ಸಿದ್ದರಾಮಯ್ಯ ಅವರ ನೆನಪಾದಾಗಲೆಲ್ಲಾ ಕೈ ತುತ್ತು ಜಾರುತ್ತದೆ..

ಈ ಹಿಂದೆ ಮೇ 21, 2018 ರಂದು ‘ಅವಧಿ’ಯಲ್ಲಿ ಪ್ರಕಟವಾದ ಲೇಖನ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ರಾಜ್ಯದ ಚುಕ್ಕಾಣಿ ಹಿಡಿಯಲಿರುವ ಸಂದರ್ಭದಲ್ಲಿ ನಿಮ್ಮ ಮರು ಓದಿಗಾಗಿ ಮತ್ತೆ ಈ ಲೇಖನ

‘ಅವರ’ ನೆನಪಾದಾಗಲೆಲ್ಲಾ ಕೈ ತುತ್ತು ಜಾರುತ್ತದೆ

ರವಿಕುಮಾರ್ ಟೆಲೆಕ್ಸ್ 

 

ಎಂಟು  ವರ್ಷದವನಿದ್ದ ನಾನು ನನ್ನ ಜೋಪಡಿಯ ಪಕ್ಕದಲ್ಲೇ ಇದ್ದ ಕಲ್ಯಾಣ ಮಂದಿರಕ್ಕೆ ವಾಚ್‌ಮನ್ ನ ಕಣ್ತಪ್ಪಿಸಿ ಒಳಹೊಕ್ಕು ಪಂಕ್ತಿಯಲ್ಲಿ ಕುಳಿತುಬಿಟ್ಟಿದ್ದೆ.

ಭೂರಿಭೋಜನದ ಘಮಲಿಗೆ ನಾಲಿಗೆ ನೀರೂರಿಸುತ್ತಾ , ಹೊಟ್ಟೆ ಹಸಿದು ಅಲಾಲಲ..ಎನ್ನುತ್ತಿತ್ತು.

ಎಲೆ  ಮೇಲೆ ಬಡಿಸಿದ ಸಿಹಿ ತಿಂಡಿಯೊಂದಕ್ಕೆ ಕೈ ಹಾಕಿದ್ದೇ ತಡ ನನ್ನ ಕುತ್ತಿಗೆಗೆ ಹಿಂಬದಿಯಿಂದ ಬಲವಾದ ಹೊಡೆತವೊಂದು ಬಿದ್ದಿತು. ತಿರುಗಿ ನೋಡಲು ಅವಕಾಶ ಕೊಡದಂತೆ ವಾಚ್‌ಮನ್ ಎಳೆದುಕೊಂಡು ಹೋಗಿ ರೂಂವೊಂದರಲ್ಲಿ ಕೂಡಿ ಹಾಕಿ ಮನಸೋ ಇಚ್ಛೆ ಬಡಿದು ಹಾಕಿದ.

ಕೈಯಲ್ಲಿ ಇದ್ದ ಸಿಹಿ ತಿಂಡಿಯೊಂದು ಕಣ್ಣೀರಿಗೆ ಕರಗಿ ಹೋಗಿತ್ತು. ಅ ಹೊಡೆತಕ್ಕೆ ಹಸಿವು ಮಾಯವಾಗಿತ್ತು. ಕಿಟಕಿಯಲ್ಲಿ ನೋಡಿದಾಗ ಉಂಡ ಎಲೆ ಎಸೆದ ತೊಟ್ಟಿಯಲ್ಲಿ ರಾಶಿ ಸುರಿದ ಅನ್ನ ನನ್ನ ನೋಡಿ ನಗುವಂತಿತ್ತು. ಇಂತಹ ಅನೇಕ ಅನುಭವಗಳು ನನ್ನಂತಹ ಅದೇಷ್ಟೋ ಜನರಿಗೆ ಆಗಿಯೇ ಆಗಿರುತ್ತದೆ.

ಅವತ್ತು ‘ಅನ್ನ ಭಾಗ್ಯ’ದಂತಹ ಒಂದು ಯೋಜನೆ ಇದ್ದಿದ್ದರೆ ನಾನು ಅನ್ನಕ್ಕಾಗಿ ಈ ಪರಿಯ ಒದೆ ತಿಂದು ನೋಯಬೇಕಿರುತ್ತಿದ್ದಿಲ್ಲ. ನನ್ನವ್ವ -ನನ್ನಪ್ಪ ಬಿಸಿಲು ಬಳ್ಳಾರದಲ್ಲಿ ಬೆಂದು ಅನ್ನಕ್ಕಾಗಿ ತಿರುಗಬೇಕಿರಲಿಲ್ಲ. ನಾನು ನನ್ನ ಅದೆಷ್ಟೊ ಸರೀಕರೂ  ಹೀಗೆ ಪಂಕ್ತಿಗಳಲ್ಲಿ ಸಿಕ್ಕಿಬಿದ್ದು ಒದೆ ತಿನ್ನಬೇಕಿರಲಿಲ್ಲ. 

ಇಂತಹ ಕಾರಣಗಳಿಗಾಗಿಯೇ  ನಾನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆದ್ಯತೆ ಮೇರೆಗೆ ‘ಅನ್ನ ಭಾಗ್ಯ’ ಯೋಜನೆ ತಂದದ್ದನ್ನು ಹೃತ್ಪೂರ್ವಕವಾಗಿ ಸದಾ ಸ್ಮರಿಸುತ್ತೇನೆ.

ಸಿದ್ದರಾಮಯ್ಯ ಅವರ ಭಾಗ್ಯಗಳು ಜಾರಿಗೊಳ್ಳುವ ಹಂತದಲ್ಲಿ ಚೂರು ಪಾರು ಕೆಲ ‘ ಕಳ್ಳರ’ ಪಾಲಾಗಿರಬಹುದು, ಆದರೆ ಅವುಗಳನ್ನು ರೂಪಿಸಿದ  ಮನಸ್ಸಿನಲ್ಲಿ ಹಸಿದವರ ಕರುಳ ಬೆಂಕಿಯ ಕಾವಿನ ತಾಪ ಇತ್ತು. ಆ ಪರಿ ತಾಪವೇ ನಿರ್ದುಷ್ಟ- ನಿರ್ದಿಷ್ಟ ಯೋಜನೆಗಳ ಜಾರಿಗೆ ಅನುವು ಮಾಡಿಕೊಟ್ಟಿತ್ತು.

ಸಿದ್ದರಾಮಯ್ಯ ಅವರ ಭಾಗ್ಯ ಯೋಜನೆಗಳ ಬಗ್ಗೆ ಲೇವಡಿ ಮಾಡುವವರನ್ನು ಎದುರುಗೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಕೆಲವೊಮ್ಮೆ ಮುಖತಃ ನೇರಾನೇರ ಚರ್ಚೆಗಳಲ್ಲಿ ತುಸು ಹೆಚ್ಚೆನಿಸುವಷ್ಟೇ ಜಗಳಕ್ಕಿಳಿದಿದ್ದೇನೆ. ಹಾಗೆಲ್ಲಾ ನನ್ನನ್ನು ಸಿದ್ದರಾಮಯ್ಯನ ಪಕ್ಷಪಾತಿ ಎಂದಿದ್ದೂ ಇದೆ.

ಈ ಬಗ್ಗೆ ನನಗೆ ಎಳ್ಳಷ್ಟೂ ಬೇಸರವಿಲ್ಲ. ಏಕೆಂದರೆ ಹಸಿವು, ಅನ್ನದ ಮಹತ್ವ ಗೊತ್ತಾದವರು ಯಾರೊಬ್ಬರೂ ಸಿದ್ದರಾಮಯ್ಯ ಅವರನ್ನಷ್ಟೇ ಅಲ್ಲ. ಆ ಕೆಲಸ ಮಾಡಿದ ಯಾರ ಪರವನ್ನಾದರೂ  ವಹಿಸುತ್ತಾರೆ.

ದೇಶದಲ್ಲಿ ಶೇ. ೫೧ ಮಹಿಳೆಯರು ಪ್ರೌಢಾವಸ್ಥೆಯಲ್ಲೆ  ಅಪೌಷ್ಠಿಕವಾಗಿ ,  ಶೇ. ೩೮.೪ ರಷ್ಟು ಮಕ್ಕಳು ಹಸಿವಿಗೆ ತುತ್ತಾಗಿ ನರಳುತ್ತಿವೆ. ಪಕ್ಕದ ಶ್ರೀಲಂಕಾದಲ್ಲಿ ಈ ಪ್ರಮಾಣ ಶೇ. ೧೪.೭. ಚೀನಾದಲ್ಲಿ ಶೇ.೯.೪ ಭಾರತದಲ್ಲಿ ಒಟ್ಟು ಅಪೌಷ್ಠಿಕತೆಯಿಂದ ನರಳುತ್ತಿರುವವರ ಪ್ರಮಾಣ ಶೇ. ೧೪.೫ ಆಗಿದೆ ಇದರ ನಿವಾರಣೆಗೆ ಅನ್ನಭಾಗ್ಯದಂತಹ ಯೋಜನೆಗಳು ಅಗತ್ಯ ವಿದೆ ಅಂತ ಯಾರಿಗಾರದೂ ಅನಿಸುವುದಿಲ್ಲವೆ?

ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ‘ಅಹಿಂದ’ ಸಮುದಾಯದ ರಾಜಕೀಯ ಪ್ರಜ್ಞೆಯನ್ನು ಸಿದ್ದರಾಮಯ್ಯ ಜಾಗೃತಗೊಳಿಸಿದರು. ಬಲಾಢ್ಯ ಜಾತಿಗಳ ಹಿಡಿತದಲ್ಲೇ ಇದ್ದಂತಹ ರಾಜಕೀಯಾಧಿಕಾರವನ್ನು ದಕ್ಕಿಸಿಕೊಂಡು, ದೇವರಾಜ ಅರಸು ನಂತರ ಬಹಿರಂಗವಾಗಿಯೇ ತಾನೊಬ್ಬ ‘ಅಹಿಂದ’ ಮುಖ್ಯಮಂತ್ರಿ ಎಂಬ ಧಾರ್ಷ್ಟ್ಯವನ್ನು ತಮ್ಮ ಕಾರ್ಯವೈಖರಿಯ ಮುಖೇನ ತೋರಿಸಿದ್ದರು. ಹಾಗೆಂದ ಮಾತ್ರಕ್ಕೆ ಅವರು ಬಲಾಢ್ಯ ಜಾತಿಗಳ ವಿರೋಧಿ ಎಂದೆಣಿಸಿದರೆ ತಪ್ಪಾದೀತು.

ಆದರೆ ಅವರ ದಿಟ್ಟತನ, ಖಚಿತ ನಿರ್ಧಾರ ಹಾಗೂ ಪಟ್ಟು ಹಿಡಿದು ಕಾರ್ಯಾನುಷ್ಠಾನ ತರುವ ಪರಿ ‘ ಮೆರೆದಾಟ’ ಎಂಬ ಹಣೆಪಟ್ಟಿ ಕಟ್ಟಿಸಿಕೊಳ್ಳುವುದರೊಂದಿಗೆ ಕೆಲವರ ಪಾಲಿನ ಎಲೆ ಅಡಿಕೆಯಾಯಿತು. ದುರ್ಬಲ ಜಾತಿಗಳ ಸ್ವಾಭಿಮಾನ ಸಿದ್ಧ ಸಮಾಜದ ರೂಢಿಗತ ಪರಿಭಾಷೆಯಲ್ಲಿ ಅಹಂಕಾರವಾಗಿಯೇ ಕಾಣುತ್ತದೆ. ಅದೇ ಬಲಾಢ್ಯ ಜಾತಿಗಳ ಅಹಂಕಾರವು ಸ್ವಾಭಿಮಾನ, ಹಿರಿಮೆಯಂತೆ ಕಾಣುತ್ತದೆ.

ಸಿದ್ದರಾಮಯ್ಯ ಅವರ ಸ್ವಭಾವತಃ ದೇಸಿತನ ಅವರನ್ನು ಅಹಂಕಾರಿ ಎಂಬ ಪಟ್ಟಕ್ಕೆ ಕೂರಿಸಿತು. ಫ್ಯೂಡಲ್ ಮನಃಸ್ಥಿತಿಗಳು ಸಿದ್ದರಾಮಯ್ಯ ಅವರ ದೇಸಿತನವನ್ನು, ಸಹಜ ನಡೆಗಳನ್ನು ಮುಂದು ಮಾಡಿ ಅಪಪ್ರಚಾರಗೈದು ಅವರ ಮಾಡಿದ ಜನಪರ ಕೆಲಸಗಳನ್ನು ತಮ್ಮ ‘ಸೀಮಿತ’ ತಿಳಿವಳಿಕೆಯಡಿ ಮರೆಮಾಚುವಲ್ಲಿ ಯಶಸ್ವಿಯಾದರು.

ಇಂಥ ತಪ್ಪುತಿಳಿವಳಿಕೆಗೆ ಗುರಿಯಾದವರಲ್ಲಿ ಅರಸು, ಬಂಗಾರಪ್ಪ, ಧರ್ಮಸಿಂಗ್ ಅವರೂ ಹೊರತಾಗಿರಲಿಲ್ಲ! ಸಿದ್ದರಾಮಯ್ಯ ಸುತ್ತ ತನ್ನವರೇ ಹೆಣೆದ ಬಲೆಯಲ್ಲಿ ತಾವೇ ಸಿಕ್ಕಿ ಹಾಕಿಕೊಂಡಿದ್ದರು. ಎಷ್ಟರ ಮಟ್ಟಿಗೆ ಎಂದರೆ ಅವರು ಚುನಾವಣೆಯಲ್ಲಿ ಚಾಮುಂಡೇಶ್ವರಿ ಯಲ್ಲಿ ಸೋತು ಹೋಗುವವರೆಗೂ ಅರ್ಥವಾಗಲೇ ಇಲ್ಲ.

ಲಿಂಗಾಯಿತ ಧರ್ಮಕ್ಕಾಗಿ ಅಹವಾಲು ಸಲ್ಲಿಸಿದ, ಅದಕ್ಕಾಗಿ ಬಹಿರಂಗವಾಗಿ ಬೆಂಬಲ ಕೊಟ್ಟು ಅದನ್ನು ಕಾರ‍್ಯಸಾಧು ಮಾಡಿಕೊಂಡ ಮಠಾಧಿಪತಿಗಳು, ಲಿಂಗಾಯಿತ ಧರ್ಮದ ಹೋರಾಟದ ಆ ಹೊತ್ತಿನಲ್ಲಿ ಮೌನ ವಹಿಸಿ ಸಿದ್ದರಾಮಯ್ಯ ಅವರನ್ನು ಒಳಗೊಳಗೆ ಬೆನ್ನು ತಟ್ಟಿದ  ದೊಡ್ಡ ದೊಡ್ಡ ಮಠಾಧೀಶರು ಎಂದೆನಿಸಿಕೊಂಡವರು ಚುನಾವಣಾ ಕಾಲಕ್ಕೆ ಕೈ ಬಿಟ್ಟು  ಅ(ವರವರ) ಧರ್ಮದ ದಾರಿ ಹಿಡಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಿದ್ದರಾಮಯ್ಯ ಅವರು ಎಲ್ಲಾ ಕಾಲಕ್ಕೂ ಹೊರಗಿನವರಾಗಿಯೇ ಉಳಿದರು.

ಇನ್ನೂ ಅದೇ ಹಿಂದುಳಿದ ಜಾತಿಗಳು ಅರಸು ಹೇಳಿದಂತೆ  ‘ಹಿಂದುಳಿದ ಜಾತಿಗಳು ಹೆಚ್ಚೆಂದರೆ ಪ್ರಯೋಜನಗಳನ್ನು ಪಡೆಯುವುದಕ್ಕಾಗಿ ಒಂದು ವರ್ಗವಾಗಿ ಒಗ್ಗೂಡಿ  ಮುಂದೆ ಬರುತ್ತವೆಯೇ ಹೊರತು ತಮ್ಮ ಶ್ರೇಯೋಭಿವೃದ್ದಿಗಾಗಿ ಶ್ರಮಿಸುವವರಿಗೆ ನಿರಂತರ ರಾಜಕೀಯ ಬೆಂಬಲ ನೀಡುವುದಕ್ಕೆ ಒಂದು ಜಾತಿಯಾಗಿ ಒಗ್ಗೂಡಿ ನಿಲ್ಲುವುದಿಲ್ಲ’ ಎಂಬುದು ಈ ಸಂದರ್ಭದಲ್ಲಿ ಧುತ್ತನೆ ಎದುರು ನಿಲ್ಲುತ್ತದೆ.

ಸಿದ್ದರಾಮಯ್ಯ ಅವರ ಬಗ್ಗೆ , ಅವರು ಕೈಗೊಂಡ ಕೆಲವು ರಾಜಕೀಯ ನಿರ್ಧಾರಗಳ ಬಗ್ಗೆ ಇರುವ ತಕರಾರುಗಳ ಆಚೆಯೂ ಅವರನ್ನು ಒಪ್ಪದೆ ಇರಲಾಗದು.

ಐದು ವರ್ಷಗಳ ಕಾಲ ಜನಸಮುದಾಯಕ್ಕಾಗಿ ದುಡಿದ ಸಿದ್ದರಾಮಯ್ಯ ಎಂಬ ನಾಯಕನನ್ನು ವರ್ತಮಾನ  ಎಂಬುದು ಇಷ್ಟೊಂದು ಕ್ರೂರವಾಗಿ ನಡೆಸಿಕೊಂಡು ಬಿಟ್ಟಿತು ನೋಡಿ.

ಮೊನ್ನೆ ಚುನಾವಣೆಯ ಎಲ್ಲಾ ಸುದ್ದಿಗಳನ್ನು ರವಾನಿಸಬೇಕಾದ ಜಾಗಗಳಿಗೆಲ್ಲಾ ರವಾನಿಸಿ ರಾತ್ರಿ ತಣಿಗೆ ಮುಂದಿಟ್ಟುಕೊಂಡು ಕುಳಿತಿದ್ದೆ. ಎದುರುಗಿದ್ದ ಟಿ ವಿ ಪರದೆಯ ಮೇಲೆ  ಐದು ವರ್ಷ ರಾಜ್ಯವನ್ನು ಆಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌನ ಮುಖಮುದ್ರೆಯಲ್ಲಿ ಕುಳಿತಿರುವ ದೃಶ್ಯವೊಂದು ತೇಲಿ ಬಂತು, ಬಾಯಿಗಿಟ್ಟುಕೊಳ್ಳುತ್ತಿದ್ದ ತುತ್ತೊಂದು ಸರಕ್ಕನೆ ಜಾರಿ ನೆಲಕ್ಕೆ ಬಿದ್ದಿತು.

ಮತ್ತೆ ತಣಿಗೆಗೆ ಕೈ ಹಾಕಲು ಮನಸ್ಸಾಗಲೇ ಇಲ್ಲ. ತಣಿಗೆ ತಳ್ಳಿ ಕುಳಿತುಬಿಟ್ಟೆ. 

‍ಲೇಖಕರು avadhi

May 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

32 ಪ್ರತಿಕ್ರಿಯೆಗಳು

 1. Himantharaju G.

  ಪತ್ರಕರ್ತ ಎನ್.ರವಿಕುಮಾರ್ ಅವರು ಎಂದೂ ಹೀಗೆ.. ನೇರವಾಗಿ ತನ್ನ ಅಭಿಪ್ರಾಯವನ್ನು ಮುಲಾಜಿಲ್ಲದೆ ಮಂಡಿಸುವುದು…ಅವರ ಲೇಖನದ ಅಷ್ಟೂ ಸತ್ಯಗಳನ್ನು ಯಾರೂ ಕೂಡಾ ಒಪ್ಪಲೇಬೇಕು.. ಹೌದು ಸೋಷಿಯಲ್ ಮೀಡಿಯಾದಲ್ಲೂ ಕೂಡಾ ಅವರು ನೇರ ಮಾತುಗಾರಿಕೆಯಿಂದ ತತ್ವಾಧಾರಿತ ಚರ್ಚೆಗೆ ಹಲವು ಬಾರಿ ಪಂಥಾಹ್ವಾನ ನೀಡಿದ್ದನ್ನು ನೋಡಿದ್ದೇನೆ. ಆದರೆ ನನ್ನ ಮಿತಿಯನ್ನರಿತು ಪ್ರತಿಕ್ರಿಯೆ ನೀಡುವುದಿಲ್ಲ ಅಷ್ಟೆ. ಆದರೆ ಅದೇಕೋ ಇಂದು ಅವರ ಕೈ ಜಾರಿತು ತುತ್ತು ಲೇಖನಾ ಓದಿದ ಮೇಲೆ.. ನನಗೂ ಕ್ಷಣಹೊತ್ತು ಯೋಚಿಸುವಂತೆ ಮಾಡಿತು. ಬಹುಶಃ ಹಸಿವಿನ ಅನುಭವ ಇರುವವರಿಗೆಲ್ಲಾ ಹಾಗೆ ಅನಿಸುವುದು ಸಹಜ ಅನಿಸುತ್ತೆ…

  ಪ್ರತಿಕ್ರಿಯೆ
 2. ದೇವರಾಜು ಬಿ.ಎಸ್.

  ಮನಸ್ಸಾಕ್ಷಿಯ ಅದ್ಭುತ ಲೇಖನ.ಹೌದು ಸಿದ್ದರಾಮಯ್ಯನವರ ಆಡಳಿತ ಮಾನವೀಯ ಮೌಲ್ಯಪರವಾದದ್ದು.

  ಪ್ರತಿಕ್ರಿಯೆ
 3. D S PRAKASH

  ಸಿದ್ದರಾಮಯ್ಯ ಅವರ ನೆನಪಾದಾಗಲೆಲ್ಲಾ ಕೈ ತುತ್ತು ಜಾರುತ್ತದೆ….

  2) ಮರೆತ ಮಾತು –

  ಸಿದ್ದರಾಮಯ್ಯ ನವರ ಸರ್ಕಾರದ ಅತಿಯಾದ ಭ್ರಷ್ಟಾಚಾರ ( ಅವರೇ ನಡೆಸಿದ್ದೋ ಅಥವಾ ಅವರ ಸಂಪುಟದ ಮಂದಿ ನಡೆಸಿ ದ್ದೋ ಅದು ಬೇರೆ ವಿಚಾರ.)
  ಈ ವಿಚಾರದಲ್ಲಿ ವಿರೋಧ ಪಕ್ಷದವರಿಗೆ ” ಕೇವಲ ಆರೋಪ ಮಾಡಬೇಡಿ, ಸಾಕ್ಷಿ ಕೊಡಿ ಎಂದು ಕೇಳುತ್ತಿದ್ದುದು, ಯಾರಾದರೂ ಸಾಕ್ಸ್ಬಿಗಳನ್ನು ಇಟ್ಟುಕೊಂಡು ಭ್ರಷ್ಟಾಚಾರ ನಡೆಸುತ್ತಾರಾ ?

  ಅವರ ಈಗಿನ ಪರಿಸ್ಥಿತಿ ಗಮನಿಸಿದರೆ , ನಾನು ಹೈಸ್ಕೂಲ್ ವಿದ್ಯಾರ್ಥಿ ಆಗಿದ್ದಾಗ ನಮ್ಮ ಸಂಸ್ಕೃತ ಉಪಾಧ್ಯಾಯರು ( ನಾನು ಕನ್ನಡ ಆರಿಸಿಕೊಂಡಿದ್ದೆ ) ಹೇಳುತ್ತಿದ್ದ ” ಯೆ ಮಾನವ್ ಹೈ ಪರಿಸ್ಥಿತಿ ಕಾ ದಾಸ್ ” ಎಂದು ತಮ್ಮ ಭಾಷಣದಲ್ಲಿ ಹೇಳಿದ ಮಾತು ನೆನಪಾಗುತ್ತದೆ.

  ಬೆಲೂರು ದ ಶಂ ಪ್ರಕಾಶ್,
  ಮೈಸೂರು.

  ಪ್ರತಿಕ್ರಿಯೆ
  • Natesha Babu

   ಸಾಕ್ಷಿ ಇಟ್ಟುಕೊಂಡು ಯಾರೂ ಭ್ರಷ್ಟಾಚಾರ ಮಾಡಲ್ಲ… ಆದರೆ, ಯಡಿಯೂರಪ್ಪ ಅವರ ಚೆಕ್ ಪ್ರಕರಣ ಸ್ವಲ್ಪ ಭಿನ್ನವೇ ಬಿಡಿ!

   ಪ್ರತಿಕ್ರಿಯೆ
 4. Manjunatha

  ಒಪ್ಪ ತಕ್ಕ ವಿಚಾರಗಳು… ಸಂಪೂರ್ಣ ಸಹಮತವಿದೆ. ನಿಮ್ಮ ನೋವಲ್ಲಿ ನಾನೂ ಭಾಗಿ

  ಪ್ರತಿಕ್ರಿಯೆ
 5. vinay R K

  ಸದ್ಯ ಮತ್ತು ಶಾಶ್ವತ ಅರಿಯದ ತಲಸಮುದಾಯದ ಜನಕ್ಕೆ ಓದಿ ಹೇಳಲೇ ಬೇಕಾದ ಲೇಖನ .
  ನಿಮ್ಮ ಬರಹ ದೇಶಾದ್ಯಂತ ವೈರಲ್ ಆಗಲಿದೆ .
  ಇಂಗ್ಲಿಷ್ ಹಾಗೂ ತಮಿಳು ತೆಲುಗು ಮಲೆಯಾಳಂ ಭಾಷೆಗೆ ತರ್ಜುಮೆ ಮಾಡಿಸಿ .

  ಪ್ರತಿಕ್ರಿಯೆ
 6. bhavyalhalli

  ಹೌದು ದೇಸಿತನವನ್ನು ಹಾಗೂ ಖಡಕ್ ಮಾತು ಕೆಲವರಿಗೆ ಅಹಂಕಾರವೆಂಬಂತೆ ಕಾಣುತ್ತದೆ

  ಪ್ರತಿಕ್ರಿಯೆ
 7. Sandeep eshanya

  ಹಸಿದವನು ಉಂಡ ನಂತರವೂ ಅನ್ನವಿಕ್ಕಿದವನನ್ನ ನೆನೆಯುವುದು ಜಗತ್ತಿನ ಬಹುದೊಡ್ಡ ನಡೆ.‌ ನಿಮ್ಮ ಔದಾರ್ಯ ದೊಡ್ಡದು ಸರ್.

  ಪ್ರತಿಕ್ರಿಯೆ
 8. Vinay

  ನಿಮಗೆ ಅನ್ನ ತಿನ್ನುವಾಗ ಸಿದ್ದರಾಮಯ್ಯ ನೆನಪಾಗಿ ಊಟ ತಿನ್ನೋದೆ ಬಿಟ್ರಿ.. ನನಗೆ ವಿಧಾನಸೌಧ ಮುಂದೆ ಜೆಡಿಎಸ್ ನವರು ಕುಂಬಳಕಾಯಿ -ನಿಂಬೆಹಣ್ಣು ಹೊಡಿವಾಗ ನಮ್ಮ ರಾಜ್ಯದ ಜನತೆಯ ಸ್ಥಿತಿ ನೆನಪಾಯ್ತು.. ಅಯ್ಯೋ , 2018ನೇ ಇಸವಿಯ ಕರ್ನಾಟಕದ ಮತದಾರರೇ ನೀವೆ ಧನ್ಯ….

  ಪ್ರತಿಕ್ರಿಯೆ
 9. Nagaraju

  ಕಣ್ಣೀರಧಾರೆ ಆಯ್ತು ನನ್ನ ಮನ… ನಾನು ಸಹ ಯಾವುದೇ ಮದುವೆ ಆದರು ಊಟ ಮಾಡಿ ಬಂದಿದ್ದೇನೆ ನನಗೆ ಬೈಯಿಸಿಕೊಂಡಿನಿ,ಪೆಟ್ಟು ತಿಂದಿನಿ,ಕೊರಳಪಟ್ಟೊ ಹಿಡುಸಿಕೊಂಡು ಹೊರಗೆ ದಬ್ಬಿಸಿಕೊಂಡಿನಿ, ಕಾರಣ ಬಡವರು ನಾವು ನಮ್ಮ ಮನೆಯಲ್ಲಿ ಅನ್ನ ಉಣ್ಣುತ್ತಿದ್ದು ಹಬ್ಬದ ದಿನಗಳಲ್ಲಿ ಮಾಮೂಲಿ ದಿನದಲ್ಲಿ ಸಾವೆ,ನವಣೆ ಅಕ್ಕಿ ಅನ್ನ ತಿಂದೆ

  ಪ್ರತಿಕ್ರಿಯೆ
 10. Natesha Babu

  ಎನ್ ರವಿಕುಮಾರ್ ಬರಹ ಎಲ್ಲರ ಕಣ್ಣು ತೆರೆಸುವಂತಿದೆ… ಥ್ಯಾಂಕ್ಸ್ ಸರ್..

  ಪ್ರತಿಕ್ರಿಯೆ
 11. ಪ್ರಕಾಶ್

  ಹಿಂದುಳಿದ ವರ್ಗಗಳ ನಾಯಕ ಸಿದ್ಧರಾಮಯ್ಯನನ್ನು ಆ ವರ್ಗಗಳೇ ಅರ್ಥಮಾಡಿಕೊಳ್ಳಲಾರದೆ ಮೇಲ್ಜಾತಿಯ ರಾಜಕಾರಣಕ್ಕೆ ಬಲಿಯಾದದ್ದು ಕರ್ನಾಟಕದ ದುರಂತ….

  ಪ್ರತಿಕ್ರಿಯೆ
 12. prabhakar joshi

  ಸಿದ್ಧಾಂತ ಮಣ್ಣು ಮಸಿ ಏನೇ ಇರಲಿ. ತುತ್ತು ಕೂಳಿನ ತಳಮಳವನ್ನು ಅನುಭವಿಸಿ, ಅದನ್ನು ಭಾಗ್ಯದಂತೆ ಕಂಡ ಪರಿಯನ್ನು ಆಪ್ತವಾಗಿ ಅಭಿವ್ಯಕ್ತಿಸಿದ ರವಿಕುಮಾರಗೆ ಹ್ಯಾಟ್ಸಾಫ್.

  ಪ್ರತಿಕ್ರಿಯೆ
 13. ಸೋಮನಾಥ

  ನಿಮಗೆ ಅನ್ನ ಭಾಗ್ಯ ಒಂದೆ ನೆನಪಾಯತಾ ಸರ್ ಶಾದಿ ಭಾಗ್ಯ ಕಸಾಯಿ ಖಾನೆ ಅವೆಲ್ಲಾ ಮರೆತಿದಿರಾ

  ಪ್ರತಿಕ್ರಿಯೆ
 14. D S PRAKASH

  ಬರಹವು ನಾಣ್ಯದ ಒಂದು ಮುಖವನ್ನು ಮಾತ್ರ ವೈಭವೀಕರಿಸಿದೆ.
  ಇನ್ನೊಂದು ಮುಖದಲ್ಲಿ ಮಾಜಿ ಮುಖ್ಯ ಮಂತ್ರಿಗಳ ಅವಗುಣಗಳನ್ನೂ, ಅತಿಯಾದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ, ಅಲ್ಪಸಂಖ್ಯಾತ ಒಂದು ವರ್ಗದವರ ಎಲ್ಲಾ ಕುಕೃತ್ಯಗಳನ್ನು ನೋಡಿಯೂ ಏನೂ ಆಗಿಲ್ಲ ಎನ್ನುವಂತೆ ನಡೆದುಕೊಂಡು ಅವರ ಪರ ವಹಿಸಿದ್ದು, ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡಿದ್ದು, ಬಹು ಸಂಖ್ಯಾತ ಹಿಂದೂಗಳ ಮನ ನೋಯ್ಯುವಂತಹ ನಡವಳಿಕೆಗಳು, ಪರಿಹಾರ ಕೊಡುವ ವಿಷಯದಲ್ಲಿಯೂ ಜಾತಿ ರಾಜಕಾರಣ ಮಾಡಿದ್ದೂ, ನಿಷ್ಠಾವಂತ ಅಧಿಕಾರಿಗಳ ಎತ್ತಂಗಡಿ, ಅತಿಯಾದ ಅಹಂಕಾರ ಇವುಗಳ ಬಗ್ಗೆಯೂ ಸ್ವಲ್ಪ ಕಾಣಿಸಿದ್ದರೆ ಬರಹ ಚೆಂದಗಾಣುತ್ತಿತ್ತು .

  ಬೇಲೂರು ದ ಶಂ ಪ್ರಕಾಶ್.

  ಪ್ರತಿಕ್ರಿಯೆ
  • ಸದಾನಂದ

   ನಿಜ, ಸಿದ್ದರಾಮಯ್ಯನ ಸೋಲಿಗೆ ನಿಜವಾದ ಕಾರಣ ಇದೇ. ರಾಜಕೀಯದಲ್ಲಿ ಕೇವಲ ಅನ್ನ ಭಾಗ್ಯ ಮಾತ್ರ ಲೆಕ್ಕಕ್ಕೆ ಬರುವುದಿಲ್ಲ. ಆದರೂ ಈಗ ಹಿಂಬಾಗಿಲ ಮೂಲಕ ಯಾವುದೇ ನಾಚಿಕೆ ಇಲ್ಲದೇ ಅಧಿಕಾರ ಗಿಟ್ಟಿಸುತ್ತಿದ್ದಾರಲ್ಲವೇ, ಇದಕ್ಕೇನಂತಾರೆ ನಮ್ಮ ರವಿಕುಮಾರ್ ಅವರು?

   ಪ್ರತಿಕ್ರಿಯೆ
 15. ನಾಗರಾಜ್ ಡಿ ಜಿ ಹರ್ತಿಕೋಟೆ

  ಸೋಲು ಗೆಲುವು ಏನೇ ಇರಲಿ ಸಿದ್ದರಾಮಯ್ಯನವರ ಆಡಳಿತ ಇತಿಹಾಸದ ಪುಟಗಳಲ್ಲಿ ಅಭಿನಂದಾನರ್ಹವಾದದ್ದು..
  ತಳವರ್ಗದ ಸಮುದಾಯಗಳು ಇನ್ನೂ ಹೆಚ್ಚಿನ ರಾಜಕೀಯ ವಿಮರ್ಶ ಶಕ್ತಿಯನ್ನು ಬೇಗ ಹೊಂದುವಂತಾಗಲಿ…

  ಪ್ರತಿಕ್ರಿಯೆ
 16. T K Kamesha

  ರಾಜ್ಯದ ಎಲ್ಲಾ ವರ್ಗಗಳ ಜನರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದ ಉತ್ತಮ ಆಡಳಿತಗಾರ, ಇಂತಹ ಆಡಳಿತ ಅನುಭವಿಸಿದ ಜನರು ಸಿದ್ದರಾಮಯ್ಯನವರನ್ನು ಆಡಳಿತದಿಂದ ದೂರ ತಳ್ಳಿರುವುದು ದುರಂತವೇ ಸರಿ!

  ಪ್ರತಿಕ್ರಿಯೆ
 17. Raghu Lycidas

  ಎಲ್ಲರ ಮನದಲ್ಲಿ ಸದಾ ‘ಸಿದ್ಧ’ ರಾಮಯ್ಯ ಸರ್ಕಾರ…

  ಪ್ರತಿಕ್ರಿಯೆ
 18. nidonifarmerslife

  ಇದು ಬಡವರ ಕಥೆ ಸರ. ಶ್ರೀಮಂತ ಜನಕ್ಕೆ ಅರ್ಥವಾಗುವುದಿಲ್ಲ.
  ಅದರೂ ಜನಸಾಮಾನ್ಯರಿಗೆ ಹಸಿವು ನಿಗಿಸಿದವರನ್ನು ಏಕೆ ಕಡೆಗಣಿಸಿದರು ಯಕ್ಷಪ್ರಶ್ನೆ ನನ್ನನ್ನು ಮಾಡುತ್ತದೆ. ಸರ

  ಪ್ರತಿಕ್ರಿಯೆ
 19. Ashok

  ಮೈ ಮುರಿದು ದುಡಿದೇ ತಿನ್ನುತಿದಂತ ಸೋಮಾರಿಗಳಿಗೆಲ್ಲಾ ಬರುವ ಸಹಜ ನೆನಪಿದು..

  ಪ್ರತಿಕ್ರಿಯೆ
 20. ಕಿರಣ್ ರಾಯಿಚೂರು

  ಹಸಿವು ಹೆಸರಿನಲ್ಲಿ ರಾಜಕೀಯ ಮಾಡುವುದು ಕೂಡ ಘೋರ ಅಪರಾಧ…ಹಸಿವು ಎನ್ನುವುದು ಯಾರನ್ನು ಕಾಡ ಬಾರದು ಆದರೆ ಅದನ್ನೇ ಗುರಾಣಿ ಆಗಿ ರಾಜಕಾರಣ ಮಾಡುವುದು ಘೋರ ಅಪರಾಧ

  ಪ್ರತಿಕ್ರಿಯೆ
 21. ಶ್ರೀನಿವಾಸಲು

  ನಿಮ್ಮ ಅನಿಸಿಕೆಯಲ್ಲಿ ನಾನೂ ಬಾಗಿ. ನನ್ನ ಜೀವನದಲ್ಲೂ ಅನ್ನ-ಶೂನ್ಯತೆ ಆಯಿತು. ಓದುತ್ತಿದ್ದ ಕೋರ್ಸ್ ಬಿಟ್ಟೆ. ಈಗಲೂ ಪರಿತಪಿಸುತ್ತಿದ್ದೇನೆ. ಆಗ ನಮ್ಮ ಸಿದ್ದರಾಮಯ್ಯ ಇದ್ದಿದ್ದರೆ….ನನ್ನ ವಯಸ್ಸು ೬೯.

  ಪ್ರತಿಕ್ರಿಯೆ
 22. Rajesh

  Sir this article making me cry I am bug time follower of Siddhu sir…can’t imagine his current situation.Hopefully he should get bigger role.His services are still needed for Karnataka

  ಪ್ರತಿಕ್ರಿಯೆ
 23. Deepak Kumar

  Good article . Unfortunately people of Karnataka did not understand his socialist mindset. It’s big loss for all the backward classes of Karnataka to have let him down. Not sure when Karnataka will get the next Devraj Urs or Siddaramaiah as CM!!

  ಪ್ರತಿಕ್ರಿಯೆ
 24. Kiran

  ಹಸಿದವನಿಗೆ ಮೀನು ನೀಡುವ ಬದಲು ಮೀನು ಹಿಡಿಯುವುದನ್ನು ಕಳಿಸು ಅನ್ನುತ್ತಾರೆ ತಿಳಿದವರು.
  ಆದರೆ ಕಾಂಗ್ರೆಸ್ ನ ನೀತಿ ಎಂದರೆ ಜನರನ್ನು ಭಿಕ್ಷುಕರಾಗಿಯೇ ನೋಡೋದು, ಜನ ಯಾವಾಗಲು ಬೇಡುತ್ತಲೇ ಇರಬೇಕು, ಅವರು ನೀಡುವ ಪೋಸ್ ಕೊಡುತ್ತಲೇ ಇರಬೇಕು..ಅದಕ್ಕೆ ಅವರಿಗೆ ಭಾಗ್ಯಗಳ ಮೇಲೆ ಭಾಗ್ಯಗಳು ಹೊಳೆಯುತ್ತವೆ..
  ಸ್ವತಂತ್ರ ಬಂದು ೭೦+ ವರ್ಷಗಳಾದರೂ ನಮ್ಮಲ್ಲಿ ಇನ್ನು ಬಡತನ ಏಕಿದೆ? ಜನ ಯಾಕೆ ಹಸಿವಿನಿಂದ ಸಾಯುತ್ತಾರೆ? ಹಿಂದುಳಿವರೆಂದು ಕರೆಸಿಕೊಳ್ಳಲ್ಲು ಏಕಿಷ್ಟು ಪೈಪೋಟಿ? ನಿಜವಾಗಿ ಹಿಂದುಳಿದವನು ಎಂದು ಒಬ್ಬ ಸ್ವಾಭಿಮಾನಿ ಮನುಷ್ಯನಿಗೆ ತನ್ನನ್ನು ತಾನೇ ಕರೆದುಕೊಳ್ಳಲು ನಾಚಿಕೆ ಆಗಬೇಕು, ಆದರೆ ದೇಶದಲ್ಲಿ ಹಿಂದುಳಿದ ಟ್ಯಾಗ್ ಅಂಟಿಸಿಕೊಳ್ಳಲು ಹೋರಾಟಗಳೇಕೆ ನೆಡೆಯುತ್ತಿವೆ?
  ಒಬ್ಬ ಉತ್ತಮ ನಾಯಕ ನಮ್ಮ ದೇಶಕ್ಕೆ ಮೊದಲೇ ಸಿಕ್ಕಿದ್ದರೆ ನಮ್ಮಲ್ಲಿ ಸ್ವಾಭಿಮಾನ, ಆತ್ಮಾಭಿಮಾನ ಬೆಳೆದು ಜನರು ಎಲ್ಲದಕ್ಕೂ ಅಸಹಾಯಕ ಭಿಕ್ಷುಕರಂತೆ ಸರಕಾರದ ಕಡೆ ನೋಡುವುದನ್ನು ಬಿಟ್ಟು ನಮ್ಮ ಅನ್ನ ನಾವು ದುಡಿದುಕೊಳ್ಳುತ್ತೇವೆ, ಅದಕ್ಕೆ ಅಡ್ಡಿ ಬರದೇ ಸಹಾಯ ಮಾಡಿ ಎಂದು ಮಾತ್ರ ಹೇಳುತ್ತಿದ್ದರು, ಆದರೆ ನಮಗೆ ಸಿಕ್ಕಿದ ದರಿದ್ರ ನಾಯಕತ್ವದಿಂದ ಬೇಡುವ, ಅಸಹಾಯಕ ಪೀಳಿಗೆಗಳೇ ಸೃಷ್ಟಿಯಾಗಿವೆ…
  ಇದು ನಿಜವಾದ ದುರಂತ…

  ಪ್ರತಿಕ್ರಿಯೆ
 25. Shafi Ahamed yandigeri

  ಸಿದ್ದರಾಮಯ್ಯರನ್ನು ಇಂತಹ ಸ್ಥಿತಿಗೆ ತರಲು. ಅವರು ಯಾವ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ರ ಶ್ರೇಯೋಭಿವೃದಿ ಹೋರಾಟ ಮಾಡಿದರು ಅವರೇ ಕಾರಣ. ಚುನಾವಣಾ ವೇಳೆ ಸಿದ್ದರಾಮಯ್ಯ ಯೋಜನೆಗಳನ್ನು ಈ ವರ್ಗ ಪರಿಗಣಿಸಲೇ ಇಲ್ಲ…ಹಳೇ ಚಾಲಿಯಂತೆ ಜಾತಿ-ಸಮುದಾಯ. ವ್ಯಕ್ತಿ ನಿಷ್ಠೆ ಗೆ ಬಲಿಯಾದರು…..ಇದು ದುರಂತವೇ ಸರಿ ಅಥವಾ ನಮ್ಮ ದುರಾದೃಷ್ಟವೂ ಒಬ್ನ ಸಮಾಜಿಕ ಮೌಲ್ಯದ ನಾಯಕನನ್ನು ಕಳೆದುಕೊಂಡಿದ್ದೇವೆ….

  ಶಫಿ ಅಹ್ಮದ್ ಯಂಡಿಗೇರಿ

  ಪ್ರತಿಕ್ರಿಯೆ
 26. ಶ್ರೀಕಾಂತ್ ಭಜಂತ್ರಿ

  ನಿಮ್ಮ ಲೇಖನ ನನ್ನ ಜೀವನದಲ್ಲಿ ನಡೆದ ೨೨ ವರ್ಷಗಳ ಹಿಂದೆ ನಡೆದ ಘಟನೆಗಳಂತ ಕರೆದುಕೊಂಡು ಹೋಯ್ತು. ಆಗ ನಮ್ಮ ಓಣಿ ಹತ್ತಿರ ವಿದ್ದ ಮೇಲ್ವರ್ಗದ ಮನೆಗಳ ಮುಂದೆ ನಡೆಯುತ್ತಿದ್ದ ಮದುವೆ ಸದ್ದು ಕೇಳಿ ನಾವೆಲ್ಲ ಊಟಕ್ಕೆ ಹೋಗುತ್ತಿದ್ದವು. ನಮ್ಮನ್ನಲ್ಲ ನೋಡಿದ ಅವರು ಮದುವೆ ಚೆಪ್ಪರದ ಹೊರಗೆ ನಿಲ್ಲಿಸುತ್ತಿದ್ದರು. ಕೊನೆಗೆ ಉಳಿದರೆ ಅಳಿದು ಉಳಿದಿದ್ದನ್ನು ಊಟಕ್ಕೆ ಕೊಡುತ್ತಿದ್ದರು. ಇಲ್ಲ ಊಟವಿಲ್ಲ ಎಂದು ಕಳಿಸುತ್ತಿದ್ದರು.
  ಅಡುಗೆ ಉಳಿದರೆ ಮಾರನೆ ದಿನ ಮುಂಜಾನೆ ನಮ್ಮ ಓಣಿಗೆ ಬಂದು ಅಡುಗೆ ಉಳಿದಿದೆ ಬಂದು ತಗೊಂಡು ಹೋಗಿ ಎಂದು ಡಂಗೂರ ಸಾರುವ ರೀತಿ ಹೇಳುತ್ತಿದ್ದರು. ನಾವೆಲ್ಲ ಚಿಕ್ಕ ಹುಡುಗರ ಆಗ ಅವರ ಮಾತನ್ನು ಕೇಳಿದ ತಕ್ಷಣ ಅನ್ನಕ್ಕೆ ಒಂದು, ಹುಗ್ಗಿ ಇಲ್ಲ ಸೀರಾಗೆ ಅಂತ ಒಂದೊಂದು ದಬರಿ, ಮುಚ್ಚಾಳದ ತಾಟು ಹಿಡಕೊಂಡು ಸಾಲು ಗಟ್ಟಿ ಓಡುತ್ತ ಮೇಲ್ವರ್ಗದ ಜನರ ಮನೆ ಮುಂದೆ ನಿಲ್ಲುತ್ತಿದ್ದಿದ್ದವು. ಆಗ ಒಂದೊಂದು ಬಾರಿ ಹಳಸಿದ ಅನ್ನ ಕೊಟ್ಟಿದ್ದು ನೆನಪಿಗೆ ಬಂತು.
  ಆದರೆ ಈಗ ಕಾಲ ಬದಲಾಗಿದೆ. ಧರ್ಮದ ನಶೆಯೇ ಹೊಟ್ಟೆ ತುಂಬಿಸುವ ಹಾಗೆ ವಿಜೃಂಭಿಸುತ್ತಿದೆ. ಧರ್ಮ ರಾಜಕಾರಣ ಹಸಿವನ್ನು ಮರೆಮಾಚುವ ಮಟ್ಟಿಗೆ ಬೆಳೆದು ನಿಂತಿದೆ. ಆದರೆ ಬಡವರ ಪರ ಹತ್ತು ಹಲವು ಯೋಜನೆ ಜಾರಿ ಮಾಡಿ ಚುನಾವಣೆಯಲ್ಲಿ ಸೋತ ನಂತರ ಸಿದ್ದರಾಮಯ್ಯ ಕುಮಾರಸ್ವಾಮಿ ಮುಂದೆ ಕೈ ಕಟ್ಟಿ ನಿಂತ ಪರಿ ನಾವು ದಶಕಗಳ ಹಿಂದೆ ಮೇಲ್ವರ್ಗದ ಮನೆ ಮುಂದೆ ನಿಲ್ಲುತ್ತಿದ್ದ ದೃಶ್ಯ ನೆನಪಾಯ್ತು. ಮನಸ್ಸಿಗೆ ಘಾಸಿಯಾಯ್ತು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: