
ವಿ. ಹರಿನಾಥ ಬಾಬು ಸಿರುಗುಪ್ಪ
ಸುರಿದಷ್ಟೂ ತುಂಬಿಕೊಳ್ಳುತ್ತದೆ
ಎದೆಯ ಬಟ್ಟಲು ನಶೆ ಏರಿದೆ
ತುಟಿಗೆ ಅಂಟಿದ ಮದಿರೆಯ ಹನಿ
ಅದೇಕೋ ರಕ್ತದ ಸವಿಯ ತೋರುತಿದೆ
ಮದಿರೆಯೊಡನೆ ಲೋಟದೊಳಗೆ ಬೆರೆತ ಪ್ರೀತಿ
ಚಪ್ಪರಿಸುತ್ತಿದೆ ಕಣ್ಣೀರಿನ ಒಂದೊಂದೇ ಗುಟುಕು

ಗಂಟಲು ದಾಟಿದ ಹುಳಿಹೆಂಡ
ದಹಿಸತೊಡಗಿತು ಎದೆಯ ನೆನಪಿನುರಿಯಲ್ಲಿ
ಪಾನಮತ್ತ ದೇಹ ನಿಶ್ಚಲ
ಮುಚ್ಚಿದ ಕಣ್ಣೊಳಗೆ ಚಿಟ್ಟೆಗಳ ಮಾರಣಹೋಮ
ಗಾಜಿನ ಲೋಟದಲ್ಲಿ ಎಲ್ಲವೂ ಗೋಚರ
ಸುತ್ತುವರಿದಿದೆ ಮನಸು ಲೋಹದ ಕೋಟೆ
ರಾತ್ರಿಯ ಜಾಮೊಳಗೆ ಮುಂಜಾನೆಯ ಸೂರ್ಯ
ಮನಸಿನ ತುಂಬಾ ಇರಿವ ಕನಸುಗಳು






0 Comments