ಡಾ. ಸತ್ಯಪ್ರಕಾಶ್ ಎಂ ಆರ್
ಒಮ್ಮೊಮ್ಮೆ ಒಂಟಿತನ ನಮ್ಮ ಬದುಕಿಗೆ ಸ್ಪಷ್ಟತೆ ನೀಡುವಷ್ಟು ಯಶಸ್ಸು ಅಥವಾ ಖುಷಿ ನೀಡುವುದಿಲ್ಲ ಎಂಬ ವಿಚಿತ್ರ ಸತ್ಯವನ್ನು ಅನಿವಾರ್ಯವಾಗಿಯಾದರೂ ನಂಬಲೇಬೇಕು.
ನಮ್ಮ ಅಸ್ತಿತ್ವವನ್ನು ಅಲುಗಾಡಿಸುವ ಕ್ಷಣಗಳು ನಮಗೆ ಜೀವನ ಪಾಠವನ್ನು ಕಲಿಸುತ್ತದೆ. ಆಘಾತಗಳು ನಮ್ಮನ್ನು ಜಾಗೃತರನ್ನಾಗಿರಿಸುತ್ತವೆ. ದೀರ್ಘವಾದ ನಿದ್ರೆಯಿಂದ ಬಡಿದೆಬ್ಬಿಸುತ್ತದೆ. ಎಂಥಹಾ ವಿಷಮ ಪರಿಸ್ಥಿತಿಯನ್ನಾದರೂ ಎದುರಿಸುವ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ಇಂಥಹಾ ಎಚ್ಚರಿಕೆಗಳೇ ಇಲ್ಲದಿದ್ದರೆ ಮುಕ್ತವಾದ ಬದುಕಿನ ಸೌಂದರ್ಯವನ್ನು ಆಸ್ವಾದಿಸಲಾಗದು.
ಸೆರೆಮನೆಯಲ್ಲಿ ಬಂಧಿಯಾದವನಿಗೆ ಮಾತ್ರ ಸ್ವಾತಂತ್ರ್ಯದ ನಿಜವಾದ ಬೆಲೆ ಗೊತ್ತಿರುತ್ತದೆ. ಬದುಕಿನ ಸಣ್ಣಪುಟ್ಟ ವಿಚಾರಗಳೂ ನಮಗೆ ಮುಖ್ಯವಾಗುವುದು ಅವುಗಳು ಸುಲಭಕ್ಕೆ ಸಿಗದೆ ಹೋದಾಗ. ಸ್ವೇಚ್ಛೆಯಾಗಿ ಜೀವನ ನಡೆಸುತ್ತಿರುವ ನಮಗೆ ಒಂದು ಸಾಧಾರಣ ಹಾಲಿನ ಪ್ಯಾಕೆಟ್, ಹಣ್ಣು ತರಕಾರಿ, ದಿನಸಿ ಪದಾರ್ಥಗಳು, ಗಮನಕ್ಕೂ ಬಾರದ ದಿನಚರಿಯ ವಸ್ತುಗಳು. ಆದರೆ ಸೆರೆವಾಸಿಗಳಿಗೆ ಇವೆಲ್ಲವೂ ಐಷಾರಾಮಿ ವಸ್ತು ವಿಷಯಗಳು. ಕರೋನಾ ಭೀತಿಯಲ್ಲಿ ಮನೆಯೊಳಗೇ ಸೆರೆವಾಸ ಅನುಭವಿಸುತ್ತಿರುವ ನಮಗೆ ಈಗ ಇವೆಲ್ಲವುದರ ಬೆಲೆ ಗೊತ್ತಾಗುತ್ತಿದೆ.

ಸೂಫಿ ಕವಿ ರೂಮಿ ಹೇಳುತ್ತಾನೆ, “ಪ್ರತಿಯೊಂದು ನೋವಿನ ಘಟನೆಗಳೂ ನಮಗೆ ಯಾವುದೋ ಸಂದೇಶವನ್ನು ನೀಡುತ್ತಿರುತ್ತದೆ. ಅದನ್ನರಿತುಕೊಳ್ಳುವ ಮನಸ್ಥಿತಿ ನಮಗಿರಬೇಕು. ತೆರೆದ ಗಾಯದ ಮೂಲಕವೇ ಬೆಳಕು ಹೃದಯ ಸೇರುವುದು. ಅದೇ ರೀತಿ ಒಂಟಿತನ ಮತ್ತು ನೋವಿನ ಮೂಲಕವೇ ಜೀವನದ ನಶ್ವರತೆಯ ದರುಶನವಾಗುವುದು.”
ಸಾವಿನ ಭಯದಿಂದ ಯಾರೂ ಮುಕ್ತರಲ್ಲ. ಆದರೆ ಸಾವಿನ ಅಂತಿಮ ಸತ್ಯವನ್ನು ಸಾವಿನ ಕ್ಷಣದವರೆಗೂ ಅಲಕ್ಷಿಸುವುದು ಬಹುತೇಕ ಮನುಷ್ಯರ ಲಕ್ಷಣ. ಸಾವಿನ ನೇರ ದರ್ಶನ ನಮಗಾಗುವುದು ಒಂಟಿತನ ಮತ್ತು ಖಿನ್ನತೆ ಕಾಡಿದಾಗ ಮಾತ್ರ. ಸಾವು ಈಗ ನಮ್ಮ ಮನೆ ಬಾಗಿಲಿಗೆ ಬಂದಿದೆ. ಇಂಥಹ ಭಯಭೀತ ಸನ್ನಿವೇಶದಲ್ಲಿ ದೈನಂದಿನ ಬದುಕಿನ ಸಣ್ಣಪುಟ್ಟ ವಿಚಾರಗಳೇ ಅಸಾಧ್ಯವಾದ ಬೃಹತ್ ಕಾರ್ಯಗಳಾಗಿಬಿಟ್ಟಿವೆ.
ಆಲ್ಬರ್ಟ್ ಕಾಮು ಹೇಳುತ್ತಾನೆ, “ನಮ್ಮ ನಾಳೆಗಳು ಹಸನಾಗಿರಲೆಂದು ದೊಡ್ಡ ದೊಡ್ಡ ಗುರಿಗಳನ್ನಿರಿಸಿಕೊಂಡು ಬದುಕಿನ ಯೋಜನೆಗಳನ್ನು ರೂಪಿಸುವ ನಮಗೆ ನಾಳೆಗಳು ಕರಗಿಹೋಗುತ್ತಿರುವ ಬಗ್ಗೆ ಅರಿವಾಗುವುದೇ ಇಲ್ಲ. ಭವಿಷ್ಯದ ಬಗೆಗಿನ ಆಶಾವಾದದ ಅಡಿಪಾಯದ ಮೇಲೆ ರೂಪಿತವಾದ ನಮ್ಮ ಬದುಕೇ ಅಸಂಬದ್ಧ ಮತ್ತು ಅತಾರ್ಕಿಕ.”
ಇಂಥಹಾ ಅರ್ಥಹೀನ ಬದುಕಿನಲ್ಲಿ ಶಾಶ್ವತವಾಗಿ ಡೇರೆ ಹಾಕುವವರ ಹಾಗೆ ಬೃಹತ್ ಪ್ರತಿಮೆಗಳನ್ನು ನಿರ್ಮಿಸಿ ಅಜರಾಮರರಾಗುವ ಮನುಷ್ಯರ ಪ್ರಯತ್ನವೇ ಹಾಸ್ಯಾಸ್ಪದ. ಸತ್ತ ಮೇಲೆ ನಮ್ಮ ಪ್ರತಿಮೆಗಳ ಮುಂದೆ ಎಷ್ಟು ಹೂವಿಟ್ಟರೇನು? ಸತ್ತು ಮಣ್ಣಲ್ಲಿ ಮಣ್ಣಾಗಿರುವ ಶವಕ್ಕೆ ಅದರ ಗಂಧವನ್ನು ಆಸ್ವಾದಿಸಲು ಸಾಧ್ಯವಾಗುವುದೇ?
ಜೆ ಡಿ ಸಾಲಿಂಗರ್ ನ ‘ಕ್ಯಾಚರ್ ಇನ್ ದ ರೈ’ ಕಾದಂಬರಿಯಲ್ಲಿ ನಾಯಕ ಹೋಲ್ಡನ್ ಕಾಲ್‍ಫೀಲ್ಡ್ ಹೇಳುತ್ತಾನೆ, “ನಾನು ಸತ್ತಾಗ ಯಾರಾದರೂ ನನ್ನ ಹೆಣವನ್ನು ನದಿಯಲ್ಲಿ ತೇಲಿಬಿಡಲಿ ಅಥವಾ ಯಾವುದಾದರೂ ಹಳ್ಳದಲ್ಲಿ ಬಿಸಾಡಲಿ. ಏನನ್ನಾದರೂ ಮಾಡಲಿ, ಆದರೆ ನನ್ನ ಸಮಾಧಿಯನ್ನು ಮಾತ್ರ ಕಟ್ಟದಿರಲಿ. ಪ್ರತಿ ಭಾನುವಾರ ನನ್ನ ಬಂಧುಗಳು, ಸ್ನೇಹಿತರು ಸಮಾಧಿಯ ಮುಂದೆ ನಿಂತು ನನ್ನ ಹೊಕ್ಕಳ ಮೇಲೆ ಹೂವು ಇಟ್ಟುಹೋಗುವುದನ್ನು ನಾನು ಹೇಗೆ ಸಹಿಸಲಿ? ಸತ್ತ ಮೇಲೆ ಹೂವು ಯಾರಿಗೆ ಬೇಕು?”
ಎಲ್ಲ ರೀತಿಯ ಸಾವು ಸೃಷ್ಟಿಸುವ ಭಾವನೆ ಒಂದೇ… ನೋವು! ಸಾವು ನಿಶ್ಚಿತವಾದರೂ, ಅದು ನಮ್ಮೆದುರು ಬರುವ ಘಳಿಗೆ ಮಾತ್ರ ಯಾವಾಗಲೂ ಅನಿರೀಕ್ಷಿತ! ಸಾವಿನ ಅನಿರೀಕ್ಷಿತ ದಾಳಿ ಆಪ್ತರಿಗೆ ನೋವು ತಂದರೂ ಕೆಲವೇ ದಿನಗಳಲ್ಲಿ ಅವರ ಸೃತಿಪಟಲದಲ್ಲಿ ಮಾತ್ರ ಉಳಿದುಬಿಡುತ್ತೇವೆ.
“ಬದುಕು ನಿರರ್ಥಕವೆಂಬ ಅಂಶ ನಮ್ಮ ಅರಿವಿಗೆ ಬಂದರೆ, ಇಡೀ ಜಗತ್ತೇ ಅಪರಿಚಿತ, ಅಮಾನವೀಯವೆನಿಸಲು ಶುರುವಾಗುತ್ತದೆ. ವೈಜ್ಞಾನಿಕ ಸಿದ್ಧಾಂತಗಳು ಮತ್ತು ತಾರ್ಕಿಕ ವಾದಗಳು ಈ ಅಸಂಬದ್ಧತೆಯನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಮನುಷ್ಯನನ್ನು ಜರ್ಜರಿತಗೊಳಿಸುವ ಈ ಅಸಂಬದ್ಧತೆಗೆ ಮುಕ್ತವಾದ ಪ್ರತಿರೋಧವೇ ಪರಿಹಾರ” ಎನ್ನುವುದು ಕಾಮುವಿನ ವಾದ.






0 Comments