ನಾನು, ದೊಡ್ಡವ್ವ ಮತ್ತು ಅರ್ಧ ತಿಕೀಟು
ಸಾವಿತ್ರಿ ಹಟ್ಟಿ
ನಾನು ಒಂದನೇಯತ್ತಕ್ಕ ಸೇರೂ ಹೊತ್ತಿಗಿ ಅವ್ವ ಆಗ್ಲೆ ಹೂವು ಮಾರಾಕ ಸುರು ಮಾಡಿದ್ಲು. ನಮ್ಮಜ್ಜನ ಮನಿ ಬಾಗ್ಲ ನಮ್ಮ ಪಾಲಿಗಿ ಮುಚ್ಚಿ ಹೋದ ಕಾರಣಕ್ಕ ಅವರಿಂದ ನಮಗ ಸಿಗ್ತಿದ್ದ ಸಹಾಯ ಎಲ್ಲಾ ನಿಂತು ಹೋಗಿತ್ತು. ಅಜ್ಜ ತನ್ನ ಹಠದಿಂದಾಗಿ ನಮ್ಮ ತ್ವಾಟದ ಬಾವಿಗಿ ತಾನಾ ಹಾಕಿದ ಪಂಪ್ ಸೆಟ್ನ ತಾನಾ ಕಿತ್ತುಕೊಂಡು ಹೋದ್ಮ್ಯಾಲೆ ಅವ್ವ ಕಂಗಾಲಾಗಿದ್ಲು.
ನಮ್ಮ ಜೀವನಾಧಾರಾಗಿದ್ದ ಪುಟ್ಟ ತ್ವಾಟನ ಅಜ್ಜನಾ ಮಾಡಿ ಕೊಟ್ಟಿದ್ದ. ಆದ್ರ ಸಾಂದರ್ಭಿಕವಾಗಿ ಜಗಳ ನಡೆದು ತ್ವಾಟ ಬಿಟ್ಟು ಹೋಗಿದ್ದೂ ಅಲ್ಲದಾ, ಪಂಪ್ ಸೆಟ್ಟೂ ಕಿತ್ಕೊಂಡು ಹೋಗಿಬಿಟ್ಟಿದ್ರಿಂದ ನಮ್ಮ ತ್ವಾಟದಾಗ ಅಂಗೈ ಅಗಲ ಅಳ್ಳಿದ್ದ ಮತ್ತೂರು ಶಾವಂತಿಗಿ ಹೂವು ಬಿಸಿಲಿಗಿ ಕುತ್ತಿಗಿ ಮುರಕೊಂಡು ಜೋತು ಬಿದ್ದ ದೃಶ್ಯ ನನಗಿನ್ನೂ ನೆನಪೈತಿ. ಅವ್ವ ತನ್ನ ಗೆಳತ್ಯಾರ್ನ ಕರಕೊಂಡು ಬಾವಿಯಿಂದ ನೀರು ಹೊತ್ತು ಹೊತ್ತು ಶಾವಂತಿಗಿ ಹೂವಿನ ಬೆಳೀಗಿ ಹಾಕೀದ್ಲು. ಆದ್ರ ಹೊಯ್ನೀರು ಭೂಮೀ ದಾಹ ತೀರ್ಸಾಕ ಸೋತು ಹೋತು. ಅವ್ವನ ಪ್ರಯತ್ನ ವಿಫಲಾತು. ನಮ್ಮ ತ್ವಾಟ ಬಾಡಿ ಒಣಗಿ ಹೋತು. ಕೂಲಿಗಿ ಹೋದ್ರ ಒಬ್ಬ ಹೆಣ್ಣಾಳಿನ ಕೂಲಿ ಆಗ ಬರೀ ಮೂರು ರೂಪಾಯಿ. ಒಮ್ಮೊಮ್ಮೆ ಯಾಡ್ರುಪಾಯಿಗೂ ಕೂಲಿ ಮಾಡುತ್ತಿದ್ರು ಜನರು. ಅಂಥಾ ಜನರಾಗ ನಮ್ಮವ್ವನೂ ಒಬ್ಬಾಕಿ.
ಅಪ್ಪನ ಕುಡಿತ, ಮಕ್ಕಳ ಹಸಿವು, ತವರಿನ ಅಗಲಿಕಿ ಸಹಿಸಿಕೊಂತಿದ್ದ ಅವ್ವ ಸೊರಗಿ ಕಟ್ಟಿಗಿಯಂತಾಗಾಗಿದ್ಲು. ಬರೀ ಮೂರು ರೂಪಾಯಿ ದಿನಗೂಲಿ ದುಡೂದ್ರ ಜೀವನ ಸಾಗೂದು ಕಷ್ಟ ಅಂತ ಅವ್ವಗ ಅರಿವಾಗಿ ಹೋತು. ಅವರಿವರ ತ್ವಾಟದಾಗ ಶಾವಂತಿಗಿ ಹೂವು, ಮಲ್ಲಿಗಿ ಹೂವು ತಂದು ಮಾರಾಕ್ಹತ್ತೀದ್ಲು. ಪ್ರಾರಂಭದಾಗ ಅವ್ವಗ ಅಕ್ಕಾರಿಬ್ರೂ ಹೂವು ಕಟ್ಟಿ ಕೊಡ್ತಿದ್ರು. ನಮ್ಮ ಮನ್ಯಾಗ ಆದ ಆ ಹೊಸ ಬೆಳವಣಿಗಿ ಕಂಡು ನಾನು ಭಾಳ ಖುಷಿಯಾಗಿದ್ನಾ. ಸ್ವಲ್ಪಾ ದಿನದಾಗ ನಾನೂ ಹೂ ಕಟ್ಟೂದ್ನ ಕಲ್ಕೊಂಬಿಟ್ಟೆ. ಆಮ್ಯಾಲೆ ಅವ್ವಗ ಹೂವಿನ ಯಾಪಾರದಾಗ ಅನುಭವ ಜಾಸ್ತಿಯಾದಂಗೆಲ್ಲಾ ಹೂ ಮಾರಾಟದ ಪ್ರಮಾಣನೂ ಜಾಸ್ತಿ ಆತು. ಮೊದ್ಲು ನಾವು ಮೂರೂ ಜನ ಅವ್ವಗ ಸಹಾಯ ಮಾಡ್ತಿದ್ದಾರು ನಾಕು ಜನ ಆದ್ವಿ. ಅಂದ್ರ ನಮ್ಮ ತಂಗಿ ಪ್ರೇಮಾನೂ ಹೂವು ಕಟ್ಟೂದ್ನ ಕಲ್ಕೊಂಡ್ಲು. ನಾವೂ ನಾಕೂ ಜನ ಹೆಣ್ಮಕ್ಳು ಹೂವು ಎಷ್ಟು ಚೆಂದ ಹೆಣೀತಿದ್ವಂದ್ರ ಅವ್ವ ಮಾರ್ಕೀಟ್ನ್ಯಾಗ ಕಾಲಿಟ್ರ ಮುಗೀತು! ಅವ್ವನ ಹೂವು ಖಾಲೀಯಾಗೂ ತನಕ ಉಳದಾರು ನೊಣ ಹೊಡ್ಕೊಂತ ಕುಂದ್ರಬೇಕು ಅಷ್ಟು ಚೆಂದ ಹೆಣದು ಕೊಡ್ತಿದ್ವಿ.
ಹಿಂಗ ನಮಗ ಹೊಸ ಉದ್ಯೋಗ ಅನ್ನಕ್ಕ ದಾರಿ ತೋರಿಸ್ತು. ನಮ್ಮನ್ಯಾಗ ಮೂರು ಹೊತ್ತಾಗ್ದಿದ್ರೂ ಯಾಡ್ಹೊತ್ತು ಹೊಟ್ಟಿ ತುಂಬ ಊಟ ಸಿಗಾಕ್ಹತ್ತಿತು.
ಇಷ್ಟರಾಗ ನಾನು ಭಾರೀ ಚೂಟಿಯಾಗಿಬಿಟ್ಟಿದ್ದೆ. ಕಾಲು ನಿಂತಲ್ಲಿ ನಿಲ್ತಿದ್ದಿಲ್ಲ ಕುಂತಲ್ಲಿ ಕುಂದುರ್ತಿದ್ದಿಲ್ಲ. ನಸುಕ್ಲೇ ಎದ್ದು ಅಕ್ಕಾರ ಕೂಡ ದೂರ ದೂರದ ತ್ವಾಟಕ ಹೂವು ಬಿಡಿಸಾಕ ಹೊಕ್ಕಿದ್ದೆ. ಬಂದ್ಮ್ಯಾಲೆ ಹೂವು ಹೆಣೆಯೂದು. ಅದನ್ನ ಆದಷ್ಟು ಮುಗಿಸಿ ಸಾಲೀಗಿ ಹೋಗೂದು. ಅಲ್ಲಿ ಪ್ರಾರ್ಥನಾ ಮುಗ್ದ ಮ್ಯಾಲೆ ಪಾಠೀ ಚೀಲ ಸಾಲೀ ಗುಡಿಯಾಗಿಟ್ಟು ಮನಿಗಿ ಬರೂದು. ಅಕ್ಕಾರು ಕಟ್ಟಿ ಕೊಟ್ಟ ಹೂವ್ನೆಲ್ಲಾ ತಗೊಂಡು ಅವ್ವಗ ಕೊಡಾಕ ಗದಗಿಗಿ ಹೋಗೂದು. ವಾಪಸ್ ಬರೂ ಹೊತ್ತಿಗಿ ಸಾಲಿ ಬಿಡೂ ಹೊತ್ತು ಆಗಿರೂದು. ಆಗ ಮೆಲ್ಲಕ ಹೋಗಿ ಆಟ ಆಡ್ತಿದ್ದ ಹುಡುಗ್ಯಾರ ಗುಂಪಿನ್ಯಾಗ ಸೇರಿಕೊಂಡು, ಗಂಟಿ ಬಾರ್ಸುತ್ಲೇ ಚೀಲ ಎತ್ಗೊಂಡು ಮನಿ ಕಡಿಗಿ ಓಟ ಕೀಳೂದು. ಇಷ್ಟೆಲ್ಲಾ ನನಗ ಪ್ರೀತಿ ಕೆಲಸ ಆಗಿಬಿಟ್ಟಿದ್ವು.
ಅವ್ವಗ ಹೂವು ಕೊಟ್ಟು ಬರೂ ಕೆಲಸ ನನಗ ಸಿಕ್ಕಾಗ ಬರೀ ಯಾಡನೇಯತ್ತ ಇದ್ದೆ. ಆದ್ರ ಆಗ್ಲೇ ಒಂಭತ್ತು ತುಂಬಾಕ ಬಂದಿತ್ತೇನಾ. ಆಗ ಬಸ್ಸಿನ್ಯಾಗ ನನಗ ಎಂಟಣೆ ಅರ್ಧ ತಿಕೀಟು ತಗೊಂತಿದ್ರು. ನನಗ ಗದಗಿಗಿ ಹೋಗೂದಂದ್ರ ಭಾರೀ ಪ್ರೀತಿ. ಆದ್ರ ಭಾಳಷ್ಟು ಸಲ ನಮ್ಮ ದೊಡ್ಡವ್ವ ಫಕೀರಮ್ಮ ಗಂಟು ಬಿದ್ದು ಬಿಡಾಕಿ. ಅಂದ್ರ ಬಸ್ಸಿನ್ಯಾಗ ಆಕಿ ನನ್ನ ಜೊತಿಯಾದ್ರ ನನಗ ಭಾಳ ಪಿರಿಪಿರಿ ಅನಿಸ್ತಿತ್ತು. ಯಾಕಂದ್ರ ಆಕಿ ‘ಏ ಅವ್ವಿ ಬಕ್ಕೊಂಡು, ಕೈಕಾಲು ಮುದುಡಿ ಮಾಡ್ಕೊಂಡು ಕುಂತ್ಕೊ. ಕಂಡೆಟ್ಟರ್ ಸಾಹೇಬ್ರು ಬಂದ್ರು ಅನ್ನಾಕಿ. ಯಾಕ್ಬೇ ಅಂತ ನಾನು ಕೇಳೀದ್ರ ಎಂಟಣೆ ಉಳೀತೈತಿ. ಅದಾ ಎದುಕ್ಕಾರ ಬರತೈತಿ ನಿಮ್ಮ ಅವ್ವ ಐದೈದು ಪೈಸೆ ಕೂಡ್ಸಾಕೂ ಬಿಸ್ಲಾಗ ದುಡೀತೈತಿ. ಸುಮ್ಕುಂತ್ಕೊ’ ಅನ್ನಾಕಿ.
ಈ ಥರಾ ಭಾಳ ಸಲ ಆದ್ಮೇಲೆ ನನಗ ದೊಡ್ಡವ್ವನ ಮ್ಯಾಲೆ ಸಿಟ್ಟು ಬರಾಕ್ಹತ್ತಿತು. ಬಕ್ಕೊಂಡು ಕುಂದ್ರೂದು ಕಳ್ಳತನ ಇದ್ದಂಗ ಅನ್ಸಾಕ್ಹತ್ತಿತ್ತು. ಸುಳ್ಳು ಹೇಳೀದ್ರ ಗ್ರಾಮ ದೇವತಿ ದ್ಯಾಮವ್ವ ಮೂಗು ಕೊಯ್ತಾಳ ಅಂತ ಬಾಲವಾಡಿ ಜಾನಕೀ ಅಕ್ಕೋರು ಹೇಳಿದ್ದು ನೆನಪಾಗಿ ಮನಸ್ಸೆಲ್ಲಾ ತಳಮಳ ಆಗಾಕ ಸುರು ಮಾಡ್ತಿತ್ತು. ಆದ್ರ ದೊಡ್ಡವ್ವಗ ಇದುರು ಮಾತಾಡಾಕ ಶಕ್ತಿ ಬರ್ತಿರಲಿಲ್ಲ. ಪ್ರತಿ ಸಲ ದೊಡ್ಡವ್ವನ ಜೊತಿ ಹೋದಾಗೊಮ್ಮಿ ಈ ಸಲ ದೊಡ್ಡವ್ವನ ಮಾತು ಕೇಳಬಾರ್ದು. ತಿಕೀಟು ತಗೋಬೇಕು ಅನ್ಕೊಂತಿದ್ದೆ. ಆದ್ರ ದೊಡ್ಡವ್ವ ಪಡ್ಡನ ಎಲ್ಲಿ ಹೊಡೀತಾಳಾ ಏನಾ ಅಂತ ಹೆದರಿ ಸುಮ್ಕಾಗಿಬಿಡ್ತಿದ್ದೆ. ಎಂಟಣೆ ಉಳೀತಿತ್ತು. ಅದನ್ನ ಖರ್ಚು ಮಾಡಿ ಲಿಂಬಿ ಹುಳಿ ಪೆಪ್ಪರ್ಮಂಟು ತಗೊಂಡು ತಂಗಿ ಜೊತಿ ತಿಂತಿದ್ದೆ. ಆದ್ರ ಅದು ತಿಕೀಟಿನ ರೊಕ್ಕ ಅಂತ ನೆನಪಾಗಿ ಪೆಪ್ಪರ್ಮಂಟಿನ ಸಿಹಿಯೆಲ್ಲಾ ಮಾಯಾಗಿ ನಾಲಿಗಿ ಮ್ಯಾಲೆ ಬರೀ ಹುಳಿ ಹುಳಿಯಾಗಿಬಿಡ್ತಿತ್ತು…
ಅವತ್ತೂ ಕಂಡಕ್ಟರ್ ಬಂದ್ರು. ಹಿಂದಿನ ಸೀಟಿನ್ಯಾಗ ಒತ್ತಿಕ್ಕೊಂಡು ಒಂದೆಂಟು ಜನ ಕುಂತಿದ್ರು. ನಾನು ಮತ್ತ ನಮ್ಮ ದೊಡ್ಡವ್ವನೂ ಅದಾ ಸೀಟಿನ್ಯಾಗಿದ್ವಿ. “ಹಾಂ ಟಿಕೀಟ್” ಅಂತ ಕಂಡಕ್ಟರ್ ಬಸ್ಸಿನ ಸೀಟಿನ ಚಡಿಗಿ ಬಡ್ಕೊಂತ ಪ್ರಯಾಣಿಕರಿಗಿ ತಿಕೀಟ್ ಕೊಡಾಕ್ಹತ್ತಿದ್ದ.. ದೊಡ್ಡವ್ವ, “ಬಗ್ಗು ಬಗ್ಗಿ ಕುಂತ್ಕೊ ಅವ್ವಿ…” ಅಂದ್ಕೊಂತ ನನ್ನ ಮುರುದು ಮುಟ್ಟಿಗಿ ಮಾಡಿ ಕುಂದುರ್ಸಾಕ ಸುರು ಮಾಡೀದ್ಲು. “ಬೇ ದೊಡ್ಡವ್ವ ನಾ ಬಗ್ಗಿ ಕುಂತ್ಕೊಳ್ಳಂಗಿಲ್ಲ ನೋಡು. ಏನ್ ಮಾಡಾಕಿ ನೀನು?” ಅಂತ ಪಿ(ಬು)ಸುಗುಟ್ಟಿದೆ.
ದೊಡ್ಡವ್ವಗ ಸಿಟ್ಟು ಎಲ್ಲಿತ್ತಾ ಎಲ್ಲಿಲ್ಲ! ನನ್ನ ದುಬ್ಬದ ಮ್ಯಾಲೆ ಉಂಯಿಕ್ ಅನ್ನೂವಂಗ ಗುದ್ದಿಬಿಟ್ಲು. ಅಷ್ಟಕಾ ಸುಮ್ಕಾಗ್ಲಿಲ್ಲ. ಎಷ್ಟು ದಿನ ಜೋಡಾಗಿದ್ರೆಲೆ ನಮ್ಮ ತಂಗೀಗಿ, ದುಡದು ದುಡದು ಸಾಯತೈತಿ ನಮ್ಮ ತಂಗಿ. ಬಸ್ಸಿನ್ಯಾಗ ಎಂಟಣೆ ಉಳಿಸೀದ್ರ ನಿಂದರಾ ಹೋಗಂಗಿಲ್ಲ ಮರ್ಯಾದಿ ನಿಮ್ಮಪ್ಪಂದರ ಹೋಗಂಗಿಲ್ಲ. ನೀ ತಿನ್ನಾಟು ಅನ್ನ ಬರುತ್ತ ತಿರಶಾಷ್ಟೀ ಹೆಣ್ಣ ಅಂತ ಗೊಣಗೀದ್ಲು. ಆ ಸೀಟಿನ್ಯಾಗ ಕುಂತಿದ್ದ ಇನ್ನೊಂದಿಬ್ರು ಹೂವು ಮಾರೂ ಅಮ್ಮಾರೂ ಸೈತ ನನಗಾ ಬೈದ್ರು. ಅವರ ಕೈಲಿ ಅಷ್ಟೆಲ್ಲಾ ಬೈಸಿಕೊಂಡು ನನಗ ಕಣ್ಣೀರು ಇಳಿಯಾಕ್ಹತ್ತಿತ್ತು.
ಅಷ್ಟೆಲ್ಲಾ ಆದ ಮ್ಯಾಲೆ ಅಕೀ ಮಾತು ಕೇಳ್ಲೇಬಾರದು ಅಂತ ಹಠ ಹುಟ್ಟಿತು. ಕಂಡಕ್ಟರ್ ನಮ್ಮ ಸೀಟಿನ ಹತ್ರ ಬಂದಾ ಬಿಟ್ಟ. ನಮ್ಮ ದೊಡ್ಡವ್ವ ತನ್ನ ತಿಕೀಟು ತಗೊಂಡ್ಲು. ನಾನೂ ನನ್ನ ಪರಕಾರದ ಬಕ್ಕಣದಾಗಿಂದ ಎಂಟಣೆ ತಗದು ಹಿಡ್ಕೊಂಡೆ. ಕಂಡಕ್ಟರ್ , “ಹಾಂ ತಂಗಿ ಟಿಕೀಟೂ” ಅಂದ. ನಮ್ಮ ದೊಡ್ಡವ್ವ, “ಅಯ್ಯ ಸಣ್ಣದಾ ಎಪ್ಪಾ, ಅದಕ್ಯಾಕ ತಿಕೀಟು ತಗೊಂತೀ.. ಸಣ್ಣದು ಇನ್ನೂ ಒನ್ನೇಯತ್ತನೂ ಇಲ್ಲ ಅಂದ್ಲು. ನಾನು ಅಕೀ ಕೈ ಕೊಸರಿಕೊಂಡು ದಡಕ್ಕನ ಎದ್ದು ನಿಂತು “ರೀ ಸಾಹೇಬ್ರ ನಾನು ಯಾಡನೇಯತ್ತ ಅದೀನಿ. ನೋಡ್ರಿ ಇಷ್ಟುದ್ದ ಅದೀನಿ. ಟಿಕೀಟು ಕೊಡ್ರಿ” ಅಂತ ಕಾಲೆತ್ತರಿಸಿ ಸೆಟದು ನಿಂತು ಅವರ ಕಡಿಗಿ ನನ್ನ ಚೋಟುದ್ದದ ಕೈ ಚಾಚಿದ್ದೆ.
ನನ್ನ ಅವತಾರ ನೋಡಿ ಬಸ್ಸಿನ್ಯಾಗಿದ್ದಾರೆಲ್ರೂ ಗೊಳ್ಳನಾ ನಕ್ಕು ಬಿಟ್ರು. ಕಂಡಕ್ಟರ್ ಸೈತ ನಕ್ಕ. ನಕ್ಕು ನಕ್ಕು ಆತನ ಕಣ್ಣಾಗ ನೀರು ಬಂದಿತ್ತು. ಅರ್ಧ ತಿಕೀಟು ಹರದು ನನ್ನ ಕೈಗಿಟ್ಟು ತಲಿ ಸವರಿ ದುಡ್ಡು ತಗೊಳ್ದಾ ಕುಂತ್ಕೊಬೇ ತಂಗಿ ಅಂದ… ಹಠಮಾರಿಯಾಗಿದ್ದ ನಾನು ದುಡ್ಡು ಆತನ ಕಡಿಗಿ ಒಗ್ದು ತಲಿ ಬಗ್ಗಿಸಿಕೊಂಡು ಕುಂತಾಕಿ ನಮ್ಮ ಊರಿನ ಬಸ್ಟ್ಯಾಂಡ್ ಬಂದ್ಮ್ಯಾಲೆನಾ ತಲಿ ಮ್ಯಾಲೆತ್ತಿದ್ದು..






ತುಂಬಾ ಆಪ್ತವಾಗಿದೆ.
ನಿಂಮ ಜವಾರಿ ಭಾಷೆಯ ವಿವರಣೆ ಚೆನ್ನಾಗಿದೆ ಸಾವಿತ್ರಿಯವರೆ. ಅಭಿನಂದನೆಗಳು
ತುಂಬಾ ಸೊಗಸಾಗಿದೆ, ಇಷ್ಟವಾಯ್ತು