ಸದಾಶಿವ್ ಸೊರಟೂರು
ಅಪ್ಪನ ಟವಲಿನ ಗೀರುಗಳಿಗೆ
ಬೆವರಿನದೇ ನಂಟು
ಮುಖ ಒರೆಸಿಕೊಳ್ಳುತ್ತಾನೊ!?
ಮತ್ತೆ ಮತ್ತೆ ಅದೇ
ಬೆವರಲ್ಲಿ ಮುಖ ತೊಳೆದುಕೊಳ್ಳುತ್ತಾನೊ
ತಿಳಿಯುವುದಿಲ್ಲ ಸ್ವತಃ ಅವನಿಗೂ!
ಅಪ್ಪನ ಒಳಗಿನ ಉರಿಗೆ,
ಬೆವರು ತಂಪೆರೆಯುವುದೊ?
ಎಣ್ಣೆಯಾಗೊವುದೊ?
ಉತ್ತರ ಟವಲಿಗಷ್ಟೇ ಗೊತ್ತು..
ಬೆಂದ ದೇಹದ ಮಾಂಸವನ್ನು ಆತ
ಟವಲಿನ ಬಲೆಯೊಳಗೆ
ಬಚ್ಚಿಟ್ಟುಕೊಳ್ಳಲು ಹೆಣಗಿದಷ್ಟೂ
ತೂತುಗಳು ಅವನಿಗೆ ಮೋಸಮಾಡುತ್ತವೆ..

ಒಡೆಯನ ಅಂಗಳದಲಿ ಅಪ್ಪ ಮತ್ತೆ ಮತ್ತೆ
ಮುದುಡುತ್ತಾನೆ
ಅಂಗೈಯಲ್ಲಿಡದ ಟವಲಿಗೆ
ಉಸಿರುಗಟ್ಟುತ್ತದೆ!!
ಟವಲಿನ ಗೀರು ಎಂದೊ ಸವೆದು ಹೋಗಿವೆ
ನಿಲ್ಲಲಾರದೆ ಮುರಿದುಹೋಗಿವೆ
ಅಪ್ಪನ ನರಗಳು
ಟವಲಿನ ಗೀರುಗಳೊಂದಿಗೆ
ಸ್ಪರ್ಧೆಗೆ ಬಿದ್ದಿವೆ..






0 Comments