ಪಿ ಶೇಷಾದ್ರಿ ನಿರ್ದೇಶನದ, ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಚಿತ್ರದ ಬಗ್ಗೆ ಪ್ರೊ ಸಿ ಎನ್ ಆರ್ ಅವರು ವಿವರವಾದ ನೋಟವನ್ನು ಹರಿಸಿದ್ದರು. ಇದರಲ್ಲಿ ಒಂದು ಚಿತ್ರ ಮೂಲ ಕೃತಿಗೆ ನಿಷ್ಠವಾಗಿರಬೇಕೇ ಬೇಡವೇ? ಎನ್ನುವ ಪ್ರಶ್ನೆಯನ್ನು ಮುಂದುಮಾಡಿದ್ದರು.
ಇದಕ್ಕೆ ಜೋಗಿ ಪ್ರತಿಕ್ರಿಯಿಸಿದ್ದರು. ಅದು ಇಲ್ಲಿದೆ
ಈ ಪ್ರತಿಕ್ರಿಯೆಗೆ ಪ್ರೊ ಸಿ ಎನ್ ಆರ್ ಕೊಟ್ಟ ಉತ್ತರ ಇಲ್ಲಿದೆ-
ಈ ಚರ್ಚೆಯಲ್ಲಿ ನೀವೂ ಭಾಗವಹಿಸಬಹುದು
avadhimag@gmail.com ಗೆ ನಿಮ್ಮ ಅನಿಸಿಕೆಯನ್ನುಕಳಿಸಿಕೊಡಿ
ಪ್ರೊ ಸಿ ಎನ್ ರಾಮಚಂದ್ರನ್
ಪ್ರಿಯ ಜೋಗಿ ಅವರಿಗೆ:
ನಮಸ್ಕಾರ. ನಿಮ್ಮ ಗಂಭೀರ ಹಾಗೂ ಅನುಭವವನ್ನು ಆಧರಿಸಿದ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಇಂದು ನಿಮ್ಮ ಲೇಖನವನ್ನು ಮತ್ತೊಮ್ಮೆ ಓದಿದಾಗ ಮತ್ತೆ ಕೆಲವು ಪ್ರಶ್ನೆಗಳು /ಅನಿಸಿಕೆಗಳು ಉದ್ಭವಿಸಿದುವು; ಅವುಗಳನ್ನು ನಿಮ್ಮೊಡನೆ/ ಇತರ ಓದುಗರೊಡನೆ ಹಂಚಿಕೊಳ್ಳುತ್ತಿದ್ದೇನೆ –ಕೇವಲ ನನ್ನ ಅರಿವನ್ನು ವಿಸ್ತರಿಸಿಕೊಳ್ಳಲು.
ನೀವು ಕಾದಂಬರಿಯಿಂದ ಒಂದು ಮುಖ್ಯ ಹಾಗೂ ದೀರ್ಘ ಭಾಗವನ್ನು ಉದ್ಧರಿಸಿ, ಇದನ್ನು ಚಲನಚಿತ್ರದಲ್ಲಿ ಹೇಗೆ ಅಳವಡಿಸಿಕೊಳ್ಳಲು ಸಾಧ್ಯ ಎಂದು ಕೇಳುತ್ತಾ, ನೇರ ವೈಚಾರಿಕತೆಗೆ ದೃಶ್ಯಮಾಧ್ಯಮದಲ್ಲಿ ಅವಕಾಶವಿಲ್ಲ, ಅದನ್ನು ಸೂಚಿಸಬಹುದು ಅಷ್ಟೇ, ಎಂದು ಮಂಡಿಸಿದ್ದೀರಿ.
ಹಾಗಾದರೆ:
ಅ) ಅನೇಕ ವರ್ಷಗಳ ಹಿಂದೆ ಬಂದ ಹಾಗೂ ಕೋಟ್ಯಾಂತರ ಜನರು ವೀಕ್ಷಿಸಿ ಆನಂದಿಸಿದ “ಮಹಾಭಾರತ” ಧಾರಾವಾಹಿಯಲ್ಲಿ, ಕೃಷ್ಣನ ಗೀತೋಪದೇಶ ಸುಮಾರು ಹತ್ತು ಕಂತುಗಳಲ್ಲಿ ಬಂದಿತು ಎಂದು ನೆನಪು. ಕೄಷ್ಣನ ಉಪದೇಶವು ನೇರ ವೈಚಾರಿಕತೆಯಲ್ಲದೆ ಬೇರೇನೂ ಅಲ್ಲ, ಅದಕ್ಕೆ ಯಾವ ದೃಶ್ಯಸ್ವರೂಪವೂ ಇರಲಿಲ್ಲ. ಅದನ್ನು ಪಂಡಿತ-ಪಾಮರರೆಲ್ಲರೂ ಮೆಚ್ಚಿಕೊಂಡದ್ದು ಹೇಗೆ?
ಆ) ನೀವು ಯಕ್ಷಗಾನವನ್ನು ಪ್ರಸ್ತಾಪಿಸಿದ್ದೀರಿ. ಪ್ರಾರಂಭದಲ್ಲಿ ಜನಸಾಮಾನ್ಯರ ಕಲೆಯಾಗಿದ್ದ ಯಕ್ಷಗಾನ ಇತ್ತೀಚೆಗೆ ಬದಲಾಗಿದ್ದು, ಅದರಲ್ಲಿ ವೈಚಾರಿಕ ಸಂವಾದ (ನ್ಯಾಯಾಲಯಗಳಲ್ಲಿ ನಡೆಯುವಂತೆ) ಘಂಟೆಗಟ್ಟಲೆ ನಡೆಯುತ್ತದೆ ಮತ್ತು ಅದನ್ನು ಎಲ್ಲಾ ಬಗೆಯ ಪ್ರೇಕ್ಷಕರೂ ಸ್ವೀಕರಿಸಿದ್ದಾರೆ. ಯಾವ ಕಾರಣಕ್ಕಾಗಿ?
ಇ) ಚಲನಚಿತ್ರಗಳಲ್ಲಿಯೂ, ಹಿಂದಿನ ಕನ್ನಡ “ಬಭ್ರುವಾಹನ” ಚಿತ್ರದಿಂದ ಪ್ರಾರಂಭಿಸಿ ಇತ್ತೀಚಿನ “ಪಿಂಕ್” ಹಿಂದಿ ಚಿತ್ರದ ವರೆಗೆ ದೀರ್ಘ ಸಂಭಾಷಣೆಗಳು ಹಾಗೂ ’ಭಾಷಣ’ಗಳು ಇವುಗಳನ್ನು ಪ್ರೇಕ್ಷಕರು ಮೆಚ್ಚಿದ್ದರು, ಮೆಚ್ಚಿದ್ದಾರೆ. ಹೇಗೆ?
ಈ) ದೃಶ್ಯಮಾಧ್ಯಮವೇ ಆದ ನಾಟಕಗಳಲ್ಲಿಯೂ, “ಭಕ್ತ ಕಬೀರ್,” “ಭಕ್ತ ಪ್ರಹ್ಲಾದ” ಇತ್ಯಾದಿಗಳಲ್ಲಿ ದೀರ್ಘ ’ಭಾಷಣ’ಗಳಿರುವುದು ನಿಮಗೆ ಗೊತ್ತು. ಅವುಗಳನ್ನು ನೋಡುಗರು ಏಕೆ ಇಷ್ಟಪಟ್ಟು ನೋಡುತ್ತಾರೆ?
ಅರ್ಥಾತ್, ನಾನು ಹೇಳುವುದು ಇಷ್ಟೇ:
ಓದುವ ಸಾಹಿತ್ಯದಲ್ಲಿ ಹೇಗೋ ಹಾಗೆ ನೋಡುವ/ಕೇಳುವ ದೃಶ್ಯಮಾಧ್ಯಮಗಳಲ್ಲಿಯೂ ನೇರ ವೈಚಾರಿಕತೆಗೆ ಸ್ಥಾನವಿದೆ. ಏಕೆಂದರೆ, ಮನುಷ್ಯರೆಲ್ಲರೂ ಕೇವಲ ಭಾವನಾಜೀವಿಗಳಲ್ಲ; ಅವರ ಮಸ್ತಿಷ್ಕಕ್ಕೂ ಕಾರ್ಯವನ್ನು ಅವರು ಬೇಡುತ್ತಾರೆ. ಈ ನೆಲೆಯಲ್ಲಿ, ನೀವು ಉದ್ಧರಿಸಿದ ಅಜ್ಜಿಯ ದೀರ್ಘ ಚಿಂತನೆಯನ್ನು (ಅಥವಾ ಅದರ ಒಂದು ಭಾಗವನ್ನು) ಹಾಗೆಯೇ ಚಿತ್ರದಲ್ಲಿ ಅವಳು ಹೇಳುವಂತೆಯೇ ಅಳವಡಿಸಿಕೊಂಡಿದ್ದರೆ ಏನು ನಷ್ಟವಾಗುತ್ತಿತ್ತು?
ಕೊನೆಯದಾಗಿ: ಇಂದಿನ ಪತ್ರಿಕಾ ಸಂಪಾದಕರು ’ಯಾರು ವಿಮರ್ಶೆಯನ್ನು ಓದುತ್ತಾರೆ?’ ಎಂದು ಪ್ರಶ್ನೆಯನ್ನು ಕೇಳಿ ಅದಕ್ಕೆ ’ಯಾರೂ ಓದುವುದಿಲ್ಲ’ ಎಂದು ತಾವೇ ಉತ್ತರಿಸಿ ಗಂಭೀರ ವಿಮರ್ಶೆ-ಚಿಂತನೆಗಳನ್ನು ಹೊರಗಿಟ್ಟಂತೆ, ಚಿತ್ರ ನಿರ್ದೇಶಕರೂ ’ವೈಚಾರಿಕತೆ ಯಾರಿಗೂ ಬೇಕಿಲ್ಲ’ ಎಂದು ತಾವೇ ತೀರ್ಮಾನಿಸಿ ಅದನ್ನು ಚಿತ್ರಗಳಿಂದ ಹೊರಗಿಡುತ್ತಿದ್ದಾರೆಯೇ? ಸಾಹಿತ್ಯ-ಚಲನಚಿತ್ರ, ಇತ್ಯಾದಿ ಕಲೆಗಳ ಗುರಿ ಕೇವಲ ಮನರಂಜನೆಯೆ?
ಇಷ್ಟು ಹೇಳಲು ಪ್ರಚೋದಿಸಿದ ನಿಮಗೆ ಕೃತಜ್ಞನಾಗಿದ್ದೇನೆ.
ರಾಮಚಂದ್ರನ್






ಇಂತಹ ಚರ್ಚೆಗಳು ಮತ್ತೆ ಮತ್ತೆ ಆಗಬೇಕು.
ಆಗ ಆ ಮಾಧ್ಯಮದಲ್ಲಿ ಕೆಲಸ ಮಾಡುವ ನನ್ನಂತಹವರಿಗೆ ಮಾತ್ರ ಅಲ್ಲ, ಚಿತ್ರ ನೋಡುವ ಜನ ಸಹ ಹೊಸ ಬಗೆಯ ನೋಡುವ ಕ್ರಮಕ್ಕೆ ತೆರೆದುಕೊಳ್ಳಬಹುದು.
ಇಂತಹ ಚರ್ಚೆ ನಡೆಸುತ್ತಾ ಇರುವ ಸಿಎನ್ನಾರ್ ಮತ್ತು ಜೋಗಿ ಅವರಿಗೆ, ಮುಂದೆ ಈ ಚರ್ಚೆಯಲ್ಲಿ ಅಭಿಪ್ರಾಯ ಮಂಡಿಸಬಹುದಾದ ಇತರರಿಗೆ ಥ್ಯಾಂಕ್ಸ್.
– ಬಿ.ಸುರೇಶ
ಪ್ರಿಯ ಸುರೇಶ್ ಅವರಿಗೆ:
ನಮಸ್ಕಾರ. ದೃಶ್ಯ ಮಾಧ್ಯಮದಲ್ಲಿ ನನಗೆ ನಿಮಗಿರುವಂತಹ ಅನುಭವ ಹಾಗೂ ಸಂಪರ್ಕವಿಲ್ಲದಿದ್ದರೂ ನನ್ನ ಅನಿಸಿಕೆಗಳನ್ನು ಓದಿ, ಇಂತಹ ಚರ್ಚೆ ನಡೆಯಬೇಕೆಂದು ಮಂಡಿಸಿದ್ದೀರಿ. ತುಂಬಾ ಸಂತೋಷವಾಯಿತು. ವಂದನೆಗಳು. ರಾಮಚಂದ್ರನ್
ಗುರುಗಳಾದ ಸಿಎನ್ನಾರ್ ಅವರಲ್ಲಿ ಸಪ್ರೇಮ ವಂದನೆಗಳು.
ನಾನು ಅನುಭವಿ ಎಂಬುದು ದೊಡ್ಡ ಮಾತು.
ನಾನಿನ್ನೂ ದೃಶ್ಯ ಮಾಧ್ಯಮದ ವಿದ್ಯಾರ್ಥಿ.
ನೀವು ಚರ್ಚಿಸುತ್ತಾ ಇರುವ ಸಿನಿಮಾ ನಾನಿನ್ನೂ ನೋಡಿಲ್ಲ. ಆದರೆ ಶಿವರಾಮ ಕಾರಂತರ “ಮೂಕಜ್ಜಿಯ ಕನಸುಗಳು” ನಾನು ಮೆಚ್ಚಿದ ಕಾದಂಬರಿಗಳಲ್ಲಿ ಒಂದು. ಆ ಕಾದಂಬರಿಯ ಶೀರ್ಷಿಕೆಯಲ್ಲಿ ಬಳಸಿರುವ “ಕನಸು” ಎಂಬ ಪದ ಸರಿಯಲ್ಲ ಎಂದು ಖುದ್ದು ಕಾರಂತರ ಜೊತೆಗೆ ಮಾತಾಡಿದ್ದು ನನಗಿನ್ನೂ ನೆನಪಿದೆ. ಅವರು ‘ಹಳವಂಡ ಎಂಬ ಪದ ಬಳಸಬೇಕಿತ್ತೇನಪ್ಪ?’ ಎಂದು ಕೇಳಿದ್ದರು. ನನಗೆ ಆಗ ಉತ್ತರ ತೋಚಿರಲಿಲ್ಲ. ಈಗಾಗಿದ್ದರೆ ಪ್ರಾಯಶಃ, “ಮೂಕಜ್ಜಿ ಕಂಡ ಸತ್ಯಗಳು” ಎಂದು ಸೂಚಿಸುತ್ತಿದ್ದೆನೇನೋ…
ಅದು ಹಾಗಿರಲಿ.
ಪಿ.ಶೇಷಾದ್ರಿ ಅವರ “ಮೂಕಜ್ಜಿ” ನೋಡಿದ ನಂತರ ನಿಮ್ಮ ದೃಶ್ಯಮಾಧ್ಯಮ ಕುರಿತ ಚಿಂತನೆಗೆ ನನ್ನದಾದ ಒಂದಷ್ಟು ಒಗ್ಗರಣೆ ಖಂಡಿತ ಸೇರಿಸುವೆ.
ನೀವು ಈ ಚಿಂತನೆಯಲ್ಲಿ ಮಂಡಿಸಿರುವ ಮಾತು ಮತ್ತು ಪ್ರಶ್ನೆಗಳು ಬಹುಮುಖ್ಯವಾದವು ಎಂಬುದಂತೂ ಸತ್ಯ.
ಅದಕ್ಕಾಗಿ ಮತ್ತೊಮ್ಮೆ ನಿಮಗೆ ಥ್ಯಾಂಕ್ಸ್, ಗುರುಗಳೇ.