ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಹನಾ ಹೆಗಡೆ ಹೊಸ ಕವಿತೆ- ಮಳೆ ಮುಗಿಲು ನೆನಪು…

ಸಹನಾ ಹೆಗಡೆ

ನೆನಪಿನುಂಬುಳಗಳೇ ಹಾಗೆ
ತೇವ ಕಂಡಿದ್ದೇ ಅವು
-ಗಳಲಿ ಜೀವಸಂಚಾರ
ಸೊರಗಿ ಕಡ್ಡಿಯಾಗಿ
ತರಗೆಲೆಗಳ ನಡುವೆ ಒರಗಿ
ಕಳೆದ ಕಾಲ ಮುಗಿದು

ಕೂಗಿ ಕರೆದರು ಯಾರೋ
ಎಂಬಂತೆ ಅಷ್ಟುದ್ದ ಚಾಚಿ ಕತ್ತು
ಮಾರಿಗೊಂದು ಮೂತಿಯೂರಿ
ಅರಿವೆಗಳನೆಲ್ಲ ಮೀರಿ
ಕಾಲ ಮೇಲೇರಿದರೆ
ಅರಿವಿಗೋ ಕವಿದ ಮಂಪರು

ಕಚ್ಚಿ ತೊಗಲ
ಹೀರಿ ನೆತ್ತರ
ಉಬ್ಬಿ ಉರುಟಾಗಿ
ಉರುಳಿ ಬಿದ್ದಾಗಲೂ
ಅರಿವಾಗದಷ್ಟು ಲೋಕವಿಸ್ಮೃತಿ

ಕೈಎಳೆತಕೋ ಸುಡುವ ಸುಣ್ಣದ ಬಿಸಿಗೋ
ಹೊಗೆ ಸೊಪ್ಪು ಮೂಲಿಕೆಗಳ
ರಸದ ವಾಸನೆಯ ಸೆಳೆತಕೋ
ಉದುರಿ ಹೋದರೂ ಕೆಳಗೆ
ಉಳಿಯುವುದು ತುರಿಕೆ
ಇಸುಬು ಕಜ್ಜಿ ನೋವು

ವರ್ಷಾನುಗಟ್ಟಲೆಯ ನವೆ
ಉಳಿಸಿ ಹೋದ ಕಲೆ ಮಾದು
ಬೆಳೆದ ಚರ್ಮ ಹೊಸದು
ಎಂದು ತೆರೆದರೆ ಬಾಗಿಲು
ಹೊರಗೆ ಮತ್ತೆ ಮಳೆಗಾಲ
ಕಪ್ಪನೆಯ ಮುಗಿಲು !

‍ಲೇಖಕರು Admin

13 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading