ಚಂದ್ರಶೇಖರ ಹೆಗಡೆ
ಎಲ್ಲ ಇದ್ದೂ ಇಲ್ಲವಾಗುವುದೆ ?
ಇಲ್ಲದಿರುವುದಕ್ಕೆ ಬೆನ್ನುಬಿದ್ದು
ಖಾಲಿಯಾಗುವುದೆ ?
ಹಸಿರು ತುಂಬಿದ್ದರೂ ಬರಡು
ಕೊರಡಾದೆನೆಂದು ವ್ಯಸನಿಯಾಗಿ
ಹೊರಟುಬಿಡುವುದೆ ?
ವೈರಾಣುವಿಗೆ ಉಸಿರೆರೆದು ಸೋತು
ನಮ್ಮವರನೆಲ್ಲಾ ಮಣ್ಣೊಳಗೆ ಹೂತು
ಆಗಂತುಕನ ಬಲೆಯೊಳಗೆ ಸಿಲುಕಿ
ಸಂಜೀವಿನಿಗಾಗಿ ಎಲ್ಲೆಲ್ಲೋ ಕೆದಕಿ
ಸಿಗದೆ ಅನಾಥನಂತೆ ಮಲಗಿ
ಸಮಾಧಿಯಾಗುವುದು ಸಾವೇ..
ಹಾಗಿರಲಿಕ್ಕಿಲ್ಲ…ಹಾಗಾದರೆ..
ಎಲ್ಲೆಂದರಲ್ಲಿ ಬೇರು ಚಾಚಿ
ಎಂದೂ ಅಲುಗಾಡದಂಥಸ್ಥಾವರದ
ಶಿಖರವೇರಿ ಉಬ್ಬಿ ನಿಂತು
ಬೀಗಿ ಜಂಗಮನಾಗದೇ ನಗುತ್ತಲೇ
ಹೃದಯ ನೀಗುವುದು… ಸಾವೆ ?
ಇಲ್ಲಾ…
ನಮ್ಮ ನಡುವೆಯೇ ಗೋಡೆಗಳ ಕಟ್ಟಿ
ವಾಲಿ ಬೀಳದಂತೆ ತೇಪೆ ಹಾಕಿ
ಬೆಚ್ವಗಿರುವುದೆಂದುಕೊಂಡ ಭವದ
ಗೂಡಿನೊಳಗೆ ಭೂಮಿತೂಕದ
ನೆಮ್ಮದಿಯನರಸಿ ಒಂಟಿಯಾಗುವುದು
ಹೊತ್ರು ಹೊತ್ತಿಗೆ ರಸಗವಳವ ಹುಡುಕಿ
ಸಾವೇ….?
ಮತ್ತೆ ಸುತ್ತಿ ಮಡಕೆ ಜಲ ಮುಕ್ಕಳಿಸಿ
ಕೊರತೆಯೊಂದಾಯಿತೆಂದು ತಾಂಬೂಲವ
ಬಯಸಿ ನಿತ್ಯಸಂತೆಯೊಳ ಹೊರಗೆ ನುಡಿಸಿ
ಎಂದಿನಂತೆ ತಿರುಗಿ ಮುರುಗಿ
ಹೊರಟುಬಿಡುವುದು ಸಾವೇ?
ಮಾತನಾಡಿದರೊಂದು ಮುತ್ತು
ಉದುರಿಹೋದೀತೆಲ್ಲಿ ಗತ್ತು
ಸಮಯಕಂಟಿಕೊಂಡು ಹರಗಿ
ನೆತ್ತಿಯ ಮೇಲೊಂದು ಒತ್ತಡದ
ತೂಗುಕತ್ತಿಯನಿಟ್ಟುಕೊಂಡು
ಎದುರಾದವರ ಮರೆಮಾಚಿ
ಧಿಕ್ಕರಿಸಿ ಬದುಕುವ ಬದುಕು…?
0 ಪ್ರತಿಕ್ರಿಯೆಗಳು