ಜಿ ಎನ್ ನಾಗರಾಜ್ ಅಂಕಣ- ಭಿನ್ನತೆ, ಅಸಮಾನತೆಗಳ ಉದ್ಭವ..

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

22

ಗಣಪತಿಗೆ ಮೂಷಿಕ ವಾಹನವಾಗಿದ್ದು ಮನುಷ್ಯರನ್ನು ಗುಲಾಮರನ್ನಾಗಿಸಿದ ಆರಂಭದ ಸೂಚಕ. ಭಾರತದ ದಾಸ,ದಾಸಿ ಪದ್ಧತಿ, ಜೀತಗಾರಿಕೆ ಜಾತಿ ವ್ಯವಸ್ಥೆ, ರೋಮನ್ ಸಾಮ್ರಾಜ್ಯದ ಗುಲಾಮಗಿರಿ ವ್ಯವಸ್ಥೆ ಅದರ ಉತ್ತುಂಗ. ಇವೆರಡರ ನಡುವೆ ಹಲವು ಹಂತಗಳ ಮೂಲಕ ಗುಲಾಮಗಿರಿ, ದಾಸ್ಯತ್ವ ಒಂದು ವ್ಯವಸ್ಥೆಯಾಯಿತು. ಪರ ಬುಡಕಟ್ಟುಗಳ ಜನರನ್ನು  ಗುಲಾಮರಾಗಿ  ದುಡಿಸುವಂತೆ ತಮ್ಮದೇ ಬುಡಕಟ್ಟಿನ ಜನರನ್ನೂ ಗುಲಾಮರಂತೆ ದುಡಿಸುವ ಮನಸ್ಥಿತಿ ಬೆಳೆಯಿತು. ಅದೇ ರೀತಿ ಬೇರೆ ಬುಡಕಟ್ಟುಗಳ ಹೆಣ್ಣುಗಳು ದಾಸಿಯರಾಗಬಹುದಾದರೆ ತಮ್ಮದೇ ಬುಡಕಟ್ಟುಗಳ ಹೆಣ್ಣುಗಳನ್ನೂ ದಾಸಿಯರನ್ನಾಗಿ ಕಾಣುವುದು ಆರಂಭವಾಯಿತು. ಈ ಪ್ರಕ್ರಿಯೆಗಳ ನಡುವೆ ವಿವಾಹ ಪದ್ಧತಿ ಅಸ್ತಿತ್ವಕ್ಕೆ ಬಂತು. ಅದರೊಡನೆ ಗಂಡನ ಮನೆಗೆ ಹೆಣ್ಣು ಹೋಗುವ ಪರಕೀಯತೆ, ಅದರ ಜೊತೆಗೆ ದಾಸೀ ಭಾವ ಹೆಣೆದುಕೊಂಡಿತು.

ಅಮ್ಮಗಳ ನಾಯಕತ್ವದ ಬುಡಕಟ್ಟುಗಳಲ್ಲಿನ ಸರಿ ಸುಮಾರು ಸಮಾನತೆಯ ಬದುಕಿನಿಂದ ಗುಲಾಮಗಿರಿ ವ್ಯವಸ್ಥೆಯವರೆಗೆ ಸಮಾಜ ಸಾಗಿದ ಸಂಕ್ರಮಣ ಕಾಲ ಮಾನವರ ಇತಿಹಾಸದ ಬಹು ಮುಖ್ಯ, ಬಹು ದೀರ್ಘ, ಕ್ಲಿಷ್ಟಕರ ಸಂಕ್ರಮಣ ಕಾಲಘಟ್ಟ. ಬರಹ ಪೂರ್ವದ ಅವುಗಳ ಸ್ಪಷ್ಟ ಚಿತ್ರಣ ದೊರೆಯುವುದು ಕಷ್ಟಕರ.  ಆದರೂ ಕೂಡಾ ಮಾನವ ಸಮಾಜದ ಆಚರಣೆಗಳಲ್ಲಿ, ಜಾತಿ ಪದ್ದತಿಯಂತಹ ವ್ಯವಸ್ಥೆಗಳಲ್ಲಿ ಅಂದಿನ ಜೀವನದ ಪಳೆಯುಳಿಕೆಗಳು ಇಂದೂ ಕಾಣುತ್ತವೆ. ಆದರೆ ವಿಶ್ವದ ವಿವಿಧ ಭಾಗಗಳಲ್ಲಿ ಅವುಗಳ ಅಧ್ಯಯನಕ್ಕೆ ಬೇಕಾದ ವಿಶೇಷ ಶ್ರಮ, ಸಂಪನ್ಮೂಲಗಳ ಹೂಡಿಕೆ ಮಾಡಲಾಗುತ್ತಿಲ್ಲ, ಅವಶ್ಯ ಪರಿಣತಿಯನ್ನು  ಬೆಳೆಸಲಾಗುತ್ತಿಲ್ಲ. ಇಲ್ಲಿಯವರೆಗಿನ ಶೋಧಗಳು,ಅಧ್ಯಯನಗಳಿಂದ ಕಾಣಬಹುದಾದ  ಅದರ ವಿವಿಧ ಹಂತಗಳನ್ನು ಈ ಕೆಳಗೆ ನಿರೂಪಿಸಲಾಗಿದೆ. ಈ ಹಿಂದೆ ವಿಶ್ವದ ಮಾನವ ಸಮುದಾಯದ ಒಟ್ಟಾರೆ ಪ್ರಕ್ರಿಯೆಯಾಗಿ ಚಿತ್ರಿಸಿದ ಕೆಲವು ಅಂಶಗಳ ಪುನರಾವರ್ತನೆಯಂತೆ ಕಾಣಬಹುದು. ಆದರೆ ಸಾಮಾಜಿಕ ಅಸಮಾನತೆಯ ಹುಟ್ಟು ಮತ್ತು ಅವು ಗುಲಾಮಗಿರಿ,ದಾಸ್ಯತ್ವದ ವ್ಯವಸ್ಥೆಗೆ ಅಡಿಪಾಯ ಹಾಕಿದ ದೃಷ್ಟಿಯಿಂದ ಅವುಗಳ ಸಂಕ್ಷಿಪ್ತ ಮರು ನಿರೂಪಣೆ ಮಾಡಲಾಗಿದೆ. ನೆನಪಿಸಿಕೊಳ್ಳಲಾಗಿದೆ.

* ಅಮ್ಮಂದಿರ ನಾಯಕತ್ವದಲ್ಲಿ ಮಾನವರ ಸಮುದಾಯದ ಮುಖ್ಯ ಗಮನ ಬದುಕು. ಬುಡಕಟ್ಟಿನ ಜನರ ಬದುಕು. ಅದರ ಮುಖ್ಯ ಸಮಸ್ಯೆಯಾಗಿದ್ದ ಹಸಿವನ್ನು ನೀಗಿಸಿಕೊಳ್ಳುವ ತುಡಿತ.

* ಅಮ್ಮಂದಿರದು ಸಹಜ ನಾಯಕತ್ವ. ಮಕ್ಕಳನ್ನು ಬೆಳೆಸಿದ ಹಾಗೆ ತನ್ನ ಮಕ್ಕಳು, ಮೊಮ್ಮಕ್ಕಳುಗಳೇ ಇರುವ ಗುಂಪಿನ ಬದುಕಿಗೆ ಗಮನ ನೀಡುವುದು.

* ಆಹಾರದ ಕೊರತೆಯಿಂದಾಗಿ ಒಬ್ಬಳೆ ತಾಯಿಯ ಮೂಲದ ಗುಂಪುಗಳು ಅಮ್ಮನ ಸೋದರಿಯರ ಅಥವಾ ಮಗಳ ನಾಯಕತ್ವದಲ್ಲಿ ಒಡೆದು ಸಣ್ಣ ಸಣ್ಣ ಗುಂಪುಗಳಾಗುತ್ತಿದ್ದವು. ಈಗಲೂ ಅಮ್ಮ ದೇವತೆಗಳಲ್ಲಿ ಅಕ್ಕ, ತಂಗಿಯರು, ಏಳು ಜನ ಅಕ್ಕ ತಂಗಿಯರು ಒಟ್ಟಾಗಿ ಬಂದು ಬೇರೆ ಬೇರೆಯಾಗಿ ನೆಲೆ ನಿಂತದ್ದು  ಎಂಬ ಜಾನಪದ ಪುರಾಣಗಳಿರುವುದನ್ನು ಗಮನಿಸಬಹುದು.

*  ಉತ್ತಮ ಶಿಲಾಯುಧ,ಬಿಲ್ಲುಗಳನ್ನು ಕಂಡುಕೊಂಡ ಮೇಲೆ ದೊಡ್ಡ ಪ್ರಾಣಿಗಳನ್ನು ಬೇಟೆಯಾಡಲು ದೊಡ್ಡ ಗುಂಪುಗಳು ಬೇಕಾಯಿತು.   ಈ ಬೇಟೆಯಿಂದ ಆಹಾರದ ಕೊರತೆ ಸ್ವಲ್ಪ ಮಟ್ಟಿಗೆ ಪರಿಹಾರವಾದಾಗ ಜನಸಂಖ್ಯೆ ಮತ್ತಷ್ಟು ಬೆಳೆಯಿತು. ಈ ರೀತಿಯ ಬೇಟೆಯ ಸಂದರ್ಭದಲ್ಲಿ  ಬುಡಕಟ್ಟುಗಳ ಜೀವನ ವಿಧಾನದಲ್ಲಿ ವ್ಯತ್ಯಾಸಗಳುಂಟಾದವು. ಆನೆಗಳ ಜೀವನ ವಿಧಾನದ ಬಗ್ಗೆ ಹೆಚ್ಚು ಅರಿವು ಪಡೆದು ಆನೆ ಬೇಟೆಯಲ್ಲಿ ಪರಿಣತರಾದವರು ಎಂಬಂತೆ, ಎಮ್ಮೆ ಕೋಣಗಳ ಬೇಟೆಯಲ್ಲಿ ಪರಿಣತರು ಕರಡಿಗಳು, ತಿಮಿಂಗಿಲಗಳು, ಹಂದಿ,ಜಿಂಕೆ, ಆಡು,ಕುರಿಗಳು ಹೀಗೆ ವಿವಿಧ ಪ್ರಾಣಿಗಳ ಬೇಟೆಗಳಲ್ಲಿ ವಿಶೇಷ ಪರಿಣತಿ  ಪಡೆದವರು ಎಂಬ ವ್ಯತ್ಯಾಸ ಕಾಣಿಸಿತು. ಒಂದು ಪ್ರದೇಶದಲ್ಲಿ ವಿವಿಧ ರೀತಿಯ ಪ್ರಾಣಿಗಳು ಜೀವಿಸುತ್ತಿದ್ದವು. ಆದ್ದರಿಂದ ಒಂದು ಪ್ರಾಣಿಯ ಬೇಟೆಯಲ್ಲಿ ಪರಿಣತರಾದವರು ಮತ್ತೊಂದು ಪ್ರಾಣಿಯ ಬೇಟೆಯನ್ನು ಮಾಡಲಾರರೆಂದಲ್ಲ. ಆದರೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದೊಡ್ಡ ಪ್ರಾಣಿಗಳು ಪ್ರಧಾನವಾಗಿರುತ್ತಿದ್ದವು ಅಥವಾ ದೊಡ್ಡ ಸಂಖ್ಯೆಯಲ್ಲಿರುತ್ತಿದ್ದವು ಎಂಬ ಕಾರಣಕ್ಕೆ ಅಲ್ಲಿಯ ಜನರ ಪರಿಣತಿ ಮಾತ್ರವಲ್ಲ ಜೀವನ ಪದ್ಧತಿಗಳೂ ಪ್ರಾಣಿಗಳ ಜೀವನ ಪದ್ಧತಿಗಳಿಗನುಗುಣವಾಗಿ ಬದಲಾದವು. ಉದಾಹರಣೆಗೆ ಅಮೇರಿಕದ ಮೂಲ ನಿವಾಸಿ ರೆಡ್ ಇಂಡಿಯನ್ ಬುಡಕಟ್ಟುಗಳ ಜೀವನದ ಬಗ್ಗೆ ನೀಡಿದ ವಿವರಗಳು.  ಇವೇ ಮುಂದೆ ಟೋಟೆಂ ಪದ್ಧತಿ, ಆಯಾ ಪ್ರಾಣಿಗಳ ಆರಾಧನೆ ಮಾಡುವ ಸಮುದಾಯಗಳು ಎಂಬ ವ್ಯತ್ಯಾಸಕ್ಕೆ ಕಾರಣವಾಯಿತು. ಇಂದಿಗೂ ಆನೆ,ಹಂದಿ,ಆಡು, ಟಗರು ಇತ್ಯಾದಿಗಳನ್ನು ದೇವರಾಗಿ ಪೂಜಿಸುವ ಪದ್ಧತಿ ಉಳಿದು ಬಂದಿರುವುದರ ಬಗ್ಗೆ ಹಿಂದಿನ ಲೇಖನಗಳಲ್ಲಿ ಬರೆಯಲಾಗಿದೆ.  ಈ ಪರಿಣತಿಯೇ ಈ ಕೆಲವು ಪ್ರಾಣಿಗಳನ್ನು ಆಯಾ ಬುಡಕಟ್ಟುಗಳು ಪಳಗಿಸುವುದಕ್ಕೆ, ಸಾಕಣೆ ಆರಂಭಿಸುವುದಕ್ಕೂ ಪ್ರಯೋಜನಕಾರಿಯಾಗಿದೆ.  ಮೀನುಗಾರಿಕೆಯಂತೂ ಇಂದಿಗೂ ವಿಶೇಷ ಕೌಶಲ್ಯವಾಗಿ ಜಗತ್ತಿನಾದ್ಯಂತ ಅತ್ಯಂತ ಪ್ರಾಚೀನ ಸಮುದಾಯಗಳ ಮುಂದುವರಿಕೆಗೆ ಕಾರಣವಾಗಿದೆ. ಭಾರತದಲ್ಲಿ ಕಡಲುಗಳ ಮೀನು ಹಿಡಿವ ಮೊಗವೀರರು, ನದಿಗಳಲ್ಲಿ ಮೀನು ಹಿಡಿವ ಬೆಸ್ತರು ಎಂಬ ಸಮುದಾಯಗಳು ಜಾತಿಗಳಾಗಿ ಇನ್ನೂ ಉಳಿದಿವೆ.

* ಮಾನವರ ಹುಟ್ಟಿಗೆ ಹೆಣ್ಣಿನ ಜೊತೆಗೆ ಗಂಡೂ ಬೇಕು, ರಕ್ತ ಸಂಬಂಧಿಗಳ ನಡುವಣ ಲೈಂಗಿಕ ಸಂಬಂಧಗಳು  ಹುಟ್ಟಿದ ಮಕ್ಕಳು ಬೇಗ ಸಾಯುವಂತೆ ಮತ್ತು ದುರ್ಬಲರಾಗುವಂತೆ ಮಾಡುತ್ತವೆ ಎಂದು ಕಂಡುಕೊಂಡ ಅಮ್ಮಂದಿರು ಬೇರೆ ತಾಯಂದಿರ ಮಕ್ಜಳೊಡನೆ ಲೈಂಗಿಕ ಸಂಬಂಧಗಳನ್ನು ಬೆಳೆಸುವ ಅಗತ್ಯದಿಂದಾಗಿ ಬೆಡಗುಗಳ ಪದ್ಧತಿಯನ್ನು ರೂಪಿಸಿಕೊಂಡರು. ತಮ್ಮೊಳಗೆ ಲೈಂಗಿಕ ನಿಷೇಧಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರು. ಬೇರೆ ಬೇರೆ ಬೆಡಗುಗಳು ಸೇರಿದ ಬುಡಕಟ್ಟುಗಳಾಗಿ ರೂಪಿತವಾದರು. ಈ ಸಂದರ್ಭದಲ್ಲಿಯೇ ಬೆಡಗುಗಳನ್ನು ಗುರುತು ಹಿಡಿಯಲು ಸಸ್ಯ,ಪ್ರಾಣಿ ಗುರುತುಗಳ ಟೋಟೆಂ ನಂಬಿಕೆ ಮತ್ತು ಆಚರಣೆಗಳು ಅಸ್ತಿತ್ವಕ್ಕೆ ಬಂದವು. ಬೆಡಗು ಮಾನವರ ಗುಂಪು ಮಾನವ ಸಮಾಜವಾಗಿ ರೂಪುಗೊಳ್ಳಲು ಮೊದಲ ಹೆಜ್ಜೆ, ಮೊದಲ ಅಡಿಪಾಯ.
* ಯಾವ ಮಾನವ ಗುಂಪುಗಳು ಮೊದಲು ಬೆಡಗು ಪದ್ಧತಿಯನ್ನು ರೂಪಿಸಿಕೊಂಡರೋ, ಬೇರೆಯವರಿಂದ ಕಲಿತು ಬೇಗನೇ ಈ ಪದ್ಧತಿಯನ್ನು ಅಳವಡಿಸಿಕೊಂಡರೋ ಅವರು ಉಳಿದವರಿಗಿಂತ ದೈಹಿಕವಾಗಿ ಬಲಿಷ್ಡರಾದರು, ಬುದ್ಧಿವಂತರಾದರು. ಬೆಡಗು ಪದ್ಧತಿ ಮತ್ತು ದೊಡ್ಡ ಪ್ರಾಣಿಗಳ ಬೇಟೆಯಿಂದಾಗಿ ಸಿಕ್ಕ ಆಹಾರದಿಂದಾಗಿ ಅವರ ಎತ್ತರವೂ ಹೆಚ್ಚಿತು. ಇವೆಲ್ಲ  ಮಾನವ ಬುಡಕಟ್ಟುಗಳ ನಡುವೆ ಗಣನೀಯ ವ್ಯತ್ಯಾಸಗಳಿಗೆ ಕಾರಣವಾಯಿತು. ಇದರ ಜೊತೆಗೆ ದೊಡ್ಡ ಪ್ರಾಣಿಗಳ  ಬೇಟೆಗಳ ಲಭ್ಯತೆ ಹೆಚ್ಚಿರುವ ಪ್ರದೇಶಗಳಲ್ಲಿ ಅವುಗಳ ಬೇಟೆಗೆ ಅಗತ್ಯಕ್ಕೆ ಅನುಗುಣವಾಗಿ ಎರಡು ಮೂರು ಬೆಡಗುಗಳ ಸಣ್ಣ ಬುಡಕಟ್ಟುಗಳಿಗಿಂತ ಹೆಚ್ಚು ಬೆಡಗುಗಳನ್ನುಳ್ಳ ದೊಡ್ಡ ಬಡುಕಟ್ಟುಗಳು ರೂಪುಗೊಂಡವು. ಇದೂ ಕೂಡಾ ಬುಡಕಟ್ಟುಗಳ  ನಡುವೆ ಬಲದ ವ್ಯತ್ಯಾಸವನ್ನು ಮತ್ತಷ್ಟು ಹೆಚ್ಚಿಸಿತು. ಒಂದೇ ಬುಡಕಟ್ಟು ನಾಲ್ಕಾರು ಬೇರೆ ಬೇರೆ ಅಮ್ಮಗಳನ್ನು ಒಟ್ಟಿಗೇ ಪೂಜಿಸುವ ಪದ್ಧತಿಯಲ್ಲಿ ಈ ಸೂಚನೆಗಳಿವೆ. ಅವುಗಳಲ್ಲಿ ಹೆಚ್ಚು ಜನ ಪೂಜಿಸುವ ಅಮ್ಮ ಇಡೀ ಬುಡಕಟ್ಟಿನ ದೇವತೆಯಾಗಿ ಬುಡಕಟ್ಟಿನ ಒಗ್ಗಟ್ಟನ್ನು ಕಾಯ್ದುಕೊಳ್ಳುವ ದೇವತೆಯಾಯಿತು.

* ಇಂತಹ ಬುಡಕಟ್ಟುಗಳ ಒಳಗೆ ಹೆಣ್ಣು ಗಂಡು ಇಬ್ಬರೂ ಆಹಾರ ಪಡೆಯಲು ದುಡಿಯುತ್ತಿದ್ದರು. ಆಯಾ ಪ್ರದೇಶದ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಹಲವೊಮ್ಮೆ ಮಹಿಳೆಯರು ಸಂಗ್ರಹಿಸುವ, ಬೇಟೆಯಾಡುವ ಸಣ್ಣ ಪ್ರಾಣಿಗಳ ಆಹಾರವೇ ಗಂಡಸರ ಬೇಟೆಯಿಂದ ದೊರಕುವ ಆಹಾರಕ್ಕಿಂತ ಹೆಚ್ಚಿರುತ್ತಿತ್ತು. ಬುಡಕಟ್ಟಿನ ಬದುಕಿನ ಬಗ್ಗೆ, ಬೇರೆ ಕಾಡುಗಳಿಗೆ, ಬೇರೆ ಪ್ರದೇಶಗಳಿಗೆ ವಲಸೆ ಹೋಗುವುದು ಮೊದಲಾದ ಪ್ರಶ್ನೆಗಳ ಬಗ್ಗೆ ತೀರ್ಮಾನಗಳನ್ನು ಹೆಣ್ಣು ಗಂಡು ಬೇಧವಿಲ್ಲದೆ ಒಟ್ಟಾಗಿ ಚರ್ಚಿಸಿ ಕೈಗೊಳ್ಳುವ ಪದ್ಧತಿ ಬೆಳೆಯಿತು. ಅದಕ್ಕಾಗಿ ಎಲ್ಲ ಬೆಡಗಿನ ಎಲ್ಲ ಸದಸ್ಯರೂ ಒಟ್ಟಾಗಿ ಸೇರಿ ಚರ್ಚಿಸುತ್ತಿದ್ದರು.ಬೆಡಗುಗಳ ಮುಖ್ಯಸ್ಥರಾದ ತಾಯಂದಿರು ಚರ್ಚೆಯ ನೇತೃತ್ವ ವಹಿಸುತ್ತಿದ್ದರು. ಪರಸ್ಪರ ಸಮಾಲೋಚನೆ ಮಾಡಿಕೊಳ್ಳುತ್ತಿದ್ದರಯು ಈ ರೀತಿ ತೀರ್ಮಾನ ಕೈಗೊಳ್ಳುವ ಪದ್ಧತಿಗೆ ಅನುಗುಣವಾಗಿ ಬಿಗಿಯಾದ ಕಟ್ಟಲೆಗಳು ರೂಢಿಗೆ ಬಂದವು. ಬುಡಕಟ್ಟುಗಳ ಸದಸ್ಯರಿಗೆ ಶಿಕ್ಷೆ ನೀಡುವ, ಹೊಸ ಕಟ್ಟಲೆಗಳನ್ನು ರೂಪಿಸುವ, ಹೊಸ‌ ಸದಸ್ಯರನ್ನು ಸೇರಿಸಿಕೊಳ್ಳುವ ವಿಷಯಗಳಲ್ಲಿ ಇಂತಹ ಕಟ್ಟಲೆಗಳು ಬುಡಕಟ್ಟುಗಳಲ್ಲಿ ಇಂದೂ ಜಾರಿಯಲ್ಲಿವೆ. ಜಾತಿ, ಉಪಜಾತಿಗಳಲ್ಲಿಯೂ ಕಾಣಬರುತ್ತವೆ.

* ಜನಸಂಖ್ಯೆಯ ಹೆಚ್ಚಳ, ಆಹಾರಕ್ಕಾಗಿ ಸ್ಫರ್ಧೆ ಉಂಟಾಗುವ ಸನ್ನಿವೇಶಗಳಲ್ಲಿ  ಭೌಗೋಳಿಕ ಸಂಪನ್ಮೂಲಗಳಲ್ಲಿನ ವ್ಯತ್ಯಾಸಗಳು ಇಲ್ಲಿಯವರೆಗೆ ಕಾಣದಿದ್ದ ಕೆಲವು ಭಾವನೆಗಳನ್ನು ರೂಪಿಸಿತು.  ಈ ಕಾಡಿನಲ್ಲಿ ಬೇಟೆ ಮಾಡುವ ಹಕ್ಕು  ನಮ್ಮದು, ಬೇರೆ ಬುಡಕಟ್ಟುಗಳಿಗೆ ಪ್ರವೇಶವಿಲ್ಲ ಎಂಬ ಆಸ್ತಿ ಭಾವನೆ ಮೂಡಿತು. ಆದರೆ  ಅದು ಇಡೀ ಒಂದು ಬುಡಕಟ್ಟು ಸಮುದಾಯದ ಆಸ್ತಿಯಾಗಿಯೇ ಕಾಣಲಾಗುತ್ತಿತ್ತು.

ಕೃಷಿ, ಪಶು ಪಾಲನೆಗಳಿಂದ ಉಂಟಾದ ಅಸಮಾನತೆಗಳು :

ಪಶು ಸಂಗೋಪನೆ ಮತ್ತು ಕೃಷಿಗಳನ್ನು ಕಂಡುಕೊಂಡಾಗ ಬುಡಕಟ್ಟುಗಳ ನಡುವಣ ಅಸಮಾನತೆ ಮತ್ತು ಸ್ಫರ್ಧೆ ಮತ್ತಷ್ಟು ಹೆಚ್ಚಿತು. ಏಕೆಂದರೆ ಎಲ್ಲ ಬುಡಕಟ್ಟುಗಳೂ ಒಂದೇ ಬಾರಿಗೆ ಬೆಳೆಗಳನ್ನು ಬೆಳೆಸುವುದು ಮತ್ತು ಪಶುಗಳನ್ನು ಪಳಗಿಸುವುದನ್ನು ಕಂಡುಕೊಳ್ಳುವುದು ಸಾಧ್ಯವಿರಲಿಲ್ಲ. ಭೌಗೋಳಿಕ ಭಿನ್ನತೆಗಳು ಅದಕ್ಕೆ ಅವಕಾಶವನ್ನೂ ಕೊಡುತ್ತಿರಲಿಲ್ಲ. ಹೀಗಾಗಿ ಇವುಗಳನ್ನು ರೂಢಿಸಿಕೊಂಡವರು ಮತ್ತು ಬೇಟೆಯಿಂದಲೇ ಜೀವಿಸುವವರು ಎಂಬುದು ಮಾನವ ಸಮಾಜದಲ್ಲಿ ಬಹು ಮುಖ್ಯ ವ್ಯತ್ಯಾಸವಾಯಿತು. ‌ಬಯಲು ಪ್ರದೇಶ, ಅದರಲ್ಲೂ ನದೀ ಬಯಲು, ಮಳೆ ಖಾತರಿಯ ಪ್ರದೇಶಗಳು ಕೃಷಿ , ಪಶುಪಾಲನೆ ಆಧಾರಿತ ಬುಡಕಟ್ಟುಗಳಿಗೆ ಅವಕಾಶ ಮಾಡಿಕೊಟ್ಟರೆ ಬೆಟ್ಟ ಗುಡ್ಡಗಳು ಬೇಟೆ ಆಧಾರಿತ ಬುಡಕಟ್ಟುಗಳಿಗೆ ಕಾರಣವಾದವು.   ಇದು ಹತ್ತೊಂಬತ್ತನೆಯ ಶತಮಾನದವರೆಗೆ  ಹತ್ತಾರು ಸಾವಿರ ವರ್ಷಗಳುದ್ದಕ್ಕೂ ಮಾನವ ಸಮುದಾಯದಲ್ಲಿ ಹಲವು ಸಂಘರ್ಷಗಳಿಗೆ ಕಾರಣವಾಗಿದೆ. ಕೃಷಿ ಮಾಡುತ್ತಿದ್ದ ಸಮುದಾಯಗಳು ಸುತ್ತ ಇದ್ದ ಕಾಡುಗಳನ್ನು ಕಡಿದು ಬೇಸಾಯ ಮಾಡಲು ತೊಡಗಿದಾಗ ಬೇಟೆಗಾರ ಬುಡಕಟ್ಟುಗಳ ಮೇಲೆ ಆಕ್ರಮಣ ಅಥವಾ ಬೇಟೆಗಾರ ಬುಡಕಟ್ಟುಗಳಿಗೆ ಕಾಡುಗಳಲ್ಲಿ ಆಹಾರದ ಕೊರತೆಯಾದಾಗ ಕೃಷಿಕರ ಧಾನ್ಯದ ಕಣಜಗಳ ಮೇಲೆ‌ ಆಕ್ರಮಣ ಇವು ಸಾಮಾನ್ಯವಾಗಿದ್ಸವು. ನಮ್ಮ ಪುರಾಣಗಳು, ರಾಮಾಯಣ, ಮಹಾಭಾರತಗಳಲ್ಲಿನ ಹಲವು ಕತೆಗಳು ಇದಕ್ಕೆ ಉದಾಹರಣೆ. ಅಷ್ಟೇ ಅಲ್ಲದೆ ರೋಂ ಸಾಮ್ರಾಜ್ಯದ ಕುಸಿತದಂತಹ ಬಹು ದೊಡ್ಡ ಘಟನೆಗೆ ಅದರ ಸುತ್ತಲಿನ  ಬೇಟೆಗಾರ ಜರ್ಮಾನಿಕ್,ಸ್ಲಾವಿಕ್  ಬುಡಕಟ್ಟುಗಳು ಒಗ್ಗಟ್ಟಾಗಿ ಮೇಲೆ ಬಿದ್ದು ಮಾಡಿದ್ದೂ ಒಂದು ಮುಖ್ಯ ಕಾರಣವಾಗಿದೆ. ಇಂದಿಗೂ ಭಾರತದಲ್ಲಿ ಹಲವು ಬುಡಕಟ್ಟುಗಳು ಪ್ರಧಾನವಾಗಿ ಬೇಟೆಯನ್ನು ಅವಲಂಬಿಸಿ ಪ್ರತ್ಯೇಕವಾಗಿ ಜೀವಿಸುವುದನ್ನು, ತಡವಾಗಿ ಬೇಟೆಯನ್ನು ಬಿಟ್ಟು ಬೇಸಾಯವನ್ನು ಅವಲಂಬಿಸಿದವರು ಬೇಡರೆಂದೇ ಗುರುತಿಸಲ್ಪಡುವುದನ್ನೂ ಕಾಣುತ್ತೇವೆ.

ಆದರೆ ಇದರ ಜೊತೆಗೆ ಮತ್ತೊಂದು ದೊಡ್ಡ ಕಂದರವನ್ನು ಕೃಷಿ , ಪಶುಪಾಲನೆಗಳ ಬದುಕು ಸೃಷ್ಟಿಸಿದ್ದನ್ನು ಗುರುತಿಸಬೇಕು. ಕೃಷಿಯೇ ಪ್ರಧಾನವಾದ ಸಮುದಾಯ, ಪಶುಪಾಲನೆಯೇ ಪ್ರಧಾನವಾದ ಸಮುದಾಯ ಎಂಬ ವ್ಯತ್ಯಾಸ ವೇ ಈ ಕಂದರ. ಇದೂ ಕೂಡ ಭಾರತ, ಮೆಸೆಪೊಟೋಮಿಯಾ ಯುರೋಪುಗಳೂ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಮಾನವರ ಇತಿಹಾಸದ ಮುಖ್ಯ ಸಂಘರ್ಷಗಳಿಗೆ, ಬದಲಾವಣೆಗಳಿಗೆ ಕಾರಣವಾಗಿದೆ.  ಆರ್ಯ -ಆರ್ಯೇತರ , ಆರ್ಯ- ದ್ರಾವಿಡ, ಉತ್ತರ- ದಕ್ಷಿಣ ಸಂಘರ್ಷವಾಗಿ ಮೂರು- ನಾಲ್ಕು ಸಾವಿರ ವರ್ಷಗಳ ಕಾಲ ಭಾರತವನ್ನು ಕಾಡಿದೆ. ಇನ್ನೂ ಕಾಡುತ್ತಿದೆ. ಇಂತಹುದೇ  ಸಂಘರ್ಷವನ್ನು  ವಿಶ್ವದ ಬೇರೆ ಭಾಗಗಳನ್ನೂ ಹಲವು ಕಾಲ ಕಾಡಿದೆ.

ಈ ಎರಡು ಮುಖ್ಯ ವ್ಯತ್ಯಾಸಗಳಲ್ಲದೆ ಅಸಂಖ್ಯ ವ್ಯತ್ಯಾಸ, ಭಿನ್ನತೆಗಳಿಗೆ ಹಲವು ಪ್ರಕ್ರಿಯೆಗಳಿಗೆ ಕೃಷಿ,ಪಶುಸಂಗೋಪನೆಗಳು ಎಡೆ ಮಾಡಿವೆ. ಜಗತ್ತಿನೆಲ್ಲೆಡೆ ಒಂದೇ ಬೆಳೆ ಬೆಳೆಯಲಾಗುವುದಿಲ್ಲ , ಎಲ್ಲ ಬೆಳೆಗಳನ್ನೂ ಬೆಳೆಯಲಾಗುವುದಿಲ್ಲ.  ಹಾಗೆಯೇ ಪ್ರಾಣಿ ಸಾಕಣೆಯ ವಿಷಯದಲ್ಲಿ ಕೂಡಾ.  ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ಬುಡಕಟ್ಟುಗಳು ಅಲ್ಲಿದ್ದ ಬೇರೆ ಬೇರೆ ಕಾಡು ಧಾನ್ಯಗಳ ಸಸ್ಯಗಳನ್ನು, ಕಾಡು  ಪ್ರಾಣಿಗಳನ್ನು ಪಳಗಿಸಿಕೊಂಡವು, ಅವುಗಳ ಬೆಳೆಯಲ್ಲಿ ಅಥವಾ ಸಾಕಣೆಯಲ್ಲಿ ಪರಿಣತರಾದವು. ಈ ಅಂಶವಂತೂ ಭಾರತದಲ್ಲಿ ಗೊಲ್ಲ/ ಯಾದವ, ಹಳ್ಳಿಕಾರ ದನಗಳನ್ನು ಸಾಕುವ ಹಳ್ಳಿಕಾರ, ಕುರುಬ, ಹಂದಿ ಕುರುಬ, ಎಮ್ಮೆ ಸಾಕುವ ತೋಡ, ಹಣ್ಣು ತರಕಾರಿ ಬೆಳೆಯುವ ತಿಗಳ, ಹೂ ಬೆಳೆಯುವ ಹೂಗಾರ, ಎಲೆ ಬೆಳೆಯುವ ಎಲೆಗಾರ, ಅಡಿಕೆ ಬೆಳೆಯುವ ಹವ್ಯಕ, ಧಾನ್ಯಗಳನ್ನು ಬೆಳೆಯುವ ಒಕ್ಕಲಿಗ ಇತ್ಯಾದಿ   ವಿವಿಧ ಜಾತಿ,ಉಪಜಾತಿ ಸಮುದಾಯಗಳ ನೆಲೆಗಟ್ಟಾಗಿವೆ.
ವಿಶ್ವದ ಇತರ ದೇಶಗಳಲ್ಲಿ ಜಾತಿ ವ್ಯವಸ್ಥೆ ಇಲ್ಲವಾದ್ದರಿಂದ ಈ ವ್ಯತ್ಯಾಸಗಳಾವುವೂ ಇಲ್ಲ ಎಂದಾಗುವುದಿಲ್ಲ. ವಿವಿಧ ಬೆಳೆಗಾರರು, ವಿವಿಧ ಪಶುಗಳ ಪಾಲಕರ ನಡುವೆ ತಿಕ್ಕಾಟ, ಜಗ್ಗಾಟಗಳು ನಡೆಯುತ್ತಿರುತ್ತವೆ. ಅವು  ಒಂದೇ ದೇಶದ ವಿವಿಧ ಪ್ರದೇಶಗಳ ನಡುವೆ, ವಿವಿಧ ದೇಶಗಳ ನಡುವೆಯೂ ಸಂಘರ್ಷಗಳಾಗಿ ಅಭಿವ್ಯಕ್ತಿಗೊಳ್ಳುತ್ತಿರುತ್ತವೆ.
ಈ ಭಿನ್ನತೆಗಳಲ್ಲಿ ಹಲವು ಭೌಗೋಳಿಕ ಭಿನ್ನತೆಗಳಿಂದ ಉದ್ಭವವಾದುದರಿಂದ ಪ್ರಾದೇಶಿಕ ಭಿನ್ನತೆಗಳಾಗಿ ಮಾತ್ರವಲ್ಲ ಪ್ರಾದೇಶಿಕ ಅಸಮಾನತೆಗಳಾಗಿ ರೂಪು ತಳೆಯುತ್ತವೆ. ಭಾರತದಲ್ಲಿ ಹಲವು ರೂಪಗಳಲ್ಲಿ ಈ ಭಿನ್ನತೆ,ಅಸಮಾನತೆಗಳ ಅಭಿವ್ಯಕ್ತಿಯನ್ನು ಕಾಣಬಹುದು.  ಇವು  ಧಾರ್ಮಿಕ , ಸಾಂಸ್ಕೃತಿಕ, ಭಾಷಿಕ, ರಾಜಕೀಯ ಸಂಘರ್ಷಗಳ ಮೂಲಕ ಎದ್ದು ಬರುತ್ತಿರುತ್ತವೆ.

ಭಿನ್ನತೆಗಳು, ಅಸಮಾನತೆಗಳ ಪರಿಣಾಮ:

ಈ ರೀತಿ ಮಾನವ ಸಮುದಾಯದ ಜೀವನ ಪದ್ಧತಿಯಲ್ಲಿ ಹಲ ಹಲವು ವೈವಿಧ್ಯತೆಗಳು,ಭಿನ್ನತೆಗಳು ವಾಣಿಜ್ಯ ವ್ಯವಹಾರಗಳ ವೇಗವಾದ ಬೆಳವಣಿಗೆಗೆ ಕಾರಣವಾದರೆ  ಅಸಮಾನತೆಗಳು ಯುದ್ಧಗಳು,ಆಕ್ರಮಣಗಳಿಗೆ ಕಾರಣವಾದವು. ಮೇಲಿನ ಅಸಮಾನತೆಗಳ ಜೊತೆಗೆ  ತಾಮ್ರ ,ಕಂಚು, ಹಿತ್ತಾಳೆ ಮೊದಲಾದ ಲೋಹಗಳ ಬಳಕೆಯ ಜ್ಞಾನ, ಕಬ್ಬಿಣದ ಲಭ್ಯತೆ ಮುಂತಾದ ಕೆಲವು ಹೊಸ ಅಂಶಗಳು ಕೂಡಿಕೊಂಡು ಗುಲಾಮಗಿರಿ, ರಾಜ್ಯ,ಸಾಮ್ರಾಜ್ಯಗಳ ಹೊಸ ವ್ಯವಸ್ಥೆಯನ್ನೇ ರೂಪಿಸಿದವು.

ಈ ವಿವರಗಳು ಮುಂದಿನ ಲೇಖನದಲ್ಲಿ. 

‍ಲೇಖಕರು Admin

August 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: