ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸದಾಶಿವ್ ಸೊರಟೂರು ಕಥಾ ಅಂಕಣ- ಒಂದು ಕಾಫಿ, ಚೂರು ನಿದ್ದೆ..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

5

ಸಮಯ ನಡು ರಾತ್ರಿ ಬಳಿ ಇತ್ತು. ಕತ್ತಲೆಯಲ್ಲಿ ಬಸ್ಸು ನಿಲ್ದಾಣ ಬಚ್ಚಿಟ್ಟುಕೊಂಡಿತ್ತು. ಅಲ್ಲೆಲೊ ರಸ್ತೆಯ ಸೇರುವ ಜಾಗದಲ್ಲಿ ಒಂಟಿಯಾಗಿ ಎದ್ದು ನಿಂತ ಲೈಟ್ ಕಂಬದ ಸುತ್ತಾ ಬೆಳಕು ಧಾರಾಕಾರವಾಗಿ ಸುರಿಯುತ್ತಿತ್ತು. ಇಂತಹಾ ವಿಲಕ್ಷಣ ಹೊತ್ತಿನಲಿ ಕೊನೆಯ ಬಸ್ಸು ನನ್ನನ್ನು ಬಿಸಾಕಿ ಓಡಿ ಹೊಯಿತು.

ನಿಲ್ದಾಣದ ಒಂದು ಬದಿಯಲಿ ಯಾರೊ ಇಬ್ಬರು ಮಲಗಿದ್ದರು. ಅಲ್ಲೆಲೊ ಒಂದಿಬ್ಬರು ಯಾವುದೊ ಗಹನವಾದ ವಿಚಾರದಲ್ಲಿ ತೊಡಗಿದವರಂತೆ ಕಾಣುತ್ತಿದ್ದರು. ಉಳಿದಂತೆ ನಿರ್ಜನ. ನಿದ್ದೆ ಸುಖ ಅವರ ಗೊರಕೆಯಲ್ಲಿ ನಿಚ್ಚಳವಾಗಿತ್ತು. ಮನೆ ಬಿಟ್ಟು ಬಂದವನಿಗೆ ರಾತ್ರಿಗಳೆ ತಾಯಿ. ಸೋತ ಮೈಯನ್ನು ಕಲ್ಲು ಬೆಂಚಿನ ಮೇಲೆ ಚೆಲ್ಲಿ ಕೂತೆ. ಸಂದಿದ್ದು ಐದೇ ನಿಮಿಷ. ನನಗಾಗಿ‌ ಕಾದವನಂತೆ ಯಾರೊ ಒಬ್ಬ ಬಂದು ನನ್ನ ಮುಂದೆ ನಿಂತ. ನನ್ನಷ್ಟೆ ವಯಸ್ಸಿನ, ಸೋತತಂತೆ ಕಾಣುತ್ತಿದ್ದ, ಅಷ್ಟೇನು ನೀಟಾದ ಬಟ್ಟೆ ತೊಟ್ಟಿರದ ಅವನ ಮೇಲೆ ಯಾವುದೇ ಕುತೂಹಲ ಮೂಡಲಿಲ್ಲ.

‘ಒಂದು ನೂರು ರೂಪಾಯಿ ಇದ್ರೆ ಕೊಡಿ..’

ಸಾಲ ಕೊಟ್ಟವನಂತೆ ಕೇಳಿದ. ಸುಮ್ ಸುಮ್ನೆ ಸ್ವಾಮಿ ಅನ್ನಲಿಲ್ಲ. ಬಸ್ ಮಿಸ್ ಆಗಿದೆ ಊರು ಸೇರಬೇಕು ಅನ್ನಲಿಲ್ಲ.

ಯಾಕೆ..?  ಅಂದೆ.

‘..ಕುಡಿಬೇಕು. ಕುಡಿಯದೆ ರಾತ್ರಿ ಕಳೆಯೋದು ಕಷ್ಟ..’ ಅಂದ.

ಇಷ್ಟ ಆಯ್ತು ಅವನ ಮಾತು. ಎಷ್ಟೊಂದು ನೇರ ಇವನು ಅನಿಸಿ ಕಿಸೆಯಿಂದ ಇನ್ನೂರ ನೋಟು ತೆಗೆದುಕೊಟ್ಟೆ. ತಾಳಲಾರದೆ ಒಂದು ಮಾತು ಕೇಳಿದೆ.

‘ಏನ್ ಮಾಡ್ತಿ ಕೆಲಸ? ಮನೆ- ಮಠ? ಹೆಂಡತಿ-ಮಕ್ಕಳು?’ ಕೇಳಿದೆ.

ನಕ್ಕ.. ‘ಬದುಕು ತಪ್ಪಿದೆ. ನಿದ್ದೆಯೂ ತಪ್ಪಬಾರದಲ್ಲ!’ ಅಂದು ಮುಂದುವರೆದ.

‘ಜಗತ್ತು ನೆನಪುಗಳನ್ನು ಕೊಳ್ಳುವಂತಿದ್ರೆ ನಾನೀಗ ಶ್ರೀಮಂತನಾಗಿರುತ್ತಿದ್ದೆ. ಹಗಲು ಮೂಟೆ ಹೊರ್ತೀನಿ.‌ ಅದು ರೂಂ ಬಾಡಿಗೆ ಊಟಕ್ಕೆ ವಜಾ ಮಾಡಿಕೊಳ್ತಾರೆ. ಚೂರು ಬಿಡುವು ಸಿಕ್ಕರೆ ಪೇಪರ್ ಪೆನ್ ಹಿಡಿದು ಕೂರ್ತೀನಿ. ಚುಚ್ಚುವ ನೆನಪಿಗೆ ಪದಗಳಾದರೂ ಮುಲಾಮು ಆಗಬಹುದಾ ನೋಡ್ತೀನಿ. ಕುಡಿಯದೆ ಇದ್ರೆ ರಾತ್ರಿ ಪೂರ್ತಿ ಬರೆಯುತ್ತಾ ಕೂತುಬಿಡ್ತೀನಿ…’

ಯಾಕೊ ನನ್ನ ಮುಖವನ್ನು ನಾನೇ ನೋಡಿಕೊಂಡಂತಾಯ್ತು..

‘ಕುಡಿದು ಚಿತ್ತಾಗಿ ರಸ್ತೆಯಲಿ ಬೀಳದೆ ರೂಂ ಗೆ ಹೋಗಿ ಮಲಗಿ..’ ಅಂದೆ.

‘ಒಂದೊಳ್ಳೆ ಊಟ ಮಾಡುವೆ. ಇನ್ನೊಂದು ನೂರು ಕೊಟ್ಟರೆ’ ಅಂದ.

ತೆಗೆದುಕೊಟ್ಟೆ.. ಮನೆಯಿಂದ ಹೊರಡುವಾಗ ಕಿಸೆಯಲ್ಲಿ‌ ಐನೂರು ಇಟ್ಟುಕೊಂಡಿದ್ದಷ್ಟೆ.

ಅವನು ಅಲ್ಲೇ ನಿಂತಿದ್ದ. ನಾನು ಮತ್ತೆ ಮಾತಾಡಲಿಲ್ಲ.‌

ಎಷ್ಟೊ ಹೊತ್ತು ನಿಂತಿದ್ದವನು ಇದ್ದಕ್ಕಿದ್ದಂತೆ ಅಷ್ಟೂ ಹಣವನ್ನೂ ನನ್ನ ಕೈಯಲ್ಲಿಟ್ಟು

‘ಸರ್ ಚಳಿ ಇದೆ ಒಂದು ಕಾಫಿ ಕುಡಿಬೇಕು ಹತ್ತು ರೂಪಾಯಿ ಕೊಡಿ ಸಾಕು’ ಅಂದ.

ಆಶ್ಚರ್ಯದಿಂದ ನೋಡಿದೆ.

‘ಬದುಕು ತಪ್ಪಲಿ ರಾತ್ರಿಯೂ ತಪ್ಪಲಿ ನೆನಪು ತಪ್ಪಬಾರದು..’ ಅಂದು ಹತ್ತು ರೂಪಾಯಿ ಪಡೆದು ನಡೆದ.

ನೆನಪುಗಳನ್ನು ಬೆಚ್ಚಗಿಡುವ ರಾತ್ರಿ ಚಳಿಗೆ ನಡುಗುತ್ತಿತ್ತು.

ನಾ ಏನಕ್ಕೆ ಮನೆಬಿಟ್ಟು ಬಂದೆ?

ಅವನೇಕೆ ಹಗಲು ರಾತ್ರಿಗಳನು ಸುಡುತ್ತಾನೆ?

ಈ ಎರಡರಲ್ಲೂ ಯಾವುದೊ ತಂತುವೊಂದು ಸಿಕ್ಕಿ ಹಾಕಿಕೊಂಡಿದೆ ಅನಿಸಿತು.

ಅವನಿಗೊಂದು ಕಾಫಿ

ನನಗೆ ಕಣ್ಣಿಗೆ ಚೂರು ನಿದ್ದೆ

ನಡುರಾತ್ರಿಯಲ್ಲಿ ಈ ಊರಲ್ಲಿ ಎಲ್ಲಿ ಸಿಕ್ಕೀತು..!?

‍ಲೇಖಕರು Admin

27 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading