ಸದಾ ಕಾಯುವ, ಕಾಡುವ ಅವ್ವ !

ಬಸವರಾಜ ಹೊರಟ್ಟಿ
ನಿರೂಪಣೆ : ಶಶಿ ಸಾಲಿ
‘ಅವ್ವ’ ಎನ್ನುವ ಎರಡಕ್ಷರ ನನ್ನ ಪಾಲಿಗೆ ಚೈತನ್ಯದಾಕ್ಷಿ. ಅವ್ವನ ನೆನಪು ಸದಾಕಾಲ ನನ್ನ ಎದೆಯ ಒರತೆಯಲ್ಲಿ ತಿಳಿನೀರ ಬುಗ್ಗೆಯಂತೆ ಉಕ್ಕುತ್ತದೆ. ದಿನದ ಆರಂಭವೇ ಅವ್ವನಿಂದ ಆಗುತ್ತದೆ. ಮಲಗುವಾಗ ಅವ್ವ ನನಗಾಗಿ ಹಾಡುತ್ತಿದ್ದ ಜೋಗುಳದ ನೆನಪಾಗುತ್ತದೆ. ಅವ್ವ ನನ್ನ ಪಾಲಿನ ಸರ್ವಸ್ವವಾಗಿದ್ದಾಳೆ. ಅವ್ವ ನನ್ನನ್ನು ಸದಾ ಕಾಯುತ್ತಾಳೆ, ಕಾಡುತ್ತಾಳೆ.
ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ನನ್ನ ಅವ್ವನ ತವರುಮನೆ. ಮನೆಯ ತುಂಬಾ ಆಳು, ಕಾಳು. ಸುಸಂಸ್ಕೃತ, ಸಮೃದ್ಧ ರೈತಾಪಿ ಮನೆತನ. ನನ್ನ ಅಪ್ಪ ಆದರ್ಶ ಶಿಕ್ಷಕರಾಗಿದ್ದರು. ನನಗೆ ತಿಳಿದಂತೆ ಯಡಹಳ್ಳಿಯ ನಮ್ಮ ಮನೆತನವೂ ಒಂದು ಕಾಲಕ್ಕೆ ಆಗರ್ಭ ಶ್ರೀಮಂತ ಮನೆತನ. ನನ್ನ ಚಿಕ್ಕಪ್ಪ ಮಾಡುತ್ತಿದ್ದ ಮುಂಬೈನ ಸಟ್ಟಾ ವ್ಯವಹಾರದಲ್ಲಿ ನಷ್ಟ ಅನುಭವಿಸಿ ಇಡೀ ಕುಟುಂಬ ಆರ್ಥಿಕ ಮುಗ್ಗಟ್ಟನ್ನು ಎದುರಿಸುವಂತಾಯಿತು. ಆದರೆ ಇದ್ದ ಹೊಲ ಮನೆಗಳನ್ನು ಕಳೆದುಕೊಳ್ಳದೇ ಕಾಪಾಡಿಕೊಂಡರು.
ಅಪ್ಪ ಅಕ್ಷರಶಃ ಕಾಯಕ ಯೋಗಿಯಾಗಿದ್ದ, ಬಸವಣ್ಣನವರ ತತ್ವಾದರ್ಶಗಳನ್ನು ಬಹು ಶ್ರದ್ಧೆಯಿಂದ ಪಾಲಿಸುತ್ತಿದ್ದ, ದಾಸೋಹ ಅಪ್ಪನ ಅತಿ ಮೆಚ್ಚಿನ ಸಂಗತಿಯಾಗಿತ್ತು. ಪ್ರತಿ ದಿನ ತನ್ನೊಡನೆ ಯಾರನ್ನಾದರೂ ಕರೆದುಕೊಂಡು ಬಂದು ಮನೆಯಲ್ಲಿ ಊಟ ಮಾಡಿಸುತ್ತಿದ್ದ. ಅವ್ವ ಮನೆಯ ಸಮಸ್ತ ಉಸ್ತುವಾರಿಯೊಂದಿಗೆ, ಆಳುಗಳ ಹಿಂದೆ ಹೊಲಕ್ಕೆ ಹೋಗಿ ಅವರ ಜೊತೆಗೆ ತಾನೂ ಆಳಾಗಿ ಹೊಲದ ಕೆಲಸಗಳಲ್ಲಿ ತೊಡಗಿಕೊಂಡು ಮೈ ಮುರಿದು ದುಡಿಯುತ್ತಿದ್ದಳು. ಬೇಸರವೆನ್ನುವ ಸಂಗತಿಯೇ ಅವ್ವನಿಗೆ ಗೊತ್ತಿರಲಿಲ್ಲ. ಮನೆಗೆಲಸಕ್ಕೆ, ಹೊಲದ ಕೆಲಸಕ್ಕೆಂದು ಬರುತ್ತಿದ್ದ ಹೆಣ್ಣು ಮಕ್ಕಳ ಯೋಗಕ್ಷೇಮ, ಸುಖದುಃಖ, ದುಮ್ಮಾನಗಳನ್ನು ಕೇಳುತ್ತಿದ್ದ ಅವ್ವ, ಕಷ್ಟಗಳಿಗೆ ಈಡಾದ ಹೆಣ್ಣು ಮಕ್ಕಳಿಗೆ ಸಹಾಯ ಮಾಡಲು ಮುಂದಾಗುತ್ತಿದ್ದಳು. ಬಡವರ ಕಣ್ಣೀರು ಕಂಡರೆ ಮಮ್ಮಲ ಮರುಗುತ್ತಿದ್ದ ಅವ್ವ ಅಂಥವರಿಗೆ ಆಸರೆಯಾಗುತ್ತಿದ್ದಳು. ಅವ್ವನ ಈ ಗುಣ ನೋಡಿದ್ದ ಅಪ್ಪ ಅವಳ ವಿಚಾರಗಳಿಗೆ, ಆಚಾರಗಳಿಗೆ ಸ್ಪಂದಿಸುತ್ತಿದ್ದ.
ನನಗಾಗ ಬಹುಶಃ 14-15 ವರ್ಷಗಳಿರಬಹುದು. ಇಷ್ಟು ಚಿಕ್ಕ ವಯಸ್ಸಿಯನಲ್ಲಿಯೇ ನನ್ನ ತಂದೆಯನ್ನು ಕಳೆದುಕೊಂಡ ನತದೃಷ್ಟ ನಾನು. ಮುಂದಿನ ನನ್ನ ಜೀವನದುದ್ದಕ್ಕೂ ಅವ್ವನೇ ನನ್ನ ಸರ್ವಸ್ವವಾದವಳು. ಆಗರ್ಭ ಶ್ರೀಮಂತ ಮನೆತನದಿಂದ ಬಂದಿದ್ದ ಅವ್ವನಿಗೆ ಅಪ್ಪನ ಸಾವು ಬರಸಿಡಿಲಿನಂತೆ ಎರಗಿತು. ಶೂನ್ಯ ಆವರಿಸಿದಂತಾಯಿತು. ಮನೆತನದ ಆಗುಹೋಗುಗಳನ್ನು ತನ್ನ ವೃತ್ತಿಯ ಜೊತೆಗೆ ನೋಡಿಕೊಂಡು ಹೋಗುತ್ತಿದ್ದ ಅಪ್ಪ ಹೀಗೆ ಇದ್ದಕ್ಕಿದ್ದಂತೆ ಗತಿಸಿ ಹೋದದ್ದು ಅವ್ವನ ಪಾಲಿಗೆ ಬಹು ದೊಡ್ಡ ಆಘಾತವನ್ನುಂಟು ಮಾಡಿತು. ಈ ಆಘಾತದಿಂದ ಸಾವರಿಸಿಕೊಳ್ಳಲು ಅವ್ವನಿಗೆ ಹಲವು ತಿಂಗಳುಗಳೇ ಬೇಕಾದವು.
ಅವ್ವ ಗಟ್ಟಿಗಿತ್ತಿ. ಅಸಹಾಯಕತೆ, ಅನಿವಾರ್ಯತೆಗಳ ಸಂಕೋಲೆಯಿಂದ ಮೈ ಕೊಡವಿಕೊಂಡು ಕಾರ್ಯನಿರತಳಾದಳು. ಅಪ್ಪ ನಡೆಸಿಕೊಂಡು ಬಂದ ಯಾವುದೇ ಕಾಯಕವನ್ನು ಮರೆಯದೇ ಮುಂದುವರೆಸಿಕೊಂಡು, ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಅವ್ವ ತನ್ನನ್ನು ತೊಡಗಿಸಿಕೊಂಡದ್ದನ್ನು ನೆನೆಸಿಕೊಂಡರೆ ನನಗೆ ಇವತ್ತಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ. ಅವ್ವ ಏಕಾಂಗಿಯಾಗಿ ಎಲ್ಲ ಕೆಲಸಗಳನ್ನು ಅದು ಹೇಗೆ ನಿಭಾಯಿಸುತ್ತಿದ್ದಳು ಎನ್ನುವುದೇ ಇವತ್ತಿಗೂ ಯಕ್ಷ ಪ್ರಶ್ನೆಯಾಗಿ ನನ್ನನ್ನು ಕಾಡುತ್ತದೆ.
ಅಪ್ಪನಿಗೆ ಹಾಲು ಹೈನು, ತುಪ್ಪ, ಮೊಸರು, ಹಳ್ಳಿಗಾಡಿನ ಸಮೃದ್ಧ ಊಟವೆಂದರೆ ಅತೀವ ಪ್ರೀತಿ. ಅದಕ್ಕಾಗಿ ಮನೆಯಲ್ಲಿ ಹಾಲು ಕರೆಯುವ ಎಮ್ಮೆ ಆಕಳುಗಳು. ಶರೀರ ಭಾಗ್ಯವಿದ್ದರೆ ಸಕಲ ಭಾಗ್ಯ ಎನ್ನುತ್ತಿದ್ದ ಅಪ್ಪ ಊಟ ಉಪಚಾರಗಳಲ್ಲಿ ಅತ್ಯುತ್ತಮವಾದದ್ದನ್ನೇ ಬಯಸಿದಾತ. ಪಾಠಗಳಿಗೆ ಪ್ರಾಶಸ್ತ್ಯ ನೀಡಿದಷ್ಟೇ ಆಟಗಳಿಗೂ ಪ್ರಾಶಸ್ತ್ಯ ನೀಡುತ್ತಿದ್ದ ಅಪ್ಪ, ಹಳ್ಳಿಯ ಆಟೋಟಗಳಾದ ಕಬಡ್ಡಿ, ಚಿಣಿಫಣಿ, ಚಂಡಿನ ಆಟಗಳನ್ನು ಮೈ ಬೆವರು ಕಿತ್ತು ಬರುವ ಹಾಗೆ ಆಡಿಸುತ್ತಿದ್ದ. ಸಾಲದೆಂಬಂತೆ ಊರಿನಲ್ಲಿದ್ದ ಗರಡೀ ಮನೆಗೆ ನನ್ನ ಸರೀಕರ ಜೊತೆ ಕಳಿಸಿ ಸಾಮು ತೆಗೆಸುವುದು, ನೂರು ಗಟ್ಟಲೇ ಊಟಾಬಸಿ ಹೊಡೆಯಿಸುವುದು ಮಾಡಿಸುತ್ತಿದ್ದ. ಊರಿಗೆ ಸಮೀಪವೇ ಮೈದುಂಬಿ ಹರಿಯುತ್ತಿದ್ದ ಘಟಪ್ರಭಾ ಹೊಳೆಗೆ ಕರೆದೊಯ್ದು ಮೈ ಹುರಿಗಟ್ಟುವ ಹಾಗೇ ಈಸು ಹೊಡೆಸುತ್ತಿದ್ದ. ಹೊಳೆಯಿಂದ ನೀರು ಹೊರೆಸುತ್ತಿದ್ದ ಅಪ್ಪ, ಹುರಿಗಟ್ಟುವ ದೇಹಕ್ಕೆ ಹದವಾದ ಊಟೋಪಚಾರಗಳ ವ್ಯವಸ್ಥೆ ಮಾಡಿಸುತ್ತಿದ್ದ. ಒಣ ಉತ್ತತ್ತಿಯನ್ನು ಹೆರೆದುಪ್ಪದಲ್ಲಿ ನೆನೆಸಿಟ್ಟು, ತಿನ್ನಲು ಕೊಡುತ್ತಿದ್ದ. ಸಣ್ಣ ತಂಬಿಗೆ ತುಂಬ ಹಾಲು ಕುಡಿಸುತ್ತಿದ್ದ. ತುಪ್ಪ ಹಚ್ಚಿದ ಚಪಾತಿ, ಬಿಸಿ ರೊಟ್ಟಿಯ ಮೇಲೆ ಬೆಣ್ಣೆ ಕೆಂಪಿಂಡಿ ತರಹೇವಾರಿ ಹಸಿ ಕಾಯಿಪಲ್ಯ, ಕಾಳಿನಪಲ್ಯ, ಗೋಧಿಯ ಸಜ್ಜಕ, ಹೀಗೆ ಅವ್ವ-ಅಪ್ಪನ ಪ್ರೀತಿಯನ್ನೇ ಉಂಡು ಬೆಳೆದ ಅದೃಷ್ಟವಂತ ನಾನು.
ಅವ್ವ ಇದ್ಯಾವುದನ್ನು ನಿಲ್ಲಿಸಲಿಲ್ಲ. ‘ಆಡಿ ಬಾ ನನ್ನ ಕಂದ ಅಂಗಾಲ ತೊಳದೇನ’ ಎನ್ನುವ ರೀತಿಯಲ್ಲಿ ನನ್ನನ್ನು ನನ್ನ ತಂಗಿಯನ್ನು ಜ್ವಾಪಾನ ಮಾಡಿದಾಕಿ. ಹೊಲಮನಿ, ದನಕರು ಎಂದು ಎಲ್ಲ ಕೆಲಸವನ್ನು ಕೋಳಿ ಕೂಗುವ ಮುನ್ನವೇ ಎದ್ದು ಸೂರ್ಯ ಕಂತುವವರೆಗೂ ದಣಿವರಿಯದೇ ಮಾಡುತ್ತಿದ್ದ ಅವಳ ಧೀ ಶಕ್ತಿ ಅದ್ಹೇಗೆ ಅವಳಲ್ಲಿ ಮನೆ ಮಾಡಿತ್ತೊ ನಾನರಿಯೆ.
ಬೇಕಾದಷ್ಟು ಕಷ್ಟ ಬರಲಿ ತನ್ನ ಮಗ ಕಲಿಯಬೇಕು ಎನ್ನುವುದು ಅವ್ವನ ಏಕೈಕ ಗುರಿಯಾಗಿತ್ತು. ಅದಕ್ಕವಳು ಕಂಕಣಬದ್ಧಳಾದವಳಂತೆ ದುಡಿಯುತ್ತಲೇ ಬಂದಳು. ನಾನು ಯಡಹಳ್ಳಿಯ ಶಾಲೆಯನ್ನು ಮುಗಿಸಿ ನಮ್ಮೂರಿನಿಂದ ಏಳು ಕೀಲೋಮೀಟರ್ ದೂರದಲ್ಲಿದ್ದ ಮುಧೋಳದ ಕಿಂಗ್ ಜಾರ್ಜ್ ಹೈಸ್ಕೂಲಿನಲ್ಲಿ ಓದುತ್ತಿದ್ದೆ, ನಾಲ್ಕಾರು ಗೆಳೆಯರು ಸೇರಿ ರೂಮ್ ಮಾಡಿಕೊಂಡು ಓದುತ್ತಿದ್ದೆವು. ನನ್ನ ತಂಗಿಯನ್ನು ನೋಡಿಕೊಳ್ಳುವುದರೊಂದಿಗೆ, ಹೊಲ, ಮನೆ ಕೆಲಸಗಳನ್ನು ನಿಭಾಯಿಸುತ್ತ ಅವ್ವ ನನಗಾಗಿ ಬುತ್ತಿ ಕಟ್ಟಿ ಕಳಿಸುತ್ತಿದ್ದಳು. ಏನೇ ಅನುವು ಆಪತ್ತುಗಳಿರಲಿ ಅವ್ವ ಒಂದಿಷ್ಟು ಅತ್ತಿತ್ತ ಮಾಡದೇ ತರಹೇವಾರಿ ಅಡುಗೆ ಸಿದ್ಧಪಡಿಸಿ, ಒಂದನ್ನೂ ಮರೆಯದೇ ಬುತ್ತಿ ಕಟ್ಟಿ ಕಳಿಸುತ್ತಿದ್ದಳು. ನನ್ನ ಬೇಕು ಬೇಡಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಳು. ನನ್ನ ಬಗೆಗಿದ್ದ ಅವ್ವನ ಅಂತಃಕರಣ, ಪ್ರೀತಿ, ಕಕ್ಕುಲಾತಿ ಪ್ರತಿಯೊಂದರಲ್ಲೂ ಎದ್ದು ಕಾಣತ್ತಿತ್ತು. ಅವಳು ಕಟ್ಟಿ ಕಳಿಸುತ್ತಿದ್ದ ಬುತ್ತಿಯಲ್ಲಿ ಅಮೃತ ಸಮಾನವಾದ ರುಚಿಯಿರುತ್ತಿತ್ತು.
ರಜೆಗೆಂದು ಮನೆಗೆ ಬಂದರೆ ನನ್ನ ಬಗೆಗಿನ ಅವ್ವನ ಕಾಳಜಿ ಇಮ್ಮಡಿಯಾಗುತ್ತಿತ್ತು. ಬಳ್ಳೊಳ್ಳಿ ಎಸಳು ಹಾಕಿದ ಎಣ್ಣಿಯನ್ನು ಒಂದು ಹದಕ್ಕೆ ಬಿಸಿ ಮಾಡಿ ಮೈಗೆಲ್ಲ ತಿಕ್ಕಿ ತೀಡಿ, ನೆತ್ತಿಗೆ ಹಾಕಿ ತಟ್ಟಿ, ಬಚ್ಚಲಲ್ಲಿ ಕೂಡಿಸಿ ಹಬೆಯಾಡುವ ಹಂಡೆ ನೀರನ್ನು ಹಾಕಿ ಎರೆದಾಗಲೇ ಅವಳಿಗೆ ಸಮಾಧಾನ. ಅದಿನ್ನೆಂತಹ ಪ್ರೀತಿ ಅವ್ವನದು ? ಎಷ್ಟು ಸೊರಗಿಯೋ ತಮ್ಮ ಎನ್ನುತ್ತ ನಾನಿರುವಷ್ಟು ದಿನವೂ ಹಾಲುಬಾನದ ಕೈತುತ್ತು ನೀಡುತ್ತಿದ್ದ ಅವ್ವನ ಪ್ರೀತಿಯ ಆಳ ಅಳೆಯಲು ಸಾಧ್ಯವೇ ?
ನಾನು ಹೆಚ್ಚೆಚ್ಚು ಓದಬೇಕು ಎನ್ನುವದು ಅವ್ವನ ಪ್ರಾಂಜಲ ವಿಚಾರವಾಗಿತ್ತು. ನನ್ನ ಓದಿನೆಡೆಗೆ ನನಗೂ ಶ್ರದ್ಧೆಯಿತ್ತು. ಶಾಲೆಯಲ್ಲಿ, ಹೈಸ್ಕೂಲಿನಲ್ಲಿ, ಕಾಲೇಜಿನಲ್ಲಿ ಗುರುಗಳ ಜೊತೆ ನನಗೆ ಆತ್ಮೀಯ ಸಂಬಂಧಗಳಿದ್ದವು. ಆಟೋಟಗಳ ಸ್ಪರ್ಧೆಗಳಲ್ಲಿ ನಾನಾಗಲೇ ನನ್ನ ಅಪ್ರತಿಮ ಪ್ರತಿಭೆಯನ್ನು ಮೆರೆದಿದ್ದೆ. ಎಲ್ಲ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ, ಬೆಳ್ಳಿಯ ಕಪ್ಪುಗಳು ನನ್ನ ಪಾಲಿಗಿರುತ್ತಿದ್ದವು. ಅಂತರ ಕಾಲೇಜು, ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ನಾನು ‘ಚಾಂಪಿಯನ್’ ಆಗಿ ಹೊರಹೊಮ್ಮಿದ್ದೆ. ನನ್ನ ಪ್ರತಿಭೆಯನ್ನು ಗುರುತಿಸಿ ಅವರೆಲ್ಲ ನನ್ನನ್ನು ಪ್ರೋತ್ಸಾಹಿಸಿದ್ದು, ನನ್ನ ಹೆಚ್ಚಿನ ಓದಿಗೆ ಪೂರಕವಾಗಿದ್ದವು. ನಾನೇನೋ ಅದ್ಭುತವಾದ ಮಹತ್ ಸಾಧನೆಯನ್ನೇ ಮಾಡುತ್ತಿರುವೆ ಎಂಬಂತೆ ಅವ್ವ ನಾನು ಸ್ನಾತಕ್ಕೋತ್ತರ ಪದವಿ ಪಡೆಯಲು ಬೆಂಗಳೂರಿಗೆ ಹೊರಟು ನಿಂತಾಗ ಮೈದಡವಿ, ನೆತ್ತಿ ಸವರಿ, ಬೆರಗುಗಣ್ಣಿಂದ ನೋಡಿದ್ದಳು.
ನಾನೇನೋ ಬೆಂಗಳೂರು ತಲುಪಿದೆ, ಹಾಸ್ಟೇಲಿನಲ್ಲಿ ಸುಖವಾಗಿಯೂ ಇದ್ದೆ. ಪ್ರತಿ ತಿಂಗಳೂ ತಪ್ಪದೇ ಅವ್ವ ಊರಿಂದ ಹಣ ಕಳಿಸುತ್ತಿದ್ದಳು. ಆದರೆ ನನಗೆ ಕಳಿಸುತ್ತಿದ್ದ ಹಣಕ್ಕಾಗಿ ಅವ್ವ ಪಡುತ್ತಿದ್ದ ಯಾತನೆಯನ್ನು ನೆನಸಿಕೊಂಡರೆ ಇವತ್ತಿಗೂ ಕಣ್ಣೀರಾಗುತ್ತೇನೆ. ಮಳೆ, ಛಳಿ, ಬಿಸಿಲು ಎನ್ನದೇ ಅವ್ವ ಹೊಲದಲ್ಲಿ ಮೈ ಮುರಿದು ದುಡಿಯುತ್ತಿದ್ದಳು. ಆಳೆತ್ತರಕ್ಕೆ ಬೆಳೆದ ಹತ್ತಿ ಕಟ್ಟಿಗೆಯನ್ನು ಕೀಳುವಾಗ ಕೈಯಲ್ಲಿ ಬೊಕ್ಕೆಗಳೆದ್ದು ಯಾತನೆ ಪಡುತ್ತಿದ್ದ ಅವ್ವನ ನೆನಪು ಈಗಲೂ ನನ್ನನ್ನು ಕಾಡುತ್ತದೆ. ತಾನಷ್ಟು ಕಷ್ಟ ಪಟ್ಟರೂ ಒಂದು ದಿನವೂ ಅದರ ಕುರಿತು ಹೇಳದೇ, ನಾನು ಕೇಳಿದರೂ ಅದನ್ನು ಮರೆಮಾಚುತ್ತಿದ್ದಳು. ತನ್ನ ದುಃಖವನ್ನು, ಕಷ್ಟವನ್ನು ಎಂದೂ ಅವಳು ಹೇಳಿಕೊಳ್ಳಲಿಲ್ಲ. ನಾನು ಏನು ಓದುತ್ತಿದ್ದೇನೆ ಅನ್ನುವದರ ಅರಿವೂ ಇಲ್ಲದ ಮುಗ್ಧೆ ಆಕೆ. ತನ್ನ ಮಗ ದೂರದ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಓದುತ್ತಿದ್ದಾನೆ ಅನ್ನುವುದೊಂದೇ ಅವಳಿಗೆ ಇನ್ನಿಲ್ಲದ ಅಭಿಮಾನವನ್ನುಂಟು ಮಾಡಿ ಆ ಸಂತಸದಲ್ಲಿಯೇ ತನ್ನೆಲ್ಲ ಕಷ್ಟಗಳನ್ನು ಮರೆತು ನನ್ನ ಒಳಿತಿಗಾಗಿ ತನ್ನನ್ನೇ ಸಿರಿಗಂಧದಂತೆ ತೇಯ್ದುಕೊಂಡಳು ನನ್ನವ್ವ.
ಕ್ರಮೇಣ ಕಾಲಚಕ್ರ ತಿರುಗಿತಲ್ಲ. ಗೆಳೆಯರಾದ ಕೆ.ವಿ.ರಾಯಚೂರ, ಜಿ.ಎಸ್.ಕಲ್ಲಯ್ಯನಮಠ, ವಿಲ್ಸನ್ ಗಡ್ಡಿ, ಆರ್.ಎ.ದೇಸಾಯಿ, ಎನ್.ಎಚ್.ಪುರಾಣಿಕ್, ಸಿ.ವಿ.ಹೂಗಾರ ಮುಂತಾದವರು ಸೇರಿ ಶಿಕ್ಷಕರಿಗಾಗುತ್ತಿದ್ದ ಅನ್ಯಾಯಗಳ ವಿರುದ್ಧ ಹೋರಾಡಲು ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘ ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದಲ್ಲದೇ ಸಂಘದ ಪರವಾಗಿ ಇವರೆಲ್ಲರ ಒತ್ತಾಸೆಗೆ ಕಟ್ಟುಬಿದ್ದು ಚುನಾವಣೆಗೆ ಸ್ಪರ್ಧಿಸಿದೆನು. ಅದೃಷ್ಟದೊಂದಿಗೆ ಅಧಿಕಾರ ಬಂತು. ಚುನಾವಣೆಯಲ್ಲಿ ಗೆದ್ದು ನಾನು ಶಾಸಕನಾದೆ, ಶಿಕ್ಷಕರು ಹಿಂಡು ಹಿಂಡಾಗಿ ನನ್ನ ಬಳಿ ಬರತೊಡಗಿದರು. ಹಗಲು ರಾತ್ರಿ ಎನ್ನದೇ ಅವರ ಕೆಲಸಗಳನ್ನು ಪೂರೈಸಿಕೊಡಲು ಉತ್ಸುಕನಾಗಿದ್ದೆ, ಕೆಲಸವಾದವರು ಬಂದು ಸಂತೋಷದೊಂದಿಗೆ ಹಾಡಿ ಹರಸುತ್ತಿದ್ದರು. ಇದೆಲ್ಲ ಅವ್ವನಲ್ಲಿ ಬೆರಗನ್ನು ಉಂಟು ಮಾಡುತ್ತಿತ್ತು.
ಬಸಣ್ಣ, ನೀ ಎಂಥಾ ಸಾಹೇಬ ಆಗಿಯೋ? ಅವರದೇನು ಕೆಲಸ ಮಾಡಿ ಕೊಡಾಕತ್ತೀ, ಅವರು ಎಷ್ಟು ಖುಷಿ ಆಗ್ಯಾರಲ್ಲಾ, ಅಂಥಾದ್ದೇನು ಮಾಡೀ ? ಅಂತ ಅವ್ವ ನನ್ನನ್ನು ಕೂಡ್ರಿಸಿಕೊಂಡು ಕೇಳುತ್ತಿದ್ದರೆ, ಏನು ಹೇಳಲಿ ಅವ್ವನಿಗೆ ? ನಾನು ಏನೇ ಹೇಳಿದರೂ ಅರಿಯದಷ್ಟು ಮುಗ್ಧೆಯಾಗಿದ್ದಳು ನನ್ನವ್ವ. ‘ಅವರೆಲ್ಲ ಮಾಸ್ತರ ಜನ, ಕಷ್ಟದಾಗ ಅದಾರ, ಕೆಲಸ ಮಾಡಿಕೊಡು ಅಂತಾ ಅಧಿಕಾರ ಕೊಟ್ಟಾರ, ಅವರು ಪ್ರೀತಿಯಿಂದ ಓಟು ಕೊಟ್ಟು ಆರಿಸಿ ತಂದಾರ. ನಾನು ಶಾಸಕ ಆಗೇನಿ’ ಅಂತೆಲ್ಲ ಹೇಳಿದರ, ಬಸಪ್ಪ ಅದೆಲ್ಲಾ ನಂಗ ತಿಳಿಯೋದಿಲ್ಲ ತಗೀ, ಆದರ ನಿನ್ನತ್ರ ಹಸದ ಬಂದವ್ರಿಗೆ ಊಟ ಹಾಕು, ಸೋತು ಬಂದವರಿಗೆ ಆಸರೆ ಆಗು, ನಿಮ್ಮಪ್ಪ ಹಂಗ ಇದ್ರು, ನೀನೂ ಹಂಗ ನಾಲ್ಕು ಮಂದಿಗೆ ಒಳ್ಳೇದು ಮಾಡು, ದೇವರು ನಿನ್ನ ಕೈ ಬಿಡಂಗಿಲ್ಲ ಅಂತಿದ್ಲು.
‘ಅವ್ವ ಸಾಕಿನ್ನು, ನೀನು ಹೊಲಾ ಮನಿ ಅಂತಾ ಕಷ್ಟ ಪಟ್ಟಿದ್ದು. ನನ್ನ ಜೊತೆಗೆ ಆರಾಮಾಗಿರು’ ಅಂತಾ 1980 ರಲ್ಲಿ ನನ್ನ ಬಳಿ ಅವ್ವನನ್ನು ಹುಬ್ಬಳ್ಳಿಗೆ ಕರೆತಂದೆ. ಆದರೆ ಅವ್ವನದು ಸುಮ್ನೆ ಕುಂತ ಜೀವ ಅಲ್ಲ; ‘ಬ್ಯಾಸರಕ್ಕೇತೋ ಬಸಪ್ಪ;’ ಅಂತಾ ಒಂದಿಲ್ಲೊಂದು ಕೆಲಸ ಹಚಗೋತಿದ್ಲು. ಅಡಗಿ ಮಾಡಾಕ, ರೊಟ್ಟಿ ಬಡಿಯಾಕ ಮುಂದಾಗತಿದ್ಲು. ಎಡೆಬಿಡದ ಸುತ್ತಾಟ, ಶಿಕ್ಷಕರ ಜೊತೆ ಓಡಾಟ, ಪ್ರತಿಭಟನೆ, ಸಭೆ, ಸಮಾರಂಭ ಅಂತಾ ಸುತ್ತಾಡಿ ನಾನು ಹೊತ್ತಲ್ಲದ ಹೊತ್ತಿಗೆ ಮನೆಗೆ ಬಂದರೆ, ಅವ್ವ ನನಗಾಗಿ ಕಾಯುತ್ತಿದ್ದಳು, ನೀನು ಉಂಡು ಮಲಗಬಾರದಾಗಿತ್ತಾ ಅಂತ ಪ್ರೀತಿಯಿಂದ ಜಬರಿಸಿದರೆ, ‘ನಿನಗ ಕಾಯದ ನಾನು ಯಾರಿಗೆ ಕಾಯ್ಲಿ, ನೀನು ಹಸಗೊಂಡು ಹೊರಗಿದ್ದರೆ ನಾ ಹೆಂಗ ಉಣ್ಣಲಿ ಬಾ ಊಟ ಮಾಡೋಣ’ ಅಂತಿದ್ಲು ಅವ್ವ, ನನ್ನ ಕರುಳು ಚುರುಗುಟ್ಟುವ ಹಾಗೆ.
ದೂರದ ಊರುಗಳಿಗೆ ಪ್ರವಾಸ ಹೊರಟಾಗಲೆಲ್ಲ ಅವ್ವನನ್ನು ಕರೆದುಕೊಂಡು ಹೋಗುತ್ತಿದ್ದೆ. ನೋಡುವ ತಿಳಿದುಕೊಳ್ಳುವ ಕುತೂಹಲ ಅವ್ವನಿಗೆ ಇರುತ್ತಿದ್ದರೂ ತನಗೆ ಏನಾದರೂ ಬೇಕೆಂದು, ಕೊಡಿಸೆಂದು ಅವ್ವ ಕೊನೆಯವರೆಗೂ ಕೇಳಲಿಲ್ಲ. ಆಸೆ ಪಡಲಿಲ್ಲ. ಅಪ್ಪನನ್ನು ಕಳೆದುಕೊಂಡ ಮೇಲೆ ಸರಳ ಜೀವನಕ್ಕೆ ಒಗ್ಗಿಕೊಂಡ ಅವ್ವ ತನಗಾಗಿ ಎಂದೂ ಏನನ್ನೂ ಅಪೇಕ್ಷೆ ಪಡಲಿಲ್ಲ. ತನ್ನ ಬಳಿ ಸಹಾಯ ಕೇಳಲು ಬರುತ್ತಿದ್ದವರ ದುಃಖ ದುಮ್ಮಾನಗಳಿಗೆ ಕಣ್ಣೀರಾಗುತ್ತಿದ್ದ ಅವ್ವ, ಅವರ ಕಷ್ಟಗಳನ್ನು ಪರಿಹರಿಸಲು ನನ್ನ ಸಹಾಯಕ್ಕೆ ಕೈ ಚಾಚುತ್ತಿದ್ದಳೇ ವಿನಾ ತನ್ನ ಸ್ವಂತಕ್ಕೆಂದೂ ಅಪೇಕ್ಷೆ ಪಡಲಿಲ್ಲ.
ನಾನು ನಾಲ್ಕು ಜನರಿಗೆ ಒಳ್ಳೆಯದನ್ನೇ ಮಾಡಲಿ ಎಂದು ಸದಾ ಹಂಬಲಿಸುತ್ತಿದ್ದ ಅವ್ವನ ಆಶೀರ್ವಾದದ ಬಲ, ಶಿಕ್ಷಕರ ನನ್ನೆಡೆಗಿನ ಪ್ರೀತಿ ವಿಶ್ವಾಸ, ಸದಾ ಅವರ ಒಳಿತಿಗಾಗಿ ಬಡಿದಾಡುತ್ತಿದ್ದ ನನ್ನ ತುಡಿತ ಎಲ್ಲ ಸೇರಿ ಪ್ರತಿ ಬಾರಿಯೂ ನಾನು ಚುನಾವಣೆಯಲ್ಲಿ ಗೆಲ್ಲುತ್ತಾ ಬಂದೆ. ಗೆದ್ದಾಗಲೆಲ್ಲ ಅವ್ವನ ಆಶೀರ್ವಾದ ಪಡೆಯಲು ಕಾಲಿಗೆರಗಿದಾಗ ಅವ್ವ ಒಂದೇ ಮಾತು ಹೇಳುತ್ತಿದ್ದಳು: ‘ನಿನ್ನ ಮ್ಯಾಲ ಪ್ರೀತಿ, ವಿಶ್ವಾಸ ಇಟ್ಟವರಿಗೆ ಯಾವಾಗಲೂ ಒಳ್ಳೆಯದನ್ನೇ ಮಾಡು, ಬಡವರಿಗೆ ನಿರ್ಗತಿಕರಿಗೆ ಸಹಾಯ ಮಾಡು, ನಿನ್ನ ಕೈಲಾದ ಸಹಾಯಾನ ಯಾವಾಗ್ಲೂ ಮಾಡ್ಕೊಂತಿರು’. ಅವ್ವನ ಈ ಆಶಯವೇ ನನ್ನ ಜೀವನದ ಧ್ಯೇಯವೆಂದು ನಾನು ಮನಗಂಡಿದ್ದೇನೆ ಹಾಗೂ ಈ ಕ್ಷಣದವರೆಗೂ ಅದನ್ನು ಪಾಲಿಸುತ್ತಾ ಬಂದಿದ್ದೇನೆ.
ಸತತ ನಾಲ್ಕು ಬಾರಿ ಶಿಕ್ಷಕರು ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದಾಗ, ಮತದಾರ ಶಿಕ್ಷಕರಿಗೆ ಅಭಿನಂದನಾ ಸಮಾರಂಭವನ್ನು ಗೆಳೆಯರು ಹಿತೈಷಿಗಳು ಹಮ್ಮಿಕೊಂಡರು. ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು, ತೋಂಟದ ಜಗದ್ಗುರು ಸಿದ್ಧಲಿಂಗಸ್ವಾಮಿಯವರು ಬಂದಿದ್ದರು. ಎಂಟ್ಹತ್ತು ಸಾವಿರ ಶಿಕ್ಷಕರು ಸೇರಿದ್ದರು. ಅದೊಂದು ಅಭೂತಪೂರ್ವ ಸಮಾರಂಭವಾಗಿತ್ತು. ಇಂತಹ ಸಂದರ್ಭದಲ್ಲಿ ನನ್ನ ಅವ್ವನನ್ನು ಸತ್ಕರಿಸಬೇಕೆಂಬ ಮಹಾದಾಸೆ ನನ್ನಲ್ಲಿ ಮೊಳೆತು, ಗೆಳೆಯರಿಗೆ ಹೇಳಿದೆ. ‘ನನಗ್ಯಾಕೋ ತಮ್ಮ ಇದೆಲ್ಲ’ ಅಂತಾ ಅವ್ವ ನಯವಾಗಿ ತಿರಸ್ಕರಿಸಿದಳು. ಆದರೆ ಸ್ವಾಮಿಜೀಯವರು, ‘ಲೋಕ ಕಲ್ಯಾಣಕ್ಕೆ ಇಂಥಾ ಮಗನ್ನ ಹಡದ ಕೊಟ್ಟೀರಿ, ಸಾವಿರಾರು ಶಿಕ್ಷಕರ ಕಣ್ಣೀರು ಒರಿಸ್ಯಾನ ನಿನ್ಮಗ, ನಿನಗ ಸತ್ಕರಿಸೂದು ಅಂದ್ರ ಸಾವಿರಾರು ತಾಯಂದಿರನ್ನ ಸತ್ಕರಿಸಿದಂಗ…. ಬ್ಯಾಡಾ ಅನ್ನಬೇಡ್ರಿ’ ಅಂದಾಗಲೇ ಅವ್ವ ಒಪ್ಪಿಕೊಂಡದ್ದು. ಈ ಘಟನೆ ನನ್ನ ಜೀವನದಾಗ ಮರಿಯಲಾರದ ಸಂಗತಿಯಾಗಿ ಉಳಿದಿದೆ.
ನನ್ನ ಮದುವಿ ಆಗಿ ಮನೆ ತುಂಬಾ ಮಕ್ಕಳಾಗಿ ಮೊಮ್ಮಕ್ಕಳನ್ನು ಕಂಡ ಅವ್ವನ ಸಂತೋಷಕ್ಕೆ ಇತಿ ಮಿತಿ ಇರಲಿಲ್ಲ. ಸೊಸೆ-ಮೊಮ್ಮಕ್ಕಳ ನಗುವಿನಲ್ಲಿ ತನ್ನ ಸಂತಸದ ಜೊತೆಗೆ ತನ್ನಲ್ಲಿದ್ದ ಒಡವಿ, ವಸ್ತ್ರ ಎಲ್ಲಾನೂ ಹಂಚಿಕೊಂಡಳು ಅವ್ವ. ತನ್ನ ಹೆಸರಿನಲ್ಲಿದ್ದ ಮನೆಯನ್ನು ಅದೊಂದು ದಿವಸ ಹೇಮಾಳನ್ನು ಕರೆದು, ‘ನನಗ್ಯಾಕ ಈ ಜವಾಬ್ದಾರಿ? ಇನ್ ಮ್ಯಾಲ ಇದು ನಿನಗಿರ್ಲಿ’ ಎಂದು, ‘ಬಸಣ್ಣ ನಡಿ ಅಕೀ ಹೆಸರ್ಲೇ ಮಾಡು’ ಎಂದು ಹಠ ಹಿಡಿದು ಮಾಡಿಸಿಯೇ ಬಿಟ್ಟಳು. ಅವ್ವ ಅಂದ್ರ ಹಿಂಗ. ಕರುಣೆ, ಕಕ್ಕುಲಾತಿ, ಅಂತಃಕರಣ, ತ್ಯಾಗ, ಪ್ರೀತಿಗಳ ಮಹಾಪೂರವೇ !
ಸುದೈವ, ಅದೃಷ್ಟ, ಅವ್ವನ ಆಶೀರ್ವಾದ ನನ್ನ ಮೇಲಿತ್ತು. ಮಂತ್ರಿಯಾದೆ, ಜವಾಬ್ದಾರಿ ಹೆಚ್ಚಿತು, ಕೆಲಸಗಳು ಹೆಚ್ಚಾದವು, ತಿರುಗಾಟ ಹೆಚ್ಚಾಯಿತು. ಎಂಟೆಂಟು ದಿನಗಳಾದರೂ ಅವ್ವನನ್ನು ಕಾಣಲು ಪುರುಸೊತ್ತಾಗುತ್ತಿರಲಿಲ್ಲ. ಕಾಣಬೇಕೆಂಬ ತುಡಿತವಿದ್ದರೂ, ಎಡೆ ಬಿಡದ ಕೆಲಸಗಳ ನಡುವೆ ಸಾಧ್ಯವಾಗುತ್ತಿರಲಿಲ್ಲ. ಇಂತಹ ಪ್ರಸಂಗಗಳಲ್ಲಿ ನಾನು ಮನೆಗೆ ಬರುತ್ತಿದ್ದೇನೆ, ಉಳಿಯಲಿದ್ದೇನೆ ಎನ್ನುವ ಸುದ್ದಿ ಮೊಮ್ಮಕ್ಕಳ ಮುಖಾಂತರ ಅವ್ವನ ಕಿವಿ ತಲುಪುತ್ತಿತ್ತು. ಎಲ್ಲ ಕೆಲಸ ಮುಗಿಸಿ ಕಾಣಲು ಬಂದ ಎಲ್ಲರನ್ನು ಸಮಾಧಾನ ಪಡಿಸಿ ಅವ್ವನನ್ನು ಕಾಣಲು ಹೋದರೆ, ಅವ್ವ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡವಳ ಹಾಗೆ ನನಗಾಗಿ ಕಾಯುತ್ತಿದ್ದಳು. ‘ಇಲ್ಲಿ ಕುಳಿತುಕೋ ಬಾ ಬಸಪ್ಪ’ ಎಂದು ತನ್ನ ಪಕ್ಕದಲ್ಲಿ ಕೂಡ್ರಿಸಿಕೊಂಡು ನನ್ನ ತಲೆ ನೇವರಿಸುತ್ತಾ, ‘ಹೆಂಗದೀ ಮಗನ, ಕೆಲಸ ಭಾಳ ಆಕ್ಕೇತೇನೋ ಊಟ ಗೀಟ ಮಾಡ್ತೀಯೋ ಇಲ್ಲೊ?’ ಎಂದು ಅತ್ತಗರೆಯುತ್ತ ತದೇಕಚಿತ್ತಳಾಗಿ ಪ್ರೀತಿ ತುಂಬಿದ ಕಣ್ಣುಗಳಲ್ಲಿ ನೋಡುತ್ತಿದ್ದ ಅವ್ವನ ಮುಖ ಇವತ್ತಿಗೂ ನನ್ನ ಕಣ್ಣು ಗೊಂಬೆಯಾಗಿ ಕಾಡುತ್ತಿದೆ.
ನಾನು ಮಂತ್ರಿಯಾದೆನೆಂದು ಅವ್ವ ಸಂತಸಪಟ್ಟ ರೀತಿಯೇ ಅವಳ ಮುಗ್ಧತೆಗೆ, ಸರಳತೆಗೆ ಹಿಡಿದ ಕನ್ನಡಿಯಂತಿತ್ತು. ಬಂಧು ಬಳಗದ ಜನರೆಲ್ಲ ಸೇರಿ, ‘ಏನಬೇ ಯವ್ವ ನಿನ್ನ ಮಗ ಮಂತ್ರಿಯಾಗ್ಯಾನ, ನೀನಿಗ ನಮ್ಮ ರಾಜ್ಯದ ಮಂತ್ರಿಗಳ ಅವ್ವ, ನಿನಗ ಹೆಂಗ್ ಅನಸ್ತೇತಿ’ ಅಂತಾ ಕೇಳಿದರ, ‘ಅದೆಲ್ಲ ನನಗ ತಿಳಿಯಂಗಿಲ್ಲ ಬಿಡು, ನಮ್ಮ ಬಸಪ್ಪ ದೊಡ್ಡ ಮನುಸ್ಯ ಆಗಿದ್ರಾ ಇನ್ನಷ್ಟು ಮಂದಿಗೆ ಉಪಕಾರ ಮಾಡುವಾಂಗ ಆಗ್ಲಿ. ಅದಕ್ಕಿಂತ ಹೆಚ್ಚಿನದು ನನಗೇನು ಬೇಕು ?’ ಎಂದಿದ್ದ ಅವ್ವನ ಜನಪರ ಕಾಳಜಿ ಇವತ್ತಿಗೂ ನನ್ನಲ್ಲಿ ಅವ್ವನ ಕೊಡುಗೆಯಾಗಿ ಹರಿಯುತ್ತಿದೆ.
ಒಬ್ಬ ಮಂತ್ರಿಯಾಗಿ ಸಭೆ, ಸಮಾರಂಭ, ಜನರ ಕಷ್ಟ, ದುಃಖ ದುಮ್ಮಾನಗಳನ್ನು ಆಲಿಸುವ ಪರಿಹರಿಸುವ, ಅದಕ್ಕಾಗಿ ಸುತ್ತಾಡುವ ಕೆಲಸಗಳ ನಡುವೆ ಕಳೆದುಹೋದ ನನಗೆ ಅವ್ವನ ಭೇಟಿ ಅವ್ವನ ಪ್ರೀತಿಯ ಕೈತುತ್ತು ಅಪರೂಪವಾದವು. ಅವ್ವನಿಗೆ ವಯೋಸಹಜವಾದ ಅನಾರೋಗ್ಯ ಕಾಡತೊಡಗಿತು. ಎದುರಿಗಿದ್ದು ಉಪಚರಿಸಲು, ಆರೈಕೆ ಮಾಡಲು ಸಮಯವಿರಲಿಲ್ಲ. ಎಲ್ಲ ಏರ್ಪಾಡುಗಳನ್ನು ವ್ಯವಸ್ಥೆಯನ್ನು ಮಾಡಿದ್ದೆನಾದರೂ ಅದು ಅವ್ವನ ಜೊತೆ ಇದ್ದಂತಾಗುವುದೇ ? ಸಿಕ್ಕ ಅಲ್ಪ ಸಮಯದಲ್ಲಿ ಅವ್ವನ ಬಳಿ ಸಾರಿ ಕುಳಿತುಕೊಳ್ಳುತ್ತಿದ್ದೆ. ಅವ್ವನ ಜೊತೆ ಸಮಯ ಕಳೆಯುತ್ತಿದ್ದೆ, ನಾನು ಅವಳ ಬಳಿ ಹೋಗುತ್ತಿದ್ದುದೇ ಜನರೆಲ್ಲ ನನ್ನಿಂದ ದೂರ ಸರಿದು, ಸರಿ ರಾತ್ರಿಯಾದಾಗ. ನನ್ನನ್ನು ಕಂಡ ಅವ್ವ ಚೈತನ್ಯದಿಂದ ಎದ್ದು ಕೂಡುತ್ತಿದ್ದಳು. ತನಗೇನೂ ಆಗಿಲ್ಲವೆಂಬಂತೆ ಮನದಣಿಯೇ ಮಾತನಾಡುತ್ತಿದ್ದಳು. ನನ್ನ ಕರ್ತವ್ಯದ ಕುರಿತು ನಾನು ಮಾಡಬೇಕಾದ ಕೆಲಸಗಳ ಕುರಿತು ಹೇಳುತ್ತಿದ್ದಳು. ಇಂತಹುದೇ ಒಂದು ಸಂದರ್ಭದಲ್ಲಿ ನಮ್ಮ ಊರಿನಲ್ಲಿ ಶಾಲೆಯನ್ನು ಕಟ್ಟುವ, ಅದಕ್ಕೆ ನಮ್ಮ ಊರ ಮುಂದಿನ ಬೆಲೆಬಾಳುವ ಹೊಲವನ್ನು ನೀಡುವ ಕುರಿತು ಮಾತನಾಡಿದಾಗ ಅವ್ವ ಎದ್ದು ಕುಳಿತು, ಎಂದಿನಂತೆ ನನ್ನ ತಲೆ ನೇವರಿಸಿ, ‘ನಮ್ಮೂರಿನ ಜನರಿಗೆ ಮುಂದಿನ ಜನಾಂಗಕ್ಕೆ ನೀನು ಮಾಡುವ ಬಹುದೊಡ್ಡ ಕೆಲಸವಿದು, ನಾವೆಲ್ಲ ಕೂಡಿ ಊರಿನ ಋಣ ತೀರಿಸಿದಾಂಗ, ಮೊದ್ಲು ಆ ಕೆಲಸ ಮಾಡು’ ಅಂದಿದ್ದಳು.
ಹಿಂಗಿದ್ದ ನನ್ನ ಅವ್ವ, ಅನಂತ ಚೇತನಾಮಯಿಯಾಗಿದ್ದ ನನ್ನವ್ವ, ಕರುಣಾಮಯಿಯಾಗಿದ್ದ ನನ್ನ ಅವ್ವ, 2008ರ ಡಿಸೆಂಬರ ಐದರಂದು ಇಹಲೋಕ ತ್ಯಜಿಸಿದಳು. ಮಂತ್ರಿಯಾಗಿದ್ದರೇನು? ಅವ್ವನನ್ನು ಕಳೆದುಕೊಂಡ ನಾನು ತಬ್ಬಲಿಯಾದೆ, ಏಕಾಂಗಿಯಾದೆ, ನನ್ನ ಸರ್ವಸ್ವವೂ ಜೀವಾಳವೂ ಆಗಿದ್ದ ಅವ್ವ ಭೌತಿಕವಾಗಿ ದೂರವಾದಳು. ಆದರೇನು ಅವ್ವ, ಅವ್ವನೇ ಅಲ್ಲವೇ ? ಅವ್ವನ ನೆನಪು ಹಸಿರಾಗಿ ಕಂಗೊಳಿಸುತ್ತಿದೆ, ನನ್ನ ಮನದಂಗಳದಲ್ಲಿ.
ಅವ್ವನ ಹೆಸರನ್ನು, ಅವ್ವನ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಆಕೆಯ ಬಯಕೆಯಂತೆ ಋಣ ತೀರಿಸುವ ನೆಪದಲ್ಲಿ ಅಪ್ಪನ ಹೆಸರಿನಲ್ಲಿ ಯಡಳ್ಳಿಯಲ್ಲಿ ಸುಸಜ್ಜಿತ ಅತ್ಯಾಧುನಿಕ ರೀತಿಯ ಶಾಲೆಯೊಂದನ್ನು ಆರಂಭಿಸಿ ಲೋಕಾರ್ಪಣೆ ಮಾಡಿದ್ದೇನೆ. ಸುತ್ತಲಿನ ಹಳ್ಳಿಗಳ ಸಾವಿರ ಮಕ್ಕಳು ಶಾಲೆಯಲ್ಲಿ ಕಲಿಯಲು ಬರುತ್ತಿದ್ದಾರೆ. ಅವರ ಮುಖದಲ್ಲಿನ ಭರವಸೆಯ ಮಂದಹಾಸದಲ್ಲಿ ಅವ್ವನನ್ನು ಕಾಣುತ್ತಿದ್ದೇನೆ.
ಭೌತಿಕವಾಗಿ ಅವ್ವ ನನ್ನನ್ನು ಅಗಲಿದರೂ, ಬೌದ್ಧಿಕವಾಗಿ ನನ್ನ ಜೊತೆಗಿದ್ದಾಳೆ. ಅವ್ವ ಅನನ್ಯ ಕರುಣಾಮಯಿ, ಅನಂತ ಚೈತನ್ಯಮಯಿಯಾಗಿದ್ದಳು. ಬಡವರ, ನೊಂದವರ, ಬೆಂದವರ ಕಷ್ಟಗಳನ್ನು ಕಂಡು ಮಮ್ಮಲ ಮರಗುತ್ತಿದ್ದಳು. ಅವರ ಕಣ್ಣೀರು ಕಂಡರೆ ತಾನೂ ಕಣ್ಣೀರಾಗುತ್ತಿದ್ದಳು, ಅವರಿಗೆ ಆಸರೆಯಾಗುತ್ತಿದ್ದಳು. ಅವ್ವನ ಕಕ್ಕುಲಾತಿ, ಪ್ರೀತಿ, ಕರುಣೆಗಳ ಅಮೃತವನ್ನುಂಡು ಬೆಳೆದವನು ನಾನು. ಇಂಥ ಅವ್ವನ ಋಣ ಸಂದಾಯ ಮಾಡಲು ಸಾಧ್ಯವೇ? ಆದರೆ ಅವ್ವನ ಆದರ್ಶಗಳನ್ನು ಅಲ್ಪ ಮಟ್ಟಿಗಾದರೂ ಮೈಗೂಡಿಸಿಕೊಂಡು ಅವಳ ಕನಸುಗಳನ್ನು, ಕಾಯಕಗಳನ್ನು ನೆರವೇರಿಸುವ ನಿಟ್ಟಿನಲ್ಲಿ, ಸಮಾನಮನಸ್ಕ ಗೆಳೆಯರೊಡಗೂಡಿ ಅವ್ವ ಸೇವಾ ಸಂಸ್ಥೆಯನ್ನು ‘ಅವ್ವ’ನ ಹೆಸರಿನಲ್ಲಿ ಆರಂಭಿಸಿದ್ದೇನೆ. ಅವ್ವನ ನೆನಪು ನಿರಂತರ, ನಿತ್ಯನೂತನವಾಗಿ ನನ್ನ ಹೃದಯ ಬೆಳಗುತ್ತಲಿದೆ. ‘ಅವ್ವ’ ಅಂದರೆ ಹೀಗೇ ಅಲ್ಲವೆ?


0 Comments