ರಿಷಿಕೇಶ್ ಬಹದ್ದೂರ್ ದೇಸಾಯಿ
ಕಲಬುರ್ಗಿ ಪತ್ರಕರ್ತ ರ ಸಂಘ ಹಾಗೂ ಇತರ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂದು ಮಾಡಿದ ಭಾಷಣ.
‘ಸಾಹಿತ್ಯ ಸಮ್ಮೇಳನದಲ್ಲಿ ಸಮೂಹ ಮಾಧ್ಯಮಗಳ ಪಾತ್ರ’
ಎಲ್ಲರಿಗೂ ನಮಸ್ಕಾರ
ಸಾಹಿತ್ಯ ಸಮ್ಮೇಳನದಲ್ಲಿ ಸಮೂಹ ಮಾಧ್ಯಮಗಳ ಪಾತ್ರ ದ ಬಗೆಗಿನ ಈ ಪ್ರಮುಖ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ನಾನು ಆಭಾರಿ. ಪತ್ರಕರ್ತರ ಸಂಘದವರು ಹಾಗೂ ಇತರ ಸ್ನೇಹಿತರಿಗೆ, ಜಿಲ್ಲಾಧಿಕಾರಿಗಳು ಹಾಗೂ ನನ್ನ ಆತ್ಮೀಯ ಸ್ನೇಹಿತರಾದ ಶರತ್ ಭೀಮಯ್ಯ ಅವರಿಗೆ ಎಲ್ಲರಿಗೂ ವಂದನೆ.
ಕೆಲವು ವಾರಗಳ ಹಿಂದೆ ನನಗೆ ನನ್ನ ಸ್ನೇಹಿತರಾದ ಹನುಮಂತರಾವ್ ಭೈರಮಾಡಗಿ, ಭವಾನಿ ಸಿಂಗ್ ಹಾಗೂ ರಾಮಕೃಷ್ಣ ಬಡಶೇಷಿ ಸರ್ ಅವರು ಫೋನು ಮಾಡಿ ʻನಾವು ಒಂದು ಮಾಧ್ಯಮ ಕಾರ್ಯಾಗಾರ ಇಟ್ಟುಕೊಳ್ಳಬೇಕು ಅಂತ ಮಾಡಿದ್ದೇವೆ ನೀವು ಬರಬೇಕು, ನೀವೇ ದಿನಾಂಕ ನಿರ್ಧರಿಸಿ,ʼ ಅಂತ ಅಂದರು. ನಾನು ಹೆಂಗೂ ಫೆಬ್ರವರಿ ಮೂರನೇ ತಾರೀಕು ಕಲಬುರಗಿಗೆ ಬರುವುದಿತ್ತು. ʻಒಂದೇ ವಾರದಲ್ಲಿ ಎರಡು ಸಾರಿ ಬರುವುದು ಕಷ್ಟ. ನೀವು ಮಾಡಿಕೊಳ್ಳಿ, ನಾನು ಭಾಷಣ ಬರೆದು ಕಳಿಸುತ್ತೇನೆʼ ಅಂತ ಹೇಳಿದೆ. ನೀವು ಕಾರ್ಯಕ್ರಮ ೨೫ ಕ್ಕೆ ಮಾಡಬಹುದು ಅಂತ ಲೆಕ್ಕ ಇಟ್ಟುಕೊಂಡು ಒಂದೆರಡು ದಿನ ಮೊದಲು ಹನುಮಂತ ಅವರಿಗೆ ಭಾಷಣದ ಕರಡು ಕಳಿಸಿದೆ. ಸುಮ್ಮನೇ ಇರಲಿ ಅಂತ ಅದನ್ನು ಫೇಸುಬುಕ್ಕಿನಲ್ಲಿ ಹಾಕಿದೆ. ಅದನ್ನು ಸುಮಾರು ಮಿತ್ರರು, ಸಿಬ್ಬಂದಿಗಳು, ಜಾತಭಾಯಿಗಳು ಫೇಸುಬುಕ್ಕು, ವಾಟ್ಸಪ್ಪಿನಲ್ಲಿ ಹಂಚಿಕೊಂಡರು. ಅದನ್ನು ನೀವೆಲ್ಲ ಓದಿರ ಬಹುದು ಅಂತ ಅಂದುಕೊಳ್ಳುತ್ತೇನೆ. ಈಗ ಅದನ್ನು ಓದುವುದಿಲ್ಲ.
ಸುಮಾರು ೪೦೦ ಜನ ಅದನ್ನು ಮೆಚ್ಚಿಕೊಂಡರು, ೨೦೦ ಕ್ಕೂ ಹೆಚ್ಚು ಜನ ಪ್ರತಿಕ್ರಿಯಸಿದರು ಹಾಗೂ ೨೦೦ ರಷ್ಟು ಜನ ಅದನ್ನು ಹಂಚಿಕೊಂಡರು ಅಂತ ನನ್ನ ಮಗಳು ಇಂದ್ರಜಾ ಲೆಕ್ಕ ಇಟ್ಟಿದ್ದಾಳೆ. ಅದನ್ನು ಓದಿದ ಬಹುತೇಕರು ಅದನ್ನು ಮೆಚ್ಚಿಕೊಂಡರು. ನೀವು ಹೇಳಿದ್ದು ಸರಿ, ಅಂದರು.
ಆದರೆ ಕೆಲವರು ಅದು ಅಪೂರ್ಣ ಅಂತ ಅಂದರು. ಅವರಲ್ಲಿ ಕೆಲವರು ನಮ್ಮ ಜಿಲ್ಲೆಯ ಎಲ್ಲಾ ಸ್ಥಳಗಳ ಬಗ್ಗೆ ನೀವು ಬರೆದಿಲ್ಲ. ನಮ್ಮ ಊರಿನ ಮಾಹಿತಿ ಇದರಲ್ಲಿ ಇಲ್ಲ ಅಂತ ಕೆಲವರು ಹೇಳಿದರು. ಇನ್ನು ಜ್ಞಾನ ವೃದ್ಧರೂ, ಆತ್ಮೀಯರು, ನಮ್ಮವನೆಂದು ಬಗೆಯುವ ದೇವು ಪತ್ತಾರ್ ಅವರು ಇದು ಕೇವಲ ಬೆಂಗಳೂರಿನವರಿಗಾಗಿ ಬರೆದದ್ದಲ್ಲ, ಇದು ನಮ್ಮೆಲ್ಲರ ಜವಾಬ್ದಾರಿ ಅಂತ ತಿಳಿ ಹೇಳಿ ಸ್ಪಷ್ಟೀಕರಣ ರೂಪಿ ಲೇಖನ ಬರೆದರು. ಅವರ ಮಾತುಗಳ ಹಿಂದಿನ ತಥ್ಯವನ್ನೇ ಇಲ್ಲಿ ಮುಂದುವರೆಸುತ್ತೇನೆ.
ಅಮೇರಿಕೆಯ ಕರಿಯರ ನಾಯಕ ಮಾರ್ಟಿನ ಲೂಥರ್ ಕಿಂಗ್ ಜೂನಿಯರ್ ಅವರು ಮಾತೊಂದು ನನಗೆ ಪದೇ ಪದೇ ಕಾಡುತ್ತದೆ. ಅದು ʻʻಇಫ್ ಐ ಯಾಮ್ ನಾಟ್ ಫಾರ್ ಮೈಸೆಲ್ಫ್, ಹೂ ಇಸ್ ಫಾರ್ ಮಿ?ʼʼ ಅಂತ. ʻʻನನ್ನ ಪರವಾಗಿ ನಾನು ನಿಲ್ಲದಿದ್ದಲ್ಲಿ ಮತ್ಯಾರು ನಿಲ್ಲಬೇಕು?ʼʼ ಅಂತ. ಇದು ನಮ್ಮ ಜೀವನಕ್ಕೂ ಲಾಗೂ ಆಗುತ್ತದೆ.
ಬೆಂಗಳೂರಿನವರು ನಮ್ಮ ಬಗೆಗಿನ ಅವರ ಧೋರಣೆ ಯಿಂದಾಗಿ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಅನ್ನುವುದು ನಿಜವಾದರೆ, ನಾವು ನಮ್ಮ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳುವ ಅಗತ್ಯ ಇಲ್ಲವೇ?
ನಾಗಪುರದಲ್ಲಿ ಐಜಿಪಿ ಆಗಿರುವ ಐಪಿಎಸ್ ಅಧಿಕಾರಿ ಕನ್ನಡಿಗ ಮಲ್ಲಿಕಾರ್ಜುನ ಪ್ರಸನ್ನ ಅವರು ನನ್ನ ಲೇಖನ ನೋಡಿ ಫೋನು ಮಾಡಿದ್ದರು. ʻಗುಲಬರಗಾ ಅನ್ನೋದು ಗುಲಾಬ ಅರ್ಗ್ ನಿಂದ ಬಂದಿದೆ, ಅದರ ಅರ್ಥ ಹೂವು- ಬಳ್ಳಿ ಅಂತ ನನಗೆ ಗೊತ್ತಿರಲಿಲ್ಲ,ʼ ಅಂದರು. ʻಅಯ್ಯೋ ಪರವಾಗಿಲ್ಲ ಬಿಡಿ, ನಮ್ಮವರಿಗೇ ಎಷ್ಟೋ ಜನರಿಗೆ ಗೊತ್ತಿಲ್ಲʼ ಅಂತ ನಾನು ಅಂದೆ. ಈ ಮಾತನ್ನು ನಾನು ಯಾರನ್ನೂ ಹೀಯಾಳಿಸಲು ಹೇಳುತ್ತಿಲ್ಲ. ನನಗೆ ಕಂಡ ಸತ್ಯವನ್ನು ಹೇಳುತ್ತಿದ್ದೇನೆ.
ಉತ್ತರ ಕರ್ನಾಟಕವನ್ನೋ – ಕಲ್ಯಾಣ ಕರ್ನಾಟಕವನ್ನೋ ಬೆಂಗಳೂರಿನಲ್ಲಿರುವ, ದೆಹಲಿಯಲ್ಲಿರುವ ನಮ್ಮನ್ನಾಳುವವರು ನಿರ್ಲಕ್ಷಿಸಿದ್ದಾರೆ ಅಂತ ನಾವು ಗೋಳಾಡುತ್ತಿರುತ್ತೇವೆ. ಆದರೆ ಯಾಕೆ ನಿಮ್ಮನ್ನು ನಿರ್ಲಕ್ಷಿಸಬಾರದು ಅಂತ ಯಾರಾದರೂ ಕೇಳಿದರೆ ಕಾರಣ ಸಹಿತವಾಗಿ ಹೇಳುವ ಸ್ಥಿತಿಯಲ್ಲಿ ನಾವು ಇದ್ದೇವೆಯೇ? ಆಡಳಿತಾತ್ಮಕ ವಾಗಿ ಹಾಗೂ ಸಾಂಸ್ಕೃತಿಕವಾಗಿ ನಮ್ಮನ್ನು ಹೇಗೆ ಕಡೆಗಣಿಸಲಾಗುತ್ತಿದೆ? ಯಾಕೆ ಹಾಗೆ ಮಾಡಬಾರದು? ಮಾಡಿದರೆ ತಪ್ಪೇನು? ಅಂತ ಹೇಳುವಷ್ಟು ನಮ್ಮಲ್ಲಿ ಸಾಹಿತ್ಯ ಇದೆಯೇ? ಕೇಳಿಸಿಕೊಂಡವರು ತಲೆದೂಗುವಂತೆ, ಅವರ ಮನ್ನಸ್ಸನ್ನು ಒಪ್ಪಿಸುವಂತೆ ಹೇಳಲು ನಮಗೆ ಬಂದೀತೆ?
ಬೆಂಗಳೂರಿನಲ್ಲಿ ಸಹಚರ ಅಂತ ನಮ್ಮ ಸ್ನೇಹಿತರ ಗುಂಪು ಒಂದು ಇದೆ. ಅವರು ವರ್ಷಕ್ಕೊಂದು ಬಾರಿ ಕುಟುಂಬ ಸಮೇತ ಪ್ರವಾಸ ಹೋಗುತ್ತಾರೆ. ಒಮ್ಮೆ ಒಬ್ಬರು ಬೀದರಿಗೆ ಹೋಗೋಣ ಅಂದಾಗ ʻಅಲ್ಲೇನಿದೆ? ಬರೀ ಬಿಸಿಲು, ನೀರಿಲ್ಲ,ʼ ಅಂತ ಇನ್ನೊಬ್ಬರು ವಾದಿಸಿದರಂತೆ. ಕೊನೆಗೆ ನನ್ನನ್ನು ಕೇಳಿದಾಗ ಹಾಗೇನಿಲ್ಲ, ಬನ್ನಿ ಅಂತ ಕರೆದೆ. ಅವರು ಬಂದರು ನಾನು ಊರಿನಲ್ಲಿಯ ಪ್ರೇಕ್ಷಣೀಯ ಸ್ಥಳ ತೋರಿಸಿದ ಮೇಲೆ ಅವರ ಅಭಿಪ್ರಾಯ ಬದಲಾಗಿತ್ತು. ಆದರೆ ಲಕ್ಷಗಟ್ಟಲೇ ಜನರಲ್ಲಿ ಈ ಅಭಿಪ್ರಾಯ ಇನ್ನೂ ಇದೆ.
ನಿರ್ದೇಶಕ ಎಂ .ಎಸ್. ಸತ್ಯು ಅವರು ʻಬರʼ ಅನ್ನೋ ಸಿನಿಮಾ ಚಿತ್ರೀಕರಿಸಲು ಬೀದರ್ ಆಯ್ಕೆ ಮಾಡಿದಾಗಿನಿಂದ ಈ ಇಡೀ ಪ್ರದೇಶದ ಬಗ್ಗೆ ಹಳೇ ಮೈಸೂರಿನವರಿಗೆ ದುರಭಿಪ್ರಾಯ ಬಿದ್ದು ಬಿಟ್ಟಿದೆ. ಅದು ಸಹಜವೂ ಇರಬಹುದು. ಆದರೆ ಅದನ್ನು ಕಳೆಯಲು ನಾವು ಏನು ಮಾಡಿದ್ದೇವೆ? ಕರ್ನಾಟಕದ 30 ಜಿಲ್ಲೆಗಳನ್ನು ಮಳೆ ಪ್ರಮಾಣದಲ್ಲಿ ಪಟ್ಟಿ ಯಲ್ಲಿ ಬೀದರ್ ಜಿಲ್ಲೆ ಒಂಬತ್ತನೆ ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆ. ಇದನ್ನು ನಾವು ಜಗತ್ತಿಗೆ ಸಾರಿದ್ದೇವೆಯೆ? ಕುಡಿಯುವ ನೀರಿನ ಸಮಸ್ಯೆ ಇಲ್ಲದೇ ಇರುವ ರಾಜ್ಯದ ಕೆಲವೇ ಊರುಗಳಲ್ಲಿ ಬೀದರ್ ಒಂದು ಅನ್ನುವುದನ್ನೋ, ಇಲ್ಲಿ 70-80 ಅಡಿಗೆ ಬಾವಿಯಲ್ಲಿ ನೀರು ಸಿಗುತ್ತದೆ ಅನ್ನುವುದನ್ನೋ, ಇಲ್ಲಿನ ಸ್ಥಳೀಯ ಕನ್ನಡದಲ್ಲಿ ಕುಡಿಯುವ ನೀರಿಗೂ, ಬಳಸುವ ನೀರಿಗೂ ವ್ಯತ್ಯಾಸವಿಲ್ಲ , ಇಲ್ಲಿಯ ಜನರಿಗೆ ಸವಳು ನೀರು ಅಂದರೇನು ಅಂತ ಗೊತ್ತೇ ಇಲ್ಲ ಅನ್ನುವ ಸಿಹಿ ಸುದ್ದಿಯನ್ನು ನಾವು ಪ್ರಸಾರ ಮಾಡಿದ್ದೇವೆಯೇ? ಮಾಡುವ ಮೊದಲು ನಮಗೆ ಗೊತ್ತಿದೆಯೆ?
ಗುಲಬರಗಾ ಕಲ್ಯಾಣ ಚಾಲುಕ್ಯ ಚಕ್ರವರ್ತಿಯರ ನಾಡು ಅಂತ ಹೆಮ್ಮೆ ಪಡುವ ನಾವು ಅವರ ಸಾಧನೆಗಳೇನು ಅಂತ ಯಾರಾದರೂ ಕೇಳಿದರೆ ಹೇಳಬಲ್ಲವೇ?
ಸುಮಾರು ಒಂದು ಸಾವಿರ ವರ್ಷ ದ ಹಿಂದೆ ಕಲ್ಯಾಣದ ಮೂರನೇ ಸೋಮೇಶ್ವರ ಮಾನಸೋಲ್ಲಾಸ ವೆಂಬ ಸಂಸ್ಕೃತ ವಿಕಿಪೀಡಿಯಾದ ರಚನೆ ಮಾಡಿದ, ಇದು ಶಬ್ದಾಂಭುದಿ, ರತ್ನಕೋಶ ಗಳಿಗಿಂತ ಹಿಂದಿನದು ಎಂದು ನಾವು ಯಾರನ್ನಾದರೂ ತಿದ್ದಬಲ್ಲೆವೆ? ವಿಜ್ಞಾನೇಶ್ವರ ಊರಾದ ಮರ್ತೂರನ್ನು, ಮಾಸಿಮಾಡನ್ನು ಪವಿತ್ರ ಸ್ಥಾನವೆಂದು ನೋಡುವ ನಾವು ಅವನ ಕೃತಿಯಾದ ಮಿತಾಕ್ಷರದ ಮುಖ್ಯಾಂಶಗಳನ್ನು ತಿಳಿದಿದ್ದೇವೆಯೇ? ಹಿಂದೂ ಕಾಯಿದೆ ಯ ವೈಶಿಷ್ಟ್ಯವೇನು ಅಂತ ಯಾರಾದರೂ ಕೇಳಿದರೆ ನಮ್ಮ ಬಳಿ ಉತ್ತರ ವಿದೆಯೇ?
ಈಗಂತೂ ನಮ್ಮೆಲ್ಲರ ಜೀವನವನ್ನು ಸಾಮಾಜಿಕ ಮಾಧ್ಯಮ ಆವರಿಸಿಕೊಂಡಿದೆ. ನಮ್ಮ ಕೈಯಲ್ಲಿರುವ ಫೋನು ವಿಶ್ವ ದರ್ಶನ ಮಾಡಿಸುವುದನ್ನು ಬಿಟ್ಟು ಕರಾಳ ಸುಳ್ಳಿನ ಲೋಕಕ್ಕೆ ನಮ್ಮನ್ನು ಎಳೆಯುತ್ತಿದೆ. ವಾಟ್ಸಪ್ಪು, ಫೇಸುಬುಕ್ಕುಗಳು ಸುಳ್ಳು ಸುದ್ದಿ ಹರಡುತ್ತಿವೆ. ಈಗ ಪ್ರಾಮಾಣಿಕ, ಸತ್ಯ ಶೋಧಕ ವರದಿಗಾರರ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚು ಇದೆ. ಇವು ಭಯಂಕರ ಅಪಜ್ಞಾನದ, ಸುಳ್ಳು ಮಾಹಿತಿಯ ದಿನಗಳು . ಇಲ್ಲಿ ಮೊದಲಿಗೆ ಮೆರೆಯುವುದು ಸುಳ್ಳೇ ಆದರೂ ಕೊನೆಗೆ ಜಯ ವಾಗುವುದು ಸತ್ಯಕ್ಕೇ. ಹಾಗಂತ ನಾವು ನಮ್ಮ ಪ್ರಯತ್ನ ಬಿಡಬಾರದು.
ಒಂದು ಉದಾಹರಣೆ ಕೊಡುತ್ತೇನೆ. ಮೊನ್ನೆ ಬಿಜಾಪುರದ ಶಾಸಕ ಬಸನಗೌಡ ಪಾಟೀಲರು ʻʻಉರ್ದು ಎಂಬ ವಿದೇಶಿ ಭಾಷೆಯನ್ನು ಕಲಿಸುವ ಶಾಲೆಗಳು ನಮ್ಮಲ್ಲಿ ಇವೆ. ಇದು ದುರ್ದೈವʼʼ ಅಂತ ಫರಮಾನು ಹೊರಡಿಸಿದರು. ಉರ್ದು ಎನ್ನುವುದು ಅಪ್ಪಟ ಭಾರತೀಯ ಭಾಷೆ. ಅದು ದೆಹಲಿಯ ಸೈನಿಕ ಬಿಡಾರದಲ್ಲಿ ಹುಟ್ಟಿ ದಖ್ಖನಿನಲ್ಲಿ ಬೆಳೆದದ್ದು. ಉರ್ದು ಅಂದರೆ ಟರ್ಕಿ ಭಾಷೆಯಲ್ಲಿ ಸೈನಿಕರ ತಂಗುದಾಣ, ಟೆಂಟು, ದಂಡು ಪ್ರದೇಶ ಅಂತ ಅರ್ಥ. ಉರ್ದುವಿನ ಮೊದಲ ಗದ್ಯ ಬರಹ ʻತಫಸೀರ್ ಎ ಮುಲತಕತ್ʼ ಗುಲಬರ್ಗಾದಲ್ಲಿ ರಚಿಸಿದ್ದಾದರೆ ಮೊದಲ ಪದ್ಯ ʻಮಸನಬೀ ಪದಮರಾವ ಕದಮರಾವುʼ , ಬೀದರಿನಲ್ಲಿ ಸೃಷ್ಟಿಯಾಯಿತು. ಹೀಗಂತ ಅವರಿಗೆ ಯಾರೂ ಹೇಳಲಿಲ್ಲ, ಮರು ಪ್ರಶ್ನೆ ಮಾಡಲಿಲ್ಲ.
ಬೇಂದ್ರೆಯವರ ʻಬದುಕು ಮಾಯೆಯ ಮಾಟʼ ಅನ್ನೋ ಹಾಡಿನಲ್ಲಿ ʻಒಂದೇ ಥಾನಿನ ತಾನುʼ ಅನ್ನೋ ಸಾಲು ಇದೆ. ಅದನ್ನು ಹಳೇ ಮೈಸೂರಿನವರು ʻಒಂದೇ ತಾನಿನ ತಾನುʼ ಅಂತ ಹಾಡುತ್ತಾರೆ. ನಾವು ಚಪ್ಪಾಳೆ ತಟ್ಟುತ್ತೇವೆ. ಥಾನಿಗೂ ತಾನಿಗೂ ವ್ಯತ್ಯಾಸ ಇದೆ. ಥಾನು ಅಂದರೆ ಬಟ್ಟೆಯ ಅಳತೆ, ತಾನು ಅಂದರೆ ನಾನು ಅಂತ ನಾವು ಹೇಳುತ್ತೇವೆಯೇ? ಹೇಳುವ ಮೊದಲು ಅದರ ವ್ಯತ್ಯಾಸ ನಮಗೆ ಗೊತ್ತಿದೆಯೇ? ಗೊತ್ತಿದ್ದರೂ ಹಿಂಜರಿಕೆ ನಮ್ಮನ್ನು ಬಿಟ್ಟೀತೆ?
ನಿನ್ನೆಯಷ್ಟೇ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ಫೋನು ಮಾಡಿದ್ದರು. ಅವರಿಗೆ ಈ ನಾಡಿನ ಭಾಗ್ಯ ದೇವತೆ ತಿಂಥಣಿ ಮೌನಪ್ಪನ ಪ್ರಾರ್ಥನೆಯ ವಿವರ ಬೇಕಿತ್ತು. ನಾನು ಕಳಿಸಿ ಕೊಟ್ಟೆ.
ಅದು ಹೀಗಿದೆ. –
‘ಓಂ ಏಕಲಾಖ್ ಐಂಶೀಹಜಾರ್
ಪಾಂಚೋ ಪೀರ ಪೈಗಂಬರ ಮೌನದೀನ
ಜಿತಾಪೀರ ಪೈಗಂಬರ ಮೌನದೀನ್
ಕಾಶೀಪತಿ ಗಂಗಾಧರ ಹರಹರಮಹದೇವ’
ಕಾಶೀಪತಿ ಗಂಗಾಧರ ನೂ ಪೈಗಂಬರ ಮೌನದೀನನೂ ಒಂದೇ ಅಂತಂದಾಗ ನಮಗೆ ಹೆಮ್ಮೆ ಆಗುವುದಿಲ್ಲವೇ? ಈ ಖುಷಿಯನ್ನು ನಾವು ಎಷ್ಟು ಜನರೊಂದಿಗೆ ಹಂಚಿಕೊಂಡಿದ್ದೇವೆ?
ನಮ್ಮ ನಾಡಿನ ಸಿರಿಯನ್ನು ನಾವು ತೋರಿಸಿಕೊಂಡಿದ್ದೇವೆಯೆ? ನಮ್ಮಲ್ಲಿ ಮಲ್ಲಿಕಾರ್ಜುನ ಸ್ವಾಮಿ ದರ್ಗಾ ಇದೆ, ಅಷ್ಟೂರಿನ ಅಹಮದ ಷಾ ವಲಿಯ ಹುಟ್ಟುಹಬ್ಬವನ್ನು ಅಲ್ಲಮ ಪ್ರಭು ಜಯಂತಿ ಅಂತ ಭಕ್ತರು ಆಚರಿಸುತ್ತಾರೆ, ಮಾಣಿಕ ಪ್ರಭುಗಳ ದೇವಸ್ಥಾನದಲ್ಲಿ ಸೂಫಿ ಸಂತ ಮೆಹಬೂಬ ಸುಬಾನಿ ಅವರ ಗ್ಯಾರಾವಿ ನಡೆಸಲಾಗುತ್ತದೆ ಅಂತ ನಾವು ಎಷ್ಟು ಜನರಿಗೆ ಅಭಿಮಾನದಿಂದ ಹೇಳಿಕೊಂಡಿದ್ದೇವೆ?
ಎಂಟು ನೂರು ವರ್ಷದ ಹಿಂದೆ ಈ ನೆಲದಲ್ಲಿ ಧರ್ಮ ನಿರಪೇಕ್ಷತೆ- ಸಹಬಾಳ್ವೆಯ ನೀತಿ ಪಾಠ ಹೇಳಿದವರು ಬಡವರ ಬಂಧು ಬಂದೇ ನವಾಜ. ಬಂದೇ ನವಾಜ ಎಂದರೆ ಸಾಮಾನ್ಯರ ಆಶ್ರಯದಾತ, ಅವರು ವಿಶ್ವದ ಮೊದಲ ಉರ್ದು ಗದ್ಯ ಬರಹಗಾರ. ಅವರ ಜನಪ್ರಿಯ ಮಾತು ಇದು. – ʻʻಪಾನಿ ಮೆ ನಮಕ ಡಾಲ್ ಔರ ದೇಖ ಉಸೆ. ಪಾನಿ ಮೆ ನಮಕ ಘುಲ್ ಜಾಯೆಗಾ ತೋ ನಮಕ್ ಕಹೇಂ ಕಿಸೆʼʼ (ನೀರಲ್ಲಿ ಉಪ್ಪು ಕರಗಿ ಹೋದಮೇಲೆ ಉಪ್ಪು ಎಂದು ಕರೆಯುವುದಾದರೂ ಯಾವುದನ್ನು) ಇದನ್ನು ನಮಗೆ ಯಾರಾದರೂ ಹೇಳಿ ಕೊಡಬೇಕೆ?
ಬಸವ ಜಯಂತಿಯ ದಿವಸ ನಾವೆಲ್ಲ ಶ್ರದ್ಧೆಯಿಂದ ಹೋಗಿ ಅತಿಥಿಗಳ ಭಾಷಣ ಕೇಳುತ್ತೇವೆ. ಬಸವಣ್ಣನ ಸಿದ್ಧಾಂತ ವಿಶ್ವಕ್ಕೇ ಮಾದರಿ. ಅವನ ಹಾಗೂ ಇತರ ಶರಣರ ವಚನಗಳು ಎಲ್ಲರನ್ನೂ ತಲುಪಬೇಕುʼ ಅಂತ ಅವರು ಹೇಳುತ್ತಾರೆ. ಹೌದು ಅಂತ ನಮಗೆ ಅನ್ನಿಸುತ್ತದೆ. ನಾವು ಮನೆಗೆ ಬರುತ್ತೇವೆ. ಆದರೆ ಕೆಲವು ಕಠಿಣ ಪ್ರಶ್ನೆಗಳನ್ನು ನಾವು ಕೇಳಿಸಿಕೊಳ್ಳುವುದಿಲ್ಲ. ಕಲ್ಯಾಣ ಕರ್ನಾಟಕದ ಶರಣರ ವಚನಗಳು ಎಷ್ಟು ಭಾರತೀಯ ಭಾಷೆಗೆ ಅನುವಾದವಾಗಿವೆ? ಡಾ. ಎಮ್ ಎಮ್ ಕಲಬುರ್ಗಿ ಅವರ ಸಂಪಾದಕತ್ವದಲ್ಲಿ ಬಸವ ಸಮಿತಿಯರು ಮಾಡಿದ ಪ್ರಯತ್ನ ಬಿಟ್ಟರೆ ಬೇರೆ ಯಾರು ಮಾಡಿದ್ದಾರೆ? ಎಷ್ಟು ಅಂತರರಾಷ್ಟ್ರೀಯ ಭಾಷೆಗಳಲ್ಲಿ ಅದು ಸಾಧ್ಯವಾಗಿದೆ? ಅಂತ ನಾವು ಪ್ರಶ್ನೆ ಮಾಡುತ್ತೇವೆಯೇ? ಉತ್ತರ ಹುಡುಕುತ್ತೇವೆಯೇ? ಒಂದು ಉದಾಹರಣೆಯನ್ನು ಇಲ್ಲಿ ಉಲ್ಲೇಖಿಸಬೇಕಾದರೆ ಬೈಬಲ್ಲಿನ ನ್ಯೂ ಟೆಸ್ಟಾಮೆಂಟ್ ಗ್ರಂಥ ಸುಮಾರು 1, 600 ಭಾಷೆಗಳಿಗೆ ಅನುವಾದ ಗೊಂಡಿದೆ. ಇದನ್ನು ಕೇಳಿದಾಗ ನಮಗೆ ಏನನ್ನಿಸುತ್ತದೆ?
ಬಿದರಿ ಕಲೆಯಾಗಲಿ, ಕಿನ್ನಾಳ ಆಟಿಕೆಗಳಾಗಲಿ ಜಾಗತಿಕ ಮಹತ್ವ ಉಳ್ಳವು. ಅವುಗಳಿಗೆ ಪತ್ರಿಕೆಗಳಾಗಲೀ, ವಾಹಿನಿಗಳಾಗಲೀ, ಈಗಿನ ಸುದ್ದಿ ಜಗುಲಿ (ಪೋರ್ಟಲ್) ಗಳಾಗಲಿ ನ್ಯಾಯ ಒದಗಿಸಿವೆಯೇ? ರತನ ಸಾಗರ ಅನ್ನುವುದು ಬಾಸಮತಿ ಅಕ್ಕಿಗಿಂತ ಸುವಾಸನೆಯದು ಅನ್ನುವುದು ಪರ್ಷಿಯನ್ ಲೇಖಕರ ಬಣ್ಣನೆ. ಅದರ ಬಗ್ಗೆ ಸಂಶೋಧನೆ ನಡೆಸಲು ಈ ನಾಡಿನ ಕೃಷಿ ವಿಶ್ವವಿದ್ಯಾಲಯ ಗಳು ಕ್ರಮ ಕೈಕೊಂಡಿವೆಯೇ? ನೀವು ಯಾಕೆ ಇನ್ನೂ ಸಂಶೋಧನೆ ಆರಂಭಿಸಿಲ್ಲ ಅಂತ ನಾವು ಯಾರಾದರೂ ವಿಶ್ವವಿದ್ಯಾಲಯಗಳ ಆಡಳಿತಗಾರರನ್ನು ಕೇಳಿದ್ದೇವೆಯೇ?
ಇದು ಬರಿಯ ಹೈದರಾಬಾದು ಕರ್ನಾಟಕದವರ ಸಮಸ್ಯೆ ಅಲ್ಲ. ಕೀಳರಿಮೆ ಇಡೀ ಭಾರತ ದೇಶದ ಮುಂದಿರುವ ಸವಾಲು. ಉದಾಹರಣೆಗೆ ನಮ್ಮ ಬಣ್ಣದ ಬಗ್ಗೆ ನಮಗೆ ಅಭಿಮಾನ ಇಲ್ಲ. ನಮ್ಮ ತೊಗಲನ್ನು ಬಿಳಿಯಾಗಿಸುವ ಸ್ಕಿನ್ ಕ್ರೀಮುಗಳಿಂದ ನಮ್ಮ ಮಾರುಕಟ್ಟೆಗಳು ತುಂಬಿ ಹೋಗಿವೆ. ಟೀವಿಯಲ್ಲಿ ಅವುಗಳ ಜಾಹಿರಾತುಗಳು ಅಸಂಖ್ಯ. ಇದು ನಮಗೆ ತಪ್ಪೆನಿಸುವುದಿಲ್ಲ.
ರುನುಕೋ ರಷೀದಿ ಅನ್ನುವ ಆಫ್ರಿಕನ್ ತಜ್ಞರೊಬ್ಬರು ಆಫ್ರಿಕನ್ ಮೂಲದವರಲ್ಲಿ ತಮ್ಮ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸಲು ʻನಾವು ಆಫ್ರಿಕನ್ ಅಂತ ಹೇಳಲು ಹೆಮ್ಮೆ ಇದೆʼ ಎನ್ನುವ ಆಂದೋಲನ ಶುರು ಮಾಡಿದ್ದಾರೆ. ನಾವು ಕಲ್ಯಾಣ ಕರ್ನಾಟಕದವರು ಅಂದು ಕೊಳ್ಳುವುದರ ಬಗ್ಗೆಯೂ ಒಂದು ಅಭಿಯಾನದ ಅಗತ್ಯ ಇದೆ ಅಂತ ಅನಿಸುತ್ತದೆ.
ನಾವು ಯಾಕೆ ಈ ʻಹೇಳಿದರು- ಕೇಳಿದರುʼ ಅನ್ನೋ ಮೇಲ್ನೋಟದ ವರದಿಗಾರಿಕೆಯಲ್ಲಿ ಕಳೆದು ಹೋಗಿದ್ದೇವೆ? ಇದರ ಬಗ್ಗೆ ಉನ್ನತ ಮಟ್ಟದಲ್ಲಿ ಆತ್ಮ ವಿರ್ಮಶೆ ಆಗಿಲ್ಲವೇಕೆ? ಗುಣಮಟ್ಟದ ಪತ್ರಿಕೋದ್ಯಮ ಎನ್ನುವುದು ಆರೋಗ್ಯವಂತ ಸಮಾಜದ ತಳಹದಿ. ಅದನ್ನು ಬಿಟ್ಟು ಬೇರೆ ಏನು ಮಾಡಿದರೂ ಸಹ ಅದು ಮೌಲಿಕ ಸುದ್ದಿ ಅಲ್ಲ.
ಇಪ್ಪತ್ನಾಕು ಗಂಟೆಯ ಟೀವಿ ಚಾನಲ್ಲು ಗಳು ಆರಂಭವಾದ ದಿನಗಳಲ್ಲಿ ವಾಹಿನಿ ಯೊಬ್ಬರು ಸುದ್ದಿ ಎಂದರೆ ಬರೀ ರಾಜಕೀಯ – ಅಪರಾಧ ಹಾಗೂ ಕ್ರಿಕೆಟ್ ಅಂತ ಘೋಷಿಸಿದರಂತೆ. ಆಗ ಅಲ್ಲಿಯೇ ಇದ್ದ ನನ್ನ ಸ್ನೇಹಿತರೊಬ್ಬರು ʻದಿನಪೂರ್ತಿ ಅಂಥಾ ಸುದ್ದಿ ಸಿಗುವುದು ಕಷ್ಟ ಸಾರ್. ಸಿಗದೇ ಹೋದರೆ ಹೇಗೆ?ʼ ಅಂತ ಕೇಳಿದರಂತೆ. ʻಸಿಗದಿದ್ದರೆ ಮೆನುಫ್ಯಾಕ್ಚರ್ ಮಾಡಿ (ಸೃಷ್ಟಿಸಿ)ʼ ಅಂತ ಅವರು ಉತ್ತರ ಕೊಟ್ಟರಂತೆ. ನಾವು ಸುದ್ದಿ ಸೃಷ್ಟಕರ್ತರಾಗಿದ್ದು ಹೀಗೆ. ಆ ವಿಷ ವರ್ತುಲದಿಂದ ಹೊರಗೆ ಬರದೇ ಹೋದಾಗ ನಮಗೆ ಜಗದ ಸೌಂದರ್ಯ ಕಾಣದೇ ಹೋಗುತ್ತದೆ. ಗಂಭೀರ ವಿಷಯಗಳನ್ನು ಬಿಟ್ಟು ಇತರ ವಿಷಯಗಳನ್ನೇ ದೊಡ್ಡದು ಮಾಡುವ ಖೆಡ್ಡಾಗೆ ನಾವು ಬಿದ್ದು ಬಿಟ್ಟಿದ್ದೇವೆ. ಇದರಿಂದ ಮುಕ್ತಿ ಸಿಗುವಂಥಾ ಗಜೇಂದ್ರ ಮೋಕ್ಷ ಮಾಡಿಸಲು ಶ್ರೀಮನ್ನಾರಾಯಣನೇ ಬರಬೇಕೇನೋ!
ಇನ್ನು ಭಾಷೆಯ ಬಳಕೆ.
ಪತ್ರಿಕೆಗಳು ಜನಸಾಮಾನ್ಯರ ವಿಶ್ವವಿದ್ಯಾಲಯ ಅನ್ನುವ ಮಾತಿಗೆ ತಕ್ಕಂತೆ ನಾವು ನಡೆದುಕೊಂಡಿದ್ದೇವೆಯೇ? ನವ ಸಾಕ್ಷರ ನೊಬ್ಬನಿಗೆ, ಆರು ವರ್ಷದ ಮಗುವಿಗೆ ಅರ್ಥವಾಗುವಂತೆ ಸುದ್ದಿ ಬರೆಯಲು ನಾವು ಕಲಿತಿದ್ದೇವೆಯೇ? ಬಜೆಟ್ ಮರುದಿನ ಪತ್ರಿಕೆ ಎಷ್ಟು ಜನ ಓದುಗರಿಗೆ ಅರ್ಥವಾಗುತ್ತದೆ? ಇಸ್ರೋ ದವರು ಉಪಗ್ರಹ ಉಡಾಯಿಸಿದಾಗ, ಆಕಾಶ ಕಾಯವೊಂದನ್ನು ಗುರುತಿಸಿದಾಗ, ಅಣು ವಿಜ್ಞಾನಿಗಳು ಹೊಸದೊಂದನ್ನು ಕಂಡು ಹಿಡಿದ ಸುದ್ದಿ ಬರೆಯುವಾಗ ಇದು ಓದುಗರಿಗೆ ಸರಳವಾಗಿ ತಿಳಿಯುವಂತಿರಬೇಕು ಎನ್ನುವ ಪ್ರಜ್ಞೆ ಎಷ್ಟು ಪತ್ರಕರ್ತರಿಗೆ ಇದೆ?
ಇದು ಯಾಕೆ ಮುಖ್ಯ ಅನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಚೈನಾದ ವುಹಾನಿನಲ್ಲಿ ಕಿರೀಟಿ ವೈರಸ್ ಕೊರೋನಾ ವೈರಸ್ ಪತ್ತೆಯಾಗಿ ಎರಡು ವಾರ ಆಗುತ್ತ ಬಂತು. ಅದರ ಸ್ಥಿತಿ, ಪರಿಣಾಮ, ಅಪಾಯದ ಮಟ್ಟ, ಪರಿಹಾರ ದ ಬಗ್ಗೆ ನಾವು ವಿಶದವಾಗಿ ತಿಳಿಸಲಿಲ್ಲ. ಹೀಗಾಗಿಯೇ ಜನರನ್ನು ಹೆದರಿಸುವ ವಿಡಿಯೋಗಳು, ಅಲ್ಲಿ ನೂರು ಜನ ಸತ್ತರು, ಇನ್ನೂರು ಜನ ಸತ್ತರು ಎನ್ನುವ ಸುಳ್ಳು ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿವೆ. ನಮ್ಮಿಂದ ಸರಿಯಾದ ಸಮಯಕ್ಕೆ ಸಾಕಷ್ಟು ಸುದ್ದಿ ಹೋಗಿದ್ದರೆ ಜನ ಇಂಥವುಗಳನ್ನು ಸಂಶಯದಿಂದ ನೋಡುತ್ತಿದ್ದರು.
ವಿಶ್ವಾಸಾರ್ಹತೆ
ನಮ್ಮೆಲ್ಲರ ಫೋನಿನಲ್ಲಿ ʻʻಇದನ್ನು ಗಮನವಿಟ್ಟು ನೋಡಿ. ಇದನ್ನು ಯಾವ ಮೀಡಿಯಾ ನಿಮಗೆ ತೋರಿಸುವುದಿಲ್ಲʼʼ ಅಂತ ದಿನಕ್ಕೆ ಒಮ್ಮೆಯಾದರೂ ಸಂದೇಶ ಬಂದೇ ಬರುತ್ತದೆ. ನಮ್ಮನ್ನು ಕನಿಷ್ಟವಾಗಿಸುವ ಈ ಸ್ಥಿತಿ ಬಂದಿದ್ದೇಕೆ? ನಮ್ಮ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆ ಮೂಡಿರುವುದೇತಕ್ಕೆ? ಇವರು ದಲ್ಲಾಳಿಗಳು, ಪ್ರೆಸ್ಟಿಟ್ಯೂಟ್ ಗಳು ಎಂದು ನಮ್ಮ ಕುಲದ ಕಸುಬಿಗೆ ಅವಮಾನ ಮಾಡುವ ಪರಿತಿಸ್ಥಿತಿ ತಂದುಕೊಂಡವರು ಯಾರು? ಹೀಗೇಕಾಯಿತು? ಇದರಿಂದ ಹೊರಬರುವ ದಾರಿ ಯಾವುದು?
ಸೀಮಿತ ದೃಷ್ಟಿಕೋನ
ಯಾವುದೇ ಸುದ್ದಿ ಸಿಕ್ಕಾಗ ನಾವು ಅದರ ʻಲೋಕಲ್ ಆಂಗಲ್ʼ ಹುಡುಕಲು ಓಡಾಡುತ್ತೇವೆ. ಈ ಪ್ರವೃತ್ತಿ ಯಾಕೆ? ಒಂದು ಬಿಂದುವಿನಲ್ಲೂ ಸಾಗರವನ್ನು ಕಾಣುವ ನೋಟ ನಮ್ಮದೇಕಾಗಬಾರದು?
ಈ ಮಾತು ರಾಜಕೀಯಕ್ಕೂ ಅನ್ವಯಿಸುತ್ತದೆ. ಹೆಚ್ಚು ಪ್ರಸಾರ ಇರುವ ಪತ್ರಿಕೆಯೊಂದು ಜಿಲ್ಲಾವಾರು ಆವೃತ್ತಿಗಳನ್ನು ಬಿಡುಗಡೆ ಮಾಡಿದಾಗ ಹಿರಿಯ ಕಾಂಗ್ರೆಸ್ ನಾಯಕ ಎಚ್ ಕೆ ಪಾಟೀಲ ಅವರು ಅದರ ಅಪಾಯಗಳನ್ನು ಕುರಿತು ಎಚ್ಚರಿಸಿದ್ದರು. ಇದು ನಾಯಕರನ್ನು ರಾಜ್ಯ ಮಟ್ಟದ ನಾಯಕರು, ಪ್ರಾದೇಶಿಕ ನಾಯಕರು, ಸ್ಥಳೀಯ ನಾಯಕರು ಎಂದು ವಿಂಗಡಿಸುವ ಸಾಧ್ಯತೆ ಇದೆ. ಅದರ ಬಗ್ಗೆ ಪುನರ್ ವಿಚಾರ ಮಾಡಬೇಕು ಅಂತ ಸಲಹೆ ನೀಡಿದ್ದರು.
ಪ್ರತಿ ಬಾರಿ ಪತ್ರಿಕಾ ದಿನಾಚರಣೆಯಲ್ಲಿ ಅಭಿವೃದ್ಧಿ ಪತ್ರಿಕೋದ್ಯಮ ಬೆಳೆಯಬೇಕು ಅನ್ನೋ ಮಾತು ಕೇಳಿ ಬರುತ್ತದೆ. ಆದರೆ ಅದು ನಿಜವಾಗಿಯೂ ಸಾಧ್ಯವಾಗಿದೆಯೇ? ಹೈದರಾಬಾದು ಕರ್ನಾಟಕ ಕಲ್ಯಾಣ ಕರ್ನಾಟಕವಾಗುವ ನಿಟ್ಟಿನಲ್ಲಿ ಅದು ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನು ನಾವು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದೇವೆ?
ನಾವು ಕೇವಲ ರೋಚಕ ಸುದ್ದಿಗಳ ಬೆನ್ನು ಹತ್ತಬಹುದು. ಆದರೆ ಅವನ್ನು ನಮಗಿಂತಲೂ ರೋಚಕವಾಗಿ ಬರೆಯಲು ಸಾಮಾಜಿಕ ಮಾಧ್ಯಮಗಳಲ್ಲಿ ಸಾಧ್ಯವಿದೆ. ಆ ರೇಸಿನಲ್ಲಿ ನಾವು ಅವರನ್ನು ಸೋಲಿಸಲಾರೆವು.
ನಾನು ಸುದ್ದಿ ಬರೆಯುವುದು ಕೇವಲ ಪತ್ರಕರ್ತರ ಹಕ್ಕು, ಇತರರು ಕೈ ಹಾಕಬಾರದು ಎನ್ನುವ ಹಕ್ಕು ಸ್ವಾಮ್ಯದ ಮಾತಾಡುತ್ತಿಲ್ಲ. ಸುದ್ದಿ ಬರೆಯುವವರು ಯಾರೇ ಆಗಲಿ, ಅವರಿಗೆ ಜವಾಬುದಾರಿ ಇರಬೇಕು ಎನ್ನುತ್ತಿದ್ದೇನೆ.
ಬೀದರಿನಲ್ಲಿ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ಉದ್ಘಾಟಿಸಿದ ವಿಜ್ಞಾನ ಕೇಂದ್ರ ಇದೆ. ಅದನ್ನು ನೋಡಲು ಒಂದು ದಿನ ನಮ್ಮೆಲ್ಲರ ಹೆಮ್ಮೆಯ ವಿಜ್ಞಾನಿ ಭಾರತ ರತ್ನ ಡಾ. ಸಿ. ಎನ್ ಆರ್ ರಾವ್ ಅವರು ಬಂದಿದ್ದರು. ಅವರಿಗೆ ನಾನು ಬೀದರ ಕೋಟೆ, ಮಹಮೂದ ಗವಾನ ಮದರಸಾ ಇತ್ಯಾದಿಗಳನ್ನು ತೋರಿಸಿದೆ. ಕೊನೆಗೆ ಅವರು “ನಿಮ್ಮದು ಯಾವ ಊರುʼʼ ಅಂತ ಕೇಳಿದರು. ʻʻನಮ್ಮದು ಹಾವೇರಿ ಜಿಲ್ಲೆ ಅಗಡಿ ಸರ್. ಓದಿದ್ದು ಹಾನಗಲ್ಲು- ಹುಬ್ಬಳ್ಳಿ. ಕೆಲಸದ ನಿಮಿತ್ತ ಇಲ್ಲಿಗೆ ಬಂದೆʼʼ ಅಂದೆ. ʻʻಮತ್ತೆ ಇದನ್ನೆಲ್ಲಾ ತುಂಬ ಚನ್ನಾಗಿ ತಿಳಕೊಂಡಿದ್ದೀಯಾ? ನಾನು ಇಷ್ಟೊತ್ತು ನಿಂದು ಇದೇ ಊರು ಅಂದುಕೊಂಡಿದ್ದೆ ಕಣಯ್ಯಾʼʼ ಅಂತ ಅಂದರು. ನಾನು ʻʻಹೊಟ್ಟೆ ಪಾಡು ಸರ್ʼʼ ಅಂತಂದೆ. ಅವರು ಜೋರಾಗಿ ನಕ್ಕು ʻʻಹೊಟ್ಟೆ ಪಾಡು ಅಂದರೆ ಹಿಂಗಿರಬೇಕಯ್ಯಾʼʼ ಅಂದರು.
ನಾನು ಫೇಸುಬುಕ್ಕಿನಲ್ಲಿ ಬರೆದಿದ್ದು ಓದಿದ ಮೈಸೂರು ವಿಶ್ವವಿದ್ಯಾಲಯ ದ ಪ್ರೊಫೆಸರ್ ಕಾಳೇಗೌಡ ನಾಗವಾರ ಅವರು ನಾನು ಗುಲಬರಗಾದ ವರದಿಗಾರ ಅಂದುಕೊಂಡು ʻನಾನು ನಿಮ್ಮನ್ನು ಗುಲಬರಗಾದಲ್ಲಿ ಭೇಟಿಯಾಗುತ್ತೇನೆʼ ಅಂತ ಸಂದೇಶ ಕಳಿಸಿದರು. ʻನಾನು ಅಲ್ಲಿಲ್ಲ ಸರ್. ನಾನು ಬೆಳಗಾವಿಯಲ್ಲಿ ಇದ್ದೇನೆʼ ಅಂತ ನಾನು ಅವರಿಗೆ ತಿಳಿಸಿದೆ. ಅವರಿಗೆ ಆಶ್ಚರ್ಯವಾಯಿತು.
ನನ್ನನ್ನು ಅನೇಕರು ʻನೀವು ಬೀದರಿನವರೇ, ನಿಮ್ಮ ಊರು ಗುಲಬರಗಾ ಹೌದೇʼ ಅಂತ ಕೇಳುತ್ತಾ ಇರುತ್ತಾರೆ. ʻಇಲ್ಲ ಅವು ನಾನು ಕೆಲಸ ಮಾಡಿದ ಊರುಗಳುʼ ಅಂತ ಹೇಳುತ್ತಾ ಹೇಳುತ್ತಾ ಸಾಕಾಗಿ ಹೋಗಿದೆ. ನಮ್ಮೆಲ್ಲರಿಗೆ ಈ ಸ್ಥಿತಿ ಯಾಕೆ ಬಂದಿದೆ? ನಾವು ಹುಟ್ಟಿದ ಊರಿನ ಬಗ್ಗೆ ಮಾತ್ರ ನಾವು ತಿಳಿದುಕೊಂಡಿರಬೇಕು, ಉಳಿದ ವಿಷಯಗಳ ಬಗ್ಗೆ ತಿಳಿದುಕೊಂಡಿರಬಾರದು ಅಂತ ಯಾಕೆ ಅಂದುಕೊಳ್ಳುತ್ತೇವೆ. ಇದು ಗಂಭೀರ ಪ್ರಶ್ನೆ. ಇದನ್ನು ನಾವೆಲ್ಲರೂ ವಿಚಾರ ಮಾಡಬೇಕು.
ಹಿಂದಿನ ದಿನಗಳಲ್ಲಿ ವರದಿಗಾರರನ್ನು ಪತ್ರಿಕೆಗಳು ವರ್ಗ ಮಾಡುತ್ತಿದ್ದವು. ಅದು ಅವರಿಗೆ ವೈಯಕ್ತಿಕವಾಗಿ ಕಿರಿಕಿರಿ ಆದರೂ ಕೂಡ ಪತ್ರಿಕೆಗೆ ಅನುಕೂಲವಾಗುತ್ತಿತ್ತು. ಅವರ ವರದಿಗಾರಿಕೆಯ ಗುಣಮಟ್ಟ ಬೆಳಸುತ್ತಿತ್ತು. ಈಗ ಆ ಪದ್ಧತಿ ಕಮ್ಮಿಯಾಗಿದೆ. ಕರ್ನಾಟಕದ ಎಲ್ಲಾ ಕಂದಾಯ ವಿಭಾಗಗಳಲ್ಲಿ ಕೆಲಸ ಮಾಡಿದ ನನ್ನ ತಲೆಮಾರಿನ ಕೆಲವೇ ಪತ್ರಕರ್ತರ ಪೈಕಿ ನಾನೂ ಒಬ್ಬ. ನಾನು ಕಳೆದ ೨೦-೨೨ ವರ್ಷಗಳಲ್ಲಿ ಏಳು ಬಾರಿ ಊರು ಬದಲಾಯಿಸಿದ್ದೇನೆ, ನಾಲ್ಕು – ಐದು ಊರು ಗಳಲ್ಲಿ ಕೆಲಸ ಮಾಡಿದ್ದೇನೆ.
ಎಲ್ಲ ಕಡೆಯೂ ಸುಮಾರು ಒಂದೇ ರೀತಿಯ ಕೆಲಸ ಮಾಡಿದ್ದೇನೆ ಎಂದುಕೊಳ್ಳಿ. ಆದರೆ ನನಗೆ ಬೀದರು – ಗುಲಬರಗಾದಲ್ಲಿ ಸಿಕ್ಕಷ್ಟು ಮನ್ನಣೆ, ಪ್ರೀತಿ, ತನ್ನತನ, ಎಲ್ಲಿಯೂ ಸಿಕ್ಕಿಲ್ಲ. ಮನಗೆ ಕರೆದವರೆಷ್ಟೋ, ಊಟ- ತಿಂಡಿ- ಚಹಾದ ಆಗ್ರಹ ಮಾಡಿದವರೆಷ್ಟೋ? ಅನಾದಿ ಕಾಲದ ಪರಿಚಯವೆಂಬಂತೆ ಹಚ್ಚಿಕೊಂಡವರೆಷ್ಟೋ? ಇಷ್ಟಕ್ಕೆ ಹಕ್ಕುದಾರ ನಾಗಲು ನಾನು ಮಾಡಿದ್ದೇನು? ಇವರ ಆತ್ಮೀಯತೆಗೆ ಪ್ರತಿಯಾಗಿ ನಾನೇನು ಕೊಟ್ಟಿದ್ದೇನೆ ಎಂದು ನಾನು ಕೇಳಿ ಕೊಳ್ಳುತ್ತಿರುತ್ತೇನೆ. ಅದಕ್ಕೆ ನನಗೆ ಸಿಗುವ ಉತ್ತರ ಶೂನ್ಯ. ಇದಕ್ಕೆಲ್ಲ ಅಪರಿಮಿತ ಕೃತಜ್ಞತೆ ಹಾಗೂ ತುಂಬು ಹೃದಯದ ಆಭಾರ ಬಿಟ್ಟರೆ ಬೇರೆ ಭಾವ ನನ್ನಲ್ಲಿ ಇಲ್ಲ. ಭಾವನೆ ತೀವ್ರವಾದಾಗ ಮಾತು ನಿಂತು ಹೋಗುತ್ತದೆ.
ಸುರ ಸಂಗಮ ಚಿತ್ರಕ್ಕಾಗಿ ಹಿಂದಿ ಕವಿ ವಸಂತ ದೇವ ಅವರ ಕವಿತೆಯೊಂದನ್ನು ಸಾಜನ ಮಿಶ್ರಾ ಅವರು ಹಾಡಿದ್ದಾರೆ ಅದರ ಮೊದಲ ಸಾಲುಗಳು ಹೀಗಿವೆ.
ʻʻಧನ್ಯ ಭಾಗ ಸೇವಾ ಕಾ ಅವಸರ ಪಾಯಾ
ಚರಣ ಕಮಲ ಕೀ ಧೂಲ ಬನಾ ಮೈ
ಮೋಕ್ಷ ದ್ವಾರ ತಕ ಆಯಾ.. ʼʼ
ನನ್ನಲ್ಲಿ ಏನೋ ಸದ್ಗುಣ, ಬುದ್ಧಿವಂತಿಕೆ ಇರಬಹುದು ಅಂತ ನಿಮಗೆ ಅನ್ನಿಸಿದೆ. ಅದಕ್ಕೇ ನೀವು ನನ್ನನ್ನು ಕರೆದಿದ್ದೀರಿ.
ನನ್ನ ಮೇಲೆ ನನಗೆ ಇರುವುದಕ್ಕಿಂತ ಜಾಸ್ತಿ ನಿಮಗೆ ನನ್ನ ಮೇಲೆ ವಿಶ್ವಾಸವಿದೆ ಅಂತ ನನಗೆ ಅನೇಕ ಬಾರಿ ಅನ್ನಿಸುತ್ತದೆ.
ನನ್ನನ್ನು ಪ್ರೀತಿಯಿಂದ ಇಲ್ಲಿಗೆ ಆಹ್ವಾನಿಸಿ, ಮಾತನಾಡಲಿಕ್ಕೆ ಅವಕಾಶ ಕೊಟ್ಟದ್ದಕ್ಕೆ, ಇಷ್ಟೊತ್ತೂ ಕೇಳಿದ್ದಕ್ಕೆ, ನಿಮ್ಮೆಲ್ಲರಿಗೆ ಇನ್ನೊಮ್ಮೆ ಧನ್ಯವಾದಗಳು.
ವರದಿಗಾರರೂ ಹೀಗೆ ಆತ್ಮಾವಲೋಕನ ಮಾಡಿಕೊಳ್ಳಬಲ್ಲರೆಂಬುದು ಮರೆತು ಹೋಗಿತ್ತು, ಟೀವಿ ವರದಿಯ ಹಾವಳಿಯಲ್ಲಿ. ದೇಸಾಯಿಯವರಿಗೆ ಈ ” ಪುನರುತ್ಥಾನ” ಕ್ಕಾಗಿ ಅನೇಕ ಕೃತಜ್ಞತೆಗಳು.
ಬಹು ಮಾಧ್ಯಮಗಳ ವರದಿಗಾರರು ಹಾಗು ಸಾಹಿತಿಗಳು ತಮಗೆ ಗೊತ್ತಿಲ್ಲದ್ದೇ ಇಲ್ಲ ಎನ್ನುವ ಹಾಗೆ ಅಭಿಪ್ರಾಯ ಜಡಿಯುವುದು ಕನ್ನಡದಲ್ಲಿ ಮಾತ್ರ ಚಾಲನೆಯಲ್ಲಿದೆಯೋ ಅಥವಾ ದೇಶದುದ್ದಕ್ಕೂ ಉಂಟೋ ತಿಳಿಯದು. ಹೀಗೆ ಮಾಡುತ್ತಿದ್ದರೆ, ಬಾಯಾರಿದಾಗ ನೀರು ಕುಡಿಯಿರಿ ಎಂದು ” ಕರೆ ” ಕೊಡುವ ರಾಜಕಾರಣಿಗಳಿಗೂ ಇವರಿಗೂ ಏನಿದೆ ವ್ಯತ್ಯಾಸ? ಇದು ಇವರಿಗೆ ಅರಿವಿಗೇ ಬಂದಂತಿಲ್ಲ.
ಇಂತದರ ನಡುವೆ ದೇಸಾಯಿಯವರ ಲೇಖನ ಮಾಧ್ಯಮಗಳಿಗೆ ಜವಾಬ್ದಾರಿ ಇದೆಯೆನ್ನುವುದನ್ನು ಒಪ್ಪಿಕೊಂಡಿತಲ್ಲ ಸದ್ಯ ಎನಿಸಿತು. ಧನ್ಯವಾದಗಳು ಸರ್.