ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸುಮ್ಮನಿರಿ ರಾತ್ರಿಗಳೇ….’ – ಭವ್ಯ ನವೀನ್ ಕವಿತೆ

ರಾತ್ರಿ ಪದ್ಯ 

– ಹೆಚ್. ಸಿ. ಭವ್ಯ ನವೀನ್

ಎಲ್ಲಿ ಹೋಗುತ್ತವೊ ಈ ರಾತ್ರಿಗಳು
ದಿನಾ ಬರುವ ಅದೇ ಸೂರ್ಯನಿಗೆ ಹೆದರಿ
ಉಳಿಯಬಾರದೇ ಒಮ್ಮೆ
 
ಜಮಾನದ ಅರ್ಧಂಬರ್ಧ
ಕನಸುಗಳೆಲ್ಲ ಪೂರ್ಣಗೊಳ್ಳಲಿ ಇಂದು
ನೆನಹುಗಳ ಕಹಿ ಅರಗಿಹೋಗಲಿ
ಮೈಥುನದ ಬವಳಿಕೆ
ನಾಳೆಗಳ ಚಡಪಡಿಕೆ
ನಿಧಾನ ನಿಂತುಹೋಗಲಿ
ಮತ್ತೆ ಆಗ ಮೆಲ್ಲಗೆ ಬೆಳಕಾಗಲಿ
ಈಗಂತೂ ಉಳಿದು ಹೋಗಲಿ ಈ ರಾತ್ರಿ
 
*
ಕುಡಿದ ಅಪ್ಪನಿಗೆ
ಬೇಸತ್ತ ಅಮ್ಮನಿಗೆ
ನಡೆದ ಹೆಸರಿಲ್ಲದ ಯುದ್ಧ
ಚಿಗಿತ ಮಗಳಿಗೆ ಗೊತ್ತು
ಗೋಡೆಗಳಿಗೆ ಕಿವಿಯಲ್ಲ
ನಾಲಿಗೆಗಳೂ ಇವೆ
ಬೇಡುತ್ತಾಳೆ ನೋಡು
ಕರಗದಿರಲಿ ರಾತ್ರಿ
ಆ ನಾಲಗೆಗೆ ಹೊಸರುಚಿ
ಸಿಗುವ ತನಕ
 
**
ಬೆಳಗುಗಳ ಮುಖವಾಡ
ಮಾಸಿಹೋಗಿದೆ
ಕತ್ತಲೆಯ ಬಣ್ಣಗಳೋ
ತೊಳೆದಷ್ಟೂ ಗಾಢ
‘ಒಣ ವ್ರಣಗಳಿಗಿಂತ ಕಪ್ಪು ಕಲೆಗಳಿಗಿಂತ
ಹಸೀ ಗಾಯವೇ ಇರಲಿ
ಉಳಿದು ಹೋಗಿ ರಾತ್ರಿಗಳೇ’
ಎನ್ನುತ್ತಾಳೆ ಆಕೆ
‘ಕಣ್ ಕುಕ್ಕುವ ಮೆಹಫಿಲ್ನೊಳಗೆ
ರಾತ್ರಿ ರಾಣಿಯ ದರ್ಬಾರು
ನಿತ್ಯ ಸಾಯುವ ಆ ಹಗಲುಗಳ
ಸ್ವರ್ಗದ ದಾಸಿಯಾಗಿದ್ದು ಸಾಕು
ನಾನಿನ್ನು ನರಕವನ್ನೇ ಆಳುತ್ತೇನೆ
ಉಳಿದುಕೊಳ್ಳಿ ರಾತ್ರಿಗಳೇ’
 
***
ಮಲಗಿದ್ದಾರೆ
ಮಲಗಲು ಬಿಡಿ
ಅವರೆದ್ದರೆ
ಹೊಟ್ಟೆ ಕರುಳುಗಳೂ ಎದ್ದು
ಹಾಡುತ್ತವೆ ಪದ ಗುಟುರ್ ಗುಟುರ್
ಮಲಗಲಿ ಬಿಡಿ
ಗಾಳಿಯೇ ಬಾಗಿಲ ಗುದ್ದಿದರೂ ಭಯ ಪಾಪ
ಬೆಳಗಾದರೆ ಶೆಟ್ಟಿ ಬರುತ್ತಾನೆ
ಬಾಡಿಗೆಗೆ
ಮಾರ್ವಾಡಿ ಬಡ್ಡಿಗೆ
ಅವರಿಗೆ ಕೊಡಲೂ ಅವನಲ್ಲಿ ಕಾರಣಗಳೂ ಇಲ್ಲ
ಹೋಗದಿರು ರಾತ್ರಿಯೇ
ಕಾಸಲ್ಲದಿದ್ದರೆ.. ಮಾತಾದರೂ
ಹುಡುಕಿಕೊಳ್ಳಲಿ
 
****
ಹೊಟ್ಟೆಯೊಳಗೆ ಲಾವಾರಸ
ತುಂಬಿಕೊಂಡ ಅಮ್ಮನಂಥಾ ಹೆಣ್ಣು
ತಲೆ ತುಂಬಾ ಜಗತ್ತಿಟ್ಟುಕೊಂಡ
ಅಪ್ಪನಾಗದ ಗಂಡ
ಸುಮ್ಮನಿರಿ ರಾತ್ರಿಗಳೇ
ಬೇಗೆಗಳ ಮೀರಿ ಬಯಕೆ
ಹೊತ್ತಿಕೊಳ್ಳಲಿ
ವೀರ್ಯ ಶೌರ್ಯ ತೋರಿ
ಕರುಳು ಟಿಸಿಲೊಡೆಯಲಿ
 
*****
ರಸ್ತೆ ಫುಟ್ಪಾತ್ಗಳು
ರೈಲ್ವೇ ಫ್ಲಾಟ್ಫಾರಂಗಳೂ
ಅಮ್ಮನಾಗಲಿ ಬಿಡಿ
ಕುಂಟುತ್ತಲೇ ಓಡುವ

ಬೇ-ರಂಗೀ ಜಗತ್ತಿನ
ಮಾಯಾಗೋಡೆ
ಇರಲಿ ಇನ್ನಷ್ಟು ಹೊತ್ತು
ಬೇಡುವ-ಆಯುವ-ಕಸಿಯುವ
ಹಾಲಾತೀ ಶೈತಾನರ
ಆತ್ಮ ನಿವೇದನೆಗೆ
ಅವಕಾಶ ಕೊಡಿ ರಾತ್ರಿಗಳೇ
ಜೇಬುಗಳ್ಳ ಕಣ್ಣುಗಳಿಗೆ
ಪ್ರೀತಿ ಕದಿಯುವ ಕನಸನಿಡಿ
ಇರಿ ಇನ್ನಷ್ಟು ಹೊತ್ತು
ಬೆಳಗಲಿ
ಕಪ್ಪು ಕಂಬಳಿಯ ತೂತು ತಾರೆಗಳು
 

‍ಲೇಖಕರು avadhi

23 February, 2013

12 Comments

  1. mmshaik

    very very nice..bhavya mam!!!

  2. pravara

    “ಸುಮ್ಮನಿರಿ ರಾತ್ರಿಗಳೇ” ಶಿರ್ಷಿಕೆಯೇ ಕವಿತೆಯತ್ತ ಹೊರಳಿಸುತ್ತದೆ….. ತುಂಬಾ ಗಾಢ ರಚನೆ…… ಇಷ್ಟವಾಯ್ತು,,,

  3. Manjula Narayanarao

    tumba chennagide

  4. Raghunandan K

    ಇಷ್ಟವಾಯಿತು…

  5. chalam

    ರಸ್ತೆ ಫುಟ್ಪಾತ್ಗಳು
    ರೈಲ್ವೇ ಫ್ಲಾಟ್ಫಾರಂಗಳೂ
    ಅಮ್ಮನಾಗಲಿ ಬಿಡಿ
    ನಿಮ್ಮ ಈ ರೀತಿಯ ಸಾಲುಗಳೇ ನಮ್ಮನ್ನು ತಬ್ಬಿಬ್ಬುಗೊಳಿಸುತ್ತವೆ.ದಯಮಾಡಿ ಎರಡು ದಿನಕ್ಕೆ ಒಂದು ಬಾರಿಯಾದರೂ ನಮ್ಮನ್ನು ಬೆಚ್ಚಿಸುವ ಕೆಲಸ ಮಾಡುತ್ತಿರಿ…….ಕವಿತೆ ಎಲ್ಲರಿಗೂ ದಕ್ಕುವಂತಹುದಲ್ಲ ಅಂತಾ ನನಗೆ ಪದೇ ಪದೇ ಯಾಕೆ ಹೇಳುತ್ತಿದ್ದರು ಅಂತ ಈ ಕವನ ಓದಿದ ಮೇಲೆ ಅರ್ಥವಾಯಿತು.ಥ್ಯಾಂಕ್ಸ್ ಭವ್ಯ…..

  6. shanthi k.a.

    tumba chennaagide.

  7. Babu ray

    Thumba channagide………..

  8. -ರವಿ ಮೂರ್ನಾಡು

    ಅದೃಷ್ಥ ಬೇಕು ! ಒಳ್ಳೆಯ ಕವಿತೆ ಓದುವ ಓದುಗರಿಗೆ. ಅದೃಷ್ಥವಿಲ್ಲದಿದ್ದರೆ ಹುಡುಕಾಡಿದರೂ ಸಿಗುವುದಿಲ್ಲ .ಅದೇ ರೀತಿ ಒಳ್ಳೆಯ ಕವಿತೆ ಹುಡುಕಿಕೊಂಡು ಬರುವ ಅದೃಷ್ಥ ಕವಿಗೂ ಬೇಕು. ವರ್ಷಗಟ್ಟಲೆ ಕಾದರೂ ಸಿಗದಿರುವ ಅದೃಷ್ಟ ಹೀನರು ನಾವಾಗಬಹುದು.ಕವಿತೆ ಸುಖಾ ಸುಮ್ಮನೆ ಹುಟ್ಟುವುದಿಲ್ಲ. ಮತ್ತು ಅವು ಪ್ರಚಾರಕ್ಕೆ ಬರುವುದೂ ಇಲ್ಲ. ಅದರ ಧ್ವನಿ ಜೀವಂತವಾಗಿರುತ್ತವೆ. ಕೆಲವೊಮ್ಮೆ ಖ್ಯಾತ ನಾಮರ ಭರಾಟೆಯಲ್ಲಿ ಅತ್ಯುತ್ತಮ ಸಾಹಿತ್ಯವನ್ನು ಓದುವ ಅದೃಷ್ಟವನ್ನು ಓದುಗರು ಕಳೆದುಕೊಳ್ಳಬಹುದು. “ಸುಮ್ಮನಿರಿ ರಾತ್ರಿಗಳೆ ” ಅದ್ಬ್ದುತ ಪ್ರತಿಮೆಯ ಕವಿತೆ. ಓದಿಕೊಂಡ ನಾವೇ ಅದೃಷ್ಟವಂತರು. ಧನ್ಯವಾದಗಳು ಅವಧಿಗೆ ಮತ್ತು ಕವಯತ್ರಿಗೆ.

  9. ರೂಪ ಹಾಸನ

    ತುಂಬಾ ಒಳ್ಳೆಯ ಪದ್ಯ ಭವ್ಯ.
    ರೂಪ

  10. vasanthn

    Very good one.

  11. Prasad V Murthy

    ಮಾನ್ಯ ರವಿ ಮೂರ್ನಾಡರು ಹೇಳಿದಂತೆ ಒಳ್ಳೆಯ ಕವಿತೆ ಓದಲೂ ಅದೃಷ್ಟ ಬೇಕು. ಅದ್ಭುತ ಕವಿತೆಯೊಂದನ್ನು ಓದಿಸಿದ್ದೀರಿ. ಹರಿದು ಹಂಚಿ ಹೋದ ಜೀವನದ ಹಲವಾರು ಮುಖಗಳನ್ನು ಇಲ್ಲಿ ಆಯ್ದುಕೊಂಡಿದ್ದೇನೆ.
    ಕಾಸಲ್ಲದಿದ್ದರೆ.. ಮಾತಾದರೂ
    ಹುಡುಕಿಕೊಳ್ಳಲಿ
    ಈ ಪ್ರಯೋಗದಂಥ ಅನೇಕ ಕಾವ್ಯದ ಮುತ್ತುಗಳು ಸಿಕ್ಕವು ಇಲ್ಲಿ.
    – ಪ್ರಸಾದ್.ಡಿ.ವಿ.

  12. Bhavya

    Tumba Tumba Dhanyavadagalu… ellarigu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading