲಿಲ್ಲ. ಯಾವ ಗಳಿಗೆಯಲ್ಲಿ ಒಳ ಹೋಗುವುದು, ಈಗ ಹೋದರೆ ಒಳ್ಳೆಯದೋ, ಕ್ಷಣ ತಡೆದು ಹೋದರೆ ಒಳ್ಳೆಯದೋ, ಆತ ತಲೆಯೆತ್ತಿ ತನ್ನ ಕಡೆ ನೋಡುವವರೆಗೂ ಕಾಯುವುದೋ, ತಾನೇ ಆತನನ್ನು ಕರೆಯಲೋ ಇತ್ಯಾದಿ ಯೋಚಿಸುತ್ತಾ ಹಾಗೇ ಬಾಗಿಲಿಗೆ ಅಂಟಿ ನಿಂತರು.
ತುಕ್ಕೋಜಿ ಯಂತ್ರವನ್ನು ನಿಲ್ಲಿಸಿ, ಬಟ್ಟೆಯನ್ನು ಕೊಂಚ ಈಚೆ ಎಳೆದು ದಾರವನ್ನು ಕತ್ತರಿಯಿಂದ ಕತ್ತರಿಸುತ್ತಾ, ಕತ್ತರಿಸಿದ ನಂತರ ಬಟ್ಟೆಯನ್ನು ತಿರುಗಿಸಿ ಹೊಲಿಗೆ ಯಂತ್ರದ ಸೂಜಿಯ ಕೆಳಗೆ ಅಣಿ ಮಾಡುತ್ತಾ ಮತ್ತೆ ತನ್ನ ಕೆಲಸ ಆರಂಭಿಸಿದ. ಹೊಲಿಗೆ ಯಂತ್ರ ಮತ್ತೆ ಭರ್ರೋ ಎನ್ನ ತೊಡಗಿತು. ಹೊಲಿಗೆ ಯಂತ್ರದ ಶಬ್ದ ನಿಂತ ಒಂದರೆಗಳಿಗೆಯಲ್ಲಿ ತುಕ್ಕೋಜಿ ಏನೋ ಗೊಳಗೊಳ ಗೊಣಗಿದ್ದು ಹಳೇಬೀಡು ಸುಂದರರಾಯರ ಕಿವಿಗೆ ಬಿತ್ತು.
ಮುಂದುವರೆಯುವುದು….
Like this:
Like Loading...
Related
0 Comments