ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಕ್ಕು ಮೂಡದ ಹಾಸಿಗೆ ನಕ್ಕಿತು..

ಶಿಲ್ಪಶ್ರೀ

ಅದೆಲ್ಲಿಂದಲೋ
ಗಾಳಿ ಹೊತ್ತುತಂದ ಸುಗಂಧ
ಅವಳನ್ನೊಯ್ದು ಬಿಟ್ಟದ್ದು
ಅವನ ನೆನಪಿನಂಗಳಕ್ಕೆ

ನಾಮುಂದು ತಾಮುಂದು
ಎಂದು
ಜಿದ್ದಿಗೆ ಬಿದ್ದಂತೆ
ಆಡಿದ ಆಟಗಳೆಲ್ಲ
ಸುರುಳಿಯಾಗಿ ಸುಳಿದು
ನೀ ಬೇಕು
ಎಂದವನು ಪಿಸುಗುಟ್ಟಿದಂತಾಗಿ
ಸಣ್ಣಗೆ ಕಂಪಿಸಿದಳು..
ಸುಕ್ಕು ಮೂಡದ ಹಾಸಿಗೆ ನಕ್ಕಿತು

ಬಿಳಿ ಮೋಡಗಳಲ್ಲೇ
ಚಿತ್ರ ಬಿಡಿಸುವ ಹುಡುಗಿಗೆ
ಕಪ್ಪು ಮೋಡದಂತ
ಕಣ್ಣುಗಳ ಹುಡುಗ
ನಿದ್ದೆಗೆಡಿಸಿದ್ದು
ಇನ್ನೂ ಬಿಡಿಸಲಾಗದ ಸೋಜಿಗವೆ

ನಿಂತ ನಿಲುವಲ್ಲೇ
ಸರಾಗವಾಗಿ
ಹರಿದುಬಿಡುತ್ತಿದ್ದ ಸಾಲುಗಳು
ಪದಬಂಧದ ಖಾಲಿ ಚೌಕಗಳಾಗಿ
ಕಾದು ಕುಳಿತಿವೆ
ಅವನೇ ಬಂದು ತುಂಬಿಸಲೆಂಬಂತೆ

ಬರುವ ಭರವಸೆಯನ್ನೇನು
ನೀಡಿರಲಿಲ್ಲ ಅವನು
ಕಾಲಕ್ಕೆ ಸಡ್ಡು ಹೊಡೆದು
ಕಾಯುವ ಹುಚ್ಚು ಹಂಬಲ
ಅವಳದೇ
ಬಿಳಿ ಮೋಡಗಳಲ್ಲಿ ಮತ್ತೆ
ಚಿತ್ರ ಬಿಡುಸುತ್ತಿರುವವಳ
ಕಣ್ಣುಗಳಲ್ಲೀಗ
ಹೆಪ್ಪುಗಟ್ಟಿದ ಕಾರ್ಮೋಡ

‍ಲೇಖಕರು Avadhi GK

18 March, 2018

3 Comments

  1. Ravikumar

    ನಿಮ್ಮಿಂದ ಇನ್ನಷ್ಟು ಉತ್ತಮ ಕವಿತೆಗಳನ್ನು ನಿರೀಕ್ಷಿಸುತ್ತೇವೆ.

  2. ಶುಭಾ

    ಚಂದದ ಕವಿತೆ.

    • Shilpashree G

      Thank you

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading