ಟಿ ಪಿ ಉಮೇಶ್
ಮಾತು ಬಹಳ ಕೆಲಸ ಮಾಡುತ್ತಿದೆ!
ಆರಿಸಿಕೊಂಡ ಮಾತು ಅಧಿಕಾರ ನಡೆಸುತ್ತಿದೆ;
ಆರಿಸಿದವರನ್ನೆಲ್ಲ ಅಲೆಸುತ್ತಾ ಅಳಿಸುತ್ತಿದೆ;
ಎದೆ ಏರಿಸಿದ ಧನಿಗಳನೆ ಮುರಿಯುತ್ತಿದೆ;
ಉಸಿರೆತ್ತಿದವರ ಕರುಳನೆ ಅರಿದು ಉಗಿಯುತ್ತಿದೆ;
ಆಸರಾದವರ ಹಸ್ತಮಸ್ತಕಗಳನೆ ನೊಣೆಯುತ್ತಿದೆ;
ಮಾತು ಅಂಕುಶ ಹಿಡಿದು ಕುಳಿತಿದೆ;
ಮಾತು ಕೆಲಸ ಮಾಡಿಸುತ್ತಿದೆ!
ಮಾತು ಭಲೆ ಶಕ್ತಿ ಭಕ್ತಿ ಹೊದ್ದಿದೆ;
ಮಾತ ಮಾತಿಗು ಉಘೇ ಉಘೇ ಅನ್ನಬೇಕಿದೆ;
ಕೈ ಕಾಲುಗಳ ಹಿಡಿದು ಹೊರಳಾಡಬೇಕಿದೆ;
ಭೀತಿಯಲಿ ಉಸಿರುಗಟ್ಟಿ ಊಳಿಡಬೇಕಿದೆ;
ತೋರಿದ ದಾರಿಯಲ್ಲೇ ಎಡವಿ ಕುಂಟಬೇಕಿದೆ;
ಮೂಳೆ ಮಾಂಸಗಳನೆ ಊಟಕ್ಕಿಡಬೇಕಿದೆ;
ಬಯಲು ಬೆಟ್ಟಗಳ ಕಡಿದು ದಕ್ಷಿಣೆ ಹಾಕಬೇಕಿದೆ;
ಮಾತು ಸದಾ ಕ್ರೋಧೋನ್ಮತ್ತವಾಗಿದೆ;
ಮಾತು ಕೆಲಸ ಮಾಡಿಸುತ್ತಿದೆ!

ಮಾತು ಬೆಳಕ ಪಂಜಿನಲಿ ಬೆಂಕಿ ಚೆಲ್ಲುತ್ತಿದೆ;
ಆಸರೆಯ ಸೆರಗಲಿ ವಿಭಜನೆಯ ಹಂಚುತ್ತಿದೆ;
ಪ್ರೀತಿಯೆಸರಲಿ ಭೀತಿಯ ರಕ್ತ ಹರಿಸುತ್ತಿದೆ;
ಚರಿತೆಯ ಜಪದಲಿ ನೆಲಧನಿ ಒಕ್ಕಲೆಬ್ಬಿಸುತ್ತಿದೆ;
ಬಲದ ನೆಪದಲಿ ಭೂ ಒಡಲ ಬಗೆಯುತ್ತಿದೆ;
ಮಾತ ಮರೆಸಿ ಮನೆಯಲಿ ಗಳ ಎಣಿಸುತ್ತಿದೆ;
ಮಾತು ಮಾತಿನೆಸರಲಿ ಹಸಿವ ಮರೆಸುತ್ತಿದೆ;
ಮಾತು ಈಗ ಕನಸುಗಳ ಮಾರುತ್ತಿದೆ!
ಮಾತು ಕೆಲಸ ಮಾಡುತ್ತಿದೆ!
ಸದ್ದು ಮಾತು ಕೆಲಸ ಮಾಡುತ್ತಿದೆ;
ಕವಿತೆ ಸುಮ್ಮನೆ ತೊಂದರೆ ಕೊಡುತ್ತಿದೆ!






0 Comments