-ಕೆ ಎನ್ ಲಾವಣ್ಯ ಪ್ರಭಾ
ನಾವಿಬ್ಬರೂ
ಒಟ್ಟಿಗೆ ನಡೆಯುತ್ತೇವೆ
ಹಾಗೆ ನಡೆಯುತ್ತಲೇ ಪಕ್ಕ ತಿರುಗಿ
ಪರಸ್ಪರ ದಿಟ್ಟಿಸಿ
ನಕ್ಕು ಬಿಕ್ಕಿ ಬೀಗಿ ಬಾಗಿ
ಸಾವರಿಸಿಕೊಂಡು
ಮತ್ತೆ ಮುನ್ನಡೆಯುತ್ತೇವೆ
ನಾವಿಬ್ಬರೂ
ಒಟ್ಟಿಗೆ ನಡೆಯುತ್ತೇವೆ
ಕವಿತೆಗಳನ್ನು ಬರೆದು ಪರಸ್ಪರ
ರವಾನಿಸುತ್ತಾ ರಮಿಸುತ್ತಾ
ರೇಗಿಸುತ್ತಾ ಕ್ಷಮಿಸುತ್ತಾ
ಮುಂಜಾನೆ ಮುಸ್ಸಂಜೆಗಳಲ್ಲೂ
ನಿರಾಳವಾಗಿ
ಒಟ್ಟಿಗೆ ನೆರಳುಗಳ ದಾಟುತ್ತೇವೆ
ನಾವಿಬ್ಬರೂ
ಒಟ್ಟಿಗೆ ನಡೆಯುತ್ತೇವೆ
ಬಿಸಿಲು ಚಳಿ ಮಳೆ ಗಾಳಿಯಲ್ಲೂ
ಒಳ ಹೊರಗಿನ ಯುದ್ಧಗಳ
ಸಾವು ನೋವಿನ ಘಳಿಗೆಯಲ್ಲೂ
ನಾವು ನಡೆವ ದಾರಿಯುದ್ದಕ್ಕೂ
ಶಾಂತಿ ಪ್ರೀತಿಯ ಹೂಗಿಡಗಳನ್ನು
ನೆಟ್ಟು ನೀರುಣಿಸುತ್ತಲೇ
ಒಟ್ಟಿಗೆ ಸಾಗುತ್ತೇವೆ
ನಾವಿಬ್ಬರೂ
ಒಟ್ಟಿಗೆ ನಡೆಯುತ್ತಲೇ ಇದ್ದೇವೆ
ಇಬ್ಬರ ನಡುವಿರುವ
ಖಾಲಿ ಅವಕಾಶದಲ್ಲಿ
ಕೈಬೆರಳುಗಳನ್ನೆಂದೂ ಹೆಣೆಯದೆ
ಒಬ್ಬರ ಹಣೆಯನ್ನೊಬ್ಬರೆಂದೂ
ಚುಂಬಿಸದೆಯೂ ಸಹಾ
ಒಟ್ಟಿಗೆ ಉಸಿರಾಡುತ್ತೇವೆ
ನಾವಿಬ್ಬರೂ
ಬಹು ದೀರ್ಘಕಾಲದಿಂದಲೂ
ಜೊತೆಯಲ್ಲೇ ಇದ್ದೇವೆ
ಎಂದೂ ಬೇರೆಯಾಗದೆ,
ದೂರಾಗದೇ, ಚೂರಾಗದೇ,
ಬೋರಾಗದೇ, ಕಳೆದುಹೋಗದೇ
ತೀರಾ ಸಣ್ಣದೊಂದು ಅಂತರದಲ್ಲಿ
ಒಟ್ಟಿಗೆ ಹೆಜ್ಜೆ ಹಾಕುತ್ತೇವೆ
ನಾವಿಬ್ಬರೂ ಸುಂದರ
ಸಮಾನಾಂತರ ರೇಖೆಗಳು.






0 Comments