ಸದಾಶಿವ ಸೊರಟೂರು
—-
ನೀನು ಕೇಳಿದೆ ‘ಏಕೆ ಬಂದಿರಿ ಒಂದು ಗಂಟೆ
ಮೊದಲೇ ಕೆಲಸದಿಂದ..?’
ಅರೆ, ಹೌದಲ್ಲ
ನಿತ್ಯ ಅರ್ಧ ಗಂಟೆ ತಡವಾಗಿ
ಬಾಗಿಲು ತಟ್ಟುವವನು
ಇಂದೇಕೆ ಬೇಗ ಬಂದೆ ನಾನು?
ಒಂದು ಮೊಳ ಹೂವನ್ನು ವಾರವಾದರೂ
ಮರೆತವನು
ಇಂದೇಕೆ ತಂದೆ ನಾನು
ಮೂರಾಲ್ಕು ಮೊಳಗಳಷ್ಟನ್ನು?
ಸಿಂಕಿನಲ್ಲಿ ಅದೆಷ್ಟು ಪಾತ್ರಗಳಿದ್ದವು
ನಾನೇಕೆ
ನಿನ್ನ ಕೈಗೊಂದು ಕವಿತೆಯ ಪುಸ್ತಕ ಕೊಟ್ಟು
ಅಲ್ಲೇ ಕೂರಿಸಿಕೊಂಡು
ಪಾತ್ರೆ ಉಜ್ಜಿದೆ..?

ಉರಿವ ಒಲೆಯ ಮೇಲೇಕೆ ಇಂದು
ನಾನೇ
ಪಾತ್ರೆ ಇಟ್ಟೆ..
ಉಪ್ಪು ಹುಳಿ ಕಾರಗಳನ್ನೇಕೆ
ತುಸುವೇ ಹಾಕಿದೆ
ಮತ್ತೇಕೆ ಹಾಡಿದೆ ‘ಹಾಯಾಗಿ ಕುಳಿತಿರು
ನೀನು ರಾಣಿಯ ಹಾಗೆ’ ಎಂದು?
ತಿನ್ನುವ ಹತ್ತು ತುತ್ತುಗಳಲ್ಲಿ
ಐದನ್ನು ನಿನ್ನ ಪುಟ್ಟ
ಬಾಯಿಗೊಳಗಿಟ್ಟು
ಉಳಿದ ಐದನ್ನು ಐವತ್ತು ತುತ್ತುಗಳಂತೆ
ತಿಂದೆ..?
ನಾಳೆ ನನಗೇನು ಕೆಲಸವಿದೆ?
ಏನೂ ಇಲ್ಲದೆ
ನಾನೇಕೆ ಮರುದಿನಕ್ಕೆ ಒಂದು ರಜೆ
ಬರೆದಿಟ್ಟು ಬಾಸ್ ಗೆ
ಹೇಳದೆಯೂ ಬಂದೆ?
ಓದು ಬರಹ ಅಂತ ನಿತ್ಯ ಮಧ್ಯೆರಾತ್ರಿ
ಕಾಣುತ್ತಿದ್ದ ನಾನು
ಇಂದೇಕೆ
ನನ್ನ ತೋಳುಗಳ ಮೇಲೆ ನಿನ್ನ ಹಾಗೆ
ಮಲಗಿಸಿಕೊಂಡೆ
ನನ್ನ ಅಮ್ಮ ನನಗೆ ಹೇಳಿದ ಕಥೆಯೊಂದನ್ನು
ನಿನಗೇಕೆ ಹೇಳುತ್ತಾ
ಮಲಗಿಸಿದೆ?
ನೀ ರಾತ್ರಿ ಮಧ್ಯೆ ಮಧ್ಯೆ ಎಚ್ಚರಾದಗಲೆಲ್ಲಾ
ನಾನು ಸುಮ್ಮನೆ
ಮಲಗುತ್ತಿದ್ದವನು
ಇಂದೇಕೆ ಪ್ರತಿ ಎಚ್ಚರಕ್ಕೂ
ನಿನ್ನ ತಬ್ಬಿ ತಬ್ಬಿ ತಲೆ ಸವರಿ
ಮುತ್ತಿಡುತ್ತಿದ್ದೆ..
ನಿತ್ಯ ನನಗೆ ಕಾಫಿ ತಂದುಕೊಡುತ್ತಿದ್ದ
ನೀನು
ಇನ್ನೂ ಮಲಗಿರುವಾಗಲೇ
ನಾನೇಕೆ ಇಂದು ಕಾಫಿ ಮಾಡಿಕೊಂಡು
ನಿನಗೆ ತಂದುಕೊಟ್ಟೆ..
ಉತ್ತರ ಗೊತ್ತಿರಲಿಲ್ಲ..
ಗೊತ್ತಾಗುವುದೂ ಬೇಡ ಹುಡುಗಿ..
ಕಾಫಿ ಕುಡಿಯುತ್ತಾ ನೀ ಹೇಳಿದ ಮಾತು
‘ಹೇ ಪೀರಿಯಡ್ ಆಯ್ತು ಕಣೋ ಈಗಷ್ಟೇ..’
ಅಂದಾಗ
ನಾನೇಕೆ ನನಗೂ ಪೀರಿಯಡ್ ಆದಷ್ಟು
ಸಂಭ್ರಮಿಸಿದೆ..
ಉತ್ತರ ಗೊತ್ತಾಗುತ್ತಿಲ್ಲ;
ಮತ್ತು
ಗೊತ್ತಾಗುವುದೂ ಬೇಡ..
ನಡೆ ಸ್ನಾನ ಮಾಡಿಸುವೆ ಎಂದಾಗ
ನೀನೇಕೆ ತಬ್ಬಿಕೊಂಡೆ?
ಉತ್ತರ ಗೊತ್ತಾಗುತ್ತಿಲ್ಲ
ಗೊತ್ತಾಗುವುದೂ ಬೇಡ..






0 Comments