ಸದಾಶಿವ್ ಸೊರಟೂರು ಕಥಾ ಅಂಕಣ-ಸರಳರೇಖೆ… 

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

ಅವನು ಸ್ಟೇಡಿಯಂ ಗೇಟ್ ಕಿರ್ರ್ ಎನಿಸಿ ಒಳಗೆ ಬರುವ ಹೊತ್ತಿಗೆ ಆ ಬಸ್ಸು  ಒಂದು ದಿನ ಸ್ಟೇಡಿಯಂನ ಹಿಂಭಾಗದ ತಿರುವಿನಲ್ಲೋ, ಮತ್ತೊಂದು ದಿನ ಸ್ಟೇಡಿಯಂನ ಎದುರಿಗೋ, ಇನ್ನೊಂದು ದಿನ ಸ್ಟೇಡಿಯಂನಿಂದ ದೂರದಲ್ಲೆಲ್ಲೋ ತನ್ನ ಹಾರ್ನ್ ಊದಿಕೊಂಡು ಓಡುತ್ತಿರುತ್ತಿತ್ತು. ಅದೇ ಸ್ಟೇಡಿಯಂಗೆ ವಾಕ್ ಮಾಡಲು ಬಂದಿರುತ್ತಿದ್ದ ನಾನು ಆ ಹೊತ್ತಿಗೆ ಟ್ರ್ಯಾಕಿನಲ್ಲಿ ಒಮ್ಮೊಮ್ಮೆ ಎರಡನೇ ಸುತ್ತಿನಲ್ಲಿ, ಕೆಲವೊಮ್ಮೆ ಐದನೇ‌ ಸುತ್ತಿನಲ್ಲಿ, ಮತ್ತೆ ಯಾವಾಗಲೋ ಏಳೆಂಟು‌ ಸುತ್ತಿನಲ್ಲಿರುತ್ತಿದ್ದೆ. ಆದರೆ ಅವನಿಂದ ಸರಿಯಾಗಿ ಏಳೂ ಮೂವತ್ತಕ್ಕೆ ಮಾತ್ರ ಗೇಟ್ ಕಿರ್ರ್ ಅನ್ನುವುದು ಚೂರೂ ಆಚೆ ಈಚೆ ಆಗಿರಲಿಲ್ಲ.‌ 

ವಾತಾವರಣ ಇನ್ನೂ ನಿದ್ದೆ ಮಂಪರಿನಲ್ಲಿರುತ್ತಿತ್ತು. ದಡಬಡ ಎಂದು ಏದುಸಿರು ಬಿಡುತ್ತಾ ವಾಕ್ ಮಾಡಿದ ನನ್ನ ಬೆನ್ನಿನಲ್ಲಿ ಬೆವರಿನಹನಿಯೊಂದು ಜಾರುತ್ತಿತ್ತು. ಹಕ್ಕಿಗಳು ಎತ್ತಲೂ ಹಾರಿ ಹೋಗುತ್ತಿದ್ದವು. ಎಲೆಗಳ ಮೇಲಿನ ಇಬ್ಬನಿ ತನ್ನ ಕೊನೆಯ ಆಯಸ್ಸಿನಲ್ಲಿರುತ್ತಿತ್ತು.‌ ಮೈದಾನ ತನ್ನ ಪಾಡಿಗೆ ತಾನು ಅಂಗಾತ ಮಲಗಿರುತ್ತಿತ್ತು. ಅದರೊಂದಿಗೆ ಗೇಟ್ ಕಿರ್ರ್ ಎನಿಸಿ ಬಂದ ಈ ಅನಾಮಿಕನ ಅನವರತ ಸುರಿಯುವ ಮಾತುಗಳು ಸೇರಿಕೊಳ್ಳುತ್ತಿದ್ದವು.‌

ಅವನು ಎಂದಿನಿಂದ ಇಲ್ಲಿಗೆ  ಬರಲು ಶುರುವಿಟ್ಟುಕೊಂಡನೋ ನನಗೆ ಗೊತ್ತಿಲ್ಲ. ನೂರಾರು ಜನ ಬರುತ್ತಾರೆ, ಹೋಗುತ್ತಾರೆ.‌ ಇಲ್ಲಿ ಯಾರ ಉಸಾಬರಿ ಯಾರಿಗಿದೆ? ಈಗ್ಗೆ ಎರಡು ತಿಂಗಳಿನಿಂದ ಅವನು ಕಣ್ಣಿಗೆ ಬಿದ್ದಿದ್ದಾನೆ. ಮೊದಲು ಬರುತ್ತಿದ್ದನೋ ಏನೋ? ಆದರೆ ಅವನ ವಿಲಕ್ಷಣತೆ ಕಣ್ಣಿಗೆ ಬಿದ್ದ ಮೇಲೆ ನಾನು ಅವನನ್ನು ಗಮನಿಸತೊಡಗಿದ್ದೆ. ಅವನ ಮೇಲೊಂದು ‌ನನ್ನ ಕಣ್ಣು ಸದಾ ಎಚ್ಚರಿಕೆಯ ನಿಗಾ ಇಡುತ್ತಿತ್ತು. 

ಅವನಲ್ಲಿ ಮದುವೆ ಆಗಬೇಕಾದವರ ಹುರುಪು ಇತ್ತೋ ಅಥವಾ ಮದುವೆ ಆದಮೇಲೆ ಆವರಿಸುವ ಒಂದು ವಿಚಿತ್ರ ಚಡಪಡಿಕೆ ಇತ್ತೋ ನನಗೆ ಅಂದಾಜಾಗಿರಲಿಲ್ಲ. ಅವನು ಗೇಟನ್ನು ಒಂದು ಧಾವಂತದ್ದಲ್ಲೇ ತಳ್ಳಿ ಒಳಗೆ ಬರುತ್ತಿದ್ದ. ಅವನ‌ ಕಿವಿಯಲ್ಲಿ ಬಲಗೈಯಿಂದ ಹಿಡಿದ ಮೊಬೈಲ್ ಇರುತ್ತಿತ್ತು. ಗೇಟ್ ಅವನ ಬಲಕ್ಕೆ ನರಳಿ ಕಿರ್ರ್ ಅನ್ನುತ್ತಿತ್ತು. 

ನಾನು ಮತ್ತು ನನ್ನೊಂದಿಗೆ ಗೆಳೆಯರಂತಿರುವ ಒಬ್ಬ ಹಿರಿಯರು ಇರುತ್ತಿದ್ದರು. ನಾವಿಬ್ಬರು ಗೆಳೆಯರಾಗಲು ಸಾಧ್ಯವಾಗದ ವಯಸ್ಸಿನ ಅಂತರವಿತ್ತು. ಬಹುಶಃ ಅವರಿಗೆ ಅರವತ್ತು ದಾಟಿರಬಹುದು. ಗೆಳೆತನಕ್ಕೆ  ಎಂಥಹ ವಯಸ್ಸು ಮಾರಾಯ್ರೆ ಅನ್ನುವ ಅರ್ಧಸತ್ಯದ ಮಾತು ಇಲ್ಲಿ ಬೇಡ. ಆದರೆ ಹೀಗೆ ವಾಕ್‌ನಲ್ಲಿ ನಾವಿಬ್ಬರೂ ಹರಟುತ್ತಾ ಗೆಳೆಯರೇ ಆಗಿಬಿಟ್ಟಿದ್ದೆವು. ಅವರು ಬಂದಾಗಲೆಲ್ಲಾ ಚಿಕ್ಕವಯಸ್ಸಿನಲ್ಲಿ ಕಳೆದು ಹೋದ ಅವನ ಮಗನ ಬಗ್ಗೆಯೇ ಮಾತಾಡುತ್ತಿದ್ದರು. ಕಳೆದದ್ದು, ಹುಡುಕಲು ಪರದಾಡಿದ್ದು, ನೋವು ಪಟ್ಟಿದ್ದು, ಸಿಗದೆ ಸಾಕಾಗಿ ಹುಡುಕುವ ಪ್ರಯತ್ನ ಕೈಬಿಟ್ಟಿದ್ದು ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದರು. ಮೊದಮೊದಲು‌ ನಾನು ಅವರ ಮಾತುಗಳನ್ನು ಬಹಳ ಆಸ್ಥೆಯಿಂದ ಕೇಳಿಸಿಕೊಳ್ಳುತ್ತಿದ್ದೆ. ಆದರೆ ಬರುಬರುತ್ತಾ ಅವವೇ ಮಾತುಗಳು ಬರಲಾರಂಭಿಸದ್ದರಿಂದ ನನಗೆ ಅದರ ಬಗ್ಗೆ ಆಸಕ್ತಿ ಕಮ್ಮಿಯಾಗಿತ್ತು.

ಕಳೆದು ಹೋದ ಮಗ ಎಲ್ಲೋ‌ ಒಂದು ಕಡೆ ಚೆನ್ನಾಗಿ ಇರುವನೆಂದು ಅವರು ನಂಬಿದ್ದರು. ಉತ್ತರ ಭಾರತದಲ್ಲಿ ಯಾವುದೋ ರಾಜ್ಯದಲ್ಲಿದ್ದಾನೆ ಎಂಬುದು ಅವರ ನಂಬಿಕೆ.  ಶ್ರೀಮಂತನಾಗಿರುವನು, ಹೆಂಡತಿ ಮಕ್ಕಳೊಂದಿಗೆ ಸುಖವಾಗಿರುವನು ಎಂದು ನನಗೆ ಹೇಳುತ್ತಿದ್ದರು.‌ ನಾನು ಸುಮ್ಮನೆ ʻಹೂಂʼಗುಟ್ಟುತ್ತಿದ್ದೆ. ʻಅವನು‌ ಸತ್ತು ಹೋಗಿರಬಹುದು, ಎಲ್ಲೋ ಭಿಕ್ಷೆ ಬೇಡಿಕೊಂಡು ಬದುಕುತ್ತಿರಬಹುದು, ಬಡತನದಲ್ಲಿ‌ ನಿತ್ಯ ಸಾಯುತ್ತಿರಲೂ ಬಹುದಲ್ಲಾʼ ಎಂದು ಹೇಳಬೇಕು ಅಂದುಕೊಂಡು ಸುಮ್ಮನಾಗುತ್ತಿದ್ದೆ. ಎಷ್ಟೋ ವರ್ಷಗಳ ಹಿಂದೆ ಒಬ್ಬ ಜ್ಯೋತಿಷಿ ಹೇಳಿದ್ದ ʻನಿಮ್ಮ ಮಗ ಸುಖವಾಗಿದ್ದಾನೆʼ ಅನ್ನುವ ಮಾತುಗಳ ಮೇಲೆ ಅವರು ಖುಷಿಯಿಂದ ಬದುಕಿದ್ದರು. ನನಗೆ ಅವರ ಭ್ರಮೆ ಇಷ್ಟವಾಗಿತ್ತು. ಅವರನ್ನು ನೆಮ್ಮದಿಯಿಂದ ಇಟ್ಟಿರುವ ಅವರ ಆ ಭ್ರಮೆ ಅವರನ್ನು ಕೊನೆಯವರೆಗೂ ಪೊರೆಯಲಿ ಎಂದುಕೊಂಡೆ. ಪ್ರಜೆಗಳು ನನ್ನನ್ನು ಪ್ರೀತಿಸುತ್ತಾರೆಂದು ರಾಜ ಮತ್ತು ರಾಜ ನಮ್ಮನ್ನು ರಕ್ಷಿಸುತ್ತಾನೆ ಎಂಬ ಪ್ರಜೆಗಳ ಭ್ರಮೆಯಲ್ಲೇ ಎಷ್ಟೋ ರಾಜ್ಯಗಳು ಬದುಕಿ ಹೋಗಿವೆ. ಅದು ಭ್ರಮೆ ಅಷ್ಟೇ ಅಲ್ಲ, ಅದನ್ನು ಅವರು ಬೇರೆಯವರ ಬಳಿ ಹೇಳಿಕೊಂಡು ಸಮಾಧಾನ ಪಟ್ಟುಕೊಳ್ಳುತ್ತಾರಲ್ಲ ನನಗದು ಖುಷಿ ಎನಿಸಿತ್ತು. ಅದು ಅವರ ಭ್ರಮೆಯನ್ನು ಇನ್ನಷ್ಟು ನಿಖರಗೊಳಿಸುತ್ತದೆ. ಅವರಿಗೊಂದು ನಿರಾಳ ಅದು. 

ಈ ಹಿರಿಯ ಮಿತ್ರರೊಂದಿಗೆ ಹೆಜ್ಜೆ ಹಾಕುತ್ತಾ,  ಮಾತಾಡುತ್ತಾ ನಾನು ಈ‌ ನಡುವೆ ಆ ಅನಾಮಿಕನನ್ನು ಗಮನಿಸತೊಡಗಿದ್ದೆ. ಅವನು ಮೈದಾನದ ಒಳಗೆ ಬರುವಾಗಲೇ ಮೊಬೈಲ್‌ನಲ್ಲಿ ಮಾತಾಡುತ್ತಾ ಬರುತ್ತಾನೆ. ಯಾವುದೋ ಗಡಿಬಿಡಿಯಲ್ಲಿರುವಂತೆ ಮಾತಾಡುತ್ತಾನೆ. ಮಾತಾಡುತ್ತಾ ಮಾತಾಡುತ್ತಾ ವೇಗವಾಗಿ ನಡೆಯುತ್ತಾನೆ. ಏಕಾಏಕಿ ವಿರುದ್ಧ ದಿಕ್ಕಿಗೆ ತಿರುಗಿ ಮತ್ತೆ ನಡೆಯಲು ಆರಂಭಿಸುತ್ತಾನೆ. ಮೈದಾನದ ಟ್ರ್ಯಾಕ್ ಬಿಟ್ಟು ಎತ್ತಲೋ ನಡೆಯುತ್ತಾನೆ, ಮತ್ತೆ ಟ್ರ್ಯಾಕ್‌ಗೆ ಮರಳುತ್ತಾನೆ.‌ ಮಾತು ಒಮ್ಮೆ ಮೆಲುವಾಗುತ್ತದೆ. ಮತ್ತೊಮ್ಮೆ ತುಂಬಾ ಜೋರಾಗುತ್ತದೆ. ಕಿರುಚುತ್ತಾನೆ. ಬೈಯುತ್ತಾನೆ. ಹಲೋ ಹಲೋ ಅನ್ನುತ್ತಾ ಮೊಬೈಲ್ ನೋಡಿಕೊಳ್ಳುತ್ತಾನೆ. ʻಕಟ್ ಮಾಡ್ಬೇಡ ನೋಡುʼ ಅನ್ನುತ್ತಾನೆ. ಒಮ್ಮೊಮ್ಮೆ ಖುಷಿಯಿಂದ ಮಾತಾಡುತ್ತಾನೆ, ನಗುತ್ತಾನೆ. ಕಾಳಜಿ‌ ಮಾತುಗಳನ್ನಾಡುತ್ತಾನೆ. ಪ್ರೀತಿ ತೋರಿಸುತ್ತಾನೆ. ಅವತ್ತೊಂದಿನ ಜೋರಾಗಿ ಅತ್ತೇ ಬಿಟ್ಟಿದ್ದ.‌ ಅದನ್ನೂ ನಾನು ನೋಡಿ ಬಿಟ್ಟಿದ್ದೆ. ನನಗೆ ತೀರಾ ಸಂಕಟವಾಗಿತ್ತು. ಅವನು ಹೀಗೆ ಅರ್ಧಗಂಟೆಗಳಷ್ಟು ಕಾಲ‌ ತಲ್ಲಣಿಸಿ ಹೊರಟು ಬಿಡುತ್ತಿದ್ದ. 

ಅವನು ಮಾತಾಡುವ ಆ ಕರೆಯ ಅತ್ತ ತುದಿಯಲ್ಲಿ ಅವನ‌ ಹಾಲಿ ಪ್ರೇಮಿ ಇರಬಹುದು, ಮಾಜಿ ಹುಡುಗಿ ಇರಬಹುದು, ತವರಿಗೆ ಹೋದ ಹೆಂಡತಿ ಇರಬಹುದು, ವಿಚ್ಛೇದನಕ್ಕೆ‌ ಅರ್ಜಿ ಹಾಕಿದ ಹೆಂಡತಿ ಇರಬಹುದು, ಅಥವಾ ಪೂರ್ತಿ ವಿಚ್ಛೇದನ ಕೊಟ್ಟವಳೇ ಇರಬಹುದು… ಒಟ್ಟಾರೆ ಯಾವುದೋ ಮುರಿದ ಅಥವಾ ಮುರಿಯಲು ಸಿದ್ಧವಾದ ಸಂಬಂಧವೊಂದು ಅವನಿಗೆ ಇದೆ ಎಂದು ನನಗೆ ಬಲವಾಗಿ ಅನಿಸುತ್ತಿತ್ತು.‌ ಅವನನ್ನು ಕರೆದು ಅದೇನೆಂದು ಕೇಳಿ, ಆ ಅವಳನ್ನು ಕರೆದು ಕೂರಿಸಿಕೊಂಡು ಮಾತಾಡಿಸಿ ಅವರ ನಡುವಿನ ಸಮಸ್ಯೆ ಬಗೆಹರಿಸಿ ಬಿಡಬಹುದಾ ಅಂತ ನನಗೆ ತುಂಬಾ ಸರಿ ಅನಿಸುತ್ತಿತ್ತು. 

ಹೀಗೆ ಸದಾ ಮೊಬೈಲ್‌ನಲ್ಲಿ‌ ಮಾತಾಡುವ ಅವನನ್ನು ನನ್ನ ವಾಕಿನ ಜೊತೆಗಾರರಾದ ಹಿರಿಯಮಿತ್ರರಿಗೆ ಒಮ್ಮೆ ತೋರಿಸಿದ್ದೆ. ಮತ್ತು ನಾನು ಅವಲೋಕಿಸಿದ್ದೆಲ್ಲವನ್ನೂ ಅವರಿಗೆ ಹೇಳಿದ್ದೆ. ಅವರೂ‌‌ ಕೂಡ ಅವನ ಕಡೆ ಒಂದು ವಿಚಿತ್ರ ದೃಷ್ಟಿ ಹರಿಸಿದ್ದರು.‌ ಒಂದರೆಡು‌ ದಿನಗಳ ನಂತರ ʻನೀವು ಬರಹಗಾರರೇ…? ಹೀಗೆ… ಸುಮ್ಮನೆ ಏನಾದ್ರೂ ಒಂದು ಕಲ್ಪನೆ ಮಾಡಿಕೊಳ್ತೀರಿ. ಅದರಲ್ಲೇ ತೊಳಲಾಡ್ತೀರಿ. ಬರೆದು ಅದರಿಂದ ಬಿಡುಗಡೆ ಪಡೆಯುತ್ತೀರಿʼ ಎಂದು ಜಾಡಿಸಿದ್ದರು.‌ ಅದು ಬರಹಗಾರನಿಗೆ ಸಿಕ್ಕಿದ ಹೊಗಳಿಕೆಯೋ, ತೆಗಳಿಕೆಯೋ ನನಗೆ ಗೊತ್ತಾಗಲಿಲ್ಲ. 

ಅವರು ಹೇಳಿದ ಒಂದು ಮಾತು ನನಗೆ ಸತ್ಯ ಎನಿಸಿತು. ಬರಹಗಾರ ಬಿಡುಗಡೆ ಪಡೆಯುತ್ತಾನೆ ಎಂಬುದು ನನಗೆ ಮೆಚ್ಚುಗೆಯಾಯಿತು. ತಮ್ಮೊಳಗಿನ ತುಮುಲಗಳನ್ನು ಹೊರಹಾಕಲು ಪ್ರತಿಯೊಬ್ಬರು ಅನೇಕ ದಾರಿಗಳನ್ನು‌ ಕಂಡುಕೊಂಡಿದ್ದರೆ. ಹಾಗೆಯೇ ಬರಹಗಾರ ಅದಕ್ಕಾಗಿ ತನ್ನ ಬರವಣಿಗೆ ನೆಚ್ಚಿಕೊಂಡಿದ್ದಾನೆ. ಅದರಿಂದ ಸಮಾಜವನ್ನು ತಿದ್ದುತ್ತೀನಿ‌ ಎಂಬ ಹುಂಬತನ ಅವನಿಗೆ ಇರುವುದಿಲ್ಲ. ಬಲವಾಗಿ ಒತ್ತಿ ಬರುವ ಅವನೊಳಗಿನ ತುಮುಲಗಳಿಂದ ಅವನು ಬಿಡುಗಡೆ ಪಡೆಯಬೇಕಾಗಿರುತ್ತದೆ ಅದಕ್ಕಾಗಿ ಬರೆಯುತ್ತಾನೆ. ಅವನು ಬರೆಯದೆ ಇದ್ದರೆ ಸಹಜವಾಗಿರಲು ಅವನಿಗೆ ಸಾಧ್ಯವಾಗುವುದೇ ಇಲ್ಲ. ಅವನಿಗೆ ಅವನೇ ಸೃಷ್ಟಿಸಿಕೊಂಡ ಲೋಕವಿರುತ್ತದೆ. ಅದರಲ್ಲಿ ಅವನು ರಾಜನು ಆಗಬಹುದು, ಸೇವಕನೂ‌ ಆಗಿರಬಹದು. ಇದೆಲ್ಲಾ ನನಗೆ ಗೊತ್ತಿರದ ವಿಷಯವೇನಲ್ಲ, ಆದರೆ ಹಿರಿಯರು ಅದನ್ನು ಗುರುತಿಸಿ ಹೇಳಿದ್ದು ನನಗೆ ಖುಷಿಕೊಟ್ಟಿತ್ತು. 

ಆಗಾಗ್ಗೆ ಬರುತ್ತಿದ್ದ ಆ ಹಿರಿಯ ಮಿತ್ರರು ಮತ್ತು ನಾನು ಆ ಅನಾಮಿಕನನ್ನು ಗಮನಿಸತೊಡಗಿದೆವು. ಅವನ ಮಾತುಗಾರಿಕೆ ಮುಂದುವರೆದಿತ್ತು. ಇಷ್ಟೊಂದು ಗಂಭೀರ ಸಮಸ್ಯೆ ಇರುವ ಇವನು ಯಾಕೆ ಮೊಬೈಲ್ ಮಾತಾಡಿಕೊಂಡೆ ಅದನ್ನು ಸರಿ ಮಾಡಲು ನಿಂತಿದ್ದಾನೆ ಅಂತ ಯೋಚನೆಯಾಯಿತು. ಅವರ್‍ಯಾರೋ ಏನೋ…  ಹೋಗಿ ಮಾತಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬಹುದು ಅಂತ ನನಗೆ ಅನಿಸುತ್ತಿತ್ತು. ಅವನದು ಸಮಸ್ಯೆಯೇ ಇರಬಹುದು. ಆದರೆ ನಾನಾದರೂ ಹಾಗೆ ಹೇಗೆ  ಊಹಿಸಿಕೊಳ್ಳಲು ಸಾಧ್ಯ?  ಅದು ಅವನ ಪ್ರೀತಿಸುವ ರೀತಿಯೇ ಇರಬಹುದಲ್ಲ. ಅಷ್ಟಕ್ಕೂ ಆಗಾಗ ಅವನು ಗೆಲುವಾಗಿ ಮಾತಾಡುತ್ತಿದ್ದ. ನಗುತ್ತಿದ್ದ. ಪಿಸುಗುಡುತ್ತಿದ್ದ. ಪ್ರೀತಿಸುತ್ತಿದ್ದ. ಖುಷಿಯಾಗಿರುತ್ತಿದ್ದ . ದಿನೇದಿನೆ ಅವನು ನಮಗೊಂದು ಯಕ್ಷ ಪ್ರಶ್ನೆಯಂತಾದ. 

ಒಂದು ದಿನ ಬೆಳಗ್ಗೆ ನನ್ನ ಹಿರಿಯ ಮಿತ್ರರ ಅನುಮಾನವೊಂದನ್ನು ಹೊರಹಾಕಿದರು. ʻನಿಮಗೆ ಅವನು ನಿಜಕ್ಕೂ ಮೊಬೈಲ್ನಲ್ಲಿ ಮಾತಾಡ್ತಾನೆ ಅಂತ ಅನಿಸುತ್ತಾ? ನನಗೇನು ಅವನು ಸುಮ್ಮನೆ ಮೊಬೈಲ್ ಕಿವಿಗಿಟ್ಟುಕೊಂಡು ತಿರುಗಾಡ್ತಾನೆ…ʼ ಅನಿಸುತ್ತೆ ಅಂದರು.‌ ಅವರ ಮಾತು ಕೇಳಿ ನನಗೆ ನಗು ಬಂತು.‌ ಒಬ್ಬ ವ್ಯಕ್ತಿ ಪ್ರತಿನಿತ್ಯವೂ ಹೀಗೆ ನಟಿಸಲು ಸಾಧ್ಯವೇ? ಅಳುವುದು… ಕೂಗಾಡುವುದು… ನಗುವುದು… ಪ್ಲೀಸ್ ಕಟ್ ಮಾಡ್ಬೇಡ ಅನ್ನೋದು… ‌ಇಂತಹ ಮಾತುಗಳೆಲ್ಲವೂ ನೆನಪಾಗಿ ನಾನು ಆ ಹಿರಿಯರ ಮಾತುಗಳನ್ನು ತಿರಸ್ಕರಿಸಿದೆ. 

ನನಗೆ ಒಂದೆರಡು ಬಾರಿ ಆ ಅನಾಮಿಕ ಮೈದಾನದ ಆಚೆಯೂ ಸಿಕ್ಕಿದ್ದ. ನಾನು ಕೆಲಸಕ್ಕೆ ಹೋಗುವಾಗ ಮತ್ತು ರಜೆ ದಿನಗಳಲ್ಲಿ ಮಧ್ಯಾಹ್ನಗಳಂದು‌ ಅವನು ನಗರದೊಳಗೆ ಅಲ್ಲಲ್ಲಿ ಕಣ್ಣಿಗೆ ಬೀಳುತ್ತಿದ್ದ. ಆಗ ಅವನು ಮೊಬೈಲ್‌ನಲ್ಲೇನು ಬೆಳಗ್ಗೆ ಮೈದಾನದಲ್ಲಿ ಮಾತಾಡುವಂತೆ ಮಾತಾಡುತ್ತಿರಲಿಲ್ಲ. ತುಂಬಾ ನೀಟಾಗಿ ಡ್ರೆಸ್ ಮಾಡಿಕೊಂಡು ಕೆಲಸಕ್ಕೆ ಹೊರಟಿರುತ್ತಿದ್ದ. ಇಲ್ಲವೇ ಯಾರೊಂದಿಗೊ ನಗುತ್ತಾ ಮಾತಾಡುತ್ತಾ ನಿಂತಿರುತ್ತಿದ್ದ. ತುಂಬಾ ಲವಲವಿಕೆಯಲ್ಲಿರುತಿದ್ದ. ಯಾವ ದುಗುಡವೂ ಅವನನ್ನು ಬಾಧಿಸಿದಂತೆ ಕಾಣುತ್ತಿರಲಿಲ್ಲ. ಬೆಳಗ್ಗೆ ಸ್ಟೇಡಿಯಂನಲ್ಲಿನ ಅವನ ವರ್ತನೆಗೂ… ನಂತರದ ಅವನ ಬದುಕಿಗೂ ಬಹಳ ವ್ಯತ್ಯಾಸವಿರುವುದು ನನ್ನ ಗಮನಕ್ಕೆ ಬಂತು. 

ವಾಕ್‍ನಲ್ಲಿ ಸಿಗುತ್ತಿದ್ದ ನನ್ನ ಹಿರಿಯ ಮಿತ್ರರು ಒಂದು ವಾರ ಮೈದಾನದ ಕಡೆ ಸುಳಿಯಲಿಲ್ಲ. ವಾರದ ಬಳಿಕ ಬಂದಾಗ ಈ ಅನಾಮಿಕನ ಬಗ್ಗೆಯೇ ಕೇಳಿದರು. ʻಏನಾದ್ರು ಗೊತ್ತಾಯ್ತಾ? ಏನು ಅವದನು ಸಮಸ್ಯೆ?ʼ ಅಂದರು. ನನಗೆ ಯಾವ ಸುಳಿವು ಸಿಕ್ಕಿರಲಿಲ್ಲ. ʻಇಲ್ಲ ಸರ್ʼ ಅಂದೆ. ಅವರೇ ನನಗೊಂದು ಐಡಿಯ ಕೊಟ್ಟರು. ಅವನು ಫೋನಿನಲ್ಲಿ ಮಾತಾಡುವಾಗ ಏಕಾಏಕಿ ಎದುರಾಗಿ ಮಾತಾಡಿಸುವ ನೋಡೋಣ ಅವನ ಪ್ರತಿಕ್ರಿಯೆ ಹೇಗಿರುತ್ತದೆ ಎಂದರು. ನಾನು ಆಗಲಿ ಎಂದೆ. 

ಎರಡು ಸುತ್ತು ಸುತ್ತಿ, ಮೂರನೇ ಸುತ್ತಿಗೆ ಅವನಿಗೆ ಎದುರಾದೆವು. ʻತಮ್ಮಾ ನಿಮ್ಮನ್ನು ಎಲ್ಲೋ ನೋಡಿದ ಹಾಗೆ ಇದೆಯಲ್ಲಾ…ʼ ಎಂದು ನನ್ನ ಜೊತೆ ಇದ್ದ ಹಿರಿಯ ಮಿತ್ರರು ಏಕಾಏಕಿ ಆ ಅನಾಮಿಕನನ್ನು ಮಾತಾಡಿಸಿಯೇ ಬಿಟ್ಟರು. ಅವನು ಅವನದೇ ಲೋಕದಲ್ಲಿದ್ದ. ಗಲಿಬಿಲಿಗೊಂಡ. ಹಿರಿಯರ ಮಾತಿನಿಂದ ದಡಬಡಾಯಿಸಿ ಈ ಲೋಕಕ್ಕೆ ಜಾರಿ ಬಿದ್ದ. ಕಿವಿಯಲ್ಲಿದ್ದ ಮೊಬೈಲ್ ಈಚೆಗೆ ತೆಗೆದ. ನಾನು ಅದನ್ನೇ ಗಮನಿಸುತ್ತಿದ್ದೆ. ಕಿವಿಯಿಂದ ತೆಗೆದ ತಕ್ಷಣ ಸೆನ್ಸರ್‌ ಕಾರಣದಿಂದ ಸ್ಕ್ರೀನ್ ಮೇಲೆ ಬೆಳಕು ಚೆಲ್ಲಿತು. ಆದರೆ ಅಲ್ಲಿ ಯಾವುದೇ ಕರೆ ಆಕ್ಟಿವ್ ಆಗಿರುವುದು ಕಾಣಿಸಲಿಲ್ಲ. ನನಗೊಮ್ಮೆ ಆಶ್ಚರ್ಯವಾಯಿತು. ಹಿರಿಯ ಮಿತ್ರರು ಮತ್ತು ಆ ಅನಾಮಿಕ ಏನೇನೋ ಮಾತಾಡುತ್ತಿದ್ದರು. ನನಗೆ ಅದರ ಕಡೆ ಗಮನವಿರಲಿಲ್ಲ. ಅತ್ತ ಕಡೆಯಿಂದ ಯಾವುದೇ ಕರೆ ಇಲ್ಲದೆ ಸುಮ್ಮನೆ ಮಾತಾಡುತ್ತಿರುವ ಅವನ ಬಗ್ಗೆ ಪೆಚ್ಚೆನಿಸಿತು. ಹಿಂದೊಮ್ಮೆ ಹಿರಿಯ ಮಿತ್ರರು ವ್ಯಕ್ತಪಡಿಸಿದ್ದ ಅನುಮಾನ ನೆನಪಾಯಿತು. ಇದೇನೋ ಇವನದು ಹುಚ್ಚು ಎನಿಸಿ ಪಾಪ ಎನಿಸಿತು. 

ಒಮ್ಮೆ ನಾನು ಬಟ್ಟೆಯಂಗಡಿಗೆ ಹೋಗಿದ್ದಾಗ ಅಲ್ಲಿ ಒಳಗೆ ಈ ಅನಾಮಿಕ ಕೂತಿದ್ದ. ಅವನು ಅದರ ಮಾಲಿಕನೋ,  ಅಥವಾ ಕೆಲಸಕ್ಕೆ ಇರುವವನು ನನಗೆ ಗೊತ್ತಾಗಲಿಲ್ಲ. ಅದನ್ನು ಅವರ ಮುಂದೆಯೇ ಕೇಳುವುದು ಹೇಗೆ? ಅಂಗಡಿಯ ಉಸ್ತುವಾರಿಯಲ್ಲಿ ಅವನು ತೊಡಗಿದ್ದ. ತುಂಬಾ ಕಳೆಕಳೆಯಾಗಿದ್ದ. ಬಹುಶಃ ಅಂಗಡಿಯ ಮಾಲಿಕನೇ ಇರಬಹುದು ಎನಿಸಿತು. ನಂತರ ಸುಮ್ಮನೆ ಬೇರೆ ಅಂಗಡಿಯವರ ಬಳಿ ಅವನ ಬಗ್ಗೆ ವಿಚಾರಿಸಿದೆ. ಎಲ್ಲರೂ ಅವನ ಬಗ್ಗೆ ತುಂಬಾ ಧನಾತ್ಮಕವಾಗಿಯೇ ಮಾತಾಡಿದರು. 

ಆ ಅಂಗಡಿಯ ಎದುರಿನ ಅಂಗಡಿಯವ ಹೇಳಿದ ಸತ್ಯ ನನ್ನನ್ನು ಬೆಚ್ಚಿಬಿಳಿಸಿತು ʻತುಂಬಾ ಒಳ್ಳೆಯ ವ್ಯಕ್ತಿ ಸರ್ ಅವ್ರು. ಪಾಪ ಒಂಟಿಯಾಗಿ ಬದುಕುತ್ತಾ ಇದಾರೆ. ಏಳೆಂಟು ವರ್ಷದ ಹಿಂದೆ ಅವನ ಹೆಂಡತಿ ಸತ್ತು ಹೋದಳು. ಮದುವೆ ಆಗಿ ಒಂದೇ ವರ್ಷಕ್ಕೆ ಹೆಂಡ್ತಿ‌ ಕಳೆದುಕೊಂಡ್ರುʼ ಅನ್ನುತ್ತಾ ಅವನು ತನ್ನ ಕೆಲಸದಲ್ಲಿ ಮುಳುಗಿ ಹೋದ. ನಾನು ಅಲ್ಲಿಂದ ಎದ್ದು ಬಂದೆ. 

ಮರುದಿನ ವಾಕಿನಲ್ಲಿ ಹಿರಿಯ ಮಿತ್ರರು ಸಿಕ್ಕರು.‌ ಅವರಿಗೆ ಇದೆಲ್ಲಾ ಹೇಳಬೇಕೋ, ಬೇಡವೋ ಅನ್ನುವುರ ಬಗ್ಗೆ ಯೋಚನೆ ಆಯ್ತು. ಅಷ್ಟರಲ್ಲೇ ಆ ಅನಾಮಿಕ ಗೇಟ್ ಕಿರ್ರ್ ಅನಿಸಿಕೊಂಡು ಒಳಗೆ ಬಂದೆ. ಇಂದು ಅವನು ನನಗೆ ವಿಲಕ್ಷಣವಾಗಿ ಕಾಣಿಸಲಿಲ್ಲ. ಪಾಪ ಅಂತಾನೂ ಅನಿಸಲಿಲ್ಲ. ಅವನೂ ಈ ಸ್ಟೇಡಿಯಂನಲ್ಲಿರುವ ಎಲ್ಲರಂತೆ ಅನಿಸಿದ. ಫೋನಿನಲ್ಲಿ ʻತವರಿಂದ ಬಾ ಸಾಕುʼ ಅನ್ನುತ್ತಿರಬಹುದು, ʻತಿಂಡಿ ಮಾಡಲು ತರಕಾರಿ ಇದೆಯಾ?ʼ ಎಂದು ಕೇಳುತ್ತಿರಬಹುದು, ʻನಾನು ಇವತ್ತು ಬೇಗ ಅಂಗಡಿಗೆ ಹೋಗಬೇಕು… ಬಿಸಿ‌ನೀರು ರೆಡಿ ಮಾಡುʼ ಅನ್ನುತ್ತಿರಬಹುದು ಎನಿಸಿತು. ಅವನನ್ನು ಖುಷಿಯಾಗಿಡುವ ಲೋಕವೊಂದನ್ನು ಅವನೇ ಸೃಷ್ಟಿಸಿಕೊಂಡಿದ್ದಾನೆ. ಅದು ಅವನಿಗೆ ಖುಷಿ‌ಕೊಡುತ್ತಿದೆ.‌ ಖುಷಿಯೇ ತಾನೇ ಬದುಕಿನ ಉದ್ದೇಶ. 

ಆ ಹಿರಿಯ ಮಿತ್ರರಿಗೆ ಇದೆಲ್ಲಾ ಹೇಳದೆ ಇರಲಾಗಲಿಲ್ಲ… ಅದನ್ನು ಹೇಳುತ್ತಾ ಹೋದೆ. ಹೇಳುತ್ತಾ ಹೇಳುತ್ತಾ ನನಗೆ ಹಿರಿಯ ಮಿತ್ರರರ ಬದುಕೇ ನೆನಪಾಯಿತು… ಎಂದೋ ಕಳೆದು ಹೋದ ಮಗ ಇನ್ನೂ ಚೆನ್ನಾಗಿರುವನು, ಬಂದೇ  ಬರುವನು ಎಂದು ಕಾಯುತ್ತಿರುವ ಇವರು ಕೂಡ ಆ ಅನಾಮಿಕನಂತೆ ಅನಿಸಿದರು. ಹಿರಿಯ ಮಿತ್ರರ ನನ್ನ ಮಾತಿಗೆ ಹೂಂಗುಡುತ್ತಾ ಸುಮ್ಮನೆ ನಡೆಯುತ್ತಿದ್ದರು. 

ನನ್ನ ಮೊಬೈಲ್‍ಗೆ ಒಂದು ಮೆಸೇಜ್ ಟಣ್ ಎನ್ನುವ ಸದ್ದಿನೊಂದಿಗೆ ಬಂದು ಬಿತ್ತು. ತಾನು ಎಂದಾದರೂ ಓದಿದ ಒಳ್ಳೆಯ ಸಾಲುಗಳನ್ನು ನನಗೆ ಕಳುಹಿಸಿಕೊಡುವ ಗೆಳೆಯ ನಿರೂಪ ಇಂದು ಯಾವುದೋ ಅರ್ಧ ಪುಟವೊಂದನ್ನು  ಕ್ಲಿಕ್ಕಿಸಿ ಕಳುಹಿಸಿದ್ದ. ತೆರೆದು ಓದತೊಡಗಿದೆ.‌

ʻಕವಿಯಾಗಾಗಲಿ, ಕಥೆಗಾರಿನಿಗಾಗಲಿ ಅವನಿಗೆ ಅವನೇ ಸೃಷ್ಟಿಸಿಕೊಂಡ ಒಂದು ಭ್ರಮಾಲೋಕ ಇರುತ್ತದೆ. ಅವನು ಅದರಿಂದ ಪಡೆದುಕೊಳ್ಳುತ್ತಾನೆ‌ ಮತ್ತು ಕೊಡುತ್ತಾ ಹೋಗುತ್ತಾನೆ. ಅವನು ನಿತ್ಯ ಅವನದೇ ಆ ಜಗತ್ತಿನೊಂದಿಗೆ ಮಾತಾನಾಡುತ್ತಾ ಹೋಗುತ್ತಾನೆ. ಆ ಮಾತುಗಳು ಅವನಲ್ಲಿ ಬಚ್ಚಿಟ್ಟು‌ಕೊಂಡಿರುವ ಭಾವಗಳೇ ಆಗಿರುತ್ತವೆ. ಅವು ಕವಿತೆಯಾಗಿ ಬರಬಹುದು, ಕಥೆಯಾಗಿ ಬರಬಹುದು, ಲೇಖನವಾಗಿ ಬರಬಹುದು… ಅವನಿಗೆ ಅದನ್ನು ಹೊರಹಾಕದೆ ವಿಧಿ‌ ಇಲ್ಲ. ಹೊರ ಹಾಕಿದರೆ ಅಷ್ಟೇ ಅವನಿಗೆ ಸಮಾಧಾನ…ʼ 

ಓದಿ ಮುಗಿಸಿದ ಮೇಲೆ ನಾನು ಆ ಹಿರಿಯ ಮಿತ್ರರ ಕಡೆ ನೋಡಿದೆ. ಅವರೂ ನನ್ನ ಕಡೆ ನೋಡಿದರು. ಅವರು ನನ್ನಲ್ಲಿ ಆ ಅನಾಮಿಕನನ್ನು ಹುಡುಕುತ್ತಿರುವಂತೆ ಭಾಸವಾಯಿತು. ನಾನೆಂದೋ ಆ ಅನಾಮಿಕ‌ನನ್ನು ಈ ಹಿರಿಯ ಮಿತ್ರನನ್ನು ಒಂದೇ ಸರಳರೇಖೆಯಲ್ಲಿ ನಿಲ್ಲಿಸಿದ್ದೆ.  ನನಗೀಗ ಇಡೀ ಜಗತ್ತು ಅದೇ ಸರಳರೇಖೆಯಲ್ಲಿ ನಿಂತಿದೆ ಎನಿಸತೊಡಗಿತ್ತು. ಎಲ್ಲರೂ ಆ ಸರಳರೇಖೆಯ ಮೇಲೆ ನಿಂತು ಅವರವರೇ ಸೃಷ್ಟಿಸಿಕೊಂಡ ಜಗತ್ತಿನೊಂದಿಗೆ ಮಾತಾಡುತ್ತಿದ್ದಾರೆ ಅನಿಸಿತು.‌ 

‍ಲೇಖಕರು avadhi

July 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: