ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸವಿರಾಜ್ ಆನಂದೂರು ಕವಿತೆ – ಗಂಧಗಳು…

ಸವಿರಾಜ್ ಆನಂದೂರು

ಅವಳು ಅಲ್ಲಿ ಹೊಳೆಯ ದಂಡೆಯ ಮೇಲೆ ನಿಂತಿದ್ದಳು
ಕಣ್ಣುಗಳಲ್ಲೇ ಬಲೆಯ ಹೆಣೆಯುತ್ತ…
ನಾನು ನೋಡಬಾರದಾಗಿತ್ತು ಹಾಗೆ, ಸುಮ್ಮನೇ
ನಕ್ಕಳು, ಹೊರಟುಹೋದಳು
ಈಗ ಉಳಿದಿದ್ದು ಅವಳ ಬಲೆಗೆ ಸಿಕ್ಕ ಮೀನುಗಳು ಹೊರಳಿ,
ಎದೆಯಲ್ಲಿ ಮೂಡಿಸಿದ ಪುಳಕ!
ಅವಳು ಮತ್ಸ್ಯಗಂಧಿ!!

ಇವಳು ದೂರದಲ್ಲಿದ್ದಾಳೆ, ಆದರೂ ಮೀಟುತ್ತಾಳೆ
ಮೀಟಬಾರದ ತಂತಿಗಳನ್ನು;
ದೂರದಲ್ಲಿ ಸ್ಥಿತವಾದ ಆಲದ ಮರದ ಬಿಳಿಲುಗಳೆರಡು
ಒಂದಕ್ಕೊಂದು ಬೆಸೆದುಕೊಂಡಂತೆ
ನಾನೊಂದು ಮರ, ಇವಳೊಂದು ಮರ: ನಮ್ಮ
ಎಲೆಗಳ ಬಣ್ಣ, ಕಾಯಿಗಳು ಒಗರು, ಹಣ್ಣುಗಳ ರುಚಿ ಬೇರೆ.
ಆದರೂ ನಮ್ಮ ಬೇರುಗಳ ಗಂಧ ಒಂದೇ!
ಇವಳು ಯೋಜನಗಂಧಿ!!

ನೀನು ಬಂದರೆ, ನಿನ್ನ ಮೈಯಿಂದೆಲ್ಲಾ ಆಲಿಕಲ್ಲುಗಳಂತೆ
ಹೊರ ಚಿಮ್ಮುವ ಕವಿತೆಗಳು!
ನಾನು ಬೊಗಸೆಯಲ್ಲಿ ಆಯುತ್ತೇನೆ, ಕರಗಿ
ಹೋಗುವ ಮುನ್ನ…
ನಿನ್ನ ಕಂಡರೆ ಸಾಕು ಅಕ್ಷರಗಳ ಸಮುದ್ರಕ್ಕೆ ಬರಿಯ ಉಬ್ಬರ;
ಉಪಮೆ, ಪ್ರತಿಮೆಗಳಡಿ ಸಿಲುಕಿದ ನನ್ನ ಎದೆ ಭಾರ
ಕಾಗದದ ಮೇಲಿಳಿಸುವಷ್ಟರಲ್ಲಿ, ಕರಗಿ ಹೋದಾವು
ಮತ್ತಷ್ಟು ಕವಿತೆಗಳು ಸುಮ್ಮನೇ ವ್ಯರ್ಥ
ಕವಿಯಾಗದಿದ್ದರೂ ಪರವಾಗಿಲ್ಲ; ಬರಿಯ
ರಸಿಕನಾಗಿ ಉಳಿದರೆ ಸಾಕು!
ಅನುಭವಿಸುತ್ತೇನೆ ನಿನ್ನ ಮೈಯಿಂದ ಹೊಮ್ಮುವ
ಕವಿತೆಗಳ ಘಮ!
ನೀನು ಕಾವ್ಯಗಂಧಿ!!

ಗಂಧಗಳ ಚೆಲ್ಲಿ ಹೋದಿರಿ ನಿಮ್ಮದೇ ದಾರಿಗಳಲ್ಲಿ,
ಅವಳು, ಇವಳು ಮತ್ತು ನೀನು
ಹೊಸತು ಗಂಧಗಳಿಗೆ ಎದೆಯ ತೆರೆದುಕೊಂಡು,
ಇಲ್ಲಿಯೇ ನಿಂತಿರುವೆ ನಾನು!ಸವಿರಾಜ್ ಆನಂದೂರು

‍ಲೇಖಕರು Admin

15 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading