ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರಿ -6:ಹೊರಗಡೆ ಹೊತ್ತು ಕಂತುತ್ತಿತ್ತು…

-ಸೂರಿ

ಸೂರಿ ಕಾದಂಬರಿಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 6

 

ಕಿಟಿಕಿ ಎನ್ನುವ ಹೆಸರಿನ ಆ ಕಿಂಡಿಯಿಂದ ತೂರಿ ಬರುತ್ತಿದ್ದ ಆ ಮಧ್ಯಾಹ್ನದ ಬೆಳಕಿನಲ್ಲೂ ಕೋಟಿನ ರೂಪುರೇಷೆಗಳು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಹಾಗೇ ಆ ಕೋಟನ್ನು ಪ್ರೀತಿಯಿಂದ ಎದೆಗೆ ಅವಚಿ, ಮನೆಯಿಂದ ಹೊರಗೆ ಬಂದು ಕೋಟನ್ನು ಬಿಚ್ಚಿ ನೋಡಿದರು. ಕಬ್ಬಿಣದ ನೂರು ಮೊಳೆಗಳು ಒಮ್ಮಿಗಿಲೇ ಎದೆಗೆ ಚುಚ್ಚಿದಂತಾಯಿತು. ಚುಚ್ಚಿದ್ದಕ್ಕೆ ರವ್ವನೆ ಚೀರಿದರು. ಚೀರಿದ್ದಕ್ಕೆ ಕಣ್ಣು ಕತ್ತಲಾಯಿತು. ಕತ್ತಲಾಗಿದ್ದಕ್ಕೆ ಉಸಿರಾಟ ಘಕ್ಕನೆ ನಿಂತಂತಾಯಿತು. ಕ್ಷಣ ಸಂಭಾಳಿಸಿಕೊಂಡು, ತಮ್ಮ ದೇಹದ ಎಲ್ಲಾ ಅಂಗಾಂಗಗಳನ್ನೂ ಹಿಂದಿನ ಸ್ಥಿತಿಗೆ ತಂದುಕೊಂಡು, ಕೋಟನ್ನೇ ದಿಟ್ಟಿಸಿ ನೋಡಿದರು.
ಯಾವ ಮಡಿಕೆಯಲ್ಲಿ ಕೋಟು ಹಿಂದಾಗಿ ಮುರಿದುಕೊಂಡಿತ್ತೋ ಆ ಮಡಿಕೆಯಿಂದ ಕೆಳಗೆ ಕಪ್ಪು ಎದ್ದು ತೋರುತ್ತಿದ್ದರೂ, ಮಡಿಕೆಯಿಂದ ಮೇಲೆ ಕಪ್ಪು ಬಣ್ಣ ಮಾಸಲಾಗಿ ಬೂದು ಬಣ್ಣಕ್ಕೆ ತಿರುಗಿತ್ತು. ಥಟ್ಟನೇ ನೋಡಿದಲ್ಲಿ ಎರಡು ಬಣ್ಣದ ಬಟ್ಟೆಗಳನ್ನು ಸೇರಿಸಿ ಒಂದು ಕೋಟನ್ನು ಹೊಲೆದಂತಿತ್ತು. ಒಂದೆರಡು ಗುಂಡಿಗಳು ಕಳಚಿಕೊಂಡು ಒಂದೋ ಎರಡೋ ದಾರದ ಎಳೆಗಳಿಗೆ ಅಂಟಿಕೊಂಡು ನೇತಾಡುತ್ತಿದ್ದವು. ಒಳಗಿನ ಪೈಪಿಂಗ್ ಬಟ್ಟೆ ಸಿಬಿರು ಸಿಬಿರಾಗಿತ್ತು.
ಬಲ ಭುಜದ ಹೊಲಿಗೆ ಪಿಸಿದು ಒಳಗಿನ ಬಿಳೀ ಬಟ್ಟೆ ಒಂದಿಷ್ಟು ಹೊರಗೆ ಚಾಚಿಕೊಂಡಿತ್ತು.  ಒಂದರೆಡು ನಿಮಿಷಗಳು ಹಳೇಬೀಡು ಸುಂದರರಾಯರಿಗೆ ಏನೂ ಮಾಡಲು ತೋಚಲಿಲ್ಲ. ಮನೆಯ ಬಾಗಿಲ ಹೊರಗೇ ನಿಂತು ಆ ಕೋಟನ್ನೇ ದಿಟ್ಟಿಸುತ್ತಿದ್ದರು. ಪರಿಸ್ಥಿತಿಯ ಭೀಕರತೆ ನಿಧಾನವಾಗಿ ಅರಿವಿನೊಳಗೆ ಇಳಿಯುತಿತ್ತು. ಭಾರವಾದ ಹೃದಯದಿಂದ ಕೋಟನ್ನು ಎದೆಗೆ ಅವಚಿಕೊಂಡು ಮನೆಯೊಳಗೆ ನಡೆದರು.
ಮತ್ತೆ ಟ್ರಂಕಿನ ಮುಂದೆ ಕುಳಿತು ಕೋಟನ್ನು ತೊಡೆಯ ಮೇಲಿಟ್ಟು ಕೊಂಡು, ಮೂರ್ಛೆ ಬಿದ್ದ ಅನುಜ ಲಕ್ಷ್ಮಣನನ್ನು ಶ್ರೀರಾಮಚಂದ್ರ ತುಂಬಿದ ಕಂಗಳಿಂದ ದಿಟ್ಟಿಸಿನೋಡುವಂತೆ ನೋಡುತ್ತಾ ಕುಳಿತರು. ಮತ್ತೆ ಮತ್ತೆ ಕೋಟನ್ನು ಸವರಿದರು. ಸವರುತ್ತಾ ಸವರುತ್ತಾ ಒಂದು ಸಾರಿ ಕಿರುಬೆರಳು ಬಲ ಭುಜ ಹರಿದಿದ್ದ ಕಿಂಡಿಯೊಳಗೆ ಸೇರಿ ಥಟ್ಟನೆ ಇನ್ನೊಂದೆರಡು ಹೊಲಿಗೆಗಳು ಕಳಚಿ ಬಿಳಿಯ ಬಟ್ಟೆ ನಾಲಗೆ ಇನ್ನಷ್ಟು ಹೊರಚಾಚಿಕೊಂಡಿತು.
ಇನ್ನು ಸವರಿದರೆ ಕೋಟಿನ ತೋಳೇ ತಮ್ಮ ಕೈಗೆ ಬಂದು ಬಿಡಬಹುದೆಂಬ ಗಾಬರಿಯೊಂದಿಗೆ ಹಳೇಬೀಡು ಸುಂದರರಾಯರು ಕೋಟನ್ನು ನೆಲದ ಮೇಲಿಟ್ಟು, ಟ್ರಂಕಿನೊಳಗೆ ಸೇರಬೇಕಾಗಿದ್ದ ಸಾಮಾನುಗಳನ್ನು ಮತ್ತೆ ಸೇರಿಸತೊಡಗಿದರು. ಟ್ರಂಕು ತೆಗೆದಾಗ ಇದ್ದ ಉತ್ಸಾಹ ಈಗ ಬತ್ತಿ ಹೋಗಿತ್ತು. ಮನಸ್ಸು ಮುದುರಿಹೋಗಿತ್ತು. ಟ್ರಂಕನ್ನು ಮುಚ್ಚಿ ಹಾಗೇ ಸುಮ್ಮನೇ ಟ್ರಂಕಿನ ಮುಂದೆ ಕೂತರು. ಕೋಟು ನೆಲದ ಮೇಲೆ ಅವರ ಪಕ್ಕ ಪವಡಿಸಿತ್ತು. ಅದನ್ನು ಕಣ್ಣಿನಿಂದ ನೋಡಿದರೇ ಹೊರತು ಮುಟ್ಟಿ ನೋಡುವ ಧೈರ್ಯ ಮಾಡಲಿಲ್ಲ.
ನೋಡ ನೋಡುತ್ತಾ ಕಣ್ಣುಗಳಲ್ಲಿ ನೀರು ಹೆಪ್ಪುಗಟ್ಟಿತು. ಬಾಳಿನ ಇನ್ನುಳಿದ ಮೂವತ್ತಮೂರು ದಿನಗಳೂ ಕೋಟಿನ ಜೊತೆಗೇ ಹರಿದು ಹೋದಂತೆ ಅನಿಸಿತು. ಯೋಗಮುದ್ರೆಯಲ್ಲಿದ್ದಂತಿದ್ದ ಆ ಸ್ಥಿತಿಯಿಂದ ಹಳೇಬೀಡು ಸುಂದರರಾಯರು ಹೊರಬಂದಾಗ ಅದೆಷ್ಟು ಸಮಯ ಸರಿದಿತ್ತೋ ಏನೋ, ಹೊರಗಡೆ ಹೊತ್ತು ಕಂತುತ್ತಿತ್ತು.
ಮುಂದುವರೆಯುವುದು….

‍ಲೇಖಕರು avadhi

24 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading