
ಮೂಲ : ರವೀಂದ್ರನಾಥ ಟ್ಯಾಗೋರ್

ಕನ್ನಡಕ್ಕೆ : ಸುಧಾ ಆಡುಕಳ
ಬರದ ನಾಡಿಗೆ ಬಂದ ಬುದ್ಧ
ಶ್ರಾವಸ್ತಿ ನಗರದಲಿ ಭೀಕರ ಬರ
ಬರದ ನಾಡಿಗೆ ನಡೆದು ಬಂದ ಬುದ್ಧ
ಗಾಳಿಯಲೆಯಲ್ಲಿಯೂ ಹಸಿವಿನದೇ ಸ್ವರ
ಗುರುವಿನ ಸುತ್ತ ನೆರೆಯಿತು ಜನ ಸಾಗರ
ಬುದ್ಧಗುರುವಿನ ನೋಟ ಕರುಣೆಯ ಕಡಲು
ಎಲ್ಲರೆದೆಯಲ್ಲೀಗ ಭರವಸೆಯ ಹೊನಲು
ನಸುನಗುತ ಗುರು ನುಡಿದ, “ಯಾರು?
ಯಾರಿದ್ದೀರಿ ಈ ಹಸಿವಿನ ಭಾರ ಹೊರಲು?”
ಸುತ್ತ ನೀರವ ಮೌನ! ಬಿಸಿಯ ಉಸಿರು
ಎದ್ದಾರು ಅವರು, ಇವರು, ಯಾರಾದರೂ
ಕೊನೆಗೊಮ್ಮೆ ನಿಂತವನು ಶ್ರೇಷ್ಠಿ ಧನದತ್ತ
ತಲೆಬಾಗಿಸಿ ನುಡಿದ ಗುರುವ ನೋಡುತ್ತ,

“ನಗರವಿದು ದೊಡ್ಡದು, ಇಹರು ಬಹುಜನರು
ಮಳೆಯಿಲ್ಲ, ಬೆಳೆಯಿಲ್ಲ ಎಲ್ಲ ಹಸಿದಿಹರು
ಕಣ್ಣೋಟ ಮೀರಿಹುದು ಹಸಿದವರ ಸಾಲು
ಸಿರಿಯಿಲ್ಲ ನನ್ನಲ್ಲಿ ಈ ಮಹಾಹಸಿವ ತಣಿಸಲು”
ಯೋಧ ಜಯಸೇನ ನಿಂತು ನುಡಿದ,
“ತಲೆಯ ನೀಡೆನ್ನು ಗುರುವೆ, ಕಡಿದು ಕೊಡುವೆ
ನೆತ್ತರು ಹರಿಸೆಂದರೆ ಹೃದಯ ಕಿತ್ತುಕೊಡುವೆ
ಬಡಿದುರುಳಿಸಿರುವೆ ಎಂಥೆಂಥ ಮಹಾವೈರಿಯ ಪಡೆ
ಮಾಡುವುದೇನು ನಮ್ಮನೆಯನೂ ಸುಡುತಿದೆ ಹಸಿವೆ!”
ನಡುಬಗ್ಗಿಸಿ ನುಡಿದ ಧರ್ಮಪಾಲನೆಂಬ ರೈತ
“ಕಮರಿ ಹೋಗಿದೆ ಗುರುವೆ, ಹಚ್ಚ ಹಸಿರ ಪೈರು
ಮೋಡಗಳ ಸುಳಿವಿಲ್ಲ, ಎಲ್ಲೂ ಇಲ್ಲ ನೆರಳು
ದೊರೆಯ ತೀರ್ವೆಗೆ ಹಣವೆಲ್ಲಿಂದ ತರಲಿ ಹೇಳು?”
ಮತ್ತದೇ ಮೌನ, ಬುದ್ಧ ನಿಮೀಲಿತ ನಯನ
ಅಲ್ಲೆಲ್ಲೋ ಸ್ವರ ಸಂಚಾರ, “ನಾನು ಸುಪ್ರಿಯ
ಬಡ ಭಿಕ್ಷ ಪೀಡಾದಾಸನ ಮಗಳು
ನಾನಿರುವೆ ಎಲ್ಲರ ಹಸಿವ ಹೊಣೆ ಹೊರಲು”

ಬೆರಗಾಯ್ತು ಜನ ಸ್ತೋಮ, “ಅರೆ! ಇದೇನಿದು?
ಈ ಹುಡುಗಿಯ ಗರ್ವ ಮೇರೆ ಮೀರಿಹುದು
ಸುಲಭವೇ ಉರಿವ ಒಡಲಾಗ್ನಿ ತಣಿಸುವುದು?
ಅಷ್ಟಕ್ಕೂ ಇವಳಲ್ಲಿ ಏನು ಸಿರಿಯಿಹುದು?”
ಗುರುವಿನ ನೋಟವದು ನುಡಿಯೆಂದಿತು
ಖಾಲಿಯಾದ ಭಿಕ್ಷಾಪಾತ್ರೆ ಕೈಗೆ ಬಂದಿತ್ತು
“ನೋಡಿರಿದು ನನ್ನ ಸಿರಿ, ಮತ್ತೆ ನಿಮ್ಮ ಮನಸ್ಸು
ಬೇಡುವೆನು ಎಲ್ಲರನು ಬಿಗುಮಾನ ಬಿಟ್ಟು
ಕೊಟ್ಟುಬಿಡಿ ಇರುವುದನು, ಇರುವಷ್ಟು ಇಷ್ಟು
ಜೊತೆಗಿರಲಿ ನಿಮ್ಮೆಲ್ಲರ ಪ್ರೀತಿಯೆಂಬ ತುತ್ತು
ಹಂಚುವೆನು ಎಲ್ಲರಿಗೂ ಬಂದದ್ದು, ಬಂದಷ್ಟು”
ಬರಗಾಲ ಕರಗಿತು ಕರುಣೆ ಮಳೆ ಸುರಿದು
ಹೀಗೆ ಬರದ ನಾಡಿಗೆ ಬುದ್ಧ ಬಂದದ್ದು






What a heartwarming poem! The poem has come out beautifully in Kannada. Excellently translated …..