ಸರೋಜಿನಿ ಪಡಸಲಗಿ
ಈಗೀಗ ನನಗೂ ಕೋಪ ಜಾಸ್ತಿ
ಹೇಳೀನಿ ನೂರಲ್ಲ ಸಾವಿರ ಸಲ
ಎಲ್ಲಾದಕ್ಕೂ ಉಂಟು ಮಿತಿ ಸಾಕಿನ್ನು
ಕಂಡದ್ದು ತಂದು ಹಾಕೋದು ಬೇಡ
ದಿಕ್ಕು ತಪ್ಪಿ ನಾ ರೇಗೋದೂ ಬೇಡ
ನೋಡಿ ನನ್ನತ್ತ ವಿಚಿತ್ರವಾಗಿ ಒಂದ್ಸಲ
ಮೊಗದಿರುವಿ ಅತ್ತ ಹೋಯ್ತು ಮನ
ಬಾರದಿನ್ನು ಅಂತ ನಾ ನಿರಾಳ ಕೊಂಚ
ಬಂದೇ ಬಿಡ್ತು ಆಂಚು ಆ ಕೊಂಚಕ್ಕೂ
ಧಡ್ ಧಡಾರಂತ ಏನೋ ಬಂದಾಗ
ಬೆಚ್ಚಿದೆ ತಲೆ ಕೆರೆದೆ ಕೂದಲು ಕಿತ್ತುತ್ತ
ಯಾವುದನ ನೋಡಲಿ ಸರಿ ಮಾಡಲಿ
ಹೇಗೆ ತಿಳಿಮಾಡಲಿ ಅದನ ತಿಳಿಯದೆ
ಗೊಣಗಿದೆ ಮುಖಗಂಟಿಕ್ಕಿ ಗುಡುಗಿದೆ
ಕೈಯಾಡಿಸಿ ಹೊರಟೇ ಬಿಡಬೇಕೆ ಅದು

ಇಲ್ವೆ ಬೇರೆ ಕೆಲಸ ಮತ್ತೇನು ಅರಿಯೆಯಾ
ಮಣತೂಗೊ ಕೊಚ್ಚೆ ಒಟ್ಟುವುದ ಬಿಟ್ಟು
ನನಗೂ ಕೊಡು ಸಮಯ ಉಸಿರಾಡಲು
ವಿರಮಿಸು ನೀ ಗಳಿಗೆ ಅನುಕೂಲ ಇಬ್ರಿಗೂ
ಹೇಳಿದೆ ನಯವಾಗಿ ಬಲು ನಾಜೂಕಾಗಿ
ನೆಟ್ಟಗೆ ನೇರವಾಗಿ ಇದಿರಿಗೆ ಕೂತು ಒಪ್ಪಾಗಿ
ಬಾಗಿಲ್ಲ ಡೊಂಕಿಲ್ಲ ಸುಕ್ಕಿಲ್ಲ ಹೇಳಿತು ಸ್ಪಷ್ಟಾಗಿ
ಗೊತ್ತಿಲ್ಲ ನಂಗೆ ಏನೂ ಮಾಡದೇ ಇರೋದು
ನಾನಲ್ಲ ಸೋಮಾರಿ ಹಿಡಿದೀತೆನಗೆ ಜಂಗು
ಪಟ ಪಟ ಸವರಿಸು ಬರಲಿದೆ ಸರಕು ಮತ್ತೆ
ಬಿಟ್ಟು ಕಣ್ಣು ನೋಡ್ದೆ ರೆಪ್ಪೆಯಲುಗಿಸದೆ
ಮತ್ತೇನು ಬಂದೀತು ಸರಕು ಗುಪ್ಪೆಯಾಗಿ
ಯಾಕೋ ಅತಿಯಾಯ್ತಿದು ಬಲೆ ಜಂಬದ್ದು
ಅಲ್ವಂತೆ ಸೋಮಾರಿ ನಾನಾ ಸೋಮಾರಿ
ಕಾಣ್ತಿಲ್ವೆ ಪೇರಿಸಿಟ್ಟ ಯೊಚನೆಗಳ ರಾಶಿ
ಎಲ್ಲಿತ್ತೊ ಹೇಳೇಬಿಡ್ತು ಇರಬೇಕು ಹಾಗೇ
ಬೇಡ ಹೆಚ್ಚು ಮಾತು ಉಂಟು ರಾಶಿ ಕೆಲಸ
ಬೆಳೆದು ಬಿಟ್ಟೆಯಾ ನೀ ನನಗೇ ಗದರುವಷ್ಟು
ಕೇಳ್ದೆ ಈಗೀಗ ಹೆಚ್ಚಿದ ಕೋಪದಲಿ ರಂಗೇರಿ
ಫಕ್ಕನೆ ನಕ್ಕ ಮನ ಹೇಳ್ತು ಗೊತ್ತಾಯ್ತಲ್ಲ
ಇರು ಇನ್ನು ತೆಪ್ಪಗೆ






0 Comments