ಸತ್ಯಪ್ರಕಾಶ್ ರಾಮಯ್ಯ
ನೀಲಿಯಾಕಾಶದ ಚಾದರವ ಹೊದ್ದು ಮಲಗಿದರೂ
ಅಂತರಾಳದ ಅಳುಕನು ಮರೆಮಾಚಲಾಗುತಿಲ್ಲ
ನೆಲಮುಗಿಲನು ಮುಷ್ಟಿಯಲಿ ಬಂಧಿಸಿ ಮನೆಮಾಡಿದರೂ
ಚಂಡಮಾರುತದ ಹೊಡೆತಕೆ ಯಾವ ಕರುಣೆಯಿಲ್ಲ
ಹಂಸತೂಲಿಕಾಕಲ್ಪದಲಿ ಪವಡಿಸಿದರೂ
ದುಸ್ವಪ್ನದ ಭೀತಿಗೆ ಖಿನ್ನತೆ ಆವರಿಸದೆ ಬಿಡುವುದಿಲ್ಲ
ಜೀವಗಳ ಬೆಸೆಯುವ ಅಮೃತವಾಹಿನಿಯಲಿ ಮಿಂದೆದ್ದರೂ
ಪಾಪದ ಹೂವುಗಳು ಪರಿಮಳವ ಬೀರುವುದಿಲ್ಲ

ನಿರೀಕ್ಷೆಗಳನು ಮೀರಿದ ಬಂಧಗಳೇನೇ ಇದ್ದರೂ
ಸಹಜ ಭಾವನೆಗಳ ಕಬಂಧಬಾಹುಗಳಿಂದ ಮುಕ್ತಿಯಿಲ್ಲ
ಋತುಗಳ ಮನ್ವಂತರ ಕಾಲದಲಿ ಪೊರೆ ಕಳಚಿದರೂ
ಬೆತ್ತಲಾದ ಬೆದರುಬೊಂಬೆಗೆ ಕ್ಷಮೆಯೇ ಇಲ್ಲ
ಆತ್ಮಕೆ ತಂಪೆರೆವ ನೂರಾರು ನೆನಪುಗಳಿದ್ದರೂ,
ಅಪರಾಧಿ ನೀನು; ನೇಣುಗಂಬವೇರಲೇಬೇಕು, ಯಾವುದೇ ವಿನಾಯಿತಿಯಿಲ್ಲ
ಜ್ವಾಲಾಮುಖಿಯ ಲಾವಾರಸದ ಶಾಖಕ್ಕೆ ಸಿಲುಕಿದರೆ
ಸಂಭಾವಿತನಾದರೂ,
ಭೀಕರ ಸಾವಿನಿಂದ ಬಿಡುಗಡೆಯೇ ಇಲ್ಲ!






0 Comments