ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಕವಿತೆ – ಒಂದೆರಡು ಚಿಲ್ಲರೆ ನೋಟಗಳು..

ಸದಾಶಿವ್ ಸೊರಟೂರು

ಜಗತ್ತಿನ ಅಂಚಿಗೆ ಬಂದು ನಿಂತ
ಧಾವಂತ ನಿನ್ನದು
ಚೂರು ಮುಗ್ಗರಿಸಿದರೆ
ಎಲ್ಲಿ ಸಶರೀರವಾಗಿ ಸ್ವರ್ಗಕೆ
ಬಿದ್ದುಬಿಡುವೆಯೊ ಏನೊ

ಆ ಲಜ್ಜೆ ಆ ಗಜ್ಜೆ
ಕಿವಿಯೋಲೆಯ ತೇರು
ತುಸು ಜಾಸ್ತಿಯೆ ಸುತ್ತಿಕೊಂಡ
ಮುಂಗುರುಳು
ದುಪ್ಪಟದ ಅಂಚಲ್ಲಿ ಇನ್ನೂ
ಅರಳಿರದ ಮೊಗ್ಗು
ನಿನ್ನ ಕಣ್ಣಲ್ಲಿರುವ ಭಯವೂ
ಒಂದು ಹಿಗ್ಗು..

ಕಡುಕಪ್ಪಿನ ರಸ್ತೆ
ಇನ್ನೇನು ಬಂದುಬಿಟ್ಟಿತು ಅನ್ನುವ
ಬಸ್ಸಿನ ಸುಳಿವು
ಆ ಅಂಗಡಿ ಮುಗ್ಗಟ್ಟುಗಳು
ಒಂಟಿ ಮರ ಒಂದೆರಡು ಹಕ್ಕಿ
ಬುಟ್ಟಿಯಲಿ ಸೀಬೆ ತುಂಬಿಕೊಂಡ
ಅಜ್ಜ ಮತ್ತು
ಎಲ್ಲದರಲ್ಲೂ ಇಷ್ಟಿಷ್ಟೆ ಹಂಚಿಹೋದ
ಆ ನೀನು
ನೀವೆಲ್ಲಾ ಯಾವ ಎಳೆಯಲ್ಲಿ
ಬಂಧಿಸಿಕೊಂಡಿದ್ದೀರಿ ಅಲ್ಲಿ
ಒಂದು ಸ್ವಚ್ಛ ಜಲವರ್ಣದಂತೆ
ಸುಮ್ಮನೆ ನಿಂತ ಕೊಳದ ನೀರಂತೆ.

ನನಗೆ ಗೊತ್ತು ಒಂದೆರಡು
ಚಿಲ್ಲರೆ ನೋಟಗಳು ನಿನ್ನ ಕಣ್ಣುನ್ನು
ಪದೇಪದೇ ತಾಕಿದರೆ ಸಾಕು

ಜಲವರ್ಣದ ಮೇಲೆ ನೀರು ಚೆಲ್ಲುತ್ತದೆ
ಕಲ್ಲು ಬಿದ್ದ ಕೊಳ ಅಲೆಯೆಳಿಸುತ್ತದೆ..

ಅಮೇಲೆ ನಾನೂ ಇಲ್ಲ
ನೀನೂ ಇಲ್ಲ
ಒಟ್ಟಂದವೂ ಇಲ್ಲ..

‍ಲೇಖಕರು Admin

4 May, 2022

1 Comment

  1. prathibha nandakumar

    ತುಂಬ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading