ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮುದ್ರ ಎಂದೂ ದಣಿದಿಲ್ಲ ನೋಡು..

ನಾಗರಾಜ್ ಹರಪನಹಳ್ಳಿ

ಈಗ ಮೌನದಲ್ಲೇ ಸಾವಿರದ ಮಾತು
ಇಂತಹ ಕ್ಷಣಗಳ ನಾವಿಬ್ಬರೂ ಊಹಿಸಿರಲಿಲ್ಲ
ಆದರೂ ಪ್ರೀತಿ ನೂರ್ಮಡಿಸುತ್ತಿದೆ
ಪ್ರೀತಿಯ ಜೋಳಿಗೆ ಎಂದೂ ಖಾಲಿಯಾಗದು…

ಸೂರ್ಯನ ಬೆಳಕು, ಬೀಸುವ ಗಾಳಿ, ನಿದ್ರಿಸದ ಸಮುದ್ರ ಖರ್ಚಾಗುವುದಿಲ್ಲ ನೋಡು;

ಜಗಕೆ ಬೆಳಕು ನೀಡಿದಷ್ಟು ಬೆಳೆಯುವ ಸೂರ್ಯನಂತೆ
ಭೂಮಿಯ ಮುದ್ದಿಸಿ, ಜಗದ ಜನರ ಉಸಿರಿಗೆ ಉಸಿರಾಗಿ ಮುಂದೆ ದೇಶ ಕಾಲ ಸುತ್ತುವ ಗಾಳಿ, ದೇಶ ದೇಶದ ಪ್ರೇಮಿಗಳ ಬೆಸವ ಸಮುದ್ರ
ಎಂದೂ ದಣಿದಿಲ್ಲ ನೋಡು..

ಪ್ರೀತಿಗೆ ಈಗ ಸುಡುಬಿಸಿಲಿನ ಕಾಲ
ಧಗೆ ಹೆಚ್ಚು..‌. ಆದರೇನಂತೆ
ಕಾಳು ಚೆಲ್ಲಿದ ಅಂಗಳಕೆ ಬರುವ ಹಕ್ಕಿಯಂತೆ ಕತ್ತು ಕೊಂಕಿಸಿ ನೋಡುತ್ತಲೇ ಕಾಳು ಕೊಕ್ಕಿನಿಂದ ಕುಕ್ಕಿ ಎದೆಗೆ ಹಾಕಿಕೊಳ್ಳುತ್ತದೆ
ಕ್ಷಣದಲ್ಲಿ ಹಾರಿ ಮರಿ ಹಕ್ಕಿಗೆ ಗುಟುಕಿಡುತ್ತದೆ…

ನೀ ಸಹ ಹಾಗೆ ವ್ಯಾಟ್ಸಪ್ ನಲ್ಲಿ ಇಣುಕಿ ಪ್ರೀತಿಯ ಗುಟುಕು ಕೊಟ್ಟು ಹೋಗುವ ಹಾಗೆ

ಬೆಳುದಿಂಗಳ ಉಂಡ ನದಿ ಉಲ್ಲಾಸದಿ ನಕ್ಕಂತೆ
ನಾನು ನಗುತ್ತೇನೆ; ನೀ
ಆನ್ ಲೈನ್ಗೆ ಬಂದಾಗಲೆಲ್ಲಾ

ಒಂದೇ ಒಂದು ಶಬ್ದ ಮೆಸೆಜ್‌ ಮಾಡದೆಯೂ ನಾವು ಮಾತಾಡುತ್ತೇವೆ; ಭಾವ ಭಾವನೆಗಳು ಮಾತಾಡುತ್ತವೆ;
ಸುಖದ ದಿನಗಳಲ್ಲಿ ಮಾತಾಡಿದಂತೆ ನಾವು ಹಿಗ್ಗುತ್ತೇವೆ… ಹಾಗೂ
ಬೆಟ್ಟದಷ್ಟು ವಿರಹ ಹೊತ್ತು ಮರಳುತ್ತೇವೆ… ಹಾಗೂ
ಒಂದಿಲ್ಲೊಂದು ದಿನ ಸಿಗುವ ಪಣ ತೊಡುತ್ತೇವೆ, ಇಬ್ಬರೂ…

ಈಗ ವಿಷಾದದ ನಿಟ್ಟುಸಿರು ಬೆಳೆದಿದೆ; ಮುಂದೆ ಏನಿದೆ
ಏನು ಕಾದಿದೆ ಯಾರು ಬಲ್ಲವರು

ಆದರೆ ಪ್ರೇಮಿಗಳು ಆಶಾವಾದವನ್ನೇ ಉಸಿರಾಡುತ್ತಾರೆ, ಆಯುಷ್ಯ ಹೆಚ್ಚು ಅವರಿಗೆ
ಕಾಯುವುದು, ವಿರಹಿಯಾಗುವುದು
ಅಷ್ಟು ಸುಲಭವಲ್ಲ ಮುದ್ದು;
ಇನಿಯ ತಲುಪುವುದು
ಬೀದಿಬದಿಯ ಮಾತಿನಷ್ಟು ಸರಳವಲ್ಲ; ಸಹನೆ
ಬದುಕ ಕಲಿಸಿದ್ದು ನೀನೇ

ಇರಲಿ ಬಿಡು ಈಗ ಮೌನವ ಉಸಿರಾಡಿ, ಅದನ್ನೇ ಹೊದ್ದು ಮಲಗುತ್ತಿದ್ದೇವೆ
ಎಂದಿನಂತೆ ಕಣ್ಣು ರೆಪ್ಪೆಗೆ ಸಮಾಧಾನ ಹೇಳಿದೆ; ನಡು ಮಧ್ಯಾಹ್ನದಂಥ ಕೋಣೆ
ಅಲ್ಲಿಂದ ಹೊರಟ ನಿಟ್ಟುಸಿರು ಕಿಟಕಿ ಮೂಲಕ ಅಂಗಳದ ಮೆಲುಗಾಳಿಯ ಮಾತಾಡಿಸುತ್ತಲೇ
ನನ್ನೂರಿನಿಂದ ನಿನ್ನೂರಿಗೆ
ಆಡದ ಮಾತುಗಳ ಕಳಿಸಿ ಸಂತೈಸುತಿದೆ;
ನಾಳೆಗೆ ಬಣ್ಣಗಳ ತುಂಬಿದೆ
ಅಂಗೈ ಹಸಿಯಲ್ಲಿ
ನಿನ್ನ ಹೆಸರೇ ಮೂಡುತ್ತಿದೆ

ಪ್ರೀತಿಯ ಅಕ್ಕಿ ಒಲೆಯ ಕುಕ್ಕರಿನಲಿ ಬೇಯುತಿದೆ
ನಿನ್ನ ಬರುವಿಗೆ ಊಟದ ತಾಟು ಕಾದಿದೆ…

‍ಲೇಖಕರು Avadhi

18 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading