ಸಾಲ ಭಂಜಿಕೆಯರು…

ಎಸ್ ಜಿ ಸಿದ್ಧರಾಮಯ್ಯ

ಒಬ್ಬರಲ್ಲ ಇಬ್ಬರಲ್ಲ ಸಾಲುಗಟ್ಟಿ ಹೋದರಲ್ಲ
ಗೆಲುವೆನೆಂಬ ಭಾಷೆ ಮನುಜನದು
ಕೊಲುವೆನೆಂಬ ಯಾಸೆ ಕಾಲನದು
ಯಾಸೆ-ಭಾಷೆಯ ನಡುವೆ ರಣವೀಳ್ಯ
ನಡೆದಂತೆ ಸೋತಬಂಟರ ಸರದಿ ಸೀಮೆ ದಾಟಿ
ಇದ್ದವರ ಎದೆಯೊಳಗೆ ನಡನಡುಗಿದೆ ಮೇಟಿ.

ಇವ ಚುಟುಕು ಕವಿ ಶಿವಶಂಕರ
ಸದಾ ತೆರೆದಬಾಗಿಲ ನೆಂಟ
ದಾಸೋಹದ ದಾರಂದ್ರಕೆ ಟೊಂಕ ಕಟ್ಟಿದ ಬಂಟ
ಪದಕೆ ಪದ ಹದವಾಗಿ ಅನುಭಾವ ತೇಲಿ
ನುಡಿಯು ಜಂಗಮವಾಣಿ
ನಿನ್ನೆ ಎಂದರೆ ನಿನ್ನೆ ಮಾತನಾಡಿದ್ದ ದೂರವಾಣಿಯಲ್ಲಿ
ಇಂದು ಇದೀಗ ಬಂದ ಸುದ್ದಿ ಜಂಗಮಕ್ಕಳಿವಾಯ್ತು.

ಮತ್ತೊಬ್ಬ ಹಳೆಯಗೆಳೆಯ ಹೆಸರು ಸೋಮಣ್ಣ
ಹತ್ತಿರದವನೆಂದರೆ ಉತ್ತರದಾಯಿತ್ವಕ್ಕಿದ್ದವನು
ಅವರು ಇವರು ಎವರ ಮಾತಿಗು
ಅನುಭವ ಮಂಟಪದ ಬಾಗಿಲು ತೆರೆದವನು
ನಗು ನಗುತ್ತಲೇ ಜನರ ಗೆದ್ದವನು
ಇದ್ದಕ್ಕಿದ್ದೊಲೆ ನಡುದಾರಿಯಲ್ಲೆ
ಜವನಮನೆ ಹೊಕ್ಕವನು
ಮರಳಿ ಬಾರನು ಎಂಬುದ ನಂಬಲಾಗದು ಶಿವನೆ.

ಇವು ಕತೆಗಾರ ಬೆಳದಿಂಗಳಿನಲ್ಲಿ
ಬೆಳ್ಳಿಪರದೆಯ ಸರಿಸಿ ಹಿಮದರಾಶಿಯ ಮೇಲೆ
ನಲ್ಲ ನಲ್ಲೆಯರ ಬೇಟದಲಿ
ಜಗದ ಅಂಟುನಂಟಿನ ಗೊಡವೆ ಗೋಪುರಗಳ
ಕಟ್ಟಿದವನು.ಹೆಸರಿಗೆ ಎಫ್.ಟಿ.ಯೋಗಪ್ಪ
ಬಸಿರೆಲ್ಲ ಮೌನದುಬ್ಬೆಗದ ಜೋಗಪ್ಪ
ಮಾತು ಮಾತೂ ಧಾತು ದ್ರವ್ಯ.
ನುಡಿಯ ಬಿಟ್ಟು ನಡದೆಬಿಟ್ಟ
ಈಗಲೀಗ ನೆನಪು ಮಾತ್ರವಾಗಿಬಿಟ್ಟ.

ಮತ್ತೊಬ್ಬ ಕವಿಗೆಳೆಯ
ಇಕ್ಕ್ರಲಾ ವದೀರ್ಲಾ ಎಂದಬ್ಬರಿಸಿ ಬೊಬ್ಬಿರಿದವನು
ಬರೆದಂತೆ ಬರೆದಂತೆ ಬಳಿಸಾಲ ಬಳಗದೊಟ್ಟಿಗೆ
ಚಳವಳಿಯ ಕಟ್ಟಿದವನು.ಕಟ್ಟಿದ ಮನೆಯ
ಕೆಡವದಿದ್ದರು , ನುಡಿಗೆಟ್ಟ ನಡೆಯಲ್ಲಿ
ಸಿಕ್ಕಿದ ಕಡೆ ಸೀರುಂಡೆ ಉಂಡವನು.
ಏನಾದ ಎಂತಾದ ಎಂಬಷ್ಟರಲ್ಲಿ
ಯಾರಿಗೂ ಕೇಡು ಬಯಸದ
ಅಂದರಿಕು ಮಂಚಿವಾಡು ಅನಂತಯ್ಯ.
ಸಾಹಿತ್ಯ ಕೇಂದ್ರಕ್ಕೆ ಕಾಲಾಳುವಾಗಿ
ರಾಜ್ಯ ರಾಜ್ಯಗಳ ಸುತ್ತಿದವನು.
ಒಮ್ಮೆ ಬಿಡುವಾಗಿ ಸೇರೋಣ ಸರ್
ಎಂದವನು, ಅಂದಮಾತೇ ಕಡೆಯಾಗಿ
ಕಾಲನ ಕೆರೆಗೆ ಓಗೊಟ್ಟು ಹೋದವನು.
ಈಗಲೀಗ ನೆನಪು ಹಸಿರಾಗಿ ಕಾಡುವವನು.

ಇವರು ಎಲ್ಲರಂತಲ್ಲ ಬಯಲಿನಂತಿದ್ದವರು
ಹುಟ್ಟು ಹೋರಾಟಗಾರ
ನವ್ಯದುತ್ತುಂಗದಲಿ ‘ಎಂಥ ಸೋಜಿಗ ಅಟ್ಟದಮೇಲೆ
ಅಟ್ಟಕಟ್ಟಿದ’ ರೆಂದು ಐವತ್ತರ ಅಡಿಗರಿಗೆ ಸಂಭ್ರಮಿಸಿ ಹಾಡಿದವರು.
ಬೇಂದ್ರೆ ಯಜ್ಜನ ಜೊತೆಗೆ ಬೀದಿ ಜಗಳಕೆ ನಿಂತು
ನಿಮ್ಮ ಪಾದದ ಧೂಳಿ ನಮ್ಮ ಹಣೆ ಮೇಲಿರಲಿ
ಕಣ್ಣೊಳಗೆ ಮಾತ್ರ ಅದು ಬೀಳದಿರಲಿ ಎಂದವರು.
ಸಂಕ್ರಮಣದ ಹೊಸನೆಲದಲ್ಲಿ ಹೊಸ ಹೊಸ ತಳಿಗಳ
ನಾಟಿಹಾಕಿ ಬೆಳೆಸಿದ ಬೇಸಾಯಗಾರ.
ನಾಡು ನುಡಿಗೆ ಜೀವ ಮೀಸಲಿಟ್ಟಂತೆ
ಮಾತು ಹರಿಯಬಿಟ್ಟ ಮಾತಾಳಿ ಜಂಗಮ.
ಪಟ್ಟಭದ್ರ ಪರಿಷತ್ತನ್ನು ಧಿಕ್ಕರಿಸಿ ಹೊರ ಬಂದು
ಮತ್ತೆ ಪರಿಷತ್ತಿನೊಳಕ್ಕೇ ನಡೆದು ಪಟ್ಟವೇರಿದವರು
ರಾಜಕೀಯಕ್ಕೆ ಸೆಡ್ಡು ಹೊಡೆದು
ಸ್ವಾಭಿಮಾನಿ ಕರ್ನಾಟಕವ ಕಟ್ಟಿದವರು
ಬಿಜೆಪಿ ಯ ಕೋಮುವಾದವ ವಿರೋಧಿಸಿ
ಕೆಜೆಪಿಯ ಜಾತಿಯಾವರಣದಲಿ ಝಂಡಾ ಹಿಡಿದವರು
ಎಷ್ಟಾದರೂ ಇವರು ನಮ್ಮವರು ನಮ್ಮ ಮನೆಯವರು
ನಮ್ಮ ಚಂಪಾ . ಆದಿಕವಿ ಪಂಪ ಕನ್ನಡಕ್ಕೆ ಚಂಪಾ
ದಲಿತ ಬಂಡಾಯದಲಿ ದನಿಯೆತ್ತಿ ನುಡಿದವರು
ಕೊನೆಯ ಎರಡು ವಸಂತಗಳಲ್ಲಿ ದನಿಯುಡುಗಿದ ಕೋಗಿಲೆ
ಮಾತು ಹೋದರು ಎಲ್ಲರ ಮಾತು ಮಾತುಗಳಲ್ಲಿ
ಮಹಾಂತರಾಗಿ ಉಳಿದವರು. ಸಂಕ್ರಾಂತಿಗೂ ಮೊದಲೆ
ಸಂಕ್ರಮಣಕೆ ವಿದಾಯ ಹೇಳಿ ಬಾರದೂರಿಗೆ ಹೋದ
ಕನ್ನಡ ಕನ್ನಡಿಗ ಕರ್ನಾಟಕದ ಸಾಕ್ಷಿ ಪ್ರಜ್ಞೆ.

‍ಲೇಖಕರು Admin

January 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: