ಮಂಜುನಾಥ್ ಕಾಮತ್
ಮೂವತ್ತೈದು ವರುಷದ ಹಿಂದೆ ತಂದೆ ವ್ಯಾಪಾರ ಆರಂಭಿಸಿದ್ದು ಹಲಸಿನ ಚಿಪ್ಸು ತಯಾರಿ ಮತ್ತು ಮಾರಾಟದಿಂದ. ನಾಲ್ಕೈದು ಹಲಸುಗಳ ದೊಡ್ಡ ಚೀಲವನ್ನು ಒಬ್ಬರೇ ತಲೆಯ ಮೇಲೆ ಹೊತ್ತುಕೊಂಡು, ಮನೆಗೆ ತಂದು ಚಿಪ್ಸು ಮಾಡಿ ಸಂಜೆಯೊಳಗೆ ನಿಟ್ಟೆಯಿಂದ ಕಾರ್ಕಳಕ್ಕೆ ನಡೆದೇ ಹೋಗಿ ಹಣ ಸಂಪಾದನೆ ಆರಂಭಿಸಿದ್ದಂತೆ.
ಆ ನಂತ್ರ ಹಲಸು ಹುಡುಕ್ಕೊಂಡು ಹೋಗೋದು, ಕೊಯ್ಯೋದು, ಕೆಲಸಕ್ಕೆ ಜನ್ರ ತಾಪತ್ರಯದಿಂದಾಗಿ ಅದನ್ನು ಬಿಟ್ಬಿಟ್ರು. ಖಾರಕಡ್ಡಿ, ಸೇಮಿಗೆ, ಮಸಾಲೆ ಕಡ್ಲೆ, ತುಕುಡಿ, ಮಿಕ್ಷರ್ ಮೊದಲಾದ ತಿಂಡಿಗಳ ತಯಾರಿ ಮತ್ತು ಮಾರಾಟವನ್ನೇ ನೆಚ್ಚಿಕೊಂಡರು. ಆ ಹಣದಿಂದಲೇ ಅವ್ರ ಅಕ್ಕ ತಂಗಿಯರ ಮದುವೆ, ನನ್ನಕ್ಕನ ಮದುವೆ, ನನ್ನ ಓದಿನ ಖರ್ಚುಗಳನ್ನೆಲ್ಲಾ ನಿಭಾಯಿಸಿ ಈಗ ನನಗೆ ಕೆಲಸ ಸಿಕ್ಕ ಎರಡು ವರುಷದ ಬಳಿಕ ತನ್ನ ಉದ್ಯೋಗದಿಂದ ನಿವೃತ್ತಿ ಹೊಂದಿದ್ದಾರೆ.
ಈಗಲೂ ತಿಂಡಿ, ಮಳೆಗಾಲದಲ್ಲಿ ಚಿಪ್ಸು ಎಲ್ಲವನ್ನೂ ಮಾಡುತ್ತೇವೆ. ಮಾರಾಟಕ್ಕಲ್ಲ. ಕೇವಲ ನಮ್ ರುಚಿಗಷ್ಟೇ. ಆದರೆ ಪ್ರತೀ ಭಾರಿ ತಿಂಡಿ ಮಾಡೋವಾಗಲು ಹಳೆಯ ಕತೆಗಳ ಮೆಲುಕು ನನಗಿಷ್ಟ.
ಸಂಬಂಧಿಕರೊಬ್ಬರ ಮದುವೆಯ ಸಂದರ್ಭ. ತಂದೆಯ ಸಹಾಯಕ್ಕೆ ಖುಷಿಯಾಗಿ ಆ ಮನೆಯವ್ರು ಮೂರು ಸೇರು ಅಕ್ಕಿಕೊಟ್ಟರಂತೆ. ಆ ಅಕ್ಕಿಯನ್ನು ಮನೆಗೆ ತಂದು ಚಕ್ಕುಲಿ ಮಾಡಿ, ಮಾರಿ, ಬಂದ ಹಣದಲ್ಲಿ ಹಲಸಿನ ಚಿಪ್ಸು ತಯಾರಿಕೆಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿ ಉದ್ಯೋಗ ಶುರು ಮಾಡಿದ್ರಂತೆ.
ಅದಕ್ಕಿಂತ ಮೊದಲು ಮುಂಬೈನಲ್ಲಿ, ಮೈಸೂರಿನಲ್ಲಿ ಹೋಟೆಲಲ್ಲಿ ಕೆಲಸ. ಮೈಸೂರು ಕೆ.ಆರ್.ಎಸ್ ಡ್ಯಾಮು ನೋಡೋಕೆ ಹೋದೋರಿಗೆ ಕಾಲಿಗೆ ಕಬ್ಬಿಣವೇನೋ ಚುಚ್ಚಿ ಕಾಲು ನೋವು ಹೆಚ್ಚಿ ಕೆಲಸ ಮಾಡಲಾಗದೆ ಊರಿಗೆ ಬಂದವ್ರು. ಇಲ್ಲೇ ಔಷಧಿ ಮಾಡಿ, ಗುಣಮುಖರಾಗಿ ಮತ್ತೆ ಪರವೂರಿಗೆ ದುಡಿಯೋಕೆ ಹೋಗ್ಬೇಕು ಅಂತಿದ್ದವರಿಗೆ ಸಿಕ್ಕಿದ ಮೂರು ಸೇರು ಅಕ್ಕಿ ಊರಲ್ಲೇ ವ್ಯಾಪಾರ ಶುರು ಮಾಡೋಕೆ ಪ್ರೇರೇಪಿಸಿತು.
ಈ ನಡುವೆ ಆ ಕಾಲದಲ್ಲಿ ತಂದೆಗೆ ಸಹಾಯ ಮಾಡಿದೋರು ಹಲವರು. ಅದ್ರಲ್ಲಿ ಮಿಲಿಟ್ರಿ ಮ್ಯಾನ್ ಮೋನಪ್ಪಣ್ಣನ ಸಹಾಯ ಇಂದಿಗೂ ತಂದೆ ಮರೆಯೋದೇ ಇಲ್ಲ. ನಡೆದುಕೊಂಡೇ ಹೋಗುತ್ತಿದ್ದ ತಂದೆಗೆ ಜಾಮೀನು ನಿಂತು ಲೋನ್ ಮಾಡಿಸಿ ಸೈಕಲ್ ಕೊಡಿಸಿದೋರು ಅವರೇ. ಅವರು ಇತ್ತೀಚೆಗಷ್ಟೇ ತೀರಿಕೊಂಡಾಗ ತಂದೆ ಬಲು ಭಾವುಕರಾಗಿದ್ದರು.
ವ್ಯಾಪಾರ ಸ್ವಲ್ಪ ದೊಡ್ಡದಾಗಲು ಪ್ರೇರೇಪಿಸಿದ್ದು ಅಮ್ಮ. ಕಳೆದ ಮೂವತ್ತೆರಡು ವರುಷಗಳಿಂದ ಕೆಲಸದವರನ್ನು ಇಡದೇ ಇಬ್ಬರೇ ಸೇರಿ ಇಷ್ಟೆಲ್ಲ ಮಾಡಿದ್ದಾರೆ. ಹೀಗೆ ಪ್ರತೀ ಮನೆಯ ಕಥೆಯೂ ವಿಭಿನ್ನ. ನಾವು ಹೆಚ್ಚಿನೋರು ಮಧ್ಯಮ ವರ್ಗದೋರು. ಬಡತನದಿಂದ ಮಧ್ಯಮ ವರ್ಗಕ್ಕೆ ದೂಡಿದ್ದು ನಮ್ಮ ತಂದೆ ತಾಯಿಗಳ ಪರಿಶ್ರಮ. ಓದಿ ಉದ್ಯೋಗದಲ್ಲಿರೋ ನಾವುಗಳು ದಿನದಿನಕ್ಕೂ ಹೊಸತಾಗುತಿರೋ ಹೊಸತನದೊಂದಿಗೆ ಹೊಂದಿಕೊಳ್ಳಲು ಹೆಣಗಾಡೋದ್ರಲ್ಲೇ ಕಾಲ ಕಳೆಯುತ್ತಿದ್ದೇವೆ. ಆ ನಡುವೆ ಅಪ್ಪ ಅಮ್ಮಂದಿರ ಮೂವತ್ತು ನಲ್ವತ್ತು ವರುಷಗಳ ಕಷ್ಟದ ದುಡಿಮೆಯನ್ನು ಸುಮ್ಮನೆ ಮರೆತು ಬಿಡುತ್ತೇವೆ.
ಗುರುವಾರಕ್ಕೆ ರಜೆ ಮುಗಿಯುತ್ತೆ. ಆಮೇಲೆ ಬೆಳಿಗ್ಗೆ ಎಂಟಕ್ಕೆ ಮನೆ ಬಿಟ್ಟೋನು ಮನೆ ಸೇರೋದು ರಾತ್ರಿ ಎಂಟಕ್ಕೇ. ತಿಂಡಿ ತಿನಿಸುಗಳೇನೋ ಸಿಗುತ್ತವೆ. ಆದ್ರೆ ಅವನ್ನು ತಯಾರಿಸುವಾಗ ಅವರಿಗೆ ನೆನಪಾಗುವ ಹಳೆಯ ಕತೆಗಳು ಕೇಳೋಕೆ ಸಾಧ್ಯವಿಲ್ಲ. ಈ ರಜೆಯಲ್ಲಿ ಏನೇ ತಿಂಡಿ ಅಡಿಗೆ ಮಾಡಲಿ ಅದ್ರ ಫೋಟೋ ತೆಗೀತಿದ್ದೆ. ಅವ್ರ ಮಾತುಗಳನ್ನೆಲ್ಲ ಕೇಳುತ್ತಾ ಅವನ್ನೇ ಬರೆಯುತ್ತಿದ್ದೆ. ತಂದೆ ತಾಯಿಯ ಅನುಭವ ಬಹಳ ದೊಡ್ಡದು.
ಈ ರಜೆಯಲ್ಲೇ ಜಾಸ್ತಿ ದಿನಗಳು ನಾನು ಮನೆಯಲ್ಲಿದ್ದದ್ದು. ಇಲ್ಲಾಂದ್ರೆ ಸುತ್ತಾಡೋದೇ ನನ್ನ ಕೆಲಸ. ಸುತ್ತಾಡಿದಾಗ ಸಿಗೋ ಕತೆ ಅನುಭವಗಳು ಮನೆಯಲ್ಲಿ ಕೂತು ಕಿವಿಯಾದಾಗಲೂ ಸಿಗುತ್ತೆ ಅನ್ನೋದನ್ನು ಈ ರಜೆ ನನಗೆ ಕಲಿಸಿಕೊಟ್ಟಿದೆ.





ನಿಜ. ಬಡತನದಿಂದ ಕೆಳಮಧ್ಯಮ, ಕೆಳಮಧ್ಯಮದಿಂದ ಮಧ್ಯಮ , ಮಧ್ಯಮದಿಂದ ಮೇಲ್ಮಧ್ಯಮಕ್ಕೆ ಏರುವ ಬಡಿದಾಟದಲ್ಲಿ ಒಂದು ಕುಟುಂಬದ ಕನಿಷ್ಟ ಐದು ತಲೆಮಾರುಗಳು
ಸವೆದುಹೋಗುತ್ತವೆ. ಆಮೇಲೆ ಆರನೆಯ ತಲೆ ಶ್ರೀಮಂತ ಎನಿಸಿಕೊಳ್ಳಲು ಕೈಚಾಚಿ ಎಟುಕದೆ ತಳದ ಬಡತನಕ್ಕೇ ಮತ್ತೆ ಬಿದ್ದುಬಿಡುತ್ತದೆ. ಮತ್ತೆ ಸರ್ಕಸ್ ಶುರು!!.
ಮಧ್ಯಮವರ್ಗ ಎನ್ನುವುದು ಜಗತ್ತಿನ ಯಾವಮೂಲೆಯಾದರೂ ಅಷ್ಟೆ ನೋಡಿ,, ಜೀವನೋತ್ಸಾಹವೆಂಬ ವರ ಮತ್ತು ಹಪಾಹಪಿಯೆಂಬ ಶಾಪಗಳನ್ನು ಏಕಕಾಲಕ್ಕೆ ಪಡೆದ ಗ್ರಸ್ತವರ್ಗ.
ಕಾಮತ ಅವರೇ, ಜಾನಪದದ ಒಂದು ಹಾಡು ಹೀಗಿದೆ, ತಿಟ್ಹತ್ತಿ ತಿರುಗಿ ನೋಡ್ಯಾಳೆ
ಹೆಣ್ಣು ತವರಿಂದ ಮುಂದೆ ಹೋಗುವಾಗ ಹೃದಯ ತುಂಬಿ ತಿರುಗಿ ತನ್ನ ತುಳಿದ ದಾರಿ ನೋಡಿದ ಹಾಗೆ ನಾವೂ ನಮ್ಮ ಜೀವನದ ದಾರಿ ನೋಡಬೇಕು. ಅಲ್ಲಿ ಅನೇಕ ಸಿಹಿ ಕಹಿ ನೆನಪುಗಳು ಇರುತ್ತವೆ. ತಮಾಷೆ ಗೊತ್ತಾ ಇಲ್ಲಿ ಕಹಿ ಕೂಡಾ ಸಿಹಿ ಸಿಹಿ ಆಗಿರುತ್ತೆ. ಮಾನಸಿಕ ಶಕ್ತಿ ಕೊಡುತ್ತೆ. ನಿಮ್ಮ ನೆನಪು ಹೀಗೆ ಇರಲಿ. ತಂದೆ ತಾಯಿಯನ್ನು ಒಳಗೊಂಡಿರಲಿ