ಒಂದು ಲೈಟ್ ಹೌಸ್
ಪ್ರವರ ಕೊಟ್ಟೂರ್
ಆ ದ್ವೀಪದ ಬಂದರಿನ ಎಡ ಬದಿಯಲ್ಲಿ
ಸದಾ ನಿದ್ದೆಗೆಟ್ಟಂತೆ, ಎಚ್ಚರವಾದಂತೆ
ಎದೆಗೆ ಸೂತಕ ಕಟ್ಟಿಕೊಂಡಂತೆ
ಪ್ಯಾಚು ಹಚ್ಚಿ ಜೋಡಿಸಿಟ್ಟ ನೂರರ ನೋಟುಗಳಂತೆ
ಬಡಕಲು ಹಾವಂತೆ
ಸದಾ ನಿಸ್ತೇಜ ಸ್ತಿತಿಯಲ್ಲಿ ಸಮುದ್ರದ ಇನ್ನೊಂದು ತೀರವನ್ನು ನೋಡುತ್ತಾ ನಿಂತ
ಒಂದು ಲೈಟ್ ಹೌಸ್ ಇದೆ
ಸಂಬಂಧಗಳ ಅನಾಮತ್ತು ಮುರಿದುಕೊಂಡು
ಆತ್ಮಹತ್ಯೆಗೂ ಮುಂಚೆ
ಆಕಾಶಕ್ಕೆ ಮುಖಮಾಡಿ
ನಡುಗುವ ಎದೆಯಲ್ಲಿ ಪ್ರಾರ್ಥಿಸುತ್ತಿರುವ
ಥೇಟ್, ಪಾಪಿಯ ಕಳೆ

ಹುಚ್ಚು ಕುದುರೆಗಳ ರಥ ಕಟ್ಟಿಕೊಂಡಂಥಾ
ಭಾರಿ ಅಲೆಗಳು ಕೈ ಚಾಚಿ
ಲೈಟ್ ಹೌಸಿನ
ಬಾಗಿಲು ಬಡಿಯುತ್ತವೆ
ಜಡ್ಡುಗಟ್ಟಿದಂಥಾ ಹಸಿರು ಪಾಚಿ
ತುಕ್ಕು ಚಿಲಕದಷ್ಟೇ ಸಭ್ಯವಾಗಿ ನಗುತ್ತಾ ಉತ್ತರಿಸುತ್ತದೆ
“ಇಲ್ಲಿ, ಯಾರೂ ಇಲ್ಲ”
ಬಂಡೆಗಲ್ಲುಗಳ ನರಕ ಸದೃಶ್ಯ ಸೀಳು ನರಗಳಲ್ಲಿ
ಅಲೆಗಳು
ಸದ್ದಿನ ಸಮೇತ ಜಾರಿಬಿಡುತ್ತವೆ
ಸಾಗರಲೋಕದ ಮತ್ಯ್ಸಕನ್ಯೆಯರು
ಬೆತ್ತಲೆಯಾಗಿ
ಹುಣ್ಣಿಮೆಯ ಬೆಳದಿಂಗಳಿಗೆ ಅಂಗಾತ ಮೈಯೊಡ್ಡಿ
ಮೋಹಕವಾಗಿ ಜ್ವಲಿಸಿಕೊಂಡು, ವಿಲವಿಲನೆ ಒದ್ದಾಡಿ ಮುಲುಕಾಡುವಾಗಲೆಲ್ಲಾ
ಲೈಟ್ ಹೌಸ್ ಅಸಹಾಯಕವಾಗಿ ನೋಡುತ್ತಿರಬಹುದು
ಅಥವಾ….
ಅಸಾಧಾರಣ ಸೌಂದರ್ಯವನ್ನು
ಮತ್ತು ನಿರ್ವಾತ ಹೃದಯದಲ್ಲಿನ ಘನ ಒಲವನ್ನು
ಉಪ್ಪು ಕಡಲಿನ ಆಳಕ್ಕೊಯ್ದು ತೊಳೆದುಬಿಡಬೇಕು ಅನ್ನಿಸಿರಬಹುದು
ದೇವರುಗಳು ಹುಡುಕಾಡುವ
ಸರ್ವಶ್ರೇಷ್ಟ ಹಗಲು-ರಾತ್ರಿಗಳು ಇವೇ
ಎನ್ನುವಂತೆ
ಮತ್ತು
ರೆಕ್ಕೆ ಕತ್ತರಿಸಿದ ನಾಜೂಕುತನಕ್ಕೆ
ತಣ್ಣಗಿನ ಗಾಳಿಯ ಸುಳಿಯಲ್ಲಿ
ಉಸಿರು ಕಟ್ಟಿಸಿ ಸಾಯಿಸುವಂತೆ,
ಫರ್ಮಾನು ಹೊರಡಿಸಿದ
ಲೈಟು ಹೌಸಿನ ಕಣ್ಣುಗಳಲ್ಲಿ
ಜಗತ್ತಿನ ಅತೀ ಕ್ರೂರ ಮತ್ತು ಸುಖದ ಪಲ್ಲಂಗಗಳನ್ನು
ಅವಮಾನಿಸಿದ ಏಕಾಂತ
ಎಲ್ಲಾ ಋತುವಿನಲ್ಲೂ ಹಳದಿ ತತ್ತಿಯಿಕ್ಕುತ್ತದೆ,






very nice one..pravara….
nice
good one pravara
bhravaseya kavi…nice..very nice..beta!!!!
ಪವರ್ ಆಫ್ ಪ್ರವರ…
“ಅಜೀಬು ದುನಿಯ” ಓದಿದ್ ಮೇಲೆ ನನ್ನಗೂ ಬರೆಯುವ ಹುಚ್ಚು ಸ್ಟಾಟ್ ಆಗಿದೆ.