ಸದಾಶಿವ್ ಸೊರಟೂರು
ಬೈತಲೆ
ಅಮ್ಮ ಹಾಕಿದ ಹೈವೆ
ಅಂಕು ಡೊಂಕು ಇಲ್ಲದ
ಹಂಪು ಗಿಂಪು ಇಲ್ಲದ
ಸಪೂರ ನೇರ ನೇರ..
ಹಣೆಯಿಂದ ಹೊರಟು
ಯಾವುದೊ ಹೊಸ
ಜಗತ್ತಿಗೆ ಕೊಂಡೊಯ್ಯುವ
ಶಿಸ್ತಿನ ಹಾದಿ!;
ಅಮ್ಮ ಕರುಣಿಸಿದ ಆ ನಿಗೂಢ
ರೇಖೆಗೆ ಅಲ್ಲೆ ಬಿದ್ದರುವ
ಹಣೆಬರಹವೂ ಮೂಗಿನ ಮೇಲೆ
ಬೆರಳಿಟ್ಟುಕೊಳ್ಳುತ್ತದೆ..

ಒಂದು ಧ್ಯಾನದಂತೆ ಕೂತು
ಉದ್ದುದ್ದ ಕೂದಲುಗಳನು
ಹಾಗೆ ಹೀಗೆ ಸಮಾಧಾನಿಸಿ
ಗದರಿಸಿ ಪ್ರೀತಿಯಿಂದ ನೇವರಿಸಿ
ದಯಪಾಲಿಸುವ ಬೈತಲೆ
ತಲೆಯಿಂದ ತಲೆಗೆ
ತಲಾಂತರದಿಂದ ಸಾಗಿದೆ
ಎಲ್ಲಾ ಅಮ್ಮಂದಿರು ಕಲಿತ
ಒಂದು ನಿಗೂಢ ವಿದ್ಯೆ ಬೈತಲೆ
ಅಮ್ಮ ಕಾಳಜಿಯಿಂದ
ಬರೆವ ಹೊಸ ಹಣೆಬರಹವೇ
ಇರಬಹುದೇನೊ ಅದು!?
ಬೈತಲೆ ತೊಟ್ಟ ಹುಡುಗಿಯರು
ಅದೆಷ್ಟು ಚೆಂದ
ಒಂದು ಸಣ್ಣ ಮೂಗುತಿ
ಜೊತೆಯಿದ್ದರಂತೂ ಅಹಾ!
ಬೈತಲೆ ಎದೆಯೊಳಗೆ ನುಗ್ಗಲಿ ದೇವರೆ
ಎಂದು ಕಾದಿರುವ
ಹುಡುಗರ ಅಹವಾಲನು
ಹುಡುಗಿಯರೇ
ಒಮ್ಮೆಯಾದರೂ ನಿಮ್ಮ
ಬಳಕುವ ಲೋಲಾಕು
ಕಿವಿಗಳಿಂದ ಕೇಳಿಸಿಕೊಳ್ಳಿ..
ಹುಡುಗರ ಅಸಹಾಯಕತೆ
ನೋಡಿ, ಕ್ರಾಫ್ ಲೆಕ್ಕದಲ್ಲಿ
ಒಂದೆರೆಡು ನಿಮಿಷಗಳಲಿ
ಮೂಡುವ
ಮುರುಕು ಒಣಿಯಂತ ಹಾದಿಗೆ
ತಾಳಿಕೆಯೂ ಕಡಿಮೆ ಬಾಳಿಕೆಯೂ!
ಯಾರಿಗ್ಹೇಳೊಣ ಅವರ ಪ್ರಾಬ್ಲಂ?
ಬೈತಲೆ ನೇರ ನೇರ ಹಾದಿಯಲಿ
ಎಲ್ಲವ ಕಳೆದುಕೊಂಡು
ಸುಮ್ಮನೆ ಸಾಗಬೇಕು
ಗೊತ್ತು ನನಗೆ ಅದು ನಡೆದಷ್ಟು ದೂರ
ಸಾಗುವ ಸುಖವನ್ನು
ಬೊಗೆಸೆಯಲಿ ಬಾಚಿ ಬಾಚಿ
ಎದೆಗೆ ತುಂಬಿಕೊಳ್ಳುವ
ಅಸೆಬರುಕತನವನ್ನು ನಿಮಗೆಂದೂ
ಹೇಳಲಾರೆ
ಬೈತಲೆಯ ಆಚೆ ಇರುವ ಜಗತ್ತು
ಎಂದಿಗೂ ಸಿಗದಿರಲಿ
ಸಾಗುವ ಖುಷಿಯೊಂದೆ ನನಗಿರಲಿ

ತುಂಟ ತುಂಟ ಕೂದಲುಗಳು
ಮೊಟು ಮೊಟಾಗಿ
ಭುಜಗಳ ಮೇಲೆ ಹರಡಿ
ಚೆಲ್ಲು ಚೆಲ್ಲಾಗಿ ಅಲೆಯುವಾಗ
ಹುಡುಗಿ ಕಿರು ಬೆರಳಿನಿಂದ
ಗದರುತ್ತಾಳೆ
ಅಮ್ಮನ ಭಯವಿಲ್ಲದೆ ಪೋಲಿಬಿದ್ದ
ಪುಟ್ಟಪೋರಿಯಂತ
ತುಂಡುಗೂದಲುಗಳು
ಮತ್ತಷ್ಟು ಪೋಲಿ..
ಇನ್ನೇನು ಬರಬಹುದು
ಹುಡುಕಿಕೊಡಿ ಸ್ವಾಮಿ
ಬೈತಲೆಗಳನು
ಎಂಬ ಜಾಹಿರಾತು
ಮತ್ತು ಹಾಡಿಕೊಳ್ಳಬಹುದು
ಅಕ್ಕನಂತೆ
ಕಂಡಿರಾ ಕಂಡಿರಾ ಬೈತಲೆಗಳನು?
ಹುಡುಗರ ಎದೆಯೊಳಗೆ
ಸದಾ ಕಚಗುಳಿ ಇಡುವ
ತುಂಟ ಬೈತಲೆಯೊಂದು
ಉಳಿಯಲಿ ದೇವರೆ
ಈ ಮುಗ್ಧ ಹುಡುಗರಿಗಾದರೂ!






0 Comments