-ಸುಶ್ರುತ ದೊಡ್ಡೇರಿ

ವಿಳಾಸವೇ ಬರೆದಿರದ ಪರಿಮಳದ
ಜಾಡು ಹಿಡಿದು ಬೆಟ್ಟವನ್ನೇರುತ್ತಿರುವ ತುಂಬಿಗೆ
ಹುಚ್ಚು ಭ್ರಮೆಯಿರಬೇಕು
ಹೂವು ಬೆಟ್ಟದ ಮೇಲೇ ಇರಬಹುದು
ಆಚೆ ತಪ್ಪಲಲ್ಲೂ ಇರಬಹುದು
ಇಲ್ಲದೆಯೂ ಇರಬಹುದು, ಅಥವಾ
ಅದರೊಡಲ ಮಧುಪಾತ್ರೆ ಈಗಾಗಲೇ
ಬರಿದಾಗಿರಬಹುದು.
ಪುಟ್ಟ ಪಾರದರ್ಶಕ ರೆಕ್ಕೆಗಳಿಗೆ
ಭ್ರಾಂತಿಯ ಎಣ್ಣೆ ಸವರಿರದಿದ್ದರೆ
ಹೇಗೆ ಬಂದೀತು ಬಳಲಿ ಬರದಂತೆ
ಬಡಿಯುವ ಕಸುವು?
ಮೆಚ್ಚುತ್ತೇನೆ-
‘ಅದು ಭ್ರಮೆಯೂ ಅಲ್ಲ, ಭ್ರಾಂತಿಯೂ ಅಲ್ಲ;
ಬರೀ ಪ್ರೀತಿ.. ಹೂವಿನ ಪರಿಮಳದೆಡೆಗಿನ ತುಂಬಿಯ
ಕನಸಿನ ರೀತಿ’ ಎಂದುತ್ತರಿಸುವ ನಿನ್ನ ಜಾಣ್ಮೆ.
ಆದರೆ-
ಸಿಗಲಿಲ್ಲ ಹಣ್ಣು ಎಂದಾಕ್ಷಣ
ದ್ರಾಕ್ಷಿ ಹುಳಿಯೆಂದ ನರಿಯಂತೆ ಹುಸಿ
ಬುದ್ದಿವಂತಿಕೆ ತೋರುವ ನಿನ್ನೀ ಮುಖ ನೋಡಿ
ಯಾಕೋ ಹೂವೇ ಮುಗ್ಧ ಅಂತ ನನಗನಿಸಿದರೆ,
ಕ್ಷಮಿಸು.
ಈಗಾಗಲೇ ಸಿಕ್ಕಾಪಟ್ಟೆ ಕುಡಿದಿದ್ದೀಯ,
ಇನ್ನೊಂದು ಲಾರ್ಜ್‌ಗೆ ಆರ್ಡರ್ ಮಾಡುವ ಮುನ್ನ
ಕೊಂಚ ಯೋಚಿಸು
ಸುಶ್ರುತನ ಮದ್ಯಸಾರ: ಇನ್ನೊಂದು ಲಾರ್ಜ್
ನಿಮಗೆ ಇವೂ ಇಷ್ಟವಾಗಬಹುದು…





0 Comments