ಸತ್ಯಪ್ರಕಾಶ್ ರಾಮಯ್ಯ
ನಿರ್ದಿಗಂತದ ಬಯಲ ಕಪ್ಪು ರಂದ್ರದೊಳಗೆ
ಮಹಾಸ್ಪೋಟವೊಂದನು ಕಂಡು ಕುರುಡಾಯಿತು ಒಳಗಣ್ಣು
ಆ ಕಣ್ಣ ಒಳಗಿನ ಅಗಣಿತ ವಿಸ್ಮೃತಿಗಳ ಕಂಡು ಸಾವರಿಸಿಕೊಳ್ಳದೆ ಘಾಸಿಗೊಂಡಿತು ಹುಸಿಕನಸು
ನಡುರಾತ್ರಿಯ ಕನಸು ಮೈಸವರಿ ಹೋದ ಕ್ಷಣ ಗಾಳಿಯಲಿ ಬೆರೆತು ಹೋಯಿತು ಬೆವರ ಘಮಲು
ಯಾವ ನೋವೋ ಏನೋ ಹೊಕ್ಕುಳ ಹೂವ ಹುಡುಕಾಟದಲಿ ಕರಗಿಹೋಯಿತು ನೆರಳು

ದಟ್ಟ ಕೂದಲ ಕತ್ತಲೊಳಗೆ ಬ್ರಹ್ಮಾಂಡವನೇ ಸೃಷ್ಟಿಸಿತು ಎದೆಯ ಬಾಂದಳದ ಚಿಟ್ಟೆ
ಅನಿಶ್ಚಿತತೆಯ ಆತ್ಮಕೆ ಮುಲಾಮು ಹಚ್ಚಿದ
ಕೈಗಳ ಸ್ಪರ್ಷಕೆ ಮೆತ್ತಗಾಯಿತು ಪೂರ್ವಸೂರಿಯ ರಟ್ಟೆ!
ವಿಧಿಯ ಹಳಿಗಳ ಸರಳ ರೇಖೆಗಳನು ಬೆಸೆಯಲು ಬೆಳಕಿಗಾಗಿ ಇನ್ನೂ ಕಾಯುತ್ತಲೇ ಇದೆ ಮಿಂಚುಹುಳ
ಈ ಎಲ್ಲ ಭ್ರಮೆಗಳ ನಡುವೆ ಕನಸಿನ ಗೋಪುರಕೆ
ನೀರೆರೆಯುವ ಕೈಗಳನರುಸುತ್ತಲೇ ಇದೆ ಜೀವಜಲ!
0 ಪ್ರತಿಕ್ರಿಯೆಗಳು